ರತ್ನಗಿರಿಯ ರತ್ನದಂತಹ ಬೆಡಗಿ ಸದಾ…! ಸಾದಾ ಸೀದಾ ಸದಾ ಜೊತೆ ಒಂದು ಮಾತುಕತೆ..

-ಚಿನ್ಮಯ ಎಂ.ರಾವ್ ಹೊನಗೋಡು

ನಟಿಯೊಬ್ಬಳು ವೈಯುಕ್ತಿಕವಾಗಿ ಹಾಗು ಸಾರ್ವಜನಿಕವಾಗಿ ಹೇಗಿರಬೇಕೆಂಬುದಕ್ಕೆ ಪ್ರಾಯಶಹ ದಕ್ಷಿಣದ ತಾರೆ ಸದಾಳಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಸದಾ ಎಂಬ ಸದಾ ಮಿನುಗುವ ನಕ್ಷತ್ರ ಒಂದಿನಿತೂ ಅಹಂಕಾರವಿಲ್ಲದೆ ಸದಾ ಭೂಮಿಯ ಮೇಲೇ ಇರುವ ಕಲಾವಿದೆಯಾಗಿರುವುದರಿಂದ ಸದಾ ಚಿತ್ರರಂಗದ ಬಾಂದಳದಲ್ಲಿ ಮಿನುಗುವ ತಾರೆಯಾಗಿ ಮಿಂಚುತ್ತಿದ್ದಾಳೆ ಎಂದರೆ ಅದೇನು ಅತಿಶಯೋಕ್ತಿಯಾಗುವುದಿಲ್ಲ. ಅಂತಹ ಅತಿಶಯದ ಉಕ್ತಿಗೆ ಸದಾ ಖಂಡಿತ ಅರ್ಹಳು ಎಂಬುದರಲ್ಲಿ ಎರಡು ಮಾತಿಲ್ಲ.

ಆಂಧ್ರಮೂಲದ ಈ ಅಪರೂಪದ ಸುಂದರಿ ಸದಾಫ್ ಮೊಹಮದ್ ಸಯ್ಯದ್ ಬೆಳ್ಳಿತೆರೆಗಾಗಿ ಸದಾ ಎಂದು ಹೆಸರನ್ನು ರೂಪಾಂತರಿಸಿಕೊಂಡು ಕಾಲಿಟ್ಟಿದ್ದು ತೆಲುಗಿನ ಸೂಪರ್ ಹಿಟ್ ಚಿತ್ರ ಜಯಂ ಮೂಲಕ. ಸಿಕ್ಕಪಟ್ಟೆ ಸ್ಟಾರ್ ಆಗಿದ್ದು ತಮಿಳಿನ ಸೂಪರ್ ಹಿಟ್ ಚಿತ್ರ ಅನ್ನಿಯನ್ ಮೂಲಕ. ಮೊನಾಲಿಸ, ಮೋಹಿನಿ, ಆರಕ್ಷಕ ಹಾಗು ಇತ್ತೀಚೆಗಿನ ಮೈಲಾರಿ ಚಿತ್ರಗಳಿಂದ ಕನ್ನಡ ಚಿತ್ರರಂಗದಲ್ಲಿಯೂ ಸದಾ ಸುಪ್ರಸಿದ್ಧಿಯನ್ನೇ ಕಾಪಾಡಿಕೊಂಡು ಬಂದಿರುವ ಸದಾ ಕನ್ನಡದ ಪ್ರೇಕ್ಷರಿಗೂ ಬಲು ಇಷ್ಟವಾದ ತಾರೆ. ಪರಿಪೂರ್ಣ ನಟಿಯೊಬ್ಬಳು ಹೇಗಿರಬೇಕೆಂದರೆ ಸದಾಳಂತೆ ಇರಬೇಕು ಎಂದು ಚಿತ್ರರಂಗದವರೇ ಹೇಳುತ್ತಾರೆ.

ಟ್ರೆಡಿಶನಲ್, ಮಾಡ್ರನ್ ಹೀಗೆ ಎಲ್ಲಾ ಕೋನಗಳಿಂದಲೂ ಪೂರ್ಣ ಅಂಕ ಗಳಿಸಿಕೊಳ್ಳುವ ಸದಾ ಬರೀ ರೂಪವತಿ ಮಾತ್ರವಲ್ಲ….ಗುಣವತಿ…ಅತ್ಯುತ್ತಮ ಅಭಿನೈತ್ರಿ. ಈ ಕಾರಣದಿಂದಲೇ ಸುಮಾರು ಹನ್ನೆರಡು ವರ್ಷಗಳಿಂದ ಸದಾ ಸ್ಟಾರ್ ಪಟ್ಟವನ್ನು ಹಾಗೆಯೇ ಉಳಿಸಿಕೊಂಡಿರುವ ಸದಾ, ಸದಾ ಬಹುಬೇಡಿಕೆಯ ನಟಿ. ಅಷ್ಟೇ ಅಲ್ಲ ಈಗ ಸದಾ ಸಾಗುತ್ತಿರುವ ದಾರಿಯನ್ನೊಮ್ಮೆ ಗಮನ ಹರಿಸಿದರೆ ಸದಾ ಈಕೆ ತಾರಾಪಟ್ಟದಲ್ಲೇ ಕೂರಬಹುದಾ? ಎಂದು ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಹುಬ್ಬೇರಿಸುವಂತಾಗಿದೆ ! ಇಂತಹ ಸದಾ “ಕನ್ನಡ ಟೈಮ್ಸ್” ಪತ್ರಿಕೆಯ ಓದುಗರಿಗಾಗಿ ಸಂದರ್ಶನ ನೀಡಿದ್ದಾರೆ…ಓದಿ…ಶುಭ ಹಾರೈಸಿ…

೧-ಸದಾ ನಗುವಿನ ರಹಸ್ಯ…? ಸೌಂದರ್ಯದ ಮೂಲ?

ನಾನು ಸದಾ ಭೂಮಿಯ ಮೇಲೇ ಇರುತ್ತೇನೆ. ಹಾಗಾಗಿ ಇಷ್ಟೊಂದು ಎತ್ತರಕ್ಕೇರುತ್ತಿದ್ದೇನೆ. ನನ್ನ ಸಹಜತೆಯೇ ನನ್ನ ಸದಾ ನಗುವಿನ ರಹಸ್ಯ. ಸಹಜತೆಯೇ ಪರಿಪೂರ್ಣತೆ. ಪರಿಪೂರ್ಣತೆಯೇ ಪ್ರಾಯಶಹ ಸೌಂದರ್ಯಕ್ಕೆ ಮೂಲ…!

೨-ರತ್ನಗಿರಿಯ ಬಾಲೆಯ ಬಾಲ್ಯ ಹೇಗಿತ್ತು?

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನಾನು ನನ್ನ ತಂದೆ ತಾಯಿಗೆ ಒಬ್ಬಳೇ ಮಗಳಾದ ಕಾರಣ ನನ್ನನ್ನೇ ಹೆಚ್ಚು ಮುದ್ದು ಮಾಡಿ ಬೆಳೆಸಿದರು. ಆದರೂ ನಾನು ಅದರಿಂದ ಹಾಳಾಗಲಿಲ್ಲ. ಅಂತಹ ತಂದೆ ತಾಯಿಯನ್ನು ಪಡೆದ ನಾನೇ ಪುಣ್ಯವಂತೆ.

೩-ಸದಾ ಓದಿದ್ದು…ಓದದೇ ಹೋಗಿದ್ದು..? ಗೊತ್ತು ಗಿರಿ ಏನಿತ್ತು? ಚಿತ್ರರಂಗ ಹೇಗೆ ಕೈ ಬೀಸಿ ಕರೆಯಿತು?

ಆಂಧ್ರದ ರತ್ನಗಿರಿಯಲ್ಲಿ ೧೨ರವರೆಗೆ ಓದಿ ೯೨ ಪರ್ಸೆಂಟೇಜ್ ತೆಗೆದುಕೊಂಡು ಮುಂದಿನ ಇಂಜಿನಿಯರಿಂಗ್ ಓದಿಗೆ ಮುಂಬೈ ಸೇರಿದೆ. ಆದರೆ ನನ್ನ ಗಮ್ಯಸ್ಥಾನ ಬೇರೆಯದೇ ಆಗಿತ್ತು ! ಕಾಲೇಜು ಇನ್ನೂ ಆರಂಭವಾಗಲು ಸಮಯವಿದ್ದ ಕಾರಣ ಹಾಗೇ ಸುಮ್ಮನೆ ಒಂದು ಫೋಟೋ ಶೂಟ್ ಮಾಡಿಸಿದೆ. ಆ ಫೋಟೊಗಳು ಆಕಸ್ಮಿಕವಾಗಿ ಕೋಆರ್‍ಡಿನೇಟರ್ ಒಬ್ಬರ ಮೂಲಕ ನಿರ್ದೇಶಕ ತೇಜ ಅವರ ಕೈ ಸೇರಿತು ! ತೆಲುಗಿನ “ಜಯಮ್” ಚಿತ್ರ ಕೈಬೀಸಿ ಕರೆಯಿತು ! ಉನ್ನತ ಶಿಕ್ಷಣಕ್ಕೆ ಸಾಗುವ ಮೊದಲೇ ಚಿತ್ರರಂಗದ ದಾರಿ ಹಿಡಿದೆ. ಬಾಲ್ಯದಲ್ಲಿ ನಟಿಯಾಗುವ ಕನಸಿತ್ತಾದರೂ ನಮ್ಮ ಕುಟುಂಬಕ್ಕೆ ಚಿತ್ರರಂಗದ ನಂಟೇ ಇರದ ಕಾರಣ ಅದು ಸಾಧವೇ ಇಲ್ಲವೆಂದು ತಿಳಿದಿದ್ದೆ. ಆದರೆ ಈಗ ಆಗಿರುವುದೇ ಬೇರೆ ! ನಾನು ನಿಜಕ್ಕೂ ಅದೃಷ್ಟವಂತೆ.

೪-ನಿಮಗೆ ಯಾರಾದರೂ ಮಾರ್ಗದರ್ಶಕರು ಇದ್ದಾರಾ?

ಜೀವನ ಕಲಿಸುವ ಪಾಠಗಳಿಗಿಂತ ಯಾವ ದೊಡ್ಡ ಮಾರ್ಗದರ್ಶಕರೂ ಬೇಡ. ಜೀವಾನಾನುಭವವೇ ಮಾರ್ಗದರ್ಶಕ.

೫-ನವನಟಿ ಸದಾಳಿಗೆ ಆರಂಭದಲ್ಲಿ ಚಿತ್ರರಂಗ ಹೇಗೆ ಪ್ರೋತ್ಸಾಹಿಸಿತು?

ದಕ್ಷಿಣದ ಭಾಷೆ ಸಂಸ್ಕೃತಿಗಳ ಬಗ್ಗೆ ಏನೂ ತಿಳಿದಿರದ ನನ್ನನ್ನು ಅತ್ಯಂತ ತಾಳ್ಮೆಯಿಂದ ಈ ಚಿತ್ರರಂಗ ಬೆಳಿಸಿ ಪೋಷಿಸಿ ಪ್ರೋತ್ಸಾಹಿಸಿದೆ. ಇದು ನಿಜಕ್ಕೂ ಅವರೆಲ್ಲರ ದೊಡ್ಡ ಗುಣ.

೬-ನಿಮಗೆ ಆತ್ಮತೃಪ್ತಿ ನೀಡಿದ ನಿಮ್ಮ ಪಾತ್ರ?

ನಿಸ್ಸಂದೇಹವಾಗಿ “ಜಯಂ” ಚಿತ್ರದ “ಸುಜಾತ”. ಆನಂತರದಲ್ಲಿ ಪ್ರಿಯಸಾಕ್ಷಿ ಹಾಗು ಉನ್ನಾಲೆ ಉನ್ನಾಲೆ ಚಿತ್ರದ ಪಾತ್ರಗಳು.

೭-ಚಿತ್ರರಂಗಕ್ಕೂ ಮುನ್ನ ಕಲಾಜಗತ್ತಿನಲ್ಲಿ ನೀವು…?

ರಂಗಭೂಮಿ ಅಥವಾ ಮಾಡೆಲಿಂಗ್ ಲೋಕದಿಂದ ಬಂದವಳಲ್ಲ ನಾನು. ಆದರೆ ರತ್ನಗಿರಿಯಲ್ಲಿ ಸತತ ಏಳು ವರ್ಷಗಳ ಕಾಲ ಕಥಕ್ ನೃತ್ಯವನ್ನು ಸಾಧನೆ ಮಾಡಿದ್ದೇನೆ. ರತ್ನಗಿರಿಯ ಹಿರೇಮಠ್ ಅವರು ನನ್ನ ಗುರುಗಳು.

೮-ಇಂದು ಎಕ್ಸ್ ಪೋಸ್ ಮಾಡಿದಾಕ್ಷಣ ಯಾರೂ ಸುಪ್ರಸಿದ್ದ ನಟಿಯಾಬಹುದಲ್ಲ..? ಏನಂತೀರಿ? ನೀವು ಯಾವ ಬಗೆ?

ಕಥೆ ಹಾಗು ಪಾತ್ರದ ಪ್ರಾಮುಖ್ಯತೆ ಅಭಿನಯ ಇವೆಲ್ಲದಕ್ಕೆ ನನ್ನ ಮೊದಲ ಪ್ರಾಶಸ್ತ್ಯ. ಆನಂತರದ್ದು ಅದನ್ನು ಆಧರಿಸಿ ಅಗತ್ಯವಿರಿವಷ್ಟು ಮಾತ್ರ ಎಕ್ಸ್ ಪೋಸ್. ನನ್ನ ವಿಚಾರದಲ್ಲಿ ಎಲ್ಲವೂ ಒಂದು ಇತಿಮಿತಿಯಲ್ಲಿರುವುದನ್ನು ಈಗಾಗಲೇ ನನ್ನ ಚಿತ್ರಗಳಿಂದ ನೀವು ಗಮನಿಸಿರಬಹುದು.

೯-ನೀವು ಬೇರೆ ನಟಿಯರಿಗಿಂತ ಹೇಗೆ ಎಷ್ಟು ವಿಭಿನ್ನ…ಅನನ್ಯ?

ನಾನು ಎಲ್ಲರೆದುರು ಮಿಂಚಬೇಕೆಂದು ಗೆಟ್ ಟುಗೆದರ್ ಪಾರ್ಟಿಗಳು ಹಾಗು ಇನ್ನಿತರ ಪಾರ್ಟಿಗಳಿಗೆ ಹಾಜರಾಗುವುದಿಲ್ಲ. ನನ್ನ ಹಾಜರಾತಿ ಏನಿದ್ದರೂ ನಿಷ್ಠೆಯಿಂದ ಅಭಿನಯಿಸುವ ಕಾಯಕದಲ್ಲಿ ಮಾತ್ರ. ಹಾಗಾಗಿ ನಾನು ಸದಾ ಮಿಂಚುತ್ತಿದ್ದೇನೆ !

೧೦-ನೀವು ನಿರ್ಮಾಪಕರಿಗೆ ಗಗನಕುಸುಮ…ಅತೀ ಹೆಚ್ಚು ಸಂಭಾವನೆ ಪಡೆಯುತ್ತೀರಂತಲ್ಲ…ನಿಮ್ಮ ಪ್ರಾಶಸ್ತ್ಯ ಕಥೆಗೊ ಸಂಭಾವನೆಗೊ?

ನನಗೆ ಕಥೆ, ಸಂಭಾವನೆ ಎರಡೂ ಮುಖ್ಯ. ಅಷ್ಟಕ್ಕೂ ಅಷ್ಟು ಸಂಭಾವನೆಗೆ ನಾನು ಅರ್ಹಳು ಎಂದು ನನಗನಿಸುತ್ತಿದೆ.

೧೨-ಐಟೆಮ್ ಡ್ಯಾನ್ಸ್‌ಗೆ ಮಾತ್ರ ಹೆಜ್ಜೆ ಹಾಕಲು ಸಿದ್ಧರಿದ್ದೀರಾ?

ಕಥೆಗೆ ಪೂರಕವಾಗಿ ಅದು ಯಾವ ರೀತಿಯ ಸಾಂಗ್ ಎನ್ನುವುದನ್ನು ಅವಲಂಬಿಸಿ…ಅಲ್ಲಿ ತೀರಾ ಅಶ್ಲೀಲತೆ ಇಲ್ಲದಿದ್ದರೆ…

೧೩-ದಕ್ಷಿಣ ಹಾಗು ಉತ್ತರ ಭಾರತದ ಚಿತ್ರ ನಿರ್ಮಾಣದಲ್ಲಿ ಏನು ವ್ಯತ್ಯಾಸ ಗುರುತಿಸಿದ್ದೀರಿ?

ಏನೂ ವ್ಯತ್ಯಾಸವಿಲ್ಲ…ಭಾಷೆಯೊಂದನ್ನು ಬಿಟ್ಟು..

೧೪-ಸಾಕಷ್ಟು ಪ್ರಾದೇಶಿಕ ಭಾಷೆಗಳಲ್ಲಿ ನಿಮ್ಮ ನಟನೆಗೆ ನೀವೇ ಕಂಠದಾನ ಮಾಡದ ಕಾರಣ ನಿಮಗೆ ಪ್ರಶಸ್ತಿಗಳು ಕೈ ತಪ್ಪಿ ಹೋಗಿವೆಯಾ?

ನಾನು ಪ್ರಶಸ್ತಿಗಳಿಗಾಗಿ ನಟಿಸುವುದಿಲ್ಲ…ಆದರೆ ನನ್ನ ನಟನೆಗೆ ನಾನೇ ಕಂಠದಾನ ಮಾಡುವುದರಿಂದ ನನ್ನ ಪಾತ್ರದ ಗುಣಮಟ್ಟ ಹೆಚ್ಚುತ್ತದೆ ಎನ್ನುವ ಅಭಿಪ್ರಾಯ ನನ್ನದು. ಹಾಗಾಗಿ ನಾನೇ ಕಂಠದಾನ ಮಾಡ ಬಯಸುತ್ತೇನೆ. ಆದರೆ ನಿರ್ದೇಶಕರ ತೀರ್ಮಾನವೇ ಅಂತಿಮ ಅಲ್ಲವೇ?

೧೫-ಭವಿಷ್ಯದ ಗೊತ್ತು-ಗುರಿ? ನಿರ್ದೇಶನ ಅಥವಾ ನಿರ್ಮಾಣಕ್ಕೆ ಇಳಿಯುವ ಆಲೋಚನೆಯೇನಾದರೂ ಇದೆಯಾ?

ಯೋಚಿಸಿಲ್ಲ….ಜೀವನವನ್ನು ನಾನು ಬಂದಂತೆ ಸ್ವೀಕರಿಸುತ್ತೇನೆ.

೧೬-ತಂದೆ ತಾಯಿಯ ಬೆಂಬಲ ಹೇಗಿದೆ?

ಅವರ ಸಹಕಾರವಿಲ್ಲದಿದ್ದರೆ ನಾನು ಎಲ್ಲಿರುತ್ತಿದೆನೋ ನನಗೇ ಗೊತ್ತಿಲ್ಲ..ನನ್ನ ಏಳು ಬೀಳು ಎಲ್ಲಾ ಕಾಲಘಟ್ಟಗಳಲ್ಲಿಯೂ ಅವರು ನನ್ನ ಜೊತೆಗಿದ್ದಾರೆ.

೧೭-ಸಮಾಜ ಸೇವೆ…ರಾಜಕೀಯ…ಇತ್ಯಾದಿ ಬಗ್ಗೆ ಆಸಕ್ತಿ?

ನಾನು ಪ್ರಾಣಿಪ್ರಿಯೆ. ಸಮಾಜಸೇವೆ ಸಹಜವಾಗಿ ನನ್ನ ಮುಂದೆ ಬಂದರೆ ಒಪ್ಪಿಕೊಳ್ಳುತ್ತೇನೆ.

೧೮-ಅವಿಸ್ಮರಣೀಯ ದಿನ..? ಕ್ಷಣ..?

ನಾನಿಂದಿಗೂ ಮರೆತಿಲ್ಲ…ನನ್ನ ಮೊದಲ ಜಯಂ ಚಿತ್ರ ಬಿಡುಗಡೆಯ ದಿನ ಹೈದರಬಾದಿನ ಥಿಯೇಟರಿಗೆ ಒಮ್ಮೆಲೇ ಜನ ನುಗ್ಗಿದ ಕ್ಷಣವನ್ನು…ಅಪ್ಪನ ಜೊತೆ ಥಿಯೇಟರಿಗೆ ಕಾಲಿಡುವಾಗ ಭಾವೋನ್ಮಾದಗೊಂಡೆ. ಅಂದು ಪ್ರೇಕ್ಷಕರಿಂದ ಅಂತಹ ಅತ್ಯದ್ಭುತ ಪ್ರತಿಕ್ರಿಯೆಯನ್ನು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ !

೧೯-ಅಭಿಮಾನಿಗಳ ಬಗ್ಗೆ…

ಇಷ್ಟು ವರ್ಷಗಳ ಅವರ ನಿರಂತರ ಪ್ರೀತಿ ಅಭಿಮಾನಕ್ಕೆ ನಾನು ಸದಾ ಚಿರಋಣಿ.

Tuesday, ‎July ‎22, ‎2014

*********

 

 

Exit mobile version