ಅವಧಾನ ಕಲೆಕಲಾಪ್ರಪಂಚವ್ಯಕ್ತಿ ಪರಿಚಯಸಾಹಿತ್ಯ

ವಿದ್ವನ್ಮನೋರಂಜಕ ಶತಾವಧಾನಿ ಡಾ|| ಆರ್. ಗಣೇಶ್

R GANESH PHOTOS (4)-ಸುನಿತಾ ಕೃಷ್ಣಮೂರ್ತಿ ಶಿವಮೊಗ್ಗ

ಹೆಚ್ಚಿನವರು ಅಪರಿಚಿತರು ಯಾರನ್ನೇ ಕಂಡಾಗ ಅಥವಾ ಭೇಟಿ ಮಾಡಿದಾಗ ಪೂರ್ವಾಗ್ರಹಪೀಡಿತರಂತೆ ತಮ್ಮದೇ ನಿಲುವು ತಳೆಯುತ್ತಾರೆ. ಶತಾವಧಾನಿ ಡಾ. ಆರ್. ಗಣೇಶ್ ಅವರನ್ನು ಗುಂಪಿನ ಮಧ್ಯೆ ಕಂಡಾಗ ಇವರ್‍ಯಾರೋ ಬುದ್ಧಿಜೀವಿ ಎಂದು ನಿರ್ಧರಿಸಿಬಿಡುತ್ತಾರೆ. ಆದರೆ ಅವರ ಬಳಿ ಮಾತನಾಡಿದರೂ ಚಿಕ್ಕ ಮಗುವಿನ ಹತ್ತಿರ ಮಾತನಾಡುವ ಭಾವ, ಅದೇ ಮುಗ್ಧತೆ ! ಅದೇ ಸರಳತೆ ! ಆದರೆ ನಮ್ಮ ಕಲ್ಪನೆಗೂ ನಿಲುಕದ ಪಾಂಡಿತ್ಯ, ವಿದ್ವತ್ತು ಶತಾವಧಾನಿಗಳದು. ಅವರನ್ನು ವೇದಿಕೆಯ ಮೇಲೆ ಕಂಡರೆ ಓಹ್… ವಿದ್ಯೆಯ ಮಹಾಸಾಗರ. . . ಬಗೆದಷ್ಟೂ ಮತ್ತೆ ಮತ್ತೆ ಬರುತ್ತದೆ.

Amazing, mind blowing, unbelievable  ಎನ್ನುತ್ತೀರೋ, ವಿಸ್ಮಯ-ಆಶ್ಚರ್ಯ-ಅದ್ಭುತ ಎನ್ನುತ್ತೀರೋ ನಿಮಗೇ ಬಿಟ್ಟ ವಿಷಯ. ಶತಾವಧಾನಿ ಡಾ|| ಆರ್. ಗಣೇಶ್ ಅವರ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಿ ಎಂದರೆ ಅವರಿಗಾಗಿಯೇ ಒಂದು ಹೊಸ ಪದ ಸೃಷ್ಟಿಸಬೇಕು. ಅದೂ ಆಗಿದೆ ವಿದ್ವಲ್ಲೋಕದ ವಿಸ್ಮಯ – ಶ್ರೀ ರಾಮಸ್ವಾಮಿಯವರು ಸೃಷ್ಟಿಸಿದ ಪದವಿದು.

ASHTAAVADHAANA PHOTOSಶತಾವಧಾನಿಗಳು ಓದಿದ್ದು ?

ಶತಾವಧಾನಿಗಳು ಓದಿದ್ದು ಎಲ್ಲರಂತೆ ಎಂಜಿನಿಯರಿಂಗ್. ಬೆಂಗಳೂರಿನ ಯುವಿಸಿಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ. ಬೆಂಗಳೂರಿನ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಮೆಟೀರಿಯಲ್ ಸೈನ್ಸ್ ಮತ್ತು ಮೆಟಲರ್ಜಿಯಲ್ಲಿ ಪಿಎಚ್‌ಡಿ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿ. ಹಂಪಿ ಕನ್ನಡ ವಿಶ್ವವಿದ್ಯಾಲಯವು ಶತಾವಧಾನಿಗಳ ಕನ್ನಡದಲ್ಲಿ ಅವಧಾನ ಕಲೆ ಎಂಬ ಮಹಾಪ್ರಬಂಧಕ್ಕೆ ತನ್ನ ಪ್ರಪ್ರಥಮ ಡಿ.ಲಿಟ್ ಪದವಿ ನೀಡಿದೆ.

ASHTAAVADHAANA PHOTOS (5)ಕ್ರಮಬದ್ಧ ಶಿಕ್ಷಣವಲ್ಲದೆ ಕಾವ್ಯ ಮೀಮಾಂಸೆ, ಛಂದಶ್ಶಾಸ್ತ್ರ, ವೇದಾಂತ, ಉಪನಿಷತ್ತು, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ತ್ವಶಾಸ್ತ್ರ, ವ್ಯಾಕರಣ, ಅಲಂಕಾರಶಾಸ್ತ್ರಗಳಲ್ಲದೇ ಲಲಿತಕಲೆಗಳಾದ ಸಂಗೀತ, ನೃತ್ಯ, ಚಿತ್ರಕಲೆಗಳ ಜೊತೆ ಯಕ್ಷಗಾನದಲ್ಲೂ ಪ್ರಾವೀಣ್ಯತೆ ಹೊಂದಿದ್ದಾರೆ. ಭಾರತೀಯ ಭಾಷೆಗಳಾದ ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ, ಪಾಲಿ, ಶೌರಸೇನಿ, ಮರಾಠಿ, ಬಂಗಾಲಿ ಮುಂತಾದ ಭಾಷೆಗಳಲ್ಲದೇ ವಿದೇಶಿ ಭಾಷೆಗಳಾದ ಗ್ರೀಕ್, ಲ್ಯಾಟಿನ್, ಇಟಾಲಿಯನ್ ಮುಂತಾದ ೧೮ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ. ಉತ್ತಮ ಕವಿ, ಉಪನ್ಯಾಸಕ, ಚಿಂತಕ, ಲೇಖಕ, ವಾಗ್ಮಿಗಳಾದ ಶತಾವಧಾನಿ ಡಾ|| ಆರ್. ಗಣೇಶ್ ಅವರ ಜ್ಞಾನದ ಹರಹು ನಮ್ಮ ಊಹೆಗೂ ನಿಲುಕುವುದಿಲ್ಲ.

ಅವಧಾನವೆಂದರೆ ಮನಸ್ಸನ್ನು ಕೇಂದ್ರೀಕರಿಸುವುದು. ಅವಧಾನಿಯಾಗಲು ತೀಕ್ಷ್ಣಬುದ್ಧಿ ಅವಶ್ಯ. ಕವಿಯಾಗಲು ಲಾಸ್ಯ-ಭಾವ-ಕಲ್ಪನಾವಿಲಾಸಗಳಿರಬೇಕು. ಇವೆರಡೂ ಒಟ್ಟಿಗೇ ಮೇಳೈಸಿರುವುದು ಶತಾವಧಾನಿ ಡಾ|| ಆರ್. ಗಣೇಶ್‌ರವರಲ್ಲಿ. ಅವಧಾನಿಯಾಗಲು ಸಂಸ್ಕೃತ, ಕಾವ್ಯ, ಅಲಂಕಾರ, ಛಂದಸ್ಸು, ಭಾರತೀಯ ಸಂಸ್ಕೃತಿ ಇತ್ಯಾದಿ ವಿಷಯಗಳಲ್ಲಿ ಆಳವಾದ ಅಧ್ಯಯನ ಇರಲೇಬೇಕು. ಇವೆಲ್ಲದರ ಹದವಾದ ಪಾಕದಲ್ಲಿ ಎರಕ ಹೊಯ್ದಂತೆ ಇದ್ದಾರೆ ನಮ್ಮ ಶತಾವಧಾನಿಗಳು. ಅವಧಾನ ಕಲೆಯನ್ನು ವೀಕ್ಷಿಸಲು ನೀವು ಬಹುಭಾಷಾ ಪಂಡಿತರೇ ಆಗಬೇಕೆಂದಿಲ್ಲ. ಸಹೃದಯತೆ ಒಂದೇ ಸಾಕು. ಅಷ್ಟಾವಧಾನದ ಸುಮಾರು ಮೂರು ಗಂಟೆ ಪಂಡಿತ-ಪಾಮರರಾದಿಯಾಗಿ ಎಲ್ಲಾ ಬಗೆಯ ಸಭಿಕರನ್ನು ಹಿಡಿದಿಡುವ ಪ್ರತಿಭೆ ಶತಾವಧಾನಿ ಡಾ. ಆರ್. ಗಣೇಶ್‌ರವರಿಗೆ ಮಾತ್ರ ಸಾಧ್ಯ.

ASHTAAVADHAANA PHOTOS (4)ಅಂತರ್ಗತವಾಗಿದೆ !

ಶತಾವಧಾನಿಗಳ ಪೂರ್ವಜರು ದೇವರಾಯಸಮುದ್ರದಿಂದ ಬಂದು ಕೋಲಾರದಲ್ಲಿ ನೆಲೆಸಿದವರು. ಮನೆಯಲ್ಲಿ ತಮಿಳು ಭಾಷೆ. ಕೋಲಾರ ಪರಿಸರದ ತೆಲುಗು-ಭಾಷೆಯಿಂದ ಹೆಚ್ಚು ಬಳಕೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಪ್ರೌಢಶಾಲೆಯ ವಿದ್ಯಾಭ್ಯಾಸ ಪಕ್ಕದ ಗೌರಿಬಿದನೂರಿನಲ್ಲಿ.

ಆರ್. ಶಂಕರನಾರಾಯಣ ಅಯ್ಯರ್ ಮತ್ತು ಅಲಮೇಲಮ್ಮ ದಂಪತಿಗಳ ಪ್ರೀತಿಯ, ಹೆಮ್ಮೆಯ ಸುಪುತ್ರ ಶತಾವಧಾನಿ ಡಾ|| ಆರ್. ಗಣೇಶ್ ಅವರ ಜನನ ಇಸವಿ ೧೯೬೨, ಡಿಸೆಂಬರ್ ೪ರಂದು ಕೋಲಾರದಲ್ಲಿ. ಅವರ ಅಣ್ಣ ಶ್ರೀರಂಗ ಅಡ್ವೋಕೇಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ನಾಡಿನಲ್ಲಿ ಅವಧಾನವೆಂದರೆ ಶತಾವಧಾನಿಗಳೇ ಎಂದು ಪ್ರಶ್ನಿಸಿ ನಂತರ ಶತಾವಧಾನಿ ಡಾ|| ಆರ್. ಗಣೇಶ್ ಅವರೇ ಎಂದು ವಾಕ್ಯ ತಿದ್ದಿಕೊಳ್ಳುವಷ್ಟು ಅವಧಾನ ಕಲೆ ಶತಾವಧಾನಿಗಳಲ್ಲಿ ಅಂತರ್ಗತವಾಗಿದೆ !

ASHTAAVADHAANA PHOTOS (3)ಜೀವನವೃತ್ತಿ ಅಲ್ಲ, ಅದು ಸರಸ್ವತಿಯ ಆರಾಧನೆ !

ಶತಾವಧಾನಿಗಳಿಗೆ ಅವಧಾನ ಜೀವನವೃತ್ತಿ ಅಲ್ಲ. ಅದು ಸರಸ್ವತಿಯ ಆರಾಧನೆ ಅವರಿಗೆ. ಅವಧಾನವೆಂದರೆ ಶತಾವಧಾನಿಗಳಿಗೆ ಪ್ರೀತಿ. ಪ್ರೀತಿಯಿಂದ ಮಾಡಿದ ಪರಿಶ್ರಮ ತಪಸ್ಸಿನಂತೆ. ತ್ಯಾಗರಾಜರಿಗೆ ಸಂಗೀತ ಹೇಗೆ ತಪಸ್ಸಿನಂತೆ ಮನಸ್ಸಿನ ತೃಪ್ತಿಗಾಗಿ ಇದ್ದಿತೋ ಹಾಗೆ ಶತಾವಧಾನಿಗಳಿಗೆ ಅವಧಾನ ಅವರ ತಪಸ್ಸು. ಪಾಂಡಿತ್ಯ ಪ್ರದರ್ಶನ, ವಾಕ್ಚಾತುರ್ಯ, ಕವಿತ್ವದ ಮೇಲಿನ ಪ್ರಭುತ್ವ ಪ್ರಚುರಪಡಿಸುವುದಲ್ಲ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಪಠ್ಯಪುಸ್ತಕದ ಒಳಗೆ ಸಂಸ್ಕೃತ ಕಾವ್ಯಗಳ ಪುಸ್ತಕಗಳನ್ನು ಇಟ್ಟು ಓದುತ್ತಿದ್ದರಂತೆ. ಇದು ಸಂಸ್ಕೃತದ ಮೇಲೆ ಅವರಿಗಿದ್ದ ಅತೀವ ಆಸಕ್ತಿ ತೋರಿಸುತ್ತದೆ.

ಭಾರತೀಯ ಸಂಸ್ಕೃತಿ ಶತಾವಧಾನಿಗಳ ಮುಖ್ಯವಾದ ಸಂಶೋಧನಾ ಕ್ಷೇತ್ರ. ಅವರ ಕಾರ್ಯವ್ಯಾಪ್ತಿ ಬಹಳ ವಿಸ್ತಾರ. ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್, ಜೈನ್ ಪ್ರೆಸಿಡೆನ್ಷಿಯಲ್ ಸ್ಕೂಲ್, ಭಾರತೀಯ ವಿದ್ಯಾಭವನ, ಭಾರತೀಯ ವಿಜ್ಞಾನ ಮಂದಿರ, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಆಫ್ ಆರ್ಟ್ಸ್ ಮುಂತಾದ ಸಂಸ್ಥೆಗಳಲ್ಲಿ ಸೇವೆಗೈದು, ಸುಮಾರು ಮೂರು ದಶಕಗಳಿಂದ ಭಾರತೀಯ ವಿದ್ಯಾಭವನ, ಗೋಖಲೆ ಸಾರ್ವಜನಿಕ ಸಂಸ್ಥೆ, ಪಿಎಚ್‌ಡಿ ಮತ್ತು ಎಂ.ಎ. ವಿದ್ಯಾರ್ಥಿಗಳಿಗೆ ಸತತ ಮಾರ್ಗದರ್ಶನ ಇತ್ಯಾದಿ, ಅವಧಾನಗಳು, ವಿದ್ವದ್ಗೋಷ್ಠಿಗಳ ಮಂಡನೆಗಳು, ನಿರಂತರ ಉಪನ್ಯಾಸ, ಲೇಖನಗಳು ಮುಂತಾದ ಅವರ ವ್ಯಾಪ್ತಿ ವಿಸ್ತಾರ.

ASHTAAVADHAANA PHOTOS (2)ಹೆಗ್ಗಳಿಕೆ?

ಹಿಂದಿನ ಅವಧಾನಿಗಳಿಂದ ಅತಿ ದುಷ್ಕರವೆಂದೂ, ಆಶುವಾಗಿ ವೇದಿಕೆಯ ಮೇಲೆ ರಚಿಸಲು ಅಸಾಧ್ಯವೆಂದು ಹೇಳಲ್ಪಟ್ಟ ಚಿತ್ರಕವಿತಾ ಎಂಬ ಅತಿ ಕ್ಲಿಷ್ಟ ಪ್ರಕಾರವನ್ನು ಅವಧಾನದಲ್ಲಿ ಅಳವಡಿಸಿದ ಶ್ರೇಯಸ್ಸು ಶತಾವಧಾನಿ ಡಾ|| ಆರ್. ಗಣೇಶ್ ಅವರದ್ದು. ಅವಧಾನ ಪ್ರಪಂಚದಲ್ಲಿ ಬಹುಶಃ ಇವರಷ್ಟು ಪ್ರಯೋಗಗಳನ್ನು ಮಾಡಿದವರು ಮತ್ತಾರೂ ಇಲ್ಲ ಎನ್ನುವುದು ಅತಿಶಯೋಕ್ತಿಯಲ್ಲ.

ಇದರಲ್ಲಿ ಅಷ್ಟ ಭಾಷಾವಧಾನ, ದ್ವಿಗುಣಿತ-ಚತುರ್ಗುಣಿತ ಅಷ್ಟಾವಧಾನ, ಶತಾವಧಾನಗಳೂ ಸೇರಿವೆ. ಒಂದೇ ಶತಾವಧಾನದಲ್ಲಿ ಅತಿ ಹೆಚ್ಚು ಛಂದಸ್ಸುಗಳಲ್ಲಿ (೬೪) ಪದ್ಯರಚನೆ ಮಾಡಿದ ಹೆಗ್ಗಳಿಕೆ, ನಿರಂತರವಾಗಿ ೨೪ ಗಂಟೆಗಳ ಕಾಲ ಪದ್ಯರಚನೆ. ಒಂದು ದಿನದಲ್ಲಿ ಪೂರ್ಣ ಶತಾವಧಾನ, ರಾಷ್ಟ್ರಾವಧಾನ, ಶಾಂಕರಾವಧಾನ, ಕೃಷ್ಣಾವಧಾನ, ರಾಮಾಯಣಾವಧಾನ, ಮಹಾಭಾರತಾವಧಾನ, ನಾಟ್ಯಾವಧಾನ, ಗೀತಾವಧಾನ, ಅದ್ವೈತಾವಧಾನ ಮತ್ತು ಕಾಳಿದಾಸಾವಧಾನ ಮಾಡಿದ ಇವರು ಕರ್ನಾಟಕದ ಮೊದಲ ಹಾಗೂ ಏಕೈಕ ಚತುರ್ಭಾಷಾವಧಾನಿ, ಅಷ್ಟಭಾಷಾವಧಾನಿ ಮತ್ತು ಶತಾವಧಾನಿ !

ASHTAAVADHAANA PHOTOS (1)ವ್ಯಾಸರೇ ಆಶ್ಚರ್ಯಪಡಬಹುದಾದ ಗಣೇಶ

ಡಿ.ವಿ.ಜಿ.ಯವರ ಚಿಂತನೆಯ ಸಮರ್ಥ ವ್ಯಾಖ್ಯಾತರೆಂದು ಶತಾವಧಾನಿಗಳು ಪರಿಚಿತರು. ನಮ್ಮ ಕಾಲದ ಪ್ರಬುದ್ಧತೆಯ ಶೃಂಗಾಗ್ರಗಳು ಎನ್ನಬಹುದಾದ ಮೂವರು ಋಷಿಕಲ್ಪರ ಜೀವನ ಸಾಹಿತ್ಯ ಪರಿಚಯ ಗ್ರಂಥಗಳಾದ
೧) ಆಚಾರ್‍ಯ ಎಂ. ಹಿರಿಯಣ್ಣ ಅವರನ್ನು ಕುರಿತ ಆರ್ದ್ರಜ್ಯೋತಿ
೨) ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥ ಶರ್ಮರನ್ನು ಕುರಿತ ವಾಣೀವಾಹನ
೩) ವಿದ್ಯಾಲಂಕಾರ ಪ್ರೊ. ಸಾ.ಕೃ. ರಾಮಚಂದ್ರರಾವ್ ಅವರನ್ನು ಕುರಿತ ಸರ್ವತಂತ್ರ ಸ್ವತಂತ್ರ
ಸೇರಿದಂತೆ ಸುಮಾರು ೪೫ ಪ್ರಕಟಿತ ಕೃತಿಗಳು ಸೇರಿದಂತೆ ೬೫ಕ್ಕೂ ಹೆಚ್ಚು ಕೃತಿಗಳು ಅವರಿಂದ ಹೊರಬಂದಿವೆ. ಸಂಸ್ಕೃತ, ಇಂಗ್ಲೀಷ್, ಕನ್ನಡ ಭಾಷೆಯಲ್ಲಿದ್ದು ಅವು ಖಂಡ ಕಾವ್ಯ, ಅನುವಾದ, ರೂಪಕ, ಸ್ತೋತ್ರ, ಸಂಶೋಧನೆ, ಅಧ್ಯಯನ, ಪ್ರಬಂಧ, ಜೀವನಚರಿತ್ರೆ ಮುಂತಾದುವನ್ನು ಒಳಗೊಂಡಿವೆ.

ಕಂಪ್ಯೂಟರ್‌ನಂತೆ ಓದಿದ್ದೆಲ್ಲಾ ಶತಾವಧಾನಿಗಳಿಗೆ ಅಂತರ್ಗತವಾಗುತ್ತದೆ. ಅದು ಮರೆಯುವ ಮಾತೇ ಇಲ್ಲ. ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪನವರು ಹೇಳಿದಂತೆ “ಶತಾವಧಾನಿಗಳು ಒಮ್ಮೆ ಓದಿದ ಪುಸ್ತಕವನ್ನು ಮತ್ತೆ ನೋಡುವ ಅಗತ್ಯವಿಲ್ಲ. ಅವರು ವಿದ್ವತ್‌ಪ್ರಪಂಚದ ವಿಸ್ಮಯ” ಎನ್ನುತ್ತಾರೆ.

ಕುಂಚಬ್ರಹ್ಮ ಡಾ|| ಬಿ.ಕೆ.ಎಸ್. ವರ್ಮ ಅವರು ಶತಾವಧಾನಿಗಳು ವೇದಿಕೆಯ ಮೇಲೆ ಕುಳಿತಿದ್ದಾಗ ಭೋಜರಾಜನ ಆಸ್ಥಾನದಲ್ಲಿ ಮಹಾಕವಿ ಕಾಳಿದಾಸನನ್ನು ಕಂಡ ಹಾಗೆ ಆಗುತ್ತದೆ ಎನ್ನುತ್ತಾರೆ. “ವ್ಯಾಸರೇ ಆಶ್ಚರ್ಯಪಡಬಹುದಾದ ಗಣೇಶ” ಎನ್ನುತ್ತಾರೆ ಡಾ|| ಬಿ.ಕೆ.ಎಸ್. ವರ್ಮ.

ಇದು ಸಾಧ್ಯವೇ?

ವಿದ್ವಲ್ಲೋಕದ ವಿಸ್ಮಯ, ಅವಿಳಂಬ ಸರಸ್ವತೀ ಎಂದು ಕರೆಯಲ್ಪಡುವ ಶತಾವಧಾನಿಗಳನ್ನು ಕಂಡಾಗ ಎಂಥವರಿಗೂ ಆ ಪುಟ್ಟ ತಲೆಯಲ್ಲಿ ಅಷ್ಟೊಂದು ವಿಷಯಗಳಿಗೆ ಜಾಗ ಹೇಗೆ ಇದೆ ಎಂದು ಸೋಜಿಗವಾಗುತ್ತದೆ !

ಪೂರ್ವಜನ್ಮದ ಸಂಸ್ಕಾರ, ವಂಶಪಾರಂಪರ್‍ಯ, ಗುರು-ಹಿರಿಯರ ಆಶೀರ್ವಾದ ಎಂದರೂ ಶತಾವಧಾನಿಗಳೇ ಹೇಳುವಂತೆ “ಇಷ್ಟಪಟ್ಟು ಕಷ್ಟಪಟ್ಟರೆ” ಮಾತ್ರ ದೊರಕುವ ವಿದ್ಯೆ. ಅವರಿಗೆ ಎಲ್ಲಾ ಪ್ರಶಸ್ತಿ, ಡಿಗ್ರಿಗಳಿಗಿಂತ ಶತಾವಧಾನಿ ಎನ್ನುವ ಡಿಗ್ರಿ ತೃಪ್ತಿ ನೀಡಿದ್ದು. ಏಕೆಂದರೆ ಅದು ಅವರಿಗೆ ಜಗತ್ತು ಪ್ರೀತಿಯಿಂದ ನೀಡಿದ ಪದವಿ. ಪ್ರತಿಕ್ಷಣ ಅದರಲ್ಲೇ ಮುಳುಗಿ ಪಡೆದದ್ದು. ಅವರು ಲೌಕಿಕ ಪ್ರಪಂಚದಲ್ಲೇ ಇದ್ದರೂ ಅವರ ಜಗತ್ತು ಸದಾ ಕಾಳಿದಾಸ, ರನ್ನ, ಪೊನ್ನ, ಪಂಪ ಎಂದು ತಿರುಗಾಟದಲ್ಲಿ ಇರುತ್ತದೆ.

ತಮ್ಮ ಅದ್ಭುತ ಜ್ಞಾಪಕಶಕ್ತಿಯಿಂದ, ಅಪಾರ ಅಧ್ಯಯನದಿಂದ ಯಾರಿಗೇ, ಯಾವುದೇ ಆಕರಗ್ರಂಥಗಳ ಬಗ್ಗೆ ಸಂದೇಹ ಉಂಟಾದರೆ ತತ್‌ಕ್ಷಣ ಮೊರೆ ಹೋಗಬೇಕೆಂದರೆ ಅದು ಶತಾವಧಾನಿ ಡಾ. ಆರ್. ಗಣೇಶ್. ಒಂದು ಒಳ್ಳೆಯ ಪುಸ್ತಕ ಓದಿದರೆ, ಒಂದು ಒಳ್ಳೆಯ ಬಾಷಣ ಕೇಳಿದರೆ ಆಯಾ ಕಲಾವಿದರನ್ನು ಮಾತನಾಡಿಸಿ ಮೆಚ್ಚುಗೆ ಸೂಚಿಸುವವರೆಗೆ ಸಹೃದಯರಾದ ಶತಾವಧಾನಿಗಳಿಗೆ ನೆಮ್ಮದಿ ಇಲ್ಲ. ಭರತನಾಟ್ಯ ಕಲಾವಿದೆ ಪದ್ಮಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು, ಗಣೇಶರಿಗಿಂತ ಉತ್ತಮನಾದ ಸಹೃದಯನು ನನ್ನ ಪ್ರಯೋಗಗಳಿಗೆ ಲಭಿಸಿಲ್ಲ ಎಂದು ಹೇಳಿದ ಮೇಲೆ ನಾವು ಹೇಳುವುದೇನಿದೆ?

ನೈಷ್ಠಿಕ ಬ್ರಹ್ಮಚಾರಿಯಾದ ಶತಾವಧಾನಿಗಳು ಣಡಿಚಿಜiಣioಟಿಚಿಟ ಆದರೆ ಛಿoಟಿseಡಿvಚಿಣive ಅಲ್ಲ. ಸಾಧು ಸ್ವಭಾವ, ಸಾತ್ವಿಕರು. ಸರಳವ್ಯಕ್ತಿ ಎಂದರೆ ನಿಮಗೆ ನಂಬಲು ಸಾಧ್ಯವೇ ಇಲ್ಲದ ಸರಳತೆ. ಇಂಥ ಅತ್ಯಮೂಲ್ಯರತ್ನ ವಿದೇಶದಲ್ಲಿ ಇದ್ದಿದ್ದರೆ ಅವರ ವಿದ್ವತ್ತನ್ನು ಯಾವ ರೀತಿಯಲ್ಲಿ, ಎಷ್ಟು ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದರು, ಅವರ ಜ್ಞಾನಸಂಪತ್ತನ್ನು ಹೇಗೆ ಪೋಷಿಸುತ್ತಿದ್ದರು, ಕಾಪಾಡುತ್ತಿದ್ದರಲ್ಲವೇ? ಶತಾವಧಾನಿಗಳ ಅವಧಾನವನ್ನು ಒಮ್ಮೆಯಾದರೂ ಕಂಡ ಕನ್ನಡಿಗನ ಜೀವನ ಧನ್ಯ. ಶತಾವಧಾನಿಗಳನ್ನು ಒಂದು ವಾಕ್ಯದಲ್ಲಿ ಏನೆಂದು ಕರೆಯೋಣ. . .? ಆ ಮಹಾಚೇತನ ನೂರಾರು ವರ್ಷ ಬಾಳಲಿ. ಸಾವಿರ ಅವಧಾನ ಪೂರೈಸಿರುವ ಅವರು ಅಪೂರ್ವ ಸಾಧನೆ ಮಾಡಲಿ. ಆ ಭಗವಂತ ಅವರಿಗೆ ಎಲ್ಲವನ್ನೂ ಕರುಣಿಸಲಿ ಎಂದು ನಮ್ಮೆಲ್ಲರ ಹಾರೈಕೆ.
*********

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.