ನಾಗಾಭರಣ….ಕನ್ನಡ ನಾಡಿಗೆ ಭೂಷಣ..

ಅದು 80ರ ದಶಕದ ಕಾಲ. ಬೆಂಗಳೂರು ದೂರದರ್ಶನ ಆಗಷ್ಟೇ ಕನ್ನಡ ನಾಡಲ್ಲಿ ತನ್ನ ಖಾತೆ ತೆರೆದಿತ್ತು. ಆಗ ವಾರಕ್ಕೊಂದು ದಿನ ಮಾತ್ರ ಧಾರವಾಹಿಯ ಪ್ರಸಾರ. ಪ್ರತೀ ಗುರುವಾರದ ಪ್ರಸಾರಕ್ಕೆ “ಶ್ರೀಮಾನ್ ಶ್ರೀಸಾಮಾನ್ಯ”ರಾದ ಈ ಹೊಸ ನಿರ್ದೇಶಕರಿಗೆ ಅವಕಾಶ ನೀಡಲಾಗಿತ್ತು. ಮನೆಮಂದಿಯೆಲ್ಲ ಕುಳಿತು ನೋಡುತ್ತಿದ್ದ ಈ ಧಾರವಾಹಿ ಯಶಸ್ವಿಯಾಗಿ ತುಂಬಿದ ಗೃಹಗಳಲ್ಲಿ ಪ್ರದರ್ಶನವಾಗುತ್ತಿತ್ತು! ಹಾಗಾಗಿ ಈ ನಿರ್ದೇಶಕ ಎಲ್ಲಾದರು ಅಪ್ಪಿತಪ್ಪಿ ಸಿನಿಮಾ ನಿರ್ದೇಶಿಸುತ್ತೇನೆ ಎಂದರೆ ಸಾಕು, “ಏ…ಅವನೇನ್ರಿ?…ಅವನು ಟಿ.ವಿ ಡೈರೆಕ್ಟರ್..ಅವನೇನ್ರಿ ಸಿನಿಮಾ ಮಾಡ್ತಾನೆ?”, ಎಂದು ಹೇಳಿ ಹಳಿಯಿಲ್ಲದೆ ಹಳಿಯುತ್ತಿದ್ದರು. ಆದರೂ ಹಟ ಬಿಡದ ಈ ಮನುಷ್ಯ ಒಂದೇ ದಿನ ಸಿನಿಮಾ ಮತ್ತು ಧಾರವಾಹಿ ಎರಡನ್ನೂ ನಿರ್ದೇಶಿಸಿದ್ದೂ ಉಂಟು! ಬೆಳಿಗ್ಗೆ ಏಳರಿಂದ ಆರಂಭವಾಗುತ್ತಿದ್ದ “ಆಕಸ್ಮಿಕ” ಚಿತ್ರೀಕರಣ ರಾಜಣ್ಣನ ನಿಯಮದಂತೆ ಸಂಜೆ ಆರರ ಮೇಲೆ ನಡೆಯುತ್ತಿರಲಿಲ್ಲ. ಸೊ..ಈ ನಿರ್ದೇಶಕ ಸಂಜೆ ಏಳರ ಹೊತ್ತಿಗೆ “ತಿರುಗುಬಾಣ” ಧಾರವಾಹಿಯ ಸೆಟ್‍ನಲ್ಲಿ ಹಾಜರ್! ಹೀಗೆ ಎರಡೂ ಮಾಧ್ಯಮದ ಮೇಲೂ 3 ದಶಕಗಳ ಹಿಂದೆಯೇ  ಹಿಡಿತ ಸಾಧಿಸಿದ್ದ ಆ ನಿರ್ದೇಶಕ ಯಾರಿರಬಹುದೆಂದು ನೀವು ಊಹಿಸಿರಬಹುದು….ನಿಮ್ಮ ಊಹೆ ನಿಜ…ಊಹೆಗೂ ನಿಲುಕದ ಆ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ಹಾಗು ಕಿರುತೆರೆಗೊಂದು ಭೂಷಣ…ಆಭರಣ…ನಾಗಾಭರಣ..

ನಮ್ಮಲ್ಲಿ ಕಿರುತೆರೆಯಲ್ಲಿ ಗೆದ್ದು ಬೆಳ್ಳಿತೆರೆಯಲ್ಲಿ ಸೋತವರು, ಬೆಳ್ಳಿತೆರೆಯಲ್ಲಿ ಗೆದ್ದು ಕಿರುತೆರೆಯಲ್ಲಿ ಸೋತವರು ಹೀಗೆ ಎರಡು ರೀತಿಯ ನಿರ್ದೇಶಕರ ಗುಂಪೇ ಇದೆ. ಆದರೆ ಈ ಸಾಲಿಗೆ ಸೇರದೆ ಎರಡೂ ಮಾಧ್ಯಮದಲ್ಲಿ ಸಲ್ಲುವವರು…ಕೊಡುಗೆ ಸಲ್ಲಿಸಿದವರು..ಬೆರಳೆಣಿಕೆಯಷ್ಟು..ಅಂತವರಲ್ಲಿ ನಾಗಾಭರಣ ಮೊದಲಿಗರು ಎಂದರೆ ತಪ್ಪಲ್ಲ.

ಒಂದೆಡೆ ಆಕಸ್ಮಿಕ,ಜನುಮದ ಜೋಡಿ ಅಂತಹ ಸೂಪರ್‍ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಟಿ.ಎಸ್ ನಾಗಾಭರಣ ಇನ್ನೊಂದೆಡೆ ಮಾಹಾಮಾಯೆ,ಸಂಕ್ರಾಂತಿ ಹಾಗು ಗೆಳತಿಯಂತಹ ಮನಮುಟ್ಟುವ ಧಾರವಾಹಿಗಳನ್ನು ಕನ್ನಡಿಗರಿಗೆ ನೀಡಿದ್ದರು.ಇಂತಹ “ಉಭಯ ದೃಶ್ಯಮಾಧ್ಯಮ ಪಂಡಿತ” ಟಿ.ಎಸ್.ಎನ್ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ….

ಕೆಳದಿ ಚೆನ್ನಮ್ಮನ ಚರಿತ್ರೆ-ಧಾರವಾಹಿಯಾಗಿ:

ಜಾನಪದ ಹಾಗು ಇತಿಹಾಸದ ವಿಷಯಗಳು ಟಿ.ಎಸ್.ಎನ್ ಅವರಿಗೆ ಬಲು ಇಷ್ಟ ಎಂಬುದು ಅವರು ಈವರೆಗೆ ತೆಗೆದಿರುವ ಸಿನಿಮಾ,ಧಾರಾವಾಹಿಗಳಿಂದ ಗೊತ್ತಾಗುತ್ತದೆ. ಸದಾ ಯಾವುದಾದರೊಂದು ಹೊತ್ತಿಗೆಯಲ್ಲಿ ಹೊತ್ತು ಕಳೆಯುವ ಟಿ.ಎಸ್.ಎನ್ ಈಗ ಎರಡು ವರ್ಷಗಳ ಹಿಂದೆಯೇ ಕೆಳದಿ ಶಿವಪ್ಪನಾಯಕನ ಚರಿತ್ರೆಯನ್ನು ಓದಲಾರಂಭಿಸಿದರು. ಓದುತ್ತಾ ಹೋದಂತೆ ಕೆಳದಿ ಚೆನ್ನಮ್ಮನ ಪಾತ್ರ ಅತ್ಯದ್ಭುತವಾಗಿ ಕಾಣತೊಡಗಿತು. ಅರೇ….ಕಿತ್ತೂರು ಚೆನ್ನಮ್ಮ,ಬೆಳವಡಿ ಮಲ್ಲಮ್ಮ ಅವರಂತೆ ಈಕೆಯೂ ಮಹಾನಾಯಕಿ, ನಾವು ಇವಳನ್ನೇಕೆ ಈ ಪೀಳಿಗೆಗೆ ಪರಿಚಯಿಸಬಾರದು? ಅಷ್ಟಕ್ಕೂ ಜಗತ್ತಿನಲ್ಲೇ ನಾರಿಯೊಬ್ಬಳು ನಾಯಕಿಯಾಗಿ ಸುಮಾರು 25 ವರ್ಷಕ್ಕೂ ಹೆಚ್ಚಿನ ಕಾಲ ಒಂದು ರಾಜ್ಯವನ್ನಾಳಿದ ದಾಖಲೆಯೇನಾದರೂ ಇದ್ದರೆ ಅದು ಕೆಳದಿ ಚೆನ್ನಮ್ಮನಿಂದ ಮಾತ್ರ! ರಾಜಮನೆತನದಲ್ಲಿ ಜನಿಸಿದ್ದ ಕೆಳದಿಯ ಶಿವಪ್ಪನಾಯಕನಿಗೆ ನಾಯಕತ್ವದ ಗುಣ ರಕ್ತದಲ್ಲೇ ಬಂದಿತ್ತು, ಅದು ಸಹಜ…ಆದರೆ ಗೊತ್ತುಗುರಿಯಿಲ್ಲದ ಹಳ್ಳಿಯ ಮುಗ್ಧ ಹುಡುಗಿ ಚೆನ್ನಮ್ಮ ಕಾಲ ಬದಲಾದಂತೆ ಹೇಗೆ ರಾಜ್ಯವನ್ನಾಳಿದಳು?…ಉಳಿಸಿದಳು…ಬೆಳೆಸಿದಳು…ಕಟ್ಟಿದಳು…

ಎಲ್ಲಾ ಕಾಲದ ರಾಜಕೀಯಕ್ಕೂ ಹೇಗೆ ಆಕೆ ಮಾದರಿ?…ಇತ್ಯಾದಿ ವಿಚಾರಗಳನ್ನು ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಸಾರುತ್ತಿದ್ದಾರೆ ಟಿ.ಎಸ್.ಎನ್.

ವೈಚಾರಿಕವಾಗಿ ಈ ಧಾರಾವಾಹಿ ಗಟ್ಟಿತನವನ್ನುಳಿಸಿಕೊಳ್ಳಬೇಕಾದರೆ ಕನಿಷ್ಠ 300 ಸಂಚಿಕೆಗಳು ಇರಬೇಕೆಂದು ಆಗಲೇ ಸಿದ್ಧಪಡಿಸಿಕೊಂಡಿದ್ದಾರೆ.

ಕನ್ನಡದ ವಾಹಿನಿಯೊಂದರ ಜೊತೆ ಈಗಾಗಲೇ ಒಪ್ಪಂದವಾಗಿರುವ ಈ ಧಾರವಾಹಿಯ ಚಿತ್ರೀಕರಣ ಅದೇ ಕೆಳದಿಯಲ್ಲಿ ನಡೆಯಲಿದೆ! ಟಿ.ಎಸ್.ಎನ್ ಸಾಗರ ಸಮೀಪದ ಕೆಳದಿಯ ಆಜುಬಾಜಿನಲ್ಲಿ ಇತಿಹಾಸವನ್ನು ಮರುಸೃಷ್ಟಿಸುವ ತವಕದಲ್ಲಿದ್ದಾರೆ. ಅಧುನಿಕತೆಯ ಕುರುಹುಗಳೂ ಇಲ್ಲದ ( ವಿದ್ಯುತ್ ಕಂಬಗಳು,ತಂತಿಗಳು..ಇತ್ಯಾದಿ) ವಿಶೇಷ ಸ್ಥಳಗಳನ್ನು ಹುಡುಕಾಡಿ ಚಿತ್ರೀಕರಣಕ್ಕಾಗಿ ನಿಗದಿಪಡಿಸಿಕೊಂಡಿದ್ದಾರೆ.

ಒಂದೇ ರೀತಿಯ ಕಥೆಗಳು….ಪಾತ್ರಗಳು ಮಾತ್ರ ಬೇರೆ ಬೇರೆ..ಎನ್ನುವಂತಾಗಿ…ಎಲ್ಲಾ ಧಾರಾವಾಹಿಗಳ ಕಥೆಯೂ ಒಂದೇ ಆಗಿರುವಾಗ “ಕೆಳದಿ ಚೆನ್ನಮ್ಮ” ಕನ್ನಡನಾಡಿನ ಒಂದು ಸಂಸ್ಥಾನದ ಇತಿಹಾಸವನ್ನೂ ಅದನ್ನಾಳಿದ ಒಬ್ಬ ಸಾಮಾನ್ಯ ನಾರಿಯ ಚರಿತ್ರೆಯನ್ನೂ ಬಣ್ಣಿಸುತ್ತದೆ ಎಂದರೆ ಇದು ಕಿರುತೆರೆಯ ಮಟ್ಟಿಗೆ ಆರೋಗ್ಯಕರ ಸಂಗತಿ. ಮನೋರಂಜನೆಯ ಜೊತೆಗೆ ಒಂದಷ್ಟು ಜ್ನಾನವನ್ನೂ ವೃದ್ಧಿಗೊಳಿಸುವ ಟಿ.ಎಸ್.ಎನ್ ಅವರ ಈ ಪ್ರಯತ್ನಕ್ಕೆ ಶುಭವಾಗಲಿ, ನಮ್ಮ ನಾಡಿನ ಶ್ರೀಮಂತ ಚರಿತ್ರೆಯ ಅಧ್ಯಯನಕ್ಕೆ ನಮಗೆ ಇದೇ ಮುನ್ನುಡಿಯಾಗಲಿ.

ಚಿನ್ಮಯ.ಎಮ್.ರಾವ್ ಹೊನಗೋಡು

19-1-2012

******************

Exit mobile version