ದಡ ಸೇರಿ ಗುರಿ ಮುಟ್ಟಬೇಕು

ಬರಹ : ಆತ್ಮ ಜಿ ಎಸ್
ಬೆಂಗಳೂರು

ಬಹಳ ದಿನಗಳ ನಂತರ ಪೇಟೆಗೆ ಹೋಗಿದ್ದೆ.ಮೊದಲೆಲ್ಲಾ ಹೂವು ಮಾರುತ್ತಿದ್ದ ಅಜ್ಜಿ ನೋಡಿ ಗಾಡಿ ನಿಲ್ಲಿಸಿದೆ.ಅಜ್ಜಿ ನೀವು ವ್ಯಾಪಾರಕ್ಕೆ ಬಂದಿರಾ?ಮನೆಯಲ್ಲಿಯೇ ಇರಬಹುದಿತ್ತುನನಗೋ ಈ ಸಮಯದಲ್ಲಿ ಅಜ್ಜಿ ಮನೆಯಲ್ಲಿಯೇ ಇದ್ದರೆ ಸೂಕ್ತ ಎಂಬ ಭಾವನೆ.ಅಯ್ಯೋ ಮನೆಯಲ್ಲಿ ಇದ್ದರೆ ತುತ್ತಿನ ಚೀಲ ತುಂಬಿಸುವುದು ಯಾರು?ಎಷ್ಟು ದಿನ ಮನೆಯಲ್ಲಿಯೇ ಇರಲಿ?ಚಿಕ್ಕಂದಿನಲ್ಲಿ ಹೂವು ಕಟ್ಟುವುದು ಕಲಿತ ವಿದ್ಯೆ, ಇದುವರೆಗೂ ಕೈ ಹಿಡಿದು ನಡೆಸಿದೆ. ದೇವರು ಇದ್ದಾನೆ ಹೇಗೋ ಧೈರ್ಯ ಮಾಡಿ ಬಂದೆ ಎಂದು ಉತ್ತರಿಸಿದರು. ನಾನು ಅವರ ಖಾಯಂ ಗ್ರಾಹಕಳು ಅಲ್ಲದಿದ್ದರೂ ಹೂವು ಹಾಕಿಕೊಡಲು ಸಹಾಯ ಆಗಲಿ ಎಂದು ಆಗಾಗ್ಗೆ ದಿನಪತ್ರಿಕೆ ಕೊಟ್ಟು ಬರುತ್ತಿದ್ದೆ. ಹೇಗೂ ಅಜ್ಜಿ ಇದ್ದಾರೆ ಎಂದು ಅವರ ಬಳಿ ಹೂವು ಖರೀದಿ ಮಾಡಿದೆ.”ನಿನ್ನದೇ ಬೋಣಿಗೆ ಇವತ್ತು” ತಗೋ ಎಂದು ಹೂವು ಕೊಟ್ಟದ್ದನ್ನು ಪಡೆದು ಗಾಡಿ ಹತ್ತಿ ಕುಳಿತೆ. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿಮಲ್ಲಿಗೆ ಮಾಲೆ ಕಟ್ಟುತ್ತಿದ್ದ ಅಜ್ಜಿಗೆ ಏನು ಅನ್ನಿಸಿತೋ ಮತ್ತೆ ಕರೆದು,ಮನೆಗೆ ಹೋಗಿ ಮಲ್ಲಿಗೆಯನ್ನು ಮುಡಿ ಎಂದು ಮಲ್ಲಿಗೆ ಮಾಲೆಯನ್ನು ನನ್ನ ಕೈಗಿತ್ತರು. ಅಂದು ಇಡೀ ದಿನ ಮಲ್ಲಿಗೆ ಮುಡಿದು ಮನ-ಮನೆಯಲ್ಲ ಅ ಹೂವಿನದ್ದೇ ಕಂಪು, ಜೊತೆಗೆ ಬಾಲ್ಯದ ಸವಿನೆನಪಿನ ಸಿಹಿ ಅನುಭವಗಳ ಮಾಲೆ ಮಾಲೆ.

ಬಾಲ್ಯದಲ್ಲಿ ಬಯಲು ಸೀಮೆಯ ಅಜ್ಜಂಪುರದಿಂದ ಮಲೆನಾಡಿನ ಸಾಗರದ ಅಜ್ಜನ ಮನೆ ಭೀಮನಕೋಣೆಗೆ ಹೋಗುವುದೆಂದರೆ ಎಲ್ಲಿಲ್ಲದ ಉತ್ಸಾಹ.ಒಂದೆಡೆ ಶಾಲೆಯ ಕಿರಿಕಿರಿ ಇಲ್ಲದೆ ಪ್ರಕೃತಿಯ ಮಡಿಲಲ್ಲಿ ಇರುವಷ್ಟು ದಿನವೂ ಆರಾಮದಲ್ಲಿ ಇರುವುದು.ಅಜ್ಜನ ಜೊತೆಯಲ್ಲಿ ತೋಟ,ಕಾಡು ಮೇಡು ತಿರುಗುತ್ತಾ ಅವರು ನೀಡುತ್ತಿದ್ದ ಮಾಹಿತಿ ಪಡೆದು ಹಣ್ಣು ಹಂಪಲು ತಿನ್ನುವುದೆಂದರೆ ಆಯಿತು. ನಮ್ಮ ತರಲೆಯ ನಡುವೆಯೂ ಅಜ್ಜ ಸ್ವಲ್ಪವೂ ಗದರದೆ ಮೊಮ್ಮಕ್ಕಳಿಗೆ ಪ್ರಕೃತಿಯ ಪಾಠ ಹೇಳುತ್ತಿದ್ದರು. ಮಲೆನಾಡಿನಲ್ಲಿ ಒಂದೆರೆಡು ಮಳೆಯಾದರೆ ಸಾಕು ಭೂಮಿಯಲ್ಲಿ ನಿಗೂಢವಾಗಿ ಅಡಗಿ ಕುಳಿತಿದ್ದ ಗಿಡಗಳು ಚಿಗುರುತ್ತಿದ್ದವು.ಹಲವಾರು ಅಂತಹ ಗಿಡಗಳಲ್ಲಿ ಮಲ್ಲಿಗೆ ಅತೀ ಪ್ರೀತಿ ನನಗೆ.ಒಂದು ಸಿಲಾವರದ ದಬರಿ ತುಂಬ ಬೆಳಿಗ್ಗೆ ಮಕ್ಕಳು ಮೊಮ್ಮಕ್ಕಳೆಲ್ಲಾ ಸೂಜಿ ಮಲ್ಲಿಗೆ ಕೊಯ್ದು (ಬೆಳಗ್ಗೆಯೆ ಮುಡಿವ ಹೂ) ಮಾಲೆ ಮಾಡುತ್ತಿದ್ದೆವು.ಮತ್ತೆ ಸಾಯಂಕಾಲ ಭಟ್ಕಳ ಮಲ್ಲಿಗೆ ದುಂಡು ಮಲ್ಲಿಗೆ,ಮಂಗಳೂರು ಮಲ್ಲಿಗೆ ಒಂದೇ ಎರಡೇ ಮೊಗ್ಗುಗಳನ್ನು ಕೊಯ್ದು ಮಾಲೆ ಮಾಡಿ ತಲೆತುಂಬ ಮುಡಿಯುತ್ತಿದ್ದೆವು.ಆಹಾ! ಸಂಜೆ ಹೊತ್ತಿಗೆ ಮಲ್ಲಿಗೆಯ ಕಂಪು ಆಹ್ಲಾದಕರ..ಮಾಲೆ ನೇಯಲು ಬಾರದ ನನಗೆ ಅಕ್ಕಂದಿರು ನೇಯುವುದನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆ.ಅಜ್ಜಿ ತೆಂಗಿನ ಕಡ್ಡಿಯನ್ನು ಸಣ್ಣ ಸಣ್ಣ ತುಂಡರಿಸಿ ದಾರ ಕೈಯಲ್ಲಿ ಇರಿಸಿ ಕಟ್ಟುವುದನ್ನು ಹೇಳಿಕೊಟ್ಟಿದ್ದರು.ಕ್ರಮೇಣ ತೆಂಗಿನ ಕಡ್ಡಿಯಿಂದ ಮಲ್ಲಿಗೆ ಮೊಗ್ಗು ಕಟ್ಟುವ ಹಂತಕ್ಕೆ ಭಡ್ತಿ ಪಡೆದಿದ್ದೆ. ಮಲೆನಾಡಿನಲ್ಲಿ ರಜಾದಿನಗಳಲ್ಲಿ ಆಟದ ಜೊತೆಗೆ ಬದುಕಿನ ಪಾಠವೂ ದೊರೆಯಿತ್ತಿತ್ತು.ಹೆಣ್ಣು ಮಕ್ಕಳಾದರೆ ಹೂವು ಕಟ್ಟುವುದು,ನೆಲ ಸಾರಿಸುವುದು,ರಂಗೋಲಿ ಹಾಕುವುದರಿಂದ ಹಿಡಿದು ಮನೆಯ ಕೆಲಸಗಳೆಲ್ಲ ಪ್ರತೀ ರಜೆಯಲ್ಲಿ ಕರಗತವಾದದ್ದೇ ತಿಳಿಯಲಿಲ್ಲ.ಇನ್ನು ಗಂಡು ಮಕ್ಕಳಾದರೆ ತೋಟದ ಕೆಲಸ,ಕೊಟ್ಟಿಗೆಯ ಕೆಲಸದಿಂದ ಹಿಡಿದು ದೇವರ ಪೂಜೆಯಲ್ಲಿ ಪಾಲ್ಗೊಳ್ಳುವ ತನಕ. ಎಷ್ಟೋ ಗಂಡು ಮಕ್ಕಳು ರಜೆಗಳಲ್ಲಿ ವೇದ ಪಾಠ ಕಲಿತು ಪೂಜಾ ಕಾರ್ಯದಲ್ಲಿ ಭಾಗವಹಿಸುತ್ತಿದ್ದರು. ಸಮಕಾಲೀನ ಶಿಕ್ಷಣದ ಜೊತೆಗೆ ಇಂತಹ ಶಿಕ್ಷಣವು ಬದುಕಿಗೆ ಕೈಹಿಡಿದು ನಡೆಸಿದ ಎಷ್ಟೋ ಉದಾಹರಣೆ ಇದೆ ನಮ್ಮಲ್ಲಿ.

ಇತ್ತೀಚಿನ ಕೊರೋನಾ ಬಿರುಗಾಳಿ ಬೀಸುವ ತನಕ ಎಲ್ಲರ ಬದುಕು ನಿರಾತಂಕವಾಗಿ ಸಾಗುತ್ತಿತ್ತು.ಯಾರೂ ಊಹಿಸದ,ಸನ್ನಿವೇಶವನ್ನು ಮಾಪನ ಮಾಡಲು ಸಾಧ್ಯವಾಗದ ಎಷ್ಟೋ ಘಟನೆಗಳಿಗೆ ಇಡೀ
ಮಾನವ ಕುಲವೇ ಸಾಕ್ಷಿಯಾಗಿದೆ.ಜಾಗತೀಕರಣ ತೆರೆದಂತೆ ಬದುಕು ಬದಲಾಯಿತು.ಆರ್ಥಿಕ ಪರಿಸ್ಥಿತಿಯ ಸುಧಾರಣೆಯೋ ಅಥವಾ ಮಾನವನ ಮಹಾತ್ವಾಕಾಂಕ್ಷೆಯ ಪರಿಣಾಮವೋ ಹಳ್ಳಿ ತೊರೆದು ನಗರಕ್ಕೆ ಸೇರಿದವರೇ ಹೆಚ್ಚು.ಆಗ ಹಳ್ಳಿಯಿಂದ ದಿಲ್ಲಿಗೆ ಮುಖ ಮಾಡಿದ್ದವರೇ ಇಂದು ಕಾಲಚಕ್ರ ತಿರುಗಿ ದಿಲ್ಲಿಯಿಂದ ಹಳ್ಳಿಗೆ ಮುಖ ಮಾಡಿದ್ದಾರೆ.ಒಂದೆಡೆ ತಮ್ಮದಲ್ಲದ ಜಾಗದಲ್ಲಿ ಬದುಕು ಕಟ್ಟಿಕೊಂಡಿದ್ದರೂ ಅಭದ್ರತೆಯ ಭಾವ ಬಂದಿದ್ದು ಸತ್ಯ. ಕಷ್ಟ-ಸುಖಗಳಿಗೆ ತಮ್ಮವರೇ ಸರಿ ಎಂಬುದು ಸಾಬೀತಾಗಿದೆ.ಈ ನಿಟಿನಲ್ಲಿಯೇ ಪ್ರಧಾನಿಯವರ “ಆತ್ಮ ನಿರ್ಭರ ಭಾರತ ಅಭಿಯಾನ” ಜನರಲ್ಲಿ ಚಿಂತನೆ ಮಾಡುವಂತೆ ಮಾಡಿದೆ.ಭಾರತೀಯರಿಗೆ ಸ್ವಾವಲಂಬನೆ ರಕ್ತಗತ, ಒಕ್ಕಲುತನವೇ ನಮ್ಮ ಜೀವಾಳವಾಗಿದೆ.ಸರಳತೆಯೇ ಹಿಂದಿನವರಿಗೆ ಹಿರಿತನವಾಗಿತ್ತು.ಇದರ ಮುಂದಿನ ಹಾದಿಯೇ ಗುಡಿ ಕೈಗಾರಿಕಯಂತಹ ಯಶಸ್ಸು ಜಾಗತೀಕರಣ ,ಸಾರಿಗೆ ವ್ಯವಸ್ಥೆಯ ಸುಧಾರಣೆಯಾದಂತೆ ಎಷ್ಟೋ ಹಳ್ಳಿಗಳಲ್ಲಿ ಕೇವಲ ಹಿರಿಯ ತಲೆಮಾರಿನ ಜನರು ಮಾತ್ರವೇ ಉಳಿಯುವಂತೆ ಆಯಿತು.ಕಾಲಕ್ಕೆ ತಕ್ಕ ಕೋಲ ಎಂಬಂತೆ ಜನ ಇಂದು ಮತ್ತೆ ಹಳ್ಳಿಯತ್ತ ಮುಖ ಮಾಡಿದ್ದಾರೆ.ಎಷ್ಟೋ ಜನರಿಗೆ ಭೂಮಿ ಇದ್ದು ಉಳುಮೆ ಮಾಡದೆ ಪೇಟೆಯಲ್ಲಿ ಕೆಲಸ ಮಾಡುತ್ತಿರುವವರು ಮತ್ತೆ ಹಳ್ಳಿಯಲ್ಲಿಯೇ ಬದುಕು ಕಟ್ಟಲು ಚಿಂತನೆ ಮಾಡುತ್ತಿದ್ದಾರೆ.
ಹೀಗಾಗಿಯೇ ಬಿತ್ತನೆ ಬೀಜ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವುದು, ಸ್ಥಳೀಯವಾಗಿ ಬೆಳೆದ ಬೂದುಕುಂಬಳದಿಂದ ದೂರದ ಆಗ್ರಾ ಸಿಹಿಯಾದ ಆಗ್ರಾಪೇಟ್ ಮಲೆನಾಡಿನ ತೀರ್ಥಹಳ್ಳಿ ತಾಲೂಕಿನ ಕುಂಟವಳ್ಳಿಯಲ್ಲಿ ತಯಾರಾಗುವುದು ಇಂತಹ ಉದಾಹರಣೆ .

ನಮ್ಮ ಮುಂದೆ ಇರುವ ಹೂವು ಮಾರುವ ಅಜ್ಜಿ ಸಮಾಜದ ಒಂದು ಪ್ರತಿನಿಧಿ ಅಷ್ಟೆ.ಸಮಕಾಲೀನ ವಿದ್ಯೆಯ ಜೊತೆಗೆ ಈ ಹಿಂದೆ ಕಲಿತಿರುವ ಎಷ್ಠೋ ಜೀವನ ಪಾಠಗಳು ನಮ್ಮಲ್ಲಿದೆ.ಕೆಲಸಗಾರರ ಸಮಸ್ಯೆ ಇದೆ ಎಂದು ಕೃಷಿ ಮಾಡದೇ ಇರುವವರು,ಚಿನ್ನದ ಕೆಲಸ ಮಾಡುವ ಪಾರಂಪರಿಕ ವಿದ್ಯೆ ಗೊತ್ತಿರುವವರು…ಹೀಗೆ ಪಟ್ಟಿ ಮಾಡಿದರೆ ನಮ್ಮಲ್ಲಿ ಬೆರೆತಿರುವ ನಿರ್ಲಕ್ಷ್ಯ ಮಾಡಿರುವ ವಿದ್ಯೆಗೆ ರೂಪ ಕೊಡಲು ಈಗ ಸಕಾಲ .ಹಾಗಂತ ಯಾವುದೂ ಒಂದು ದಿನ ಬೆಳಗಾಗುವುದರಲ್ಲಿ ಆಗುವಂತದ್ದೂ ಅಲ್ಲ.ಕೆಲವೊಂದು ಸ್ವ ಪ್ರಯತ್ನದಿಂದ ಇನ್ನು ಕೆಲವೊಂದು ಸಾಂಘಿಕ ಪ್ರಯತ್ನ ಬೇಕು.ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು online trading ಮಾಡುವ ಪ್ರಯತ್ನಗಳು ನಡೆಯುತ್ತಿವೆ. www.shopindialocal.com ಇಂತಹ ಪ್ರಯತ್ನಗಳಲ್ಲಿ ಒಂದು.ಸಮಾಜದ ಕೆಲವು ಸ್ಥರಗಳ ಜನರಿಗೆ ಏನು ಬಂದರೂ ತಟ್ಟುವುದಿಲ್ಲ.ಮಧ್ಯಮ ವರ್ಗ ಮತ್ತು ಬಡವರು ಎಲ್ಲದಕ್ಕೂ ಬೆಲೆ ತೆರಬೇಕಾಗುತ್ತದೆ,ಹಲವು ವಾದಗಳು ಇದ್ದರೂ ಇದ್ಯಾವದೂ ಬದುಕಿಗೆ ಬರುವುದಿಲ್ಲ.ಸರ್ಕಾರ ಕೊಟ್ಟಿರುವ ನೆರವು,ನಮ್ಮಲ್ಲಿರುವ ಸಂಪನ್ಮೂಲಗಳಿಂದ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು.ಯಾರೇ ಸಹಾಯ ಮಾಡಿದರೂ ಕ್ಷಣಿಕ ಅಷ್ಟೆ.ನಮ್ಮ ತಲೆಯ ಮೇಲೆ ನಮ್ಮದೇ ಕೈ.”ದೀಪವು ನಿನ್ನದೇ,ಗಾಳಿಯು ನಿನ್ನದೇ ಆರದಿರಲಿ ಬೆಳಕು” ಎಂಬಂತೆ ಬದಲಾವಣೆಯ ಅಲೆಯಂತು ಎದ್ದಿದೆ,ದಡ ಸೇರಿ ಗುರಿ ಮುಟ್ಟಬೇಕು..

ಬರಹ : ಆತ್ಮ ಜಿ ಎಸ್
ಬೆಂಗಳೂರು

Exit mobile version