ವಿಚಾರಲಹರಿ

ಈ ಊರಿನ ಹಾಳುಬಿದ್ದ ಕೆರೆಯನ್ನು ನೀವು ನೋಡಿದರೆ ಎಲ್ಲಾ ಪಕ್ಷಗಳೂ ಒಂದೇ ಎನ್ನುತ್ತೀರಿ…!

ಕಾಯಕಲ್ಪಕ್ಕೆ ಕಾಯುತ್ತಿರುವ ಸುಳುಮನೆ ಕೆರೆಯ ಕಡೆ ಸುಳಿಯುವವರೇ ಇಲ್ಲ !

ವಿಶೇಷ ವರದಿ ಹಾಗೂ ಛಾಯಾಚಿತ್ರ : ಡಾ.ಚಿನ್ಮಯ ಎಂ.ರಾವ್ ಹೊನಗೋಡು

 

ಸಾಗರ : ಪ್ರತೀ ಗ್ರಾಮಗಳಿಗೆ ಭೇಟಿ ನೀಡುತ್ತಾ ಆಗಬೇಕಾದ ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಒಂದೊಂದನ್ನೇ ತಮ್ಮ ಅಧಿಕಾರಾವಧಿಯಲ್ಲಿ ಮುಗಿಸಿಕೊಂಡು ಪಕ್ಷಾತೀತವಾಗಿ ಜನಸೇವೆ ಮಾಡಬೇಕಾದ ಜನಪ್ರತಿನಿಧಿಗಳನ್ನು ಕೈ ಮುಗಿದು ಬೇಡಿಕೊಂಡರೂ ಕೆಲಸ ಮಾಡುವುದಿಲ್ಲ ಎಂದರೆ ಏನೆನ್ನಬೇಕು? ಚುನಾವಣೆ ಬಂತೆಂದರೆ ಸಾಕು, ಕೈ ಮುಗಿದು ಜನರತ್ತ ಬರುವ ಇಂತಹವರನ್ನು ಅಸಹ್ಯದಿಂದ ನೋಡಿ ಜನಗಳೇ ಉಗಿದು ಉಪ್ಪಿನಕಾಯಿ ಹಾಕುವ ಕಾಲ ಬಂದಿದೆ. ಇತ್ತೀಚೆಗೆ ಸಾಕಷ್ಟು ಕಡೆಗಳಲ್ಲಿ ಜನಪ್ರತಿನಿಧಿಗಳನ್ನು ಜನರೇ ಮುತ್ತಿಕೊಂಡು ಪ್ರಶ್ನಿಸುತ್ತಿರುವುದನ್ನು ತಾವೆಲ್ಲಾ ನೋಡಿದ್ದೀರಿ. ಆದರೂ ಬಾಲ ಡೊಂಕೆಂಬಂತೆ ಪರಿಸ್ಥಿತಿ, ದುಸ್ಥಿತಿ ಹಾಗೇ ಇದೆ. ಅಭಿವೃದ್ಧಿಯ ವಿಚಾರದಲ್ಲಿ ಇಲ್ಲೊಂದು ತೀರಾ ಹಿಂದುಳಿದಿರುವ ಗ್ರಾಮದ ಪರಿಸ್ಥಿತಿಯೂ ಹಾಗೇ ಇದೆ.

 

ಈ ಕೆರೆಯ ಅಭಿವೃದ್ಧಿಯ ಕರೆಗೆ ಯಾರೂ ಓಗುಡುತ್ತಿಲ್ಲ !

ಇದು ಯಾವುದೋ ದೂರದ ಕುಗ್ರಾಮದ ರೈತರ ಕಥೆಯಲ್ಲ. ಸಾಗರ ತಾಲೂಕು ಕೇಂದ್ರದಿಂದ ಅನತಿ ದೂರದಲ್ಲಿರುವ ಸುಳುಮನೆ ಗ್ರಾಮದ ಕೆರೆಯ ವ್ಯಥೆ. ಸಾಗರ ನಗರ ಕೇಂದ್ರದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್ 33ರಲ್ಲಿ ಒಂದು ಎಕರೆ ಎರಡು ಗುಂಟೆಯಷ್ಟು ವಿಸ್ತೀರ್ಣ ಹೊಂದಿರುವ ಕೆರೆಯ ಅಭಿವೃದ್ಧಿಯ ಕರೆಗೆ ಯಾರೂ ಓಗುಡುತ್ತಿಲ್ಲ ಎಂಬುದೇ ಕಹಿಸತ್ಯ.

 

ಹೌದು, ಕಳೆದ ನಾಲ್ಕೈದು ದಶಕಗಳಿಂದ ಹಾಳುಬಿದ್ದಿರುವ ಇದರ ಅಭಿವೃದ್ಧಿಗೆ ಅದೆಷ್ಟೋ ಬಾರಿ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಇಲ್ಲಿ ಎಲ್ಲಾ ಸಮುದಾಯದ ಸುಮಾರು ಇಪ್ಪತ್ತಕ್ಕೂ ಹೆಚ್ಚು ರೈತಾಪಿ ಕುಟುಂಬಗಳು ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಅವರಿಗೆಲ್ಲಾ ಈ ಕೆರೆಯ ನೀರೇ ಜೀವಜಲ. ಅಡಕೆ, ಬಾಳೆ, ಕಾಳು ಮೆಣಸು, ಏಲಕ್ಕಿ ಹಾಗೂ ಭತ್ತದ ಗದ್ದೆಗಳನ್ನೊಳಗೊಂಡ ಸುಮಾರು ಹದಿನೆಂಟು ಇಪ್ಪತ್ತು ಎಕರೆ ಕೃಷಿ ಭೂಮಿಗಳಿಗೆ ಈ ಹಾಳು ಬಿದ್ದ ಕೆರೆ ಹೇಗೆ ಉಪಕಾರಿಯಾಗಬಲ್ಲದು ಎಂಬುದನ್ನು ಜನಪ್ರತಿನಿಧಿಗಳೇ ಹೇಳಬೇಕು. ಚುನಾವಣೆಗಳು ಬಂತೆಂದರೆ ಸಾಕು ತಮ್ಮ ತಮ್ಮ ಪಕ್ಷಗಳ, ನಾಯಕರ ಪರವಾಗಿ ವಕಾಲತ್ತು ವಹಿಸುತ್ತಾ ಬರುವ ಪುಡಿ ಪುಡಾರಿಗಳಿಗೆ ದಶಕಗಳಿಂದ ಹಾಳುಬಿದ್ದ ಕೆರೆಯನ್ನು ಅಭಿವೃದ್ಧಿ ಮಾಡಿಸಬೇಕೆಂಬ ಕಿಂಚಿತ್ತೂ ಹಿತಾಸಕ್ತಿ ಇದ್ದಂತೆ ಕಾಣುವುದಿಲ್ಲ.

 

ಬತ್ತಿ ಬರಡಾಗಿ ಹೋಗಿರುವ ಈ ಕೆರೆಯಲ್ಲಿ ಮೇಯಲು ಬರುವ ಜಾನುವಾರುಗಳೂ ಹುಲ್ಲು ಹುಡುಕುವಂತಾಗಿದೆ. ಕೆರೆ ಖಾಲಿಯಾಗಿ ಮೈದಾನದಂತಾಗಿರುವ ಇದರ ದುಸ್ಥಿಯಿಂದಾಗಿರುವ ಹಾನಿ ಅಷ್ಟಿಷ್ಟಲ್ಲ. ಕೃಷಿಕರ ತೋಟದ ಹಾಗು ಮನೆಯ ಬಾವಿಗಳಲ್ಲಿ ನೀರಿಲ್ಲದೆ ನೆಲಕಾಣುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಲ ಅಧೋಗತಿ ಕಂಡರೂ ಆಶ್ಚರ್ಯವೇನಿಲ್ಲ. ಗ್ರಾಮಸ್ಥರಾದ ರಾಜಶೇಖರ, ಅರುಣ ಹಾಗೂ ಮುಂತಾದವರು ಈ ಹಿಂದೆ ಸಾಕಷ್ಟು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಈ ಕೆರೆಯ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ ಎಂಬುದು ದುರಂತ.

 

ನೋಟಾ ಚಲಾಯಿಸುವ ಚಿಂತನೆಯಲ್ಲಿದ್ದಾರೆ?

ಪ್ರತಿ ಸಲವೂ ಒಂದಲ್ಲ ಒಂದು ನೆಪ ಹೇಳಿ ಅಸಹಾಯಕತೆ ವ್ಯಕ್ತಪಡಿಸುವ ಗ್ರಾಮ ಪಂಚಾಯಿತಿಯ ಪ್ರತಿನಿಧಿಗಳು ನಮಗೆ ಮೇಲಿಂದ ಈ ಅವಧಿಯಲ್ಲಿ ಅನುದಾನಗಳೇ ಬಿಡುಗಡೆಯಾಗಿಲ್ಲ. ಆ ಪಕ್ಷ ಅಧಿಕಾರದವಿದ್ದಾಗ ಹಾಗಿತ್ತು, ಹೀಗಿತ್ತು, ಈಗ ಹೀಗಾಗಿದೆ, ಮುಂದೆ ನಾವೇ ಬಂದರೆ ಮಾಡುತ್ತೇವೆ ಎಂದು ತಮ್ಮ ತಮ್ಮ ಪಕ್ಷಗಳ ಪರವಾಗಿ ಪರೋಕ್ಷವಾಗಿ ಪ್ರಚಾರ ಮಾಡಿಕೊಳ್ಳುವ ಜನ ಪ್ರತಿನಿಧಿಗಳೇ ಅಸಹಾಕತೆ ತೋರಿಸುತ್ತಾರೆ ಎನ್ನುತ್ತಾರೆ ಇಲ್ಲಿನ ಹಿರಿಯ ಗ್ರಾಮಸ್ಥರೊಬ್ಬರು. ಇನ್ನು ಮೇಲ್ಮಟ್ಟದ ಜನಪ್ರತಿನಿಧಿಗಳನ್ನು ಹುಡುಕಾಡುತ್ತಾ ಕಛೇರಿಗಳಿಂದ ಕಛೇರಿಗಳಿಗೆ ಅಲೆಯುತ್ತಾ ಕಂಡ ಕಂಡ ಅಧಿಕಾರಿಗಳಿಗೆ ಕೈ ಬಿಸಿ ಮಾಡಿ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ನಾವಿಲ್ಲ, ಇಲ್ಲಿರುವವರೆಲ್ಲಾ ಸಣ್ಣ ಸಣ್ಣ ರೈತಾಪಿ ಕುಟುಂಬದವರು, ಬಿಪಿಎಲ್ ಕುಟುಂಬದವರೂ ಇಲ್ಲಿದ್ದಾರೆ ಎನ್ನುತ್ತಾರೆ ಮತ್ತೊಬ್ಬ ಗ್ರಾಮಸ್ಥರು. ಚುನಾವಣೆ ಬಂದಾಕ್ಷಣ ಚುನಾವಣಾ ನೀತಿ ಸಂಹಿತೆ, ಬೇರೆ ಬೇರೆ ಸಮಯಗಳಲ್ಲಿ ಹೊಸ ಹೊಸ ಕಥೆ, ಖ್ಯಾತೆ, ಇದರ ಹಣೆಬರಹ ಇಷ್ಟೇ, ಗ್ರಾಮಸ್ಥಾರೆಲ್ಲಾ ಸೇರಿ ಮತದಾನದ ದಿನದಂದು ನೋಟಾ ಚಲಾಯಿಸುವ ಚಿಂತನೆಯಲ್ಲಿದ್ದಾರೆ. ಊರ ನಡುವೆ ದೇವಾಲಯದ ಸಮೀಪದಲ್ಲೇ ಇರುವ ಈ ಕೆರೆ ಮಾತ್ರ ಅನಾತವಾಗಿ ಅವನತಿಯತ್ತ ಸಾಗಿದೆ.

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.