ಕಲಾಪ್ರಪಂಚನೃತ್ಯ

ಕಲಾ”ಸಾಗರ”ಕ್ಕೊಂದು ಹೊಸ ಕಲಾಭವನ…

1-JANARDHANA-NAATYAACHAARYA– ಚಿನ್ಮಯ.ಎಂ.ರಾವ್ ಹೊನಗೋಡು

ಮನೆಯಲ್ಲೇ ಒಂದು ಪುಟ್ಟ ಸಭಾಂಗಣ ನಿರ್ಮಿಸಿಕೊಂಡು ಕಲಾರಸಿಕರನ್ನು ಆಹ್ವಾನಿಸಿ ಮನತಣಿಸುವ ಪರಿಪಾಠ ಇತ್ತೀಚೆಗೆ ಮಹಾನಗರಿಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಕಲಾಜಗತ್ತಿಲ್ಲಿ ಇದೊಂದು ಆಶಾದಾಯಕ ಬೆಳವಣಿಗೆ ಕೂಡ. ಕೇವಲ ಬೆಂಗಳೂರು, ಮಂಗಳೂರು ಹಾಗು ಮೈಸೂರಿಗೆ ಮಾತ್ರ ಸೀಮಿತವಾಗಿದ್ದ ಇಂಥದೊಂದು ಪರಿಕಲ್ಪನೆ ಈಗ ಶಿವಮೊಗ್ಗ ಜಿಲ್ಲೆಯ ಸಾಗರ ಎಂಬ ಮಲೆನಾಡಿನ ಪುಟ್ಟ ಪಟ್ಟಣಕ್ಕೂ ವಿಸ್ತಾರಗೊಳ್ಳುತ್ತಿದೆ. ಅದರ ಫಲಿತಾಂಶವಾಗಿ ಸಾಗರದಲ್ಲೂ ಶನಿವಾರದಂದು ಒಂದು ಸಭಾಂಗಣ ಲೋಕಾರ್ಪಣೆಗೊಳ್ಳುತ್ತಿದೆ. ಈ ಸಭಾಂಗಣ ಯಾರ ಮನೆಯಲ್ಲಿ ನಿರ್ಮಾಣಗೊಂಡಿದೆ ಎಂಬ ಕುತೂಹಲಕ್ಕೆ ಈ ಕೆಳಗಿನ ವಿವರ ನಿಮಗಾಗಿ..

* ಜನಸೇವೆಯೇ…”ಜನಾರ್ಧನ”ಸೇವೆ

ಕಳೆದ ಮೂರು ದಶಕಗಳಿಂದ ನಾಟ್ಯಾಚಾರ್ಯರಾಗಿ ಕಲಾಸೇವೆಯಲ್ಲಿ ನಿರತರಾಗಿರುವ ವಿದ್ವಾನ್ ಜನಾರ್ಧನ ಅವರಿಗೆ, ಕಲಾವಿದರಿಗೆ ಅನುಕೂಲವಾಗುವ ರೀತಿಯಲ್ಲಿ ತಾವೂ ಒಂದು ಕಲಾಭವನವನ್ನು ನಿರ್ಮಿಸಬೇಕೆಂಬ ಹೊಂಗನಸು ಬಹಳ ವರ್ಷಗಳಿಂದ ಇತ್ತಂತೆ. ಶಾಸ್ತ್ರೀಯ ನೃತ್ಯ-ಸಂಗೀತ-ಗಮಕ ಹಾಗು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ಕಲಾಸಕ್ತರು ವ್ಯವಸ್ತಿತವಾಗಿ ಇಲ್ಲಿ ನಡೆಸುವಂತಾಗಬೇಕು ಎಂಬ ಸದುದ್ದೇಶ ಇವರದು. ಅಂತೂ ಅದನ್ನು ಕಾರ್ಯರೂಪಕ್ಕೆ ತಂದ ಜನಾರ್ಧನ ಸಾಗರದ ತಮ್ಮ ಮನೆಯ ಹಿಂಬದಿಯಲ್ಲಿ ಸಭಾಂಗಣವೊಂದನ್ನು ತಮ್ಮ ಸ್ವಂತ ಜಾಗದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದಾರೆ. ಆದರೆ ಇದು ಸ್ವಂತಕ್ಕಲ್ಲ..ಸಮಾಜಕ್ಕೆ ಎಂದು ವಿನಮ್ರವಾಗಿ ನುಡಿಯುತ್ತಾರೆ. ಅವರು ಇದಕ್ಕಾಗಿ ಈಗಾಗಲೇ ಹದಿನೈದು ಲಕ್ಷ ವ್ಯಯ ಮಾಡಿದ್ದಾರೆ ! ಸುಮಾರು ೨೫೦ ಕಲಾರಸಿಕರು ಆರಾಮಾಗಿ ಕುಳಿತು ಕಲೆಯನ್ನು ಆಸ್ವಾಧಿಸಬಹುದಾದ ಈ ಸಭಾಂಗಣ ೫೫ ಅಡಿ ಉದ್ದ-೪೫ ಅಡಿ ಅಗಲ ವ್ಯಾಪಿಸಿಕೊಂಡಿದೆ. ೨೦ ಅಡಿ ಎತ್ತರದಲ್ಲಿ ಮೇಲ್ಚಾವಣಿ ಹೊದಿಸಿರುವ ಕಾರಣ ತಂಗಾಳಿ ಹಿತವಾಗಿ ಬೀಸುತ್ತದೆ ಎನ್ನುತ್ತಾರೆ ಜನಾರ್ಧನ. ಒಂದು ಬಾಲ್ಕನಿ, ವಿಶಾಲವಾದ ಒಂದು ಹಾಲ್ ಹಾಗು ಮತ್ತೊಂದು ಕೋಣೆ ಕೂಡ ಈ ವೇದಿಕೆಗೆ ಅಂಟಿಕೊಂಡಿದೆ.

3-KALAA BHAVANA-2ದೂರದೂರಿಂದ ಬರುವ ಕಲಾವಿದರು ಇಲ್ಲೇ ಉಳಿದು ಕಾರ್ಯಕ್ರಮವನ್ನು ಮುಗಿಸಿಕೊಂಡು ಸಂತೋಷದಿಂದ ಹಿಂದಿರುಗಬೇಕೆನ್ನುವ ಜನಾರ್ಧನ ಅವರಿಗೆ ಕಲಾವಿದರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಈ ಕಲಾಭವನ ನೋಡಿದಾಗ ಅರಿವಾಗುತ್ತದೆ. ವಾಣಿಜ್ಯ ಉದ್ದೇಶವನ್ನಿಟ್ಟುಕೊಳ್ಳದೆ ಕಲಾಸಾಧಕರ..ಕಲಾಭಿಮಾನಿಗಳ..ಅನುಕೂಲಕ್ಕಾಗಿ ನಿರ್ಮಾಣಗೊಂಡಿರುವ ಇದರ ಸದುಪಯೋಗವನ್ನು ವಿಶ್ವದ ಯಾವುದೇ ಭಾಗದ ಕಲಾಸಕ್ತರು ಮಾಡಿಕೊಳ್ಳಬಹುದೆಂಬ ಅನಿಸಿಕೆ ಜನಾರ್ದನ ಅವರದು.

ಜನಾರ್ಧನ ತಮ್ಮ ಮನೆಯ ಹಿಂದಿನ ಖಾಲಿ ನಿವೇಶನದಲ್ಲಿ ಇನ್ನೊಂದು ಮನೆ ಕಟ್ಟಿ ಬಾಡಿಗೆಗೆ ಕೊಡಬಹುದಿತ್ತು. ಆದರೆ ಒಬ್ಬ ಕಲಾವಿದನಾಗಿ.. ಎಲ್ಲರಂತೆ ತಾನಾಗದೆ …ತಾನಾಯಿತು ತನ್ನ ಸಂಪಾದನೆಯಾಯಿತು ಎಂಬ ಸ್ವಾರ್ಥವನ್ನು ಬದಿಗಿಟ್ಟು ಕಲಾವಿದರ ಕಲಾಪ್ರದರ್ಶನಕ್ಕೆ ಸಭಾಂಗಣವೊಂದನ್ನು ಕಟ್ಟಿ ಸಮಾಜಕ್ಕೆ ಅರ್ಪಿಸಿದ್ದಾರೆ. ಅವರ ಈ ಅರ್ಪಣಾ ಮನೋಭಾವ ಕಲಾಪ್ರಪಂಚಕ್ಕೆ ಮಹತ್ತರ ಕೊಡುಗೆಯಾಗಿದೆ ಅಲ್ಲವೆ?

4-KALAA BHAVANA-3ಅಂದ ಹಾಗೆ ಪ್ರಪ್ರಥವಾಗಿ ಈ ನವ ಕಲಾಮಂದಿರದಲ್ಲಿ ಶನಿವಾರದಿಂದ ಏಳು ದಿನಗಳ ಕಾಲ ಸತತವಾಗಿ ಪ್ರತಿದಿನ ಸಾಯಂಕಾಲ ಶಾಸ್ತ್ರೀಯ ನೃತ್ಯ ಹಾಗು ಸಂಗೀತ ಕಾರ್ಯಕ್ರಮಗಳು ನೆರವೇರಲಿದೆ. ಶನಿವಾರ ಸಂಜೆ ೫-೩೦ ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಗರ ಕ್ಷೇತ್ರದ ಶಾಸಕ ಸನ್ಮಾನ್ಯ ಶ್ರಿ ಗೋಪಾಲಕೃಷ್ಣ ಬೇಳೂರು ಮಾಡಲಿದ್ದಾರೆ. ಭರನಾಟ್ಯ ಕ್ಷೇತ್ರದ ದಿಗ್ಗಜ ಕರ್ನಾಟಕದ ಸುಪ್ರಸಿದ್ಧ ಹಿರಿಯ ನಾಟ್ಯಾಚಾರ್ಯ ಪ್ರೊಫೇಸರ್ ಎಂ.ಆರ್ ಕೃಷ್ಣಮೂರ್ತಿ ಶುಭಾಶಿರ್ವಾದ ನೀಡಲಿದ್ದಾರೆ. ವಿದ್ವಾನ್ ಎಸ್ ನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಹರಿಕುಮಾರ್ ಹಾಗು ಉದ್ಯಮಿ ಸುನಿಲ್ ಗಾಯ್ತೊಂಡೆ ಭಾಗವಹಿಸಲಿದ್ದಾರೆ.

*************
ಎಲ್ಲಾ ಗುರುಗಳ ಕೃಪೆಯಿಂದ ನಿರ್ಮಿತವಾದ ಈ ವೇದಿಕೆಯ ಹೆಸರಿನಲ್ಲಿ ಅವರೆಲ್ಲರ ಅಕ್ಷರಗಳು ಅಡಕವಾಗಿರಬೇಕೆಂದು “ಶ್ರೀ ಗುರುಕೃಪಾ” ಎಂದು ನಾಮಕರಣಮಾಡಲಾಗಿದೆಯಂತೆ.

“ಶ್ರೀ ಗುರುಕೃಪಾ” ವೇದಿಕೆ- ಈ ಹೆಸರೇ ಏತಕೆ?

ಶ್ರೀ- ಶ್ರೀವಲ್ಲಿ ಅಂಬರೀಷ್ ಜನಾರ್ಧನ ಅವರ ಮೊದಲ ನಾಟ್ಯ ಗುರುಗಳು.

ಗುರು- ಇದು ಸಮಸ್ತ ಗುರುಗಳ ಆಶಿರ್ವಾದದ ಸಂಕೇತ.

ಕೃ- ಜನಾರ್ಧನ ಅವರ ಇನ್ನೊಬ್ಬ ನಾಟ್ಯ ಗುರುಗಳಾದ ಪ್ರೊಫೆಸರ್ ಎಂ.ಆರ್ ಕೃಷ್ಣಮೂರ್ತಿ-ಹಿರಿಯ ನಾಟ್ಯಾಚಾರ್ಯ.

ಪ- ಪದ್ಮಾ ಸುಬ್ರಹ್ಮಣ್ಯಮ್ ಜನಾರ್ಧನ ಅವರ ಈಗಿನ ನಾಟ್ಯ ಗುರುಗಳು.

– ಚಿನ್ಮಯ.ಎಂ.ರಾವ್ ಹೊನಗೋಡು

4-12-2011

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.