ಕೃತಿಕಾ ನಕ್ಷತ್ರ…ಈಗ ಸುಪ್ರಸಿದ್ಧ ಸರ್ವತ್ರ..

“ನಿಮಗೊಂದು ಪ್ರೆಶ್ನೆ..ಸಿನಿಮಾದಲ್ಲಿ ನಟಿಸುವುದು ಧಾರಾವಾಹಿಗಿಂತ ಉತ್ತಮವೇ? ಅದೇಕೆ ಸಿನಿಮಾ ಕಲಾವಿದರಿಗಿಂತ ಧಾರವಾಹಿಯ ಕಲಾವಿದರಿಗೆ ಕಡಿಮೆ ಬೆಲೆ?! ನನ್ನ ಪ್ರಕಾರ ಕಲೆ ಎಲ್ಲೆಡೆಯೂ ಸಮಾನ ಅಲ್ಲವೆ?”

ಹೀಗೆ ರಾಧಾ ಕಲ್ಯಾಣ ಧಾರವಾಹಿಯ ನಾಯಕಿ ಪುಟ್ಟ ಹುಡುಗಿ ಕೃತಿಕಾ ರವೀಂದ್ರ ತಾನೇ ಪ್ರೆಶ್ನೆ ಕೇಳಿಕೊಂಡು ತಾನೇ ಉತ್ತರಿಸಿಕೊಂಡು ತನ್ನನ್ನು ತಾನೇ ಸಮಾಧಾನಪಡಿಸಿಕೊಳ್ಳುತ್ತಾಳೆ. ಬೇರೆಯವರೂ ಈ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತಾಳೆ. ಅವರೊಡನೆ ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಾ ತಾನು ಪ್ರಸಿದ್ಧಳಾಗಿಬಿಟ್ಟಿದ್ದೇನೆ ಎಂಬ ಅಹಂಕಾರದ ಅನಗತ್ಯ ಮೌನವನ್ನು ಮುರಿದು ಎಲ್ಲರೊಡನೆ ಪುಟ್ಟ ಹುಡುಗಿಯಾಗಿ ಮಾತಾಡುತ್ತಾಳೆ..ನಗುತ್ತಾಳೆ..ತಾನೇ ಬೇರೆ ತನ್ನ ಲೆವೆಲ್ಲೇ ಬೇರೆ ಎಂಬುದನ್ನು ಮರೆತು ಸಹಜವಾಗಿ ಎಲ್ಲರೊಡನೆ ಬೆರೆತುಬಿಡುತ್ತಾಳೆ. ಮಾತಿನ ನಡುವೆ ಹೂನಗುವನ್ನು ಚೆಲ್ಲಲು ಆಕೆಗೆ ನೀವು ಸಂಭಾವನೆಯನ್ನೇನು ಕೊಡಬೇಕಾಗಿಲ್ಲ..ಆಕೆಯ ಭಾವನೆಗಳ ಜೊತೆ ಹೂನಗು ಬೆರೆತು ನಿಮ್ಮೆಡೆಗೆ ತೇಲಿ ಬಂದುಬಿಡುತ್ತದೆ.

ಪುಟ್ಟ ಹುಡುಗಿ ಪಟ್ಟ ಪಾಡು

ಹಾಂ..ಈ ಪುಟ್ಟ ಹುಡುಗಿ ನಿಜಕ್ಕೂ ಪುಟ್ಟ ಹುಡುಗಿಯೇ. ಜ಼ಿ ಕನ್ನಡದ ಜಿಂಬಾ ಧಾರಾವಾಹಿಗಾಗಿ ಎಂಟನೆಯ ತರಗತಿಯಲ್ಲಿರುವಾಗಲೇ ಕಿರುತೆರೆಗೆ ಎಂಟ್ರಿ ಹೊಡೆದಿದ್ದ ಈಕೆ ಬೆಳ್ಳಿತೆರೆಯ “ಪಟ್ರೆ ಲವ್ಸ್ ಪದ್ಮ”ದಲ್ಲಿ ನಾಯಕಿಯಾಗಿದ್ದಳು. ಚಿತ್ರ ಚೆನ್ನಾಗಿದ್ದರೂ ನಾನಾ ಕಾರಣಗಳಿಂದ ಮೂಲೆಗುಂಪಾಯಿತು. ಆದರೆ ಪ್ರತಿಭಾನ್ವಿತೆ ಕೃತಿಕಾ ಮಾತ್ರ ಮೂಲೆಗುಂಪಾಗಲಿಲ್ಲ. ಒಟ್ಟಿಗೇ ಎರಡು ದಿಕ್ಕಿನಲ್ಲಿ ಎರಡು ಹೆಜ್ಜೆಗಳನ್ನಿಟ್ಟು ತನ್ನ ಹೆಜ್ಜೆ ಗುರುತುಗಳನ್ನು ಸ್ಥಾಪಿಸಿಯೇ ಬಿಟ್ಟಳು. ಕಿರುತೆರೆಯಲ್ಲಿ ಮನೆಮಗಳಾಗಿ ಬಂದ ಈಕೆ ಬೆಳ್ಳಿತೆರೆಯಲ್ಲಿ ನಾಯಕ ಜಗ್ಗೇಶ್ ಚಿತ್ರದಲ್ಲಿ “ಲಿಫ್ಟ್ ಕೊಡ್ಲಾ” ಎಂದಳು. ಆಟ ಚಿತ್ರದಲ್ಲಿ ನಾಯಕನ ತಂಗಿಯಾದಳು.

ನಂತರ ನಟನೆಯ ಆಟ ಸಾಕೆಂದು ಮನೆಮಗಳಾಗಲು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ತನ್ನ ಮನೆಗೆ ಬಂದ ಕೃತಿಕ ಓದುವ ವಯಸ್ಸಿದು..ಓದೋಣವೆಂದು ಕಾಲೇಜಿಗೆ ಹೋದಳು. ಅಷ್ಟೊತ್ತಿಗಾಗಲೇ ಈ ಮುಗ್ಧ ಮುದ್ದು ಹುಡುಗಿಯ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುವ ಕಿರುಪ್ರಯತ್ನ ಬೇರೆ ಚಿತ್ರರಂಗದಲ್ಲಿ ನಡೆದಿತ್ತು. ಅದರ ಕಹಿ ಕವಿಯುವ ಮುನ್ನವೇ ಓದಿನ ಸಿಹಿಯನ್ನು ಸವಿಯಬೇಕೆಂದು ಒಂದರ್ಥದಲ್ಲಿ ಅಭಿನಯಕ್ಕೆ ಗುಡ್ ಬೈ ಹೇಳಿ ಸಂಪೂರ್ಣ ವಿದ್ಯಾಭ್ಯಾಸಕ್ಕೆ ಶರಣಾಗಿ ಗುಡ್ ಗರ್ಲ್ ಆಗಿದ್ದಳು. ಈ ಚಿತ್ರರಂಗ..ಕಿರುತೆರೆ..ಅಭಿನಯ..ಇವೆಲ್ಲಾ ತನ್ನಂತವರಿಗಲ್ಲ ಎಂದು ನಿಶ್ಚಯಿಸಿ ಅದರ ಆಸೆಯನ್ನೇ ಕೈಬಿಟ್ಟು ಕೈಯ್ಯಲ್ಲಿ ಪುಸ್ತಕವನ್ನು ಹಿಡಿದಿದ್ದಳು. ಏನನ್ನೂ ಬಾಕಿ ಉಳಿಸಿಕೊಳ್ಳದೆ ಅಭಿನಯ ವೃತ್ತಿಯನ್ನೇ ತನ್ನ ಮನಸ್ಸಿನಿಂದ ಹೊರಹಾಕಿ ಆ ಪ್ರಪಂಚದಿಂದ ಹೊರಬಂದಿದ್ದಳು. ಆದರೆ ಅದೃಷ್ಟದೇವತೆ ಮಾತ್ರ ಇವಳಿಗೆ ಕೀರ್ತಿ ನೀಡುವ ಕೆಲಸವನ್ನು ಇನ್ನೂ ಬಾಕಿ ಉಳಿಸಿಕೊಂಡಿದ್ದಳು. ಅದರ ಪರಿಣಾಮವೇ…

ಮತ್ತೆ ಆಹ್ವಾನ..ಈಗ ರಾಧಾ ಕಲ್ಯಾಣ..!

ಕೃತಿಕಾ ಕುಟುಂಬಕ್ಕೆ ತೀರಾ ಆಪ್ತರಾದ ಶಿರಸಿ ಮೂಲದ ಕಿರುತೆರೆ ನಟ ಅಶೋಕ್ ಹೆಗಡೆ ತನ್ನ ಗೆಳೆಯರು ಜ಼ೀ ಕನ್ನಡ ವಾಹಿನಿಗಾಗಿ ನಿರ್ಮಿಸುತ್ತಿರುವ ರಾಧಾಕಲ್ಯಾಣ ಧಾರಾವಾಹಿಗಾಗಿ ರಾಧೆಯಾಗಲು ಕೃತಿಕಾಳೇ ಬೇಕೆಂದು ಒತ್ತಾಯಿಸಿದರು…”ನೋಡು ಪುಟ್ಟಿ..ನಿಮ್ಮೂರಿನ ಭಾಗದಲ್ಲೇ ಚಿತ್ರೀಕರಣವಾಗಬಹುದು..ಒಳ್ಳೆಯ ಅವಕಾಶ..ತಪ್ಪಿಸಿಕೊಳ್ಳಬೇಡ..ಯೋಚಿಸು..”ಎಂದು ಕೃತಿಕಾಳನ್ನು ಒಪ್ಪಿಸಲು ಹರಸಾಹಸ ಮಾಡಿದರು. ಆದರೆ ಆ ಕ್ಷೇತ್ರದಲ್ಲಿ ಆಗಷ್ಟೇ ಸಾಕಷ್ಟು ನೋವುಂಡು ಬಂದಿದ್ದ ಅಮ್ಮ-ಮಗಳು ಅದರ ಸಹವಾಸವೇ ಬೇಡವೆಂದು ದೂರ ಸರಿದಿದ್ದರು. ಈಗ ತಾನೇ ತಾನಾಗಿ ಮತ್ತೆ ಈಕೆಯೇ ಬೇಕೆಂದು ಅವಕಾಶ ಇವಳನ್ನು ಹುಡುಕಿಕೊಂಡು ಬಂದರೂ ಅಮ್ಮ ಕೃತಿಕಾಳಿಗೆ ಬೇಡಮ್ಮ..ಎಂದಿದ್ದಳು. ಆದರೆ ಅದೇನನಿಸಿತೋ ಏನೋ ಮತ್ತೆ ಯು ಟರ್ನ್ ತೆಗೆದುಕೊಂಡ ಮಗಳು ಕೃತಿಕಾ ಮುಗುಳು ನಗು ಚೆಲ್ಲುತ್ತಾ ತಾನು ಈ ಧಾರಾವಾಹಿಯಲ್ಲಿ ನಟಿಸುತ್ತೇನೆ ಎಂದಳು. ಅಂತೂ ಅರ್ಧ ಮನಸ್ಸಿನಿಂದ ತಾಯಿ ಕೃತಿಕಾಳನ್ನು ಬೆಂಗಳೂರಿಗೆ ಬೀಳ್ಕೊಟ್ಟಳು !

ಮನೆಮಗಳು ರಾಧಾ ಮನೆಮಾತಾದಳು..!

ಇತ್ತ “ಮನೆಮಗಳು” ಧಾರಾವಾಹಿಯ ಕೃತಿಕಾ ಮನೆ ಸೇರಿದಳು. ಇನ್ನು ಅವಳ ಕಥೆ ಮುಗಿಯಿತು ಎಂದು ಅವಳ ಕಾಲೆಳೆದವರು ಸಂಜೆ ಕಥೆ ಹೊಡೆಯುತ್ತಿರುವಾಗಲೇ ಸಂಜೆ ೬-೩೦ಕ್ಕೆ ಜ಼ೀ ವಾಹಿನಿಯಲ್ಲಿ ರಾಧಾಕಲ್ಯಾಣ ಆರಂಭವಾಯಿತು. ರಾಧೆಯಾಗಿ ಬಂದ ಕೃತಿಕಾ ಕಿರುತೆರೆಯಲ್ಲಿ ಮತ್ತೆ ತನ್ನ ಹೊಸ ಖಾತೆಯನ್ನು ತೆರೆದಳು. ಈಗ ಈ ಧಾರಾವಾಹಿ ಅದ್ಯಾವ ಪರಿ ಹಿಟ್ ಆಗಿದೆಯೆಂದರೆ ಟಿ.ಆರ್.ಪಿಯಲ್ಲಿ ಸದಾ ಅತ್ಯುನ್ನತ ಶ್ರೇಣಿಯನ್ನೇ ಕಾಯ್ದುಕೊಂಡು ಮುನ್ನುಗ್ಗುತ್ತಿದೆ. ಬಹಳಷ್ಟು ಧಾರಾವಾಹಿಗಳನ್ನು ಬದಿಗೆ ಸರಿಸಿ ತನ್ನ ಆಧಿಪತ್ಯ  ಸ್ಥಾಪಿಸಿದೆ ! ಇದಕ್ಕೆ ಪ್ರಮುಖ ಕಾರಣ ಇದರ ನಾಯಕಿ ರಾಧಾ..ಇದೇ ಕೃತಿಕಾಳ ಮನಮುಟ್ಟುವ ಅಭಿನಯವೆಂದರೆ ಅದೇನು ಅತಿಶಯೋಕ್ತಿಯಾಗುವುದಿಲ್ಲ.

ಇತ್ತ ಶಿಕ್ಷಣವನ್ನೂ ದೂರಗೊಳಿಸದೆ ದೂರಶಿಕ್ಷಣದಲ್ಲಿ ಬಿ.ಎ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಪುಟ್ಟ ಹುಡುಗಿ ಕೃತಿಕಾ ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಷ್ಟು ಪ್ರಸಿದ್ಧಿಯನ್ನು ಪಡೆದರೂ ಅಹಂಕಾರವನ್ನು ತಲೆಗೆ ತೆಗೆದುಕೊಂಡಿಲ್ಲ. ಅದಕ್ಕೆ ಕಾರಣ ಅವಳು ಸಾಗಿ ಬಂದ ಕಲ್ಲುಮುಳ್ಳುಗಳ ಹಾದಿ. ಅತಿಶೀಘ್ರವಾಗಿ ಎತ್ತರಕ್ಕೇರಿದವರು ಆಗಸದಲ್ಲೇ ತೇಲಬಹುದೇನೋ…ಆದರೆ ಈ ಕೃತಿಕಾ ಕ್ರಮಿಸಿ ಬಂದ ಹಾದಿ ದುರ್ಗಮವಾಗಿದ್ದರಿಂದ ಜೀವನಾನುಭವದ ಪಾಠ ಅವಳನ್ನು ಇಷ್ಟು ಚಿಕ್ಕಪ್ರಾಯದಲ್ಲೇ ಮಾಗಿಸಿದೆ ಎನ್ನಬಹುದು. ಅದು ಅವಳಾಡುವ ಮಾತು, ಅವಳ ವರ್ತನೆಯಿಂದ ನಮಗೆ ಗೊತ್ತಾಗುತ್ತದೆ. ಹಾಗಾಗಿ ಕೃತಿಕಾ ಇಂದಿಗೂ ನೆಲದ ಮೇಲೇ ಇದ್ದಾಳೆ. ಯಾವ ಸೊಕ್ಕು ಸೋಗು ಆಕೆಯಲ್ಲಿ ನಿಮಗೆ ಕಾಣಸಿಗುವುದಿಲ್ಲ. ಹೀಗಿರುವ ಕಾರಣದಿಂದಲೇ ಆಕೆ ಈ ಮಟ್ಟದ ಜನಪ್ರಿಯತೆ ಗಳಿಸಿ ಕಿರುತೆರೆಯಲ್ಲಿ ನೆಲೆ ಕಂಡುಕೊಂಡಿದ್ದಾಳೆ ಎನ್ನಬಹುದು.

ಇಂದು ಪ್ರತಿನಿತ್ಯ ಕೋಟ್ಯಾಂತರ ಕನ್ನಡಿಗರು ರಾಧಾಕಲ್ಯಾಣದಲ್ಲಿ ಕೃತಿಕಾಳ ಅಭಿನಯವನ್ನು ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಪ್ರಾಯಶಹ ಅವಳು ಎಷ್ಟೇ ದೊಡ್ಡ ಬ್ಯಾನರ್‌ನ ಸಿನಿಮಾದಲ್ಲಿ ನಾಯಕಿಯಾಗಿದ್ದರೂ ಈ ಪ್ರಮಾಣದಲ್ಲಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಈಕೆ ಪ್ರೇಕ್ಷಕ ಪ್ರಭುಗಳ ಮೇಲೆ ತನ್ನ ಪ್ರಭಾವವನ್ನು ಬೀರಿದ್ದಾಳೆ !

ಕಿರುತೆರೆಯಾದರೇನು..ಬೆಳ್ಳಿತೆರೆಯಾದರೇನು..ಅಭಿನಯವೇ ಮೇಲು..ಕಿರುತೆರೆಯಲ್ಲ ಕೀಳು..ಅಲ್ಲವೇ? ಕನ್ನಡಿಗರು ಕೃತಿಕಾಳಿಗೆ ಈಗಾಗಲೇ ತಾರಾ ಪಟ್ಟ ನೀಡಿ ತಾರೆಯರ ಮಟ್ಟಕ್ಕೆ ಏರಿಸಿಯಾಗಿದೆ. ತಾರೆಯರ ಸಾಲಿನಲ್ಲಿ ಇವಳನ್ನು ಸೇರಿಸಿಯಾಗಿದೆ. ಅಂದ ಮೇಲೆ ಕೃತಿಕಾ.. ನೀನೇಕೆ ಅಂತಹಾ ಪ್ರೆಶ್ನೆ ಕೇಳಬೇಕಾಗಿದೆ? ನಿನ್ನಲ್ಲೇ ನಿನ್ನ ಪ್ರೆಶ್ನೆಗೆ ಉತ್ತರವಿದೆ..ನಿನ್ನ ತಾರಮೌಲ್ಯವೇ ಅದಕ್ಕೆ ಉತ್ತರವಾಗಿದೆ..?!

ಚಿನ್ಮಯ ಎಂ.ರಾವ್ ಹೊನಗೋಡು

Wednesday, April 18, 2012

Exit mobile version