ಹೊಸ ಪರಿಚಯ

ಆನಂದ್ ವಠಾರ, ಈತನ ಸಿನಿಮಾ ಪ್ರೀತಿ ಅಪಾರ

“ಲೇ…ನನ್ ಮಗನೆ..ಪ್ರೀತಿಗೋಸ್ಕರ ಸೂಸೈಡ್ ಮಾಡ್ಕೊಂಡು ಸತ್ರೆ ಸ್ವರ್ಗದಲ್ಲೇನು ಬಾಲ್ಕನಿ ಸೀಟ್ ಸಿಗಲ್ಲ ತಿಳ್ಕೋ…ನರಕದ ಎಂಟ್ರೆನ್ಸಲ್ಲೇ ಯಮ ಎಕ್ಕಡಾ ಹಿಡ್ಕೊಂಡು ಕೂತಿರ್ತಾನೆ ತಲೆ ಮೇಲೆ ಹೊಡಿಯೋಕೆ. ಸಾಯ್ಬೇಕು ಅನಿಸಿದ್ರೆ ಸಾಯಿ. ನೀನೇನು ಇಂಪಾರ್ಟೆಂಟ್ ಆಗಿಲ್ಲ ಭೂಮಿಗೆ…ಸಾಯೋಕೆ ಮುಂಚೆ ನಿನ್ ಬಾಡಿನಲ್ಲಿರೊ ಕಣ್ಣು,ಕಿಡ್ನಿನಾದ್ರೂ ಯಾರಿಗಾದ್ರು ದಾನ ಮಾಡಿ ಸಾಯಿ. ಅವರಿಗಾದ್ರು ಹೆಲ್ಪ್ ಆಗುತ್ತೆ. ಸುಮ್ನೆ ಯಾಕೆ ಸತ್ತು ವೇಸ್ಟ್ ಆಗ್ತೀಯಾ…” ಇದು ಉಪೇಂದ್ರ ಅವರ ಯಾವುದೋ ಚಿತ್ರದ ಡೈಲಾಗ್ ಅಲ್ಲ. ಬದಲಿಗೆ ಚಿಗುರು ಮೀಸೆಯ ಯುವಕನೊಬ್ಬ ನಿರ್ದೇಶಕನಾಗಲು ಪೂರ್ವ ತಯಾರಿ ನಡೆಸಲು ತೆಗೆದ  ಚಿತ್ರದಲ್ಲಿದ್ದ ಸಂಭಾಷಣೆ.

ಈತ ಓದಿದ್ದೇ ಒಂದು…ಆಗುತ್ತಿರುವುದೇ ಇನ್ನೊಂದು…ಹೌದು ಆನಂದ್ ಎಮ್. ವಠಾರ ಎಂಬ… ಕನಸುಗಳನ್ನು ಬಗಲಿನಲ್ಲಿ ಇಟ್ಟುಕೊಂಡು ಅಲೆಯುತ್ತಿರುವ ಈ ಹುಡುಗನ ಸಿನಿಮಾ ಪ್ರೀತಿ ಸಾಗರದಷ್ಟು. ಉತ್ತರ ಕರ್ನಾಟಕದ ಬಿಸಿಲ ನಾಡಿನ ಎಣ್ಣೆಗಪ್ಪು ಬಣ್ಣದ ಆನಂದ್ ತಾನೊಬ್ಬ ಒಳ್ಳೆಯ ಚಿತ್ರ ನಿರ್ದೇಶಕನಾಗಬೇಕೆಂದು ಮಾಡುತ್ತಿರುವ ಸಾಹಸ ಒಂದಲ್ಲ ಎರಡಲ್ಲ…ಆದರೂ ಪಾಪ ಅವಕಾಶಗಳು ಈತನಿಗೆ ಸಿಗುತ್ತಿಲ್ಲ…ಸಿಗುತ್ತಿಲ್ಲ ಎಂದು ಈತನೇನು ಸುಮ್ಮನೆ ಕುಳಿತುಕೊಂಡಿಲ್ಲ. ಸುಮ್ಮನೆ ಕೂರಲು ಈತನಿಗೆ ಬರುವುದೂ ಇಲ್ಲ…ಅದು ಈತನಿಂದಾಗುವುದಿಲ್ಲ. ಹಾಗಾಗಿ ಏನಾದರು ಕಿತಾಪತಿ ಮಾಡಬೇಕೆಂದು ಸಣ್ಣ ಪುಟ್ಟ ಕ್ಯಾಮೆರಾಗಳನ್ನೇ ಬಳಸಿ ಒಂದಷ್ಟು ಸಣ್ಣ ಪುಟ್ಟ ಸಿನಿಮಾ ಮಾಡಿದ್ದಾನೆ. ಎಲ್ಲವೂ ವಿಭಿನ್ನವಾಗಿ ಬಂದಿದೆ. ಇನ್ನೂ ಸ್ವಲ್ಪ ಪಳಗಿದರೆ ಈ ಹುಡುಗ ಕನ್ನಡ ಚಿತ್ರರಂಗಕ್ಕೆ ಏನಾದರು ಹೊಸತನ್ನು ಕೊಡಬಲ್ಲನೇನೊ ಅನಿಸುತ್ತದೆ ಈತನ ಚಿತ್ರಗಳನ್ನು ನೋಡಿದಾಗ.

ಡಿಪ್ಲಮೋ ಇನ್ ಎಲಾಕ್ಟ್ರಾನಿಕ್ ಎಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಪದವಿ ಪಡೆದ ಆನಂದ ತನ್ನ ಕುಟುಂಬವನ್ನು ಆನಂದವಾಗಿಡಬೇಕೆಂದು ಒಂದಷ್ಟು ಕಾಲ ಕಂಪೆನಿಯಲ್ಲಿ ಕೆಲಸ ಮಾಡಿದ. ತಕ್ಕ ಮಟ್ಟಿಗೆ ಮನೆಯನ್ನು ಸುರಕ್ಷಿತಗೊಳಿಸಿದ ಈತ ನಿರ್ದೇಶಕನಾಗಬೇಕೆಂದು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದ ತನ್ನ ಮನದಾಸೆಯನ್ನು ಪೂರೈಸಿಕೊಳ್ಳಬೇಕೆಂದು ಹಲವರ ಬಳಿ ಕೆಲಸ ಕಲಿತ. ಉಪ್ಪಿಯೇ ತನ್ನ ಮಾನಸ ಗುರುವೆಂದು ಮಾತಿನಲ್ಲಿಯೇ ಉಪೇಂದ್ರರನ್ನು ಅಪ್ಪಿಕೊಳ್ಳುವ ಆನಂದ್ ಉಪೇಂದ್ರ ಜೊತೆ ತನಗೆ ಕೆಲಸ ಮಾಡಲು ಅವಕಾಶವಾಗಲಿಲ್ಲ..ಆದರೆ ಅವರೇ ನನ್ನ ದ್ರೋಣಾಚಾರ್ಯ..ನಾನು ಏಕಲವ್ಯ ಇದ್ದಂತೆ ಎಂದು ಮುಗ್ಧವಾಗಿ ನುಡಿಯುತ್ತಾನೆ.

ಅಮೇರಿಕಾದ ವಿಲಿಯಮ್ ಹಾರ್ಟ್ ಫಿಲ್ಮ್ ಮೇಕಿಂಗ್ ಸ್ಕೂಲ್‌ನಿಂದ ಡಿಪ್ಲಮೋ ಇನ್ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಿರುವ ಈತ ತೆಲುಗು ನಿರ್ದೇಶಕ ಎಮ್. ಧನ ಸುಬ್ರಹ್ಮಣ್ಯಮ್ ಅವರ ಮಾರ್ಗದರ್ಶನದಲ್ಲಿ “ದೃಷ್ಟಿ” ಕಿರು ಚಿತ್ರಕ್ಕಾಗಿ ಕೆಲಸ ಮಾಡಿದ. ಸಹನಿರ್ದೇಶಕನಾಗಿ ಅವರೊಡನೆ ಹಲವಾರು ಕಿರು ಚಿತ್ರಗಳಿಗೆ ಕೆಲಸ ಮಾಡಿದ. ಈಗ ಅರ್ಜುನ್ ನಿರ್ದೇಶನ “ವಜ್ರ” ಚಿತ್ರಕ್ಕಾಗಿ ಸಹ ನಿರ್ದೇಶಕನಾಗಿದ್ದಾನೆ.

ಈ ನಡುವೆಯೇ “ಲವ್+ಲೈಫ್/ ಮನಿ =?” “ಡ್ಯೂಡ್ಸ್” ಹಾಗು  “ವೀಕ್ ನೆಸ್” ಎಂಬ ಎರಡು ಕಿರುಚಿತ್ರಗಳನ್ನು ಸ್ವತಂತ್ರ ನಿರ್ದೇಶಕನಾಗಿ ಶ್ರಮ ಪಟ್ಟು ತೆಗೆದು ಸದ್ಯ ವೀಕ್ ಆಗಿದ್ದಾನೆ. ಮಾತನಾಡುತ್ತಲೇ ಈತನ ಸಾಹಿತ್ಯಾಧ್ಯಯನ ಎಷ್ಟು ನಿಖರವಾಗಿದೆ ಎನಿಸುತ್ತದೆ. ತನ್ನ ಬದುಕು ಭಾವನೆಗಳನ್ನು ವ್ಯಕ್ತ ಪಡಿಸುವಾಗ ಆನಂದನ ಕಂಗಳಲ್ಲಿ ಕಾಣುವ ಪ್ರಖರ ಬೆಳಕು ಈತ ಮುಂದೊಮ್ಮೆ ಯಶಸ್ವಿ ನಿರ್ದೇಶಕನಾಗಬಲ್ಲನೆಂಬುದಕ್ಕೆ ಮುನ್ಸೂಚನೆಯಂತೆ ಕಾಣುತ್ತದೆ. ತನ್ನ ಕಲ್ಪನೆಗಳಿಗೆ ಕಥೆ-ಚಿತ್ರಕಥೆ ಮಾಡಿ ಚುರುಕಾಗಿರುವ ಸಂಭಾಷಣೆಗಳನ್ನು ಚುರುಕಾಗಿ ಬರೆಯುವ ಆನಂದನಿಗೆ ತನ್ನ ಚಿತ್ರಗಳು ಹೇಗೆ ವಿಭಿನ್ನವಾಗಿರಬೇಕೆಂಬುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇದೆ. ಆನಂದ್ ಯಶಸ್ವಿ ನಿರ್ದೇಶಕನಾಗುವುದೊಂದೇ ಇನ್ನು ಬಾಕಿ ಇದೆ. ಅದಕ್ಕೆ ಚಿತ್ರರಸಿಕರ ಶುಭಹಾರೈಕೆ ಇದ್ದೇ ಇದೆ. ಬೆಸ್ಟ್ ಆಫ್ ಲಕ್ ಟು ಆನಂದ್ ವಠಾರ್.

ಚಿನ್ಮಯ ಎಂ.ರಾವ್ ಹೊನಗೋಡು

November ‎15, ‎2011

************

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.