ಕನ್ನಡಪರಿಸರ

ಅರ್ಧ ಶತಮಾನದಿಂದ ಲಿಂಗನಮಕ್ಕಿಯಲ್ಲಿ ಮುಳುಗಿದ್ದರೂ ಸುಸ್ಥಿರವಾಗಿರುವ ಹಿರೇಭಾಸ್ಕರ ಆಣೆಕಟ್ಟು

ಅದು ೧೯೩೭-೩೮ ರ ಅವಧಿ. ಮಾದರಿ ಮೈಸೂರಿನ ನಿರ್ಮಾತೃ ನಾಲ್ವಡಿಯವರು ಮಹಾಮಾತ್ಯ ಮುತ್ಸದ್ದಿ ಮಿರ್ಜಾ ಇಸ್ಮಾಯಿಲ್ಲರ ದಿವಾನಗಿರಿಯಲ್ಲಿ ನಾಡು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದ ಕಾಲ. ಶಿವನಸಮುದ್ರದ ವಿದ್ಯುತ್ ಸ್ಥಾವರದ ಎಲ್ಲ ವಿಸ್ತರಣೆ ಮುಗಿದು ಅದರ ಸಾಮರ್ಥ್ಯ ೪೫ ಮೆಗಾವಾಟ್ಟಿಗೆ ಮುಟ್ಟುವ ಹಂತ.ಶಿಂಷಾದಲ್ಲಿ ೧೭.೨ ಮೆಗಾವಾಟ್ ಸಾಮರ್ಥ್ಯದ ಹೊಸ ವಿದ್ಯುದಾಗರ ಕಾರ್ಯಾರಂಭಕ್ಕೆ ಅಣಿಗೊಳ್ಳುತ್ತಿದ್ದ ಸಂದರ್ಭ. ಆದರೂ ಮೈಸೂರು ರಾಜ್ಯಕ್ಕೆ ವಿದ್ಯುತ್ ಕೊರತೆಯ ಭಯ.ಮಹಾರಾಜರು ನಿವೃತ್ತ ಮುಖ್ಯ ಇಂಜಿನಿಯರ್ ಎಸ್ ಕೆ ಶೇಷಾಚಾರ್ ನೇತೃತ್ವದಲ್ಲಿ ಪವರ್ ಕಮಿಟಿಯೊಂದನ್ನು ನೇಮಕ ಮಾಡಿ, ವಿದ್ಯುತ್ ಕೊರತೆ ಉಂಟಾಗದಂತೆ ಕೈಗೊಳ್ಳಬೇಕಿರುವ ಉಪಕ್ರಮಗಳ ಕುರಿತು ಸಲಹೆ ನೀಡಲು ಸೂಚಿಸಿದಾಗ ಆ ಕಮಿಟಿ ನೀಡಿದ ಸಲಹೆ ಶರಾವತಿಯನ್ನು ಪಳಗಿಸಬೇಕೆಂದು. ಸರಿ, ಕೃಷ್ಣರಾವ್ ಎಂಬ ತಜ್ಞ ಸಿವಿಲ್ ಇಂಜಿನಿಯರ ಮೂಲಕ ಸರ್ವೆ ನಡೆಸಿ ಶರಾವತಿಯಿಂದ ವಿದ್ಯುತ್ ಉತ್ಪಾದಿಸುವ ಉದ್ದೇಶಕ್ಕೆ ನಿರ್ಮಿಸಲು ತೊಡಗಿದ ಆಣೆಕಟ್ಟೆಯೇ ಹಿರೇಭಾಸ್ಕರ ಅಥವಾ ಮಡೇನೂರು ಆಣೆಕಟ್ಟೆ.

ಈ ಯೋಜನೆಗಾಗಿ ೧೯೩೯ ರ ಫೆಬ್ರುವರಿ ಐದರಂದು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಜೋಗದಲ್ಲಿ ಅಡಿಗಲ್ಲನ್ನಿಡುತ್ತಾರೆ. ಶ್ರೀ ಸುಬ್ಬರಾವ್ ಎಂಬ ಅಧೀಕ್ಷಕ ಇಂಜಿನಿಯರ್ ನೇತೃತ್ವದಲ್ಲಿ ಮಡೇನೂರಿನಲ್ಲಿ ೧೧೪ ಅಡಿ ಎತ್ತರದ ಸುಮಾರು ಇಪ್ಪತ್ತೈದು ಟಿ ಎಂ ಸಿ ಸಂಗ್ರಹ ಸಾಮರ್ಥ್ಯದ ಜಲಾಶಯದ ನಿರ್ಮಾಣಕಾರ್ಯ ಆರಂಭವಾಗುತ್ತದೆ.

ಇಡೀ ಆಣೆಕಟ್ಟೆಯ ನಿರ್ಮಾಣ ಸುರ್ಕಿ ಅಂದರೆ ಗಾರೆಯಿಂದ ನಿರ್ಮಾಣವಾಗುತ್ತದೆ. ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ನಿಯಂತ್ರಿತವಾಗಿ ಹೊರಬಿಡಲು ಆರು ಗೇಟುಗಳನ್ನು ಅಳವಡಿಸಲಾದರೆ,ಪ್ರವಾಹದ ನೀರನ್ನು ಹೊರಗೆ ಹಾಕಲು ವಿಶೇಷ ಮಾದರಿಯ ಹನ್ನೊಂದು ಸೈಫನ್ ಗಳನ್ನು ಅಳವಡಿಸಲಾಯಿತು.ಈ ಸೈಫನ್ಗಳು ವೊಲ್ಯೂಟ್ ಮಾದರಿಯ ಸೈಫನ್ಗಳಾಗಿದ್ದು ಇವನ್ನು ತಜ್ಞ ಸಿವಿಲ್ ಇಂಜಿನಿಯರ್ ಗಣೇಶ ಐಯ್ಯರ್ ರವರು ನಿರ್ಮಿಸಿರುತ್ತಾರೆ.ಇವುಗಳು ಸುಮಾರು ಹದಿನೆಂಟು ಅಡಿ ವ್ಯಾಸವನ್ನು ಹೊಂದಿದ್ದು,ತಲಾ ಹನ್ನೊಂದು ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಹೊರಹಾಕುವ ಸಾಮರ್ಥ್ಯ ಹೊಂದಿವೆ. ಹಿರೇಭಾಸ್ಕರವನ್ನು ಕುರಿತು ಬರೆದ ಅನೇಕ ಲೇಖನಗಳಲ್ಲಿ,ಈ ಆಣೆಕಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ನಿರ್ಮಾಣವರಂದು ತಪ್ಪಾಗಿ ಉಲ್ಲೇಖಿಸಿರುವುದು ಕಂಡುಬರುತ್ತದೆ.ಆದರೆ ಈ ಆಣೆಕಟ್ಟೆಗೂ ಸರ್ ಎಂ ವಿ ಯವರಿಗೂ ಯಾವುದೇ ಸಂಬಂಧವಿರುವುದಿಲ್ಲ.

ಈ ಜಲಾಶಯ ತನ್ನ ನಿರ್ಮಾಣ ಮುಕ್ತಾಯವಾದ ಹದಿನಾರೇ ವರ್ಷದಲ್ಲಿ ಮುಳುಗಿಹೋಗುವಂತಾದದ್ದು ನಾಡಿನ ದೌರ್ಭಾಗ್ಯ.ಈ ಜಲಾಶಯ ೧೯೪೭ರಲ್ಲಿ ಪೂರ್ಣಗೊಂಡು ಅದೇ ವರ್ಷ ಇದರಲ್ಲಿ ಜಲಸಂಗ್ರಹಣೆ ಆರಂಭವಾಗುತ್ತದೆ.ಇದರ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಮಹಾತ್ಮಾ ಗಾಂಧೀ ಜಲವಿದ್ಯುದಾಗರ ೧೯೪೮ರ ಫೆಬ್ರವರಿ ೨೧ರಂದು ಆರಂಭಗೊಳ್ಳುತ್ತದೆ. ಇದು ಒಟ್ಟು ೧೨೦ ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿತ್ತು. ಆದರೆ ಮುಂದೆ ೧೯೫೬ ರಲ್ಲಿ ಹಳೆಯ ಮೈಸೂರು ರಾಜ್ಯ ವಿಶಾಲ ಕರ್ನಾಟಕವಾಗಿ ವಿಸ್ತರಣೆಗೊಂಡಾಗ ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಯಿತು.

ಸರ್ಕಾರ ಹೆಚ್ ಇ ಸಿ ಪಿ ಯ ಮೂಲಕ ಶರಾವತಿಯ ಪೂರ್ಣ ಸಾಮರ್ಥ್ಯ ಬಳಸಲು ಉದ್ದೇಶಿಸಿದಾಗ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟುವುದು ಅನಿವಾರ್ಯವಾಯಿತು.೧೯೬೪ ರಲ್ಲಿ ಲಿಂಗನಮಕ್ಕಿ ಆಣೆಕಟ್ಟೆ ನಿರ್ಮಾಣವಾದಾಗ ಹಿರೇಭಾಸ್ಕರ ಅದರಲ್ಲಿ ಸಂಫೂರ್ಣ ಮುಳುಗಡೆಯಾದದ್ದಲ್ಲದೇ ಅದರ ಮೇಲೆ ಸುಮಾರು ನಲವತ್ತೊಂದು ಅಡಿ ನೀರು ನಿಲ್ಲತೊಡಗಿತು.ಲಿಂಗನಮಕ್ಕಿಯ ಪೂರ್ಣಮಟ್ಟ ಸಮುದ್ರಮಟ್ಟದಿಂದ ೧೮೧೯ ಅಡಿ ; ಆದರೆ ಹಿರೇಭಾಸ್ಕರ ೧೭೭೮ ಅಡಿ. ಹೀಗೆ ಹಿರೇಭಾಸ್ಕರ ೧೯೬೪ ರಿಂದ ಪ್ರತಿವರ್ಷ ಮುಳುಗಡೆಯಾಗುತ್ತದೆ.ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಇದು ನಮ್ಮ ಕಣ್ಣಿಗೆ ಬೀಳುತ್ತದೆ.ಪ್ರತಿವರ್ಷ ಮೇ ತಿಂಗಳ ಅಂತ್ಯ ಇದನ್ನು ನೋಡಲು ಸೂಕ್ತಕಾಲ.

ಈ ವರ್ಷ ಲಿಂಗನಮಕ್ಕಿ ಮಟ್ಟ ತುಂಬ ಇಳಿದಿದ್ದರಿಂದ ಇದನ್ನು ಕಾಣಲು ಸುಸಂದರ್ಭ.ಹಾಗಾಗಿ ಕಳೆದವಾರ ನಾವು ಕೆಲವರು ಈ ಜಲಾಶಯವನ್ನು ನೋಡಿಬಂದೆವು. ಅಂದಿನ ನಿರ್ಮಾತೃಗಳ ಕರ್ತೃತ್ವ ಶಕ್ತಿಗೆ ನಿದರ್ಶನವಾಗಿ ,ಆ ಆಣೆಕಟ್ಟು ನೀರಿನಲ್ಲಿ ಮುಳುಗಿ ಐವತ್ತಕ್ಕೂ ಹೆಚ್ಚು ವರ್ಷವಾದರೂ ಅತ್ಯಂತ ಸುಸ್ಥಿತಿಯಲ್ಲಿ ಇಂದಿಗೂ ಇದೆಯೆಂದರೆ ನಮಗೆ ಆಶ್ಚರ್ಯವಾಗುತ್ತದೆ.ಅದರ ಎರಡೂ ಬದಿಗೆ ಲಿಂಗನಮಕ್ಕಿ ಹಿನ್ನೀರು ತುಂಬಿದ್ದರೂ ಅದು ಅದ್ಭುತವಾಗಿ ಗೋಚರಿಸುತ್ತದೆ.ನೋಡಿ ಮಡೇನೂರು ಅರ್ಥಾತ್ ಹಿರೇಭಾಸ್ಕರ ಜಲಾಶಯದ ಕೆಲವು ಚಿತ್ರಗಳನ್ನು!

HIREBHASKARA DAM : Kannada Writing & Photography By Gajanana Sharma (68 Images)
About Gajanana Sharma
Worked at KPTCL
Studied at Mysore University (University of Mysore)
Went to M S E B High School, Jog Falls
Lives in Bangalore, India
From Sagar,Karnataka
Cell : 094495 96841

[FAG id=5052]

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.