ಸ್ಯಾಂಡಲ್ ವುಡ್

ಬಣ್ಣಹಚ್ಚುವವರಿಗೆ ಬಣ್ಣಹಚ್ಚುವ ಎನ್.ಕುಮಾರ್

-ಚಿನ್ಮಯ.ಎಂ.ರಾವ್ ಹೊನಗೋಡು.

“ಓ ಅವರ? ಏನು ಮಹಾಕೆಲಸ? ಮೇಕಪ್ ಮ್ಯಾನ್ ಅಷ್ಟೆ ಬಿಡಿ..”ಎಂಬ ತಾತ್ಸಾರದ ಮಾತನ್ನು ನಾವು ಸಲೀಸಾಗಿ ಬಿಸಾಕಿಬಿಡುತ್ತೇವೆ. ಒಬ್ಬ ಒಳ್ಳೆಯ ಛಾಯಾಗ್ರಾಹಕ ಕುರೂಪಿಯನ್ನೂ ಸುಂದರಿಯನ್ನಾಗಿ ತೋರಿಸಬಲ್ಲ ಎಂಬುದಷ್ಟೇ ನಮಗೆ ಗೊತ್ತು. ಆದರೆ ಚಿತ್ರೀಕರಣಕ್ಕಿಂತ ಮೊದಲು ಆಕೆಯ ಮೊಗವನ್ನು ಸೂಕ್ಷ್ಮವಾಗಿ ಗ್ರಹಿಸಿ, ಬಣ್ಣಗಳಿಂದ ಬಣ್ಣಿಸಿ ರೂಪವತಿಯನ್ನಾಗಿಸಲು ಸಾಧನ ಪ್ರಸಾಧನ ಕಲಾವಿದನೊಬ್ಬನ ಸಾಧನೆ ಎಂಬುದನ್ನು ನಾವೆಷ್ಟು ಅರಿತಿದ್ದೇವೆ? ಹೌದು..ಅಭಿನಯಿಸುವ ಕಲಾವಿದರ ಕಲೆಗಳನ್ನೆಲ್ಲಾ ಮುಚ್ಚಿಬಿಡುವ ಕಲಾವಿದನೇ “ಪ್ರಸಾಧನ ಕಲಾ”ದ”. ಬಣ್ಣದಲೋಕದಲ್ಲಿ ಮಿಂಚುವ ನಟನಟಿಯರ ಬಣ್ಣವನ್ನು ಪಾತ್ರದ ನೈಜತೆಗೆ ತಕ್ಕಂತೆ ಬದಲಾಯಿಸಲು ಹರಸಾಹಸ ಮಾಡುವ ಪ್ರಸಾಧನ ಕಲಾವಿದರ ಪ್ರಾಮುಖ್ಯತೆ ಕ್ಷಣಕ್ಕೊಮ್ಮೆ ಬಣ್ಣಬದಲಾಸುವ ಚಿತ್ರರಂಗದ ಕೆಲಮಂದಿಗೆ ಅರ್ಥವಾಗುವುದಾದರೂ ಎಂದಿಗೆ? ಒಮ್ಮೆ ಇಂತಹ ಆಲೋಚನೆಗಳೆಲ್ಲಾ ಒಮ್ಮೆಲೇ ಸುಳಿದಾಡಿಬಿಡುತ್ತದೆ ಆ ವ್ಯಕ್ತಿಯ ಜೊತೆಗೆ ಒಮ್ಮೆ ಮಾತಿಗಿಳಿದರೆ.

ಸರಿಸುಮಾರು ೨೨ ವರುಷಗಳ ಹಿಂದೆ ಎಸ್.ಎಸ್.ಎಲ್.ಸಿ ಓದಿಕೊಂಡು ಹುಟ್ಟೂರು ತುಮಕೂರು ಜಿಲ್ಲೆಯ ನೊಣವಿನಕೆರೆಯಿಂದ ಕಾಲ್ಕಿತ್ತ ಕುಮಾರ್ ಸೀದಾ ಬಂದು ನೌಕರನಾದದ್ದು ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ. ತಿಂಗಳಿಗೆ ಕೇವಲ ೨೪೦ ರೂಪಾ ಸಂಬಳ. ಅದು ಸಾಲದೆ ಹೊಟ್ಟೆ ತಾಳಹಾಕುತ್ತಿತ್ತು. ತಾಳಲಾರದೆ ಬಂದು ಕೆಲಸ ಕೇಳಿದ್ದು ಸಂಬಂಧಿ ರಾಮಕೃಷ್ಣ ಅವರನ್ನು. ಚಿತ್ರನಟ ಅಂಬರೀಶ್ ಅವರಿಗೆ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದ ರಾಮಕೃಷ್ಣ ತನ್ನ ಸಹಾಯಕ ಕೆ.ಎಂ.ಕೃಷ್ಣ ಅವರಲ್ಲಿ ಸಹಾಯಕನಾಗಿ ದುಡಿಯುವಂತೆ ಸಹಾಯಬೇಡಿ ಬಂದಿದ್ದ ಕುಮಾರ್ ಅವರಿಗೆ ಸಹಾಯ ಮಾಡಿದರು. ಅಲ್ಲಿಂದ ಹಿಂದುರುಗಿ ನೋಡದ ಕುಮಾರ್ ಇಂದಿನವರೆಗೂ ಪ್ರೀತಿಯಿಂದ ತಮ್ಮ ಪ್ರಸಾಧನ ಕಲೆಯನ್ನು ಪ್ರಸಾರ ಮಾಡುತ್ತಿದ್ದಾರೆ.

ಗಿರೀಶ್ ಕಾಸರವಳ್ಳಿ ಅವರ “ಮನೆ” ಚಿತ್ರಕ್ಕೆ ಕೆ.ಎಂ.ಕೆ ಅವರ ಸಹಾಯಕರಾಗಿ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ ಇವರು ನಿರ್ದೇಶಕ ಸದಾನಂದ ಸುವರ್ಣ ಅವರ “ಗುಡ್ಡದ ಭೂತ” ಧಾರವಾಹಿಯ ಮೂಲಕ ಸ್ವತಂತ್ರ ಪ್ರಸಾಧನ ಕಲಾವಿದರಾದರು. ಮೊದಲ ಬಾರಿ ಭಯಮಿಶ್ರಿತ ಆತಂಕವಿದ್ದರೂ ನಿರ್ದೇಶಕ ಸದಾನಂದ ಅವರ ಜೊತೆಗಿನ ಆತ್ಮೀಯತೆ ಹೊಸ ಅನುಭವಕ್ಕೆ ನಾಂದಿ ಹಾಡಿದ್ದನ್ನು ಇಂದಿಗೂ ಕುಮಾರ್ ನೆನಪಿಸಿಕೊಳ್ಳುತ್ತಾರೆ. ನೈಜತೆಗೆ ಹೆಚ್ಚು ಒತ್ತು ನೀಡುವ ಕಲಾತ್ಮಕಚಿತ್ರಗಳ ಬಗ್ಗೆ ಹೆಚ್ಚು ಒಲವಿರುವ ಕುಮಾರ್ ಪಕ್ಕ ಕಮರ್ಷಿಯಲ್ ಚಿತ್ರಗಳಾದ “ನಾನು ನಾನೇ” ಮತ್ತು “ಶುಭಂ”ಅಂತಹ ಚಿತ್ರಗಳಲ್ಲೂ ತಮ್ಮ ಕೈಚಳಕವನ್ನು ತೋರಿಸಿ ಸೈ ಏನಿಸಿಕೊಂಡಿದ್ದಾರೆ.

Nandita Dasನಂದಿತ ಅಭಿನಂದನೆ

“ದೇವಿರಿ” ಚಿತ್ರದಲ್ಲಿ ಮೊದಲೆರಡು ದಿನ ಇವರ ಪ್ರತಿಭೆಯನ್ನು ಅನುಮಾನದಿಂದ ನೋಡಿದ್ದ ಹಿಂದಿ ಚಿತ್ರತಾರೆ “ನಂದಿತ ದಾಸ್” ಮೂರನೆಯ ದಿನ ಚಿತ್ರದ ರಶಸ್ ನೋಡಿ ಕೂಡಲೇ ತಮ್ಮನ್ನು ಅಭಿನಂದಿಸಿದ್ದನ್ನು ಕುಮಾರ್ ಹೆಮ್ಮೆಂದ ಹೇಳಿಕೊಳ್ಳುತ್ತಾರೆ. ಮುಂದೆ ಅದೇ ನಂದಿತ ದಾಸ್ ಅವರಿಗೆ ಪರ್ಸನಲ್ ಮೇಕಪ್ ಮ್ಯಾನ್ ಆಗಿ ಆಯ್ಕೆಯಾಗಿ “ಏಕ್ ಅಲದ್ ಮೌಸಮ್” ಚಿತ್ರಕ್ಕೆ ಕೆಲಸ ಮಾಡಿದ್ದು ಅವರ ಕಲಾಜೀವನದ ಸಾರ್ಥಕ ಕ್ಷಣಗಳು.

ಹೊಸ ಹೊಸ ಪ್ರಯೋಗಗಳನ್ನು ಸದಾ ಮಾಡುತ್ತಲೇ ಇರಬೇಕೆಂಬ ತುಡಿತವಿರುವ ಛಲಗಾರ ಕುಮಾರ್ “ಹಸೀನಾ” ಚಿತ್ರದಲ್ಲಿ ಬ್ರಾಹ್ಮಣನೊಬ್ಬನನ್ನು ಪಕ್ಕ ಮುಸ್ಲಿಂ ಎಂಬಂತೆ ಬಿಂಬಿಸಿದ್ದಾರೆ. ಚಿತ್ರ ನೋಡಿದವರೆಲ್ಲಾ ಆತ ನಿಜಜೀವನದಲ್ಲೂ ಮುಸ್ಲಿಂ ಎಂದೇ ಭಾವಿಸಬೇಕು ಹಾಗೆ ಮಾಡಿತ್ತು ಕುಮಾರ್ ಅವರ ಕೈಚಳಕ. ನಿರ್ದೇಶಕರಿಗೆ ಬೇಕಾದಂತೆ ಅವರ ನಿರೀಕ್ಷೆಯನ್ನೂ ಮೀರಿ ಬಣ್ಣಿಸುವ ತಾಕತ್ತಿನ ಇವರಿಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ “ಗೃಹಭಂಗ” ಧಾರವಹಿಯ ಕೆಲಸ ಅತ್ಯಂತ ತೃಪ್ತಿಕೊಟ್ಟಿದೆಯಂತೆ.
ಗಿರೀಶ್ ಅವರು ಚಿತ್ರಕಥೆಯನ್ನು ಮನಬಿಚ್ಚಿ ಹೇಳುತ್ತಾರೆ. ಹಾಗಾಗಿ ಬಣ್ಣ ಹಚ್ಚುವ ಮೊದಲು ಚಿತ್ರದ ಸಮಗ್ರ ಪರಿಕಲ್ಪನೆ ಮನದಲ್ಲಿ ಮೂಡುತ್ತದೆ. ಆಗ ತಾನೇನು ಮಾಡಬೇಕೆಂಬ ಬಗ್ಗೆ ಪ್ರಸಾಧನ ಕಲಾವಿದನನೊಬ್ಬನಿಗೆ ನಿಖರತೆ ಇರುತ್ತದೆ ಎನ್ನುತ್ತಾರೆ ಕುಮಾರ್.

ಪ್ರಸಾಧನ ಕಲಾವಿದ ನಗಣ್ಯ?!

“ತುಳಸಿದಳ” ಚಿತ್ರದ ಮಲ್ಲೇಶ್ ಅರ್ತಿ ಅವರನ್ನು ಗುರುತಿಸಿದ್ದನ್ನು ಬಿಟ್ಟರೆ ಚಲನಚಿತ್ರ ಪ್ರಶಸ್ತಿ ಆಯ್ಕೆಯಲ್ಲಿ ಪ್ರಸಾಧನ ಕಲಾವಿದರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಚಿತ್ರಪ್ರಶಸ್ತಿಗಳಿಗೆ ನಮ್ಮ ಬಯೋಡೇಟಾ ಕೂಡ ಸ್ವೀಕರಿಸುವುದಿಲ್ಲ ಎಂಬ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ ಕುಮಾರ್. “ಹಸೀನ”,”ನಾನೆರಳು” ಚಿತ್ರಗಳಿಗೆ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ತಮಗೆ ನಿರೀಕ್ಷೆ ಹುಸಿಯಾದುದರ ಬಗ್ಗೆ ಬೇಸರವಿದೆ.

ಕಮರ್ಷಿಯಲ್ ಚಿತ್ರಗಳಿಂದ ಹಣ ಬರುತ್ತೆ ಹೆಸರು ಬರೋಲ್ಲ, ಕಲಾತ್ಮಕ ಚಿತ್ರಗಳಿಂದ ಹಣ-ಹೆಸರು ಎರಡೂ ಬರೋಲ್ಲ ಎಂಬ ಅಭಿಪ್ರಾಯ, ಕಳೆದ ೨೦ ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಕುಮಾರ್ ಅವರದು. ಆದರೆ ಪ್ರಸಾಧನ ಕಲಾವಿದನೊಬ್ಬ ಶ್ರಮಪಟ್ಟರೆ ಆರ್ಥಿಕವಾಗಿ, ಮಾನಸಿಕವಾಗಿ ಆತನಿಗೆ ತೃಪ್ತಿ ಇದ್ದೇ ಇದೆ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.

ದಿಗ್ಗಜರ ಜೊತೆ ಕೆಲಸ

ಶಂಕರ್ನಾಗ್,ಅನಂತನಾಗ್,ನಂದಿತ ದಾಸ್ ಹಾಗು ಅನುಪಮ್‌ಕೇರ್ ಮುಂತಾದ ಬಣ್ಣದಲೋಕದ ದಿಗ್ಗಜರಿಗೆಲ್ಲಾ ಬಣ್ಣ ಹಚ್ಚಿದ್ದಾರೆ ಕುಮಾರ್. ತಮ್ಮ ನಿರ್ದೇಶನದ ಚಿತ್ರವೊಂದರಲ್ಲಿ ಹಿಮಾಲಯದ ಕೊರೆಯುವ ಚಳಿಯಲ್ಲೂ ಶ್ರಮವಹಿಸಿ ಹಗಲಿರುಳೆನ್ನದೆ ಪ್ರೀತಿಯಿಂದ ಕೆಲಸ ಮಾಡುತ್ತ ಯೂನಿಟ್‌ನಲ್ಲಿ ಒಂದಾಗಿದ್ದ (ನಾಯಕ ನೆನಪಿರಲಿ ಪ್ರೇಮ್ ಅವರ ಪರ್ಸನಲ್ ಮೇಕಪ್ ಮ್ಯಾನ್) ಕುಮಾರ್ ಅವರನ್ನು ಗಮನಿಸಿದ್ದ ಅಶೋಕ್ ಕಶ್ಯಪ್ ಇವರನ್ನು ಪ್ರೀತಿಯಿಂದ ಧಾರವಾಹಿಯ ಪ್ರಸಾಧನಕ್ಕೆ ಆಹ್ವಾನಿಸಿಯೇ ಬಿಟ್ಟರು. ಒಬ್ಬ ನಿರ್ದೇಶಕನಿಗೆ “ಮೇಕಪ್ ಸೆನ್ಸ್” ಚೆನ್ನಾಗಿ ಇದ್ದಾಗ ಚಿತ್ರೀಕರಿಸುವ ಶೈಲಿಯೇ ಬೇರೆ. ಅದರಲ್ಲೂ ಅಶೋಕ್ ಒಬ್ಬ ಶ್ರೇಷ್ಠ ಛಾಯಾಗ್ರಾಹಕ. ಅವರದೇ ನಿರ್ದೇಶನ ಎಂದರೆ ಕೇಳಬೇಕೆ? ಅದೊಂದು ಬಣ್ಣಗಳ ಹಬ್ಬ. ಇಂತಹ ಅವಕಾಶ ಸಿಗುವುದೇ ಕಷ್ಟ ಎಂದು “ಪ್ರೀತಿಯಿಂದ” ಧಾರವಾಹಿಗೆ ಮಲೆನಾಡಿನ ಮಡಿಲು ತೀರ್ಥಹಳ್ಳಿಯಲ್ಲಿಯ ಸನಿಹ ಕೋಟೆಗದ್ದೆಯಲ್ಲಿ ಈಗ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಕುಮಾರ್. ಅವರ ಕಣ್ಣುಗಳಲ್ಲಿ ಮಲೆನಾಡಿನ ತುಂಬು ಹಸಿರಿನಷ್ಟೇ ತುಂಬು ಪ್ರೀತಿ ಕಾಣಿಸುತ್ತಿದೆ. ಚಿತ್ರೀಕರಣದಲ್ಲಿ ಎಲ್ಲ ಕಲಾವಿದರನ್ನೂ ಪ್ರೀತಿಯಿಂದ ಕಾಣುವ ಕುಮಾರ್ ಚಿತ್ರರಂಗದಲ್ಲಿ ಹೀಗೇ ಸದಾ ರಂಗೇರಿಸುತ್ತಿರಲಿ. ಅವರ ಬಣ್ಣದ ಬದುಕು ಸದಾ ರಂಗುರಂಗಾಗಿರಲಿ.

-ಚಿನ್ಮಯ.ಎಂ.ರಾವ್ ಹೊನಗೋಡು.
26-3-2011

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.