ವಿಚಾರಲಹರಿ

ಬದುಕು ನಿಂತ ನೀರಾಗಬಾರದು

ಮಗ ಬೆಳಗ್ಗೆಯಿಂದ ತಿಂಡಿ ತಿಂದಿಲ್ಲ,ನಾನು ತರಕಾರಿಗೆಂದು ಮಾರುಕಟ್ಟೆಗೆ ಹೋಗಿದ್ದೆ.ಅಮ್ಮಾ ಗ್ಯಾಸ್ ಸಿಲಂಡರ್ ಖಾಲಿಯಾಗಿದೆ ಬೇಕಿತ್ತು ಎಂದು ಫೋನ್ ಮಾಡಿದ್ದ. ಮನೆಯಲ್ಲಿ ಅಪ್ಪ ಇದ್ದಾರೆ,ಹೋಗಿ ತೆಗೆದುಕೊಂಡು ಹೋಗು ಎಂದು ಹೇಳಿದ್ದೆ,ಏನೋ ಅಪ್ಪನ ಹತ್ತಿರ ನೆನ್ನೆಯಿಂದ ಕೋಪ ಅವನಿಗೆ,ಮನೆಗೂ ಬಂದಿಲ್ಲವಂತೆ.ನಾನು ವೇಳೆ ಆಯಿತು ಎಂದು ಸೀದಾ ಅಂಗಡಿಗೆ ಬಂದೆ.ಅವನ ಹೆಂಡತಿ ಒಂದು ರೀತಿ ಮನಸ್ಸಿನವಳು ಮಗು ಚಿಕ್ಕದು,ಏನು ಮಾಡಿಕೊಂಡರೋ ಏನೋ ಮಗನಿಗೆ ಹೇಳಲೂ ಆಗದು ಅನುಭವಿಸಲೂ ಆಗದು.ಏನು ಮಾಡಲಿ ಹೇಳು ತಾಯಿ ಕರುಳು ಮಗ ಹಸಿದಿರುವುದು ನನಗೆ ತಿಂಡಿ ತಿನ್ನಲು ಮನಸ್ಸು ಬಂದಿಲ್ಲ, ಮನೆಯಿಂದ ತಂದ ತಿಂಡಿ ಹಾಗೇ ಇಟ್ಟಿದ್ದೀನಿ.ಅಯ್ಯೋ ಬರೀ ನನ್ನ ಕಥೆ ಹೇಳುತ್ತಾ ನಿಂತೆ.ಏನು ತರಕಾರಿ ಬೇಕು ತಗೋ.ಎಲ್ಲಾ ಇವತ್ತಿನ ತಾಜಾ ತರಕಾರಿ ಕೊರೋನಾ ಬಂದ ನಂತರ ಮೊದಲಿನ ವ್ಯಾಪಾರ ಇಲ್ಲ.ಹೊಟ್ಟೆ ಪಾಡು ಏನು ಮಾಡಲಿ? ಹೇಗಾದರೂ ದುಡಿಮೆ ಮಾಡಬೇಕು. ತರಕಾರಿ ತರಲು ಅಂಗಡಿಗೆ ಹೋದರೆ ತರಕಾರಿ ಮಾರುವ ಅಮ್ಮ ತನ್ನ ಕಥೆ ಹೇಳುತ್ತಾ ನನ್ನನ್ನು ಅಲ್ಲೇ ನಿಲ್ಲಿಸಿಕೊಂಡರು.ಎಷ್ಟೋ ಸಲ ತರಕಾರಿ ತರಲು ಇದೇ ಅಂಗಡಿಗೆ ಹೋದಾಗ ಪರಿಚಯದ ಸಣ್ಣ ನಗು ಕಂಡಿರಲಿಲ್ಲ.ತರಕಾರಿ ಅನಿವಾರ್ಯತೆ,ಮನೆಯಲ್ಲಿ ಎಲ್ಲಾ ಕೆಲಸ ಮುಗಿಸಿ ಬಂದಿದ್ದರಿಂದ ಪುರುಸೊತ್ತು ಇತ್ತು.ದೊಡ್ಡವರು ಅವರ ಮಾತನ್ನು ಧಿಕ್ಕರಿಸಿ ಹೋಗಬಾರದು ಎಂದು ಅವರ ಮಾತುಗಳನ್ನು ಆಲಿಸುತ್ತಾ ಅಲ್ಲೇ ನಿಂತೆ.ಮನಸ್ಸಿನ ದುಗುಡ ಏನಿತ್ತೋ,ನಾನು ಹೋಗುವ ವೇಳೆಗೆ ಅಮ್ಮ ಮಗನ ಸಂಭಾಷಣೆ ದೂರವಾಣಿಯಲ್ಲಿ ನಡೆಯುತಿತ್ತು.ಅದೇ ಮನಸ್ಥಿತಿಯಲ್ಲಿ ತಮ್ಮ ನೋವನ್ನು ಹಂಚಿಕೊಂಡರೋ ತಿಳಿಯದು.ಅಂತೂ ತರಕಾರಿ ಪಡೆದು ಮನೆಗೆ ಹಿಂತಿರುಗಿದೆ.ಯಜಮಾನರ ಬಳಿ ಅಲ್ಲಿ ನಡೆದ ಸಂಭಾಷಣೆ ಹೇಳಿದಾಗ ಅವರಿಗೂ ಅಚ್ಚರಿ.-ಸದಾ ಗಂಟು ಮುಖದಲ್ಲೇ ಇರುವ ಅಮ್ಮ ಅಷ್ಟೆಲ್ಲಾ ಮಾತನಾಡಿದ್ದು ಕೇಳಿ.ಏನೋ ಎಲ್ಲರ ಬಳಿ ಕಷ್ಟ ಹೇಳಲು ಆಗದು.ನಿನ್ನ ನೋಡಿ ಹೇಳಬೇಕು ಎಂಬ ಭಾವನೆ ಬಂದಿದೆ.ಅಷ್ಟಾದರು ದುಃಖ ಹೊರ ಹಾಕಿದ್ದು ಅವರಿಗೂ ಸಮಾಧಾನ ಆಗಿರಬೇಕು ಎಂದರು. ಮನದ ದುಗುಡ ಕಡಿಮೆ ಆಗಲು ಎಲ್ಲಾ ಸಮಯದಲ್ಲೂ ತೀರಾ ಆಪ್ತರಾಗಬೇಕು ಎಂದೇನು ಇಲ್ಲ.ಸಾಮಾನ್ಯ ಸಮಸ್ಯೆ ಆದರೆ ಕೇಳುವ ಕಿವಿ ದೊರೆತರೂ ಸಾಕು.ತರಕಾರಿ ಮಾರುವ ಅಮ್ಮನಿಗೂ ಈ ರೀತಿಯೇ ಆದದ್ದು.

ಇನ್ನೊಬ್ಬರ ಭಾವನೆಗಳಿಗೆ ಕಿವಿ ಆಗುವ ಗುಣ ತಾಯಿಯ ಗರ್ಭದಿಂದಲೇ ಬರುತ್ತದೆ.ಆದ್ದರಿಂದಲೇ ದೊಡ್ಡವರು ಹೇಳುವುದು ಗರ್ಭಿಣೀ ಸ್ತ್ರೀಯರು ಉತ್ತಮ ಆಲೋಚನೆ,ಉತ್ತಮ ವಿಚಾರಗಳನ್ನು ಕೇಳಬೇಕು ಎಂದು. sಶ್ರೀಕೃಷ್ಣನ ಸೋದರ ಅಳಿಯ ಅಭಿಮನ್ಯುವಿನ ಕಥೆ ಇದಕ್ಕೆ ಉತ್ತಮ ನಿಧರ್ಶನ.ಅರ್ಜುನ ಹಾಗೂ ಸುಭದ್ರೆ ಮಗನಾದ ಈತನಿಗೆ ತಾಯಿಯ ಗರ್ಭದಲ್ಲಿಯೇ ಇರುವಾಗ ಚಕ್ರವ್ಯೂಹದ ಕಥೆ ಗೊತ್ತಿತ್ತು.ಕೃಷ್ಣನಿಗೆ ಸುಭದ್ರೆ ಎಂದರೆ ಅತೀ ಒಲವು. ತನ್ನ ಮನದಾಳದ ಮಾತುಗಳನ್ನು ತಂಗಿ ಸುಭದ್ರೆ ಜೊತೆ ಹಂಚಿಕೊಳ್ಳುತ್ತಿದ್ದ. ಮಹಾಭಾರತದ ಅಬೇದ್ಯ ಯುದ್ದ ವ್ಯೂಹಗಳ ಭೇದನೆಯ ಕಥೆ ಹೇಳುತ್ತಿರುವಾಗ ಕಥೆ ಕೇಳುತ್ತಾ ಸುಭದ್ರೆ ನಿದ್ದೆಗೆ ಜಾರುತ್ತಾಳೆ.ತಂಗಿ ನಿದ್ದೆ ಮಾಡಿದ್ದರೂ ಹೂಂ ಹೂಂ ಎಂಬ ಧನಿ ಕೇಳಿ ಆಶ್ಚರ್ಯ ಪಡುವ ಸರದಿ ಶ್ರೀಕೃಷ್ಣನದ್ದು. ವ್ಯೂಹದೊಳಗೆ ನುಗ್ಗುವ ಪರಿಯನ್ನು ಕೇಳುತ್ತಿದ್ದಂತೆಯೇ ಗರ್ಭದೊಳಗೆ ಇದ್ದ ಅಭಿಮನ್ಯು ತನ್ನ ಮನದಾಳದಲ್ಲಿ ಭದ್ರಗೊಳಿಸಿದ್ದ. ಅಣ್ಣನ ಯುದ್ದದ ವಿವರಣೆ ಕೇಳುತ್ತಾ ನಿದ್ದೆ ಹೋದ ತಂಗಿಯನ್ನು ನೋಡಿ ಕಥೆ ಅಲ್ಲಿಗೆ ನಿಲ್ಲಿಸಿದ ಶ್ರೀಕೃಷ್ಣ.ಇದರಿಂದ ಅಭಿಮನ್ಯುವಿಗೆ ಚಕ್ರವ್ಯೂಹದಿಂದ ಹೊರಗೆ ಬರುವ ದಾರಿ ತಿಳಿಯದೆ ಹೋಯಿತು. ಚಕ್ರವ್ಯೂಹ ಭೇದಿಸಲು ತಿಳಿದಿದ್ದರೆ ಮಹಾಭಾರತದ ಕಥೆ ಬೇರೆಯೇ ಆಗುತ್ತಿತ್ತು. ಈ ಆಲಿಸುವ ಗುಣ ಕಾಲಾಂತರದಿಂದಲೂ ಕಾಣುತ್ತೇವೆ.

ಬೇರೆಯವರ ಮಾತನ್ನು ಆಲಿಸುವುದು ಎಂದರೆ ಕೇವಲ ಕುತೂಹಲಕ್ಕಾಗಿ ಅಲ್ಲ.ಕೆಲವೊಮ್ಮೆ ಮನದ ದುಗುಡ ಹೊರಹಾಕಲು, ಸಂತಸದ ಸಂಭ್ರಮಕ್ಕೆ ಪಾಲ್ಗೊಳ್ಳಲೂ ಆದೀತು. ವ್ಯಕ್ತಿಯ ನಡುವೆ ಉತ್ತಮ ಭಾಂದವ್ಯ ಉಂಟಾಗುವ ಮೊದಲ ಮೆಟ್ಟಿಲು ಈ ಆಲಿಸುವ ಗುಣ. ಮಗು ಅತ್ತಾಗ ತಾಯಿ ಮಗುವನ್ನು ಎತ್ತಿ ಸಮಾಧಾನ ಮಾಡುವುದರಿಂದ ಮಗುವಿಗೆ ಭಾವನಾತ್ಮಕ ಸ್ಪಂದನೆ ದೊರೆಯುತ್ತದೆ. ಅದರಿಂದಲೇ ಮಗುವಿಗೆ ತನ್ನವರು,ತನ್ನನ್ನು ಕಾಳಜಿ ಮಾಡುವವರು ಇದ್ದಾರೆ ಎಂಬ ಭದ್ರತೆಯ ಭಾವನೆ ಬೆಳೆಯುತ್ತದೆ.ಮಗು ಬೆಳೆದಂತೆ ಹೆಚ್ಚು ಅವಲಂಬಿತವಾಗುವುದು ತಾಯಿಯ ಮೇಲೆ. ತನ್ನ ತಪ್ಪು ತಪ್ಪಾದ ಹೆಜ್ಜೆ,ಮೊದಲ ತೊದಲು ನುಡಿ,ಹೀಗೆ ಪ್ರತಿಯೊಂದಕ್ಕೂ ಸ್ಪಂದಿಸುವ ತಾಯಿಗೆ ತನ್ನದೇ ಆದ ರೀತಿಯಲ್ಲಿ ಸಂವಹನ ಮಾಡುತ್ತದೆ,ಆದ್ದರಿಂದಲೇ ಮಕ್ಕಳನ್ನು ಹೆಚ್ಚು ಹೆಚ್ಚು ಮಾತನಾಡಲು ಪ್ರೋತ್ಸಾಹಿಸುವುದು ಕುತೂಹಲಕ್ಕೆ ಹಲವಾರು ಪ್ರಶ್ನೆ ಕೇಳುವ ಮಕ್ಕಳಿಗೆ ಕೆಲವೊಮ್ಮೆ ಪೋಷಕರೇ ಗದರಿಸುವುದು ಸಾಮಾನ್ಯ. ಒಂದೋ ಅತೀ ಮಾತು ಒಳ್ಳೆಯದಲ್ಲ ಎಂಬ ಭಾವನೆ ಇರಬಹುದು. ಅದರಲ್ಲೂ ಹೆಣ್ಣು ಮಕ್ಕಳು ಜಾಸ್ತಿ ಪ್ರಶ್ನೆ ಕೇಳಿದರೆ ಅದೆಷ್ಟು ಮಾತು,ಮಾತು ಕಡಿಮೆ ಆಡಿದಷ್ಟು ಒಳ್ಳೆಯದು ಎಂದು ಮಾತನಾಡುವುದನ್ನೇ ಕಡಿತಗೊಳಿಸುತ್ತಾರೆ. ಈ ಭಾವವೇ ನಮ್ಮನ್ನು ಅಂತರ್ಮುಖಿಯಾಗಿ ಮಾಡುತ್ತದೆ.

ಬದುಕು ನಿಂತ ನೀರಲ್ಲ. ಬದುಕಿನಲ್ಲಿ ಕೆಲವರಿಗೆ ಎಲ್ಲವೂ ಸುಲಭವಾಗಿ ದಕ್ಕಿದರೆ ಇನ್ನು ಕೆಲವರಿಗೆ ಚಿಕ್ಕ ಕೆಲಸಕ್ಕೂ ಪರದಾಡುವ ಹಾಗೆ.ಮೋಡ ಘನೀಕರಿಸಿದಂತೆ ಸಣ್ಣ ಸಮಸ್ಯೆ ಪರಿಹರಿಸಲು ಆಗದೆ ದೊಡ್ಡದಾಗುತ್ತಾ ಹೋಗುತ್ತದೆ.ಸಹಜವಾಗಿ ಮಾನವ ಆಗ ತನ್ನಲ್ಲೇ ವಿಶ್ವಾಸ ಕಳೆದುಕೊಳ್ಳುತ್ತಾ ಹೋಗುತ್ತಾನೆ.ಇಂತಹ ಸಂದರ್ಭದಲ್ಲಿಯೇ ನಮ್ಮನ್ನು ಆಲಿಸುವ ಕಿವಿಯನ್ನು ಹುಡುಕುತ್ತೇವೆ.ಹಾಗೆಂದು ಎಲ್ಲರ ಹತ್ತಿರ ಸಮಸ್ಯೆ ಹೇಳಿಕೊಳ್ಳಲು ಆಗುವುದಿಲ್ಲ.

1 ನಮ್ಮ ಸಮಸ್ಯೆಯನ್ನು ಆಲಿಸುವ ವ್ಯಕ್ತಿಯ ಸಂಪೂರ್ಣ ಅರಿವಿರಬೇಕು.ತೀರಾ ವೈಯುಕ್ತಿಕ ಸಮಸ್ಯೆಯಾಗಿದ್ದರೆ ಮೂರನೇ ವ್ಯಕ್ತಿಯ ಪ್ರವೇಶ ಸಲ್ಲ.

2.ನಮ್ಮ ಸಮಸ್ಯೆಯನ್ನು ಆಲಿಸುವ ವ್ಯಕ್ತಿಯ ಸ್ಪಂದನೆಯನ್ನು ಗಮನಿಸುವುದು ಒಳಿತು. ಕಾಟಾಚಾರಕ್ಕೆ ಕೇಳುವವರಾದರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ,ಸುಮ್ಮನೆ ಸಮಯ ವ್ಯರ್ಥ.

3ನಮ್ಮ ಮಾತುಗಳಲ್ಲಿ ಧೃಢತೆ ಇರಲಿ. ಪರಿಹರಿಸಲು ಸಾಧ್ಯವಾಗದ ಸಮಸ್ಯೆಯನ್ನು ಮಾತ್ರ ಬೇರೆಯವರ ಹತ್ತಿರ ಹಂಚಿಕೊಳ್ಳಿ. ಇಲ್ಲದಿದ್ದಲ್ಲಿ ಸಣ್ಣ ಪುಟ್ಟದಕ್ಕೂ ಇತರರನ್ನು ಅವಲಂಭಿಸುವ ಮನೋಭಾವ ಬೆಳೆಯುತ್ತದೆ. ಹಗ್ಗವು ಹಾವಾಗುವ ಸಂಭವವೇ ಜಾಸ್ತಿ.

4.ನಮ್ಮ ಧನಿಗೆ ಭಾವವಾಗುವ ವ್ಯಕ್ತಿ ಬೇಕೇ ವಿನಃ ನಮ್ಮ ಸಮಸ್ಯೆಯನ್ನು ಇತರರ ಬಳಿ ಹೇಳಿ ಸಮಸ್ಯೆಯ ತೀವ್ರತೆಯನ್ನು ಜಾಸ್ತಿ ಮಾಡುವವರಲ್ಲ.

5.ಕೆಲವೊಮ್ಮೆ ಸರಳವಾಗಿ ಪರಿಹಾರವಾಗುವ ಸನ್ನಿವೇಶಕ್ಕೆ ನಾವು ಸ್ಪಂದಿಸುವ ರೀತಿ ಭಿನ್ನವಾಗಿರುತ್ತದೆ.ಮನಸ್ಸು ಗೊಂದಲವಾದಾಗ ಹೆಚ್ಚು ಚಿಂತಿಸದೆ ತಿಳಿ ಆಗುವವರೆಗೆ ಸುಮ್ಮನಿರುವುದು ಒಳಿತು. ಆದಷ್ಟು ಬದುಕನ್ನು ಧನಾತ್ಮಕವಾಗಿ ನೋಡುವುದನ್ನು ರೂಡಿ ಮಾಡಿಕೊಳ್ಳಬೇಕು.

6.ಚಿಕ್ಕವರಿರುವಾಗಲೇ ಮಕ್ಕಳಿಗೆ ಹೆಚ್ಚು ಮಾತನಾಡಲು ಪ್ರೋತ್ಸಾಹಿಸುವುದು ,ಮುಕ್ತವಾಗಿ ಪೋಷಕರ ಹತ್ತಿರ ಮಾತನಾಡುವಂತೆ ಪ್ರೇರೇಪಿಸುವುದು.ಇದರಿಂದ ಮಕ್ಕಳು ಯಾವುದೇ ರೀತಿಯ ವಿಚಾರವನ್ನು ಹಂಚಿಕೊಳ್ಳುತ್ತಾರೆ.ದೊಡ್ಡವರಾದಂತೆ ಸಮಸ್ಯೆ ಬಂದರೂ ಅಥವಾ ಸಮಸ್ಯೆ ಆಗುವ ಘಟನೆಗಳಿಗೆ ಪೋಷಕರಿಂದ ಸೂಕ್ತ ಸಲಹೆ ಸಿಗುತ್ತದೆ,

ಮೊದಲೆಲ್ಲಾ ಜನರ ಆರ್ಥಿಕ ಪರಿಸ್ಥಿತಿ ಈಗಿರುವ ಹಾಗೆ ಉತ್ತಮವಾಗಿರಲಿಲ್ಲ. ಸಮಾಜದ ಕೆಲವು ವರ್ಗದವರಿಗಂತೂ ಅಂದಿನ ದುಡಿಮೆ ಅಂದಿಗೆ.ಬಡತನವಿದ್ದರೂ ಬದುಕಿನಲ್ಲಿ ಸಂತಸವಿತ್ತು.ಇಂದು ಹೆಚ್ಚಿನವರಿಗೆ ಎಲ್ಲವೂ ಇದ್ದು ಅಂತರಂಗದ ತುಮುಲ ಜಾಸ್ತಿ ಆಗುತ್ತಿದೆ.ಬದುಕನ್ನು ಪ್ರೀತಿಸುವ ಬದಲು ವಸ್ತುಗಳ ಬಗೆಗಿನ ವ್ಯಾಮೋಹ ಜಾಸ್ತಿಯಾಯಿತು.ಹಣದ ಹರಿವು ಜಾಸ್ತಿ ಆದಂತೆ ಜನ ಕೊಳ್ಳುಬಾಕ ಸಂಸ್ಕøತಿಗೆ ಮಾರುಹೋದರು.ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ, ವ್ಯಕ್ತಿಯ ಆಯ್ಕೆ ಮಾಡುವಾಗ ಎಡವುತ್ತಿದ್ದೇವೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು ತನ್ನ ಸುತ್ತಮುತ್ತ ತನ್ನವರಿದ್ದಾರೆ ಎಂಬ ಒಂದು ರೀತಿಯ ಭ್ರಮಾ ಲೋಕದಲ್ಲೇ ಬದುಕುವುದು,ಆಂತರ್ಯದಲ್ಲಿ ಸದಾ ಒಂಟಿ ಪಯಣಿಗ. ಜೀವನದಲ್ಲಿ ಕೇವಲ ಹಣ, ವಿದ್ಯೆ,ಕೆಲಸಕ್ಕೆ ಪ್ರಾಮುಖ್ಯತೆ ಕೊಟ್ಟರೆ ಸಾಲದು. ಈಗಿನ ಯುವಜನತೆಗೆ ಹಣ,ರೂಪ,ವಿದ್ಯೆ,ಅವಕಾಶ ಎಲ್ಲವೂ ಇದೆ. ವಿವೇಚನೆಯಿಲ್ಲದ ಬದುಕು ಹತಾಶಾ ಮನೋಭಾವಕ್ಕೆ ಪುಷ್ಟಿ ನೀಡುತ್ತದೆ. ಆದ್ದರಿಂದಲೇ ಆತ್ಮಹತ್ಯೆಯಂತಹ ಘಟನೆಗಳು ನಡೆಯುತ್ತಿರುವುದು. ವಿಶ್ವದಾದ್ಯಂತ ವರ್ಷಕ್ಕೆ ಎಂಟು ಲಕ್ಷ ಜನ ಮಾನಸಿಕ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ ಎನ್ನುವ ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ಸಮಸ್ಯೆಯ ತೀವ್ರತೆಯನ್ನು ತಿಳಿಸುತ್ತದೆ. ಸಮಸ್ಯೆಗೆ ಸಲಹೆ, ಪರಿಹಾರ ಸೂಚಿಸುವಲ್ಲಿ ಸ್ನೇಹಿತರೇ ಉತ್ತಮರು. ಕೆಲವು ಸಂದರ್ಭದಲ್ಲಿ ಮಾನಸಿಕ ತಜ್ನರ ಬಳಿ ಭೇಟಿ ನೀಡುವುದು ಅನಿವಾರ್ಯವಾಗುತ್ತದೆ.

ಬದುಕು ನಿಂತ ನೀರಾಗಬಾರದು.ಸದಾ ಬೋರ್ಗರೆಯುವ ಕಡಲು ತನ್ನೊಡಲ ಕಷ್ಮಲವನ್ನು ದಡಕ್ಕೆ ಹಾಕುವಂತೆ ನಾವು ಇದ್ದರೆ ಒಳಿತು.ಇಂದು ಇದ್ದಂತೆ ನಾಳೆ ಇರುವುದಿಲ್ಲ.ಸಮಸ್ಯೆ ಬಂದಿದೆ ಎಂದು ಕಡ್ಡಿಯನ್ನು ಗುಡ್ಡ ಮಾಡುವುದರ ಬದಲು ತಿಳಿ ಮನಸ್ಸಿನಿಂದ ಚಿಂತನೆ ಮಾಡುವುದು ಕ್ಷೇಮ. ಬದುಕಿನ ಎಲ್ಲದಕ್ಕೂ ಅನುಭವದ ಅವಶ್ಯಕತೆ ಇರುವುದಿಲ್ಲ.ಅಭಿಮನ್ಯುವಿನ ಹಾಗೆ ಬದುಕನ್ನು ಎದುರಿಸುವ ಛಲ.ನಿರ್ಧಿಷ್ಟ ಗುರಿ ಇದ್ದರೆ,ಧರ್ಮರಾಯನ ಬದುಕಿನಂತೆ ವಿವೇಚನೆಯಿಂದ ಬದುಕಲು ಸಾಧ್ಯ.ಹಾಗೆ ಬದುಕಿದಾಗಲೇ ಬಾಳು ಬೆಳಕಾಗುತ್ತದೆ.ಬದುಕು ಸಾರ್ಥಕವಾಗುತ್ತದೆ.

ಬರಹ;- ಆತ್ಮ.ಜಿ.ಎಸ್
ಬೆಂಗಳೂರು

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker