ಕಿರುತೆರೆ

ಸೀರಿಯಲ್ ಪ್ರಿಯರಿಗೆ ಸಿಹಿಸುದ್ದಿ- ಅಕ್ಟೋಬರ್ 10ರಿಂದ ಬರ್ತಿದ್ದಾಳೆ ಭಾಗ್ಯಲಕ್ಷ್ಮೀ

ಸೀರಿಯಲ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೊಚ್ಚ ಹೊಸ ಧಾರಾವಾಹಿಯೊಂದು ಹೊಸ ಕಥೆಯೊಂದಿಗೆ ಮನೆ ಮಂದಿಗೆಲ್ಲ ಮನರಂಜನೆ ನೀಡಲು ರೆಡಿಯಾಗಿದೆ. ಜನಪ್ರಿಯ ವಾಹಿನಿ ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀ ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಈಗಾಗಲೇ ಪ್ರೋಮೋ ಮೂಲಕ ಗಮನ ಸೆಳೆದ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 10ರಿಂದ ಪ್ರತಿದಿನ ಪ್ರಸಾರವಾಗಲಿದೆ.

ಈಗಾಗಲೇ ಕಲರ್ಸ್ ಕನ್ನಡದಲ್ಲಿ ಒಲವಿನ ನಿಲ್ದಾಣ, ಕೆಂಡಸಂಪಿಗೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ಲಕ್ಷಣ, ನನ್ನರಸಿ ರಾಧೆಯಂತಹ ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳ ಜೊತೆಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಕೂಡ ಸೇಪರ್ಡೆಗೊಳ್ಳಲಿದೆ. ಅಕ್ಟೋಬರ್ 10ರಿಂದ ಸಂಜೆ 7 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ದೊಡ್ಡ ತಾರಾಬಳಗವನ್ನು ಹೊಂದಿದ್ದು, ಇಡೀ ತಂಡ ಇಂದು ಮಾಧ್ಯಮದೆದುರು ಹಾಜರಾಗಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.

ಅಕ್ಕತಂಗಿಯ ಬಾಂದವ್ಯದ ಕಥೆ ಹೊಂದಿರುವ ಈ ಧಾರಾವಾಹಿಯಲ್ಲಿ ನಿರೂಪಕಿ ಸುಷ್ಮಾ ಕಥಾ ನಾಯಕಿಯಾಗಿ ನಟಿಸುತ್ತಿದ್ದು, ಬಿಗ್ ಬಾಸ್ ಖ್ಯಾತಿಯ ಶಮಂತ್ ಗೌಡ(ಬ್ರೋ ಗೌಡ), ಸುದರ್ಶನ್, ಪದ್ಮಜಾ ರಾವ್, ಭೂಮಿಕ, ತಾಂಡವ ಸೂರ್ಯವಂಶಿ ತಾರಾಬಳಗದಲ್ಲಿದ್ದಾರೆ. ಈ ಧಾರಾವಾಹಿ ಮೂಲಕ ಬಿಗ್ ಬಾಸ್ ಬ್ರೋ ಗೌಡ ಇದೇ ಮೊದಲ ಬಾರಿಗೆ ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿರುವ ಜೈ ಮಾತಾ ಕಂಬೈನ್ಸ್ ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ.

ಸುಷ್ಮಾ ಮಾತನಾಡಿ ಭಾಗ್ಯಲಕ್ಷ್ಮೀ ಮೂಲಕ ಹತ್ತು ವರ್ಷದ ನಂತರ ಮತ್ತೆ ಸೀರಿಯಲ್ ನಲ್ಲಿ ನಟಿಸುತ್ತಿದ್ದೇನೆ. ಜೀವನದಲ್ಲಿ ಏನೇ ಬಂದರು ಅದನ್ನು ಖುಷಿಯಿಂದ ಸ್ವಾಗತಿಸಿ ಸುತ್ತಮುತ್ತಲಿನವರನ್ನು ಖುಷಿಯಿಂದ ಇಡುವುದು, ಮನೆಯ ಜವಾಬ್ದಾರಿಯನ್ನು ಹೊತ್ತು ಇಡೀ ಜೀವನವನ್ನೇ ಸಂಸಾರಕ್ಕಾಗಿ ಮುಡಿಪಾಗಿಟ್ಟಿರೋ ಹೆಣ್ಣು ಮಗಳ ಪಾತ್ರ. ತನ್ನ ಪ್ರೀತಿಯ ತಂಗಿಗೆ ಒಳ್ಳೆಯ ವರನನ್ನು ನೋಡಿ ಆಕೆಯನ್ನು ಮದುವೆ ಮಾಡಬೇಕು ಆಕೆ ಖುಷಿಯಿಂದ ಇರಬೇಕು ಎಂಬ ಉದ್ದೇಶ ಇರುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಬಗ್ಗೆ ತಿಳಿಸಿಕೊಟ್ರು.

ಹಿರಿಯ ಕಲಾವಿದೆ ಪದ್ಮಜಾ ರಾವ್ ಮಾತನಾಡಿ ಈ ಧಾರಾವಾಹಿಯಲ್ಲಿ ನನ್ನದು ಅತ್ತೆ ಪಾತ್ರ. ಇಲ್ಲಿ ನಾನು ಗಟ್ಟಿಗಿತ್ತಿಯಾದ ಅತ್ತೆ ಪಾತ್ರ ನಿರ್ವಹಿಸುತ್ತಿದ್ದೇನೆ. ಜೋರು ಮಾಡುವ, ಗದರುವ ಪಾತ್ರ ನನ್ನದು. ಇಲ್ಲಿವರೆಗೂ ಸಾಪ್ಟ್ ಕ್ಯಾರೆಕ್ಟರ್ ಮಾಡಿದ್ದ ನನಗೂ ಬದಲಾವಣೆ ಬೇಕಿತ್ತು ಈ ಪಾತ್ರ ತುಂಬಾ ಸ್ಟ್ರಾಂಗ್ ಆಗಿದೆ. ಆರಂಭದಲ್ಲಿ ಪಾತ್ರಕ್ಕೆ ಒಗ್ಗಿಕೊಳ್ಳಲು ಮುರ್ನಾಲ್ಕು ದಿನ ಬೇಕಾಯಿತು ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದ್ರು.

ಕಲರ್ಸ್ ಫಿಕ್ಷನ್ ಹೆಡ್ ಜೆಡಿ ಮಾತನಾಡಿ ಭಾಗ್ಯಲಕ್ಷ್ಮೀ ಸಂಬಂಧಗಳ ಬೆಲೆಯನ್ನು ಸಾರುವ ಧಾರಾವಾಹಿ. ನಾವು ಯಾವಾಗಲೂ ಒಂದೇ ಜಾನರ್ ಧಾರಾವಾಹಿ ಮಾಡೋದಿಲ್ಲ. ಪ್ರತಿ ಭಾರೀ ಹೊಸತನ್ನು ಕೊಡಲು ನಮ್ಮ ತಂಡ ಪ್ರಯತ್ನಿಸುತ್ತಿರುತ್ತೇವೆ. ಸಂಬಂಧಗಳ ಮೇಲೆ ಬರೆದಿರುವ ಅಕ್ಕತಂಗಿಯರ ಕಥೆ ಇದು. ವಿಭಿನ್ನ ಕಥಾಹಂದರವಿದೆ.
ಖಂಡಿತ ಒಂದು ಹೊಸ ಅನುಭವವನ್ನು ವೀಕ್ಷಕರಿಗೆ ಇದು ನೀಡಲಿದೆ ಎಂದು ಸೀರಿಯಲ್ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡ್ರು.

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.