ನೃತ್ಯ

ವಿಶ್ವ ರೋಗಮುಕ್ತವಾಗಲಿ, ಕಲಾಪ್ರದರ್ಶನಗಳು ಜನಸಾಗರದ ನಡುವಿನಲ್ಲಿ ನಯನಮನೋಹರವಾಗಿ ಬೆಳಗಲಿ

ಆದರೆ ಅಲ್ಲಿಯವರೆಗೂ ಅಂತರಜಾಲದ ಮಾಧ್ಯಮದಲ್ಲಿಯೇ ನಿಮ್ಮೆಲ್ಲರ ಪ್ರೋತ್ಸಾಹ ನಮ್ಮೆಲ್ಲಾ ಕಲಾವಿದರ ಮೇಲಿರಲಿ

ಆತ್ಮೀಯರೇ,

ನಾನು ನಿಮ್ಮೆಲ್ಲರ ಪ್ರೀತಿಯ ಕುಚಿಪುಡಿ ನೃತ್ಯ ಕಲಾವಿದೆ ಪ್ರತೀಕ್ಷಾ ಕಾಶಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕುಚಿಪುಡಿ ನೃತ್ಯ ಪ್ರಾಕಾರವೆಂಬುದು ಆಂಧ್ರಪ್ರದೇಶದ ಕುಚಿಪುಡಿ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿಕೊಂಡಿತು. ಹಾಗಾಗಿ ಹಿಂದೆ ಕುಚಿಪುಡಿಯಲ್ಲಿ ಬಳಸುತ್ತಿದ್ದ ಭಾಷೆ ಎಂದರೆ ತೆಲುಗು ಮತ್ತು ಸಂಸ್ಕೃತ. ಹಿಂದೆ ನೃತ್ಯವೆಂದರೆ ಬರೀ ಅದೊಂದು ಪ್ರದೇಶಕ್ಕೆ ಸೀಮಿತವಾಗಿತ್ತು. ಹಾಗಾಗಿ ಆಂಧ್ರಪ್ರದೇಶದ ಬೇರೆ ಬೇರೆ ಭಾಗಗಳಲ್ಲಿ ಮಾತ್ರ ವಿಧ್ವಾಂಸರೂ ಕಲಾವಿದರೂ ಪ್ರದರ್ಶನವನ್ನು ಮಾಡುತ್ತಿದ್ದರು.

ಆದರೆ ಇಂದು ಜಾಗತೀಕರಣವಾಗಿದೆ. ಹಾಗಾಗಿ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿದ್ದ ನೃತ್ಯ ಪ್ರಾಕಾರಗಳು ದೇಶದಾದ್ಯಂತ ಮಾತ್ರವಲ್ಲದೆ ವಿಶ್ವದಾದ್ಯಂತ ಪ್ರಚಲಿತಕ್ಕೆ ಬರುತ್ತಿದೆ. ಈ ಕಾರಣದಿಂದಾಗಿ ನಮಗೆ ಸಿಗುವಂತಹ ಪ್ರೇಕ್ಷಕರು ಹಾಗೂ ಕಲಿಯುವಂತಹ ವಿದ್ಯಾರ್ಥಿಗಳೂ ಕೂಡ ಬೇರೆ ಬೇರೆ ರಾಜ್ಯದವರೂ ಬೇರೆ ಬೇರೆ ದೇಶದವರೂ ಆಗಿರುತ್ತಾರೆ. ಹಾಗಾಗಿ ಒಂದು ನೃತ್ಯ ಪ್ರಾಕಾರಕ್ಕೆ ಇದೇ ಭಾಷೆಯನ್ನೇ ಬಳಸಬೇಕೆಂಬ ಮಿತಿಯೇನು ಇಲ್ಲ. ಅಂತೆಯೇ ಕುಚಿಪುಡಿಯಲ್ಲಿ ನನ್ನ ಮಾತೃಭಾಷೆಯಾದ ಕನ್ನಡ, ನನ್ನ ರಾಷ್ಟ್ರಭಾಷೆಯಾದ ಹಿಂದಿ, ಪಕ್ಕದ ರಾಜ್ಯದ ಮರಾಠೀ ಭಾಷೆಯನ್ನೂ ಸಮಯ ಸಂದರ್ಭಾನುಸಾರವಾಗಿ ಬಳಸುತ್ತಿದ್ದೇವೆ.

ಹಿಗಾಗೀ ನನ್ನ ಅನಿಸಿಕೆಯ ಪ್ರಕಾರ, ಪ್ರತಿಯೊಬ್ಬ ಕಲಾವಿದರಿಗೂ ಬೇರೆ ಬೇರೆ ಭಾಷೆಗಳ ರಚನೆಗಳ ಮೂಲಕ ನೃತ್ಯವನ್ನು ಪ್ರದರ್ಶಿಸುವಲ್ಲಿ ಸಂತೋಷ ಆಗುತ್ತದೆ. ಅದರಲ್ಲಿಯೂ ಮಾತೃಭಾಷೆಯಲ್ಲಿ ಇನ್ನೂ ಹೆಚ್ಚಿನ ಸಂತೋಷ ಆಗಿಯೇ ಆಗುತ್ತದೆ. ಹಾಗಾಗಿ ನಮ್ಮ ಕನ್ನಡದ ರಚನೆಗಳನ್ನು ಕುಚಿಪುಡಿ ನೃತ್ಯದಲ್ಲಿ ಬಳಸಲು ಅಗಾಧವಾದ ಅವಕಾಶವಿದೆ.

ವಾಸ್ತವವಾಗಿ ವೆಂಪಟಿ ಚಿನ್ನ ಸತ್ಯಂ ಎಂಬ ಒಂಬ ಅತ್ಯದ್ಭುತ ಕುಚಿಪುಡಿ ನೃತ್ಯ ಕಲಾವುದರೂ ಕೂಡ ಗಜವದನಾ ಬೇಡುವೆ ಅಂಬ ಕನ್ನಡದ ರಚನೆಯನ್ನು ಅವರ ಆಗಿನ ಕಾಲದಲ್ಲಿಯೇ ಅವರ ಕುಚಿಪುಡಿ ನೃತ್ಯ ಸಂಪ್ರದಾಯದಲ್ಲಿ ಅಳವಡಿಸಿಕೊಂಡಿದ್ದರು. ನನ್ನ ತಾಯಿ ಹಾಗೂ ನನ್ನ ಗುರುಗಳಾದ ವೈಜಯಂತೀ ಕಾಶಿಯವರೂ ಕೂಡ ನಮ್ಮ ಕನ್ನಡ ನಾಡಿನ ಹಾಗೂ ಭಾಷೆಯ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯಬೇಕೆಂಬ ಸದುದ್ದೇಶದಿಂದ ಬಹಳಷ್ಟು ಕುಚಿಪುಡಿ ನೃತ್ಯಗಳಿಗೆ ನೃತ್ಯ ಸಂಯೋಜನೆ ಮಾಡಿ ನಾಡಿನಾದ್ಯಂತ ಜನಪ್ರಿಯಗೊಳಿಸಿದ್ದಾರೆ.

ಕರ್ನಾಟಕದ ಇತಿಹಾಸವನ್ನು ವರ್ಣಿಸುವ “ಭವ್ಯಭೂಮಿ”, ಕೃಷ್ಣನಿಂದ ಕುಬ್ಜೆಗೆ ಹೇಗೆ ಮೋಕ್ಷ ಸಿಕ್ಕಿತೆಂಬ ವಿಚಾರದ “ಕುಬ್ಜೆ”, ಅಕ್ಕಮಹಾದೇವಿಯವರ ಬಸವಣ್ಣನವರ ವಚನಗಳನ್ನೂ ಜ್ನಾನಪೀಠ ಪ್ರಶಸ್ತಿ ಪಡೆದವರ ರಚನೆಗಳನ್ನೂ ಕೂಡ ಕುಚಿಪುಡಿ ನೃತ್ಯಕ್ಕೆ ಸಂಯೋಜಿಸಿಕೊಂಡು ವೈಜಯಂತಿ ಕಾಶಿಯವರು ಪ್ರದರ್ಶನವನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವುಗಳಲ್ಲಿ ಸಾಮಾಜಿಕ, ಐತಿಹಾಸಿಕ ಹಾಗೂ ಪೌರಾಣಿಕ ವಿಚಾರಗಳನ್ನೊಳಗೊಂಡ ರಚನೆಗಳನ್ನೂ ನೃತ್ಯ ಸಂಯೋಜಿಸಿದ್ದಾರೆ. ಇವೆಲ್ಲವನ್ನೂ ಪ್ರದರ್ಶಿಸುವಲ್ಲಿ ಕುಚಿಪುಡಿ ಕಲಾವಿದರೂ ಆಸ್ವಾದಿಸುವಲ್ಲಿ ಕಲಾಭಿಮಾನಿಗಳೂ ಆತ್ಮಸಂತೋಷವನ್ನು ಅನುಭವಿಸಿದ್ದಾರೆ. ಇಂತಹ ಅನಂತ ವ್ಯಾಪ್ತಿಯನ್ನು ಕುಚಿಪುಡಿ ನೃತ್ಯವು ಹೊಂದಿದೆ ಎಂಬುದೇ ಇದರ ವಿಶೇಷ.

ಇಷ್ಟೇ ಅಲ್ಲದ ಕನ್ನಡದ ರಚನೆಗಳನ್ನು ಬೇರೆ ಬೇರೆಯ ನೃತ್ಯ ಶೈಲಿಯವರೂ ಬಳಸಿಕೊಳ್ಳುತ್ತಿದ್ದಾರೆ. ಉದಾಹರಣೆಗೆ ಪುರಂದರ ದಾಸರ ಕನಕದಾಸರ ರಚನೆಗಳನ್ನು ಭರತನಾಟ್ಯ ಕಥಕ್ ಅಂತಹ ಸುಪ್ರಸಿದ್ಧ ನೃತ್ಯ ಶೈಲಿಗಳೂ ಅಳವಡಿಸಿಕೊಂಡು ಯಶಸ್ವಿಯಾಗುತ್ತಿದೆ.

ಇಂತಹ ಪಿಡುಗಿನ ಸಂದಿಗ್ಧ ಸಮಯದಲ್ಲಿ ಕೂಡ ನಾವೆಲ್ಲಾ ಕಲಾವಿದರೂ ನೃತ್ಯ ಪ್ರದರ್ಶನಗಳನ್ನು ಕಾರ್ಯಾಗಾರಗಳನ್ನು ವಿಚಾರ ಸಂಕಿರಣಗಳನ್ನು ಅಂತರಜಾಲದ ಮೂಲಕವೇ ನಡೆಸುತ್ತಿದ್ದೇವೆ. ಆದರೆ ಪ್ರೇಕ್ಷಕರೇ ಕಣ್ಣೆದುರಿಗೆ ಕುಳಿತು ಚಪ್ಪಳೆ ಹೊಡೆಯುತ್ತಾ ಹುರಿದುಂಬಿಸುವಾಗ ಸಿಗುವಂತಹ ಅನನ್ಯ ಅನುಭವ ಕಲಾವಿದರಿಗೆ ಖಂಡಿತವಾಗಿಯೂ ಬೇರೆಲ್ಲೂ ಸಿಗುವುದಿಲ್ಲ. ಕಲಾವಿದರ ಹಾಗೂ ಪ್ರೇಕ್ಷಕರ ನಡುವೆ ಅಲ್ಲೊಂದು ಶಕ್ತಿಯ ಸಂವಹನ ಹಾಗೂ ವಿನಿಮಯವಾಗುತ್ತದೆ. ಪ್ರೇಕ್ಷಕರು ನಮ್ಮೆದುರೇ ಕುಳಿತಾಗ ನಮ್ಮಂತಹ ಕಲಾವಿದರಿಗೆ ಆಗುವ ಪುಳಕವೇ ಬೇರೆ. ಅದಕ್ಕೆ ಸರಿಸಾಟಿ ಮತ್ತಿನ್ನಾವುದೂ ಇಲ್ಲ.

ಆದರೆ, ನಾವೊಬ್ಬ ಕಲಾವಿದರಾಗಿರಿವುದರಿಂದ ಎಲ್ಲಾದಕ್ಕೂ ಹೊಂದಿಕೊಳ್ಳುವ ಬಹುಮುಖ್ಯವಾದ ಗುಣವನ್ನು ಹೊಂದಿರಬೇಕಾಗುತ್ತದೆ. ಕಾಲಕ್ಕನುಗುಣವಾಗಿ ನಡೆದುಕೊಳ್ಳುವುದೂ ಬಹು ಮುಖ್ಯವಾಗುತ್ತದೆ.

ಹಾಗಾಗಿ ನಾನೊಬ್ಬ ಕಲಾವಿದೆಯಾಗಿ ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಅಂತರಜಾಲದ ಮಾಧ್ಯಮದ ಮೂಲಕ ನೃತ್ಯ ಪ್ರದರ್ಶನ ಹಾಗೂ ಸಂವಾದಗಳ ಪ್ರಯೋಗ ಮಾಡುತ್ತಿರುವ ಹೊಸ ಹೊಸ ಪ್ರಯತಗಳನ್ನು ಸಂತೋಷವಾಗಿಯೇ ಅನುಭವಿಸುತ್ತಾ ಮಾಡುತ್ತಿದ್ದೇನೆ. ಇಂತಹ ಒಂದು ಹೊಸ ಬಗೆಯ ಅನುಭವವನ್ನೂ ಈ ನಮ್ಮ ಜೀವನ ನಮಗಾಗಿ ನೀಡುತ್ತಿದೆ. ಅಂತರಜಾಲ ಹಾಗೂ ಸಾಮಾಜಿಕ ಮಾಧ್ಯಮಗಳೂ ಕೂಡ ಅದರದ್ದೇ ಆದ ಧನಾತ್ಮಕ ಅಂಶಗಳನ್ನೊಳಗೊಂಡಿದೆ. ಹಾಗಾಗಿ ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ಕೂಡ ಸುಮ್ಮನೆ ಕಾಲ ಕಳೆಯದೆ ನಾವು ನಮ್ಮ ಕಲೆಯನ್ನು ಸಮಾಜಕ್ಕೆ ತಲುಪಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂಬುದು ನನ್ನ ಅನಿಸಿಕೆ.

ವಿಶ್ವ ರೋಗಮುಕ್ತವಾಗಲಿ
ಕಲಾಪ್ರದರ್ಶನಗಳು ಜನಸಾಗರದ ನಡುವಿನಲ್ಲಿ ನಯನಮನೋಹರವಾಗಿ ಬೆಳಗಲಿ,

ಆದರೆ
ಅಲ್ಲಿಯವರೆಗೂ ಅಂತರಜಾಲದ ಮಾಧ್ಯಮದಲ್ಲಿಯೇ ನಿಮ್ಮೆಲ್ಲರ ಪ್ರೋತ್ಸಾಹ ನಮ್ಮೆಲ್ಲಾ ಕಲಾವಿದರ ಮೇಲಿರಲಿ.

– December 15-2021

************

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker