-ಚಿನ್ಮಯ ಎಂ.ರಾವ್ ಹೊನಗೋಡು
ಕಲೆ ಎಂಬುದು ಯಾರೊಬ್ಬರ ಮನೆಯ ಆಸ್ತಿಯೂ ಅಲ್ಲ. ಆಗರ್ಭ ಶ್ರೀಮಂತರಾದವರೂ ಕೂಡ ಕೋಟಿ ಕೊಟ್ಟು ಕಲೆಯನ್ನು ಖರೀದಿಸಲು ಬರುವುದಿಲ್ಲ. ಆದರೆ ಕಲೆಯಲ್ಲಿ ಶ್ರೀಮಂತರಾಗುತ್ತಾ ಹೋದಂತೆ ಯಾವ ಕಲಾವಿದರೂ ಆಗರ್ಭ ಶ್ರೀಮಂತರಾಗಬಹುದು ಎಂಬುದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ. ಅಂತಹ ಉದಾಹರಣೆಗಳ ಸಾಲಿಗೆ ಸೇರಲು ಇಲ್ಲೊಬ್ಬ ನಿರೂಪಕಿ ಹಾಗು ಉದಯೋನ್ಮುಖ ನಾಯಕಿ ಶತಪ್ರಯತ್ನ ಮಾಡುತ್ತಿರುವುದು…ಮಾಡಿಯೇ ಸಿದ್ಧ..ಶತಸಿದ್ಧ..ಎಂದು ಸಾಧನೆಯ ಹಾದಿಯಲ್ಲಿರುವುದು ಶ್ಲಾಘನೀಯ. ಅಂದಹಾಗೆ ಈ ಅಂದವತಿ ಈಗ ಶ್ರೀಮಂತಳೇ…ಯಾವುದರಲ್ಲಿ ಎಂದು ನೀವು ಕೇಳಿದರೆ ವಿದ್ಯೆಯಲ್ಲಿ…ವಾಕ್ ಚಾತುರ್ಯದಲ್ಲಿ…ನಿರೂಪಣೆಯಲ್ಲಿ..ನಟನೆಯಲ್ಲಿ…ನಾರ್ತನದಲ್ಲಿ..ಎಲ್ಲಕ್ಕಿಂತ ಹೆಚ್ಚಾಗಿ…ಶ್ರೀಮಂತ ಹೃದಯದಲ್ಲಿ…ಶ್ರೀಮಂತ ನಗುವಿನಲ್ಲಿ…! ಈಕೆಯ ಹೆಸರು ಅಂಕಿತ. ಭವಿಷ್ಯದ ಭರವಸೆಯ ನಿರೂಪಕಿ ಕಮ್ ನಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ…ಇದು ನಿಶ್ಚಿತ…!
ಕೋಟೇಶ್ವರದಿಂದ ಸಾಧನೆಯ ಕೋಟೆಯೆಡೆಗೆ…
ಕರಾವಳಿಯ ಜನ ಕಾರ್ಯಸಾಧನೆಯಲ್ಲಿ ಎತ್ತಿದ ಕೈ. ಹಿಡಿದ ಕೆಲಸವನ್ನು ಹಟ ಹಿಡಿದು ಮಾಡುವ ಇವರ ಮನೋಭಾವ ಬೇರೆಲ್ಲರಿಗೂ ಮಾದರಿ ಎಂದರೆ ತಪ್ಪೇನಲ್ಲ. ಅಂಕಿತ ಕೂಡ ಇದಕ್ಕೆ ಹೊರತಲ್ಲ. ಕುಂದಾಪುರದ ಕೋಟೇಶ್ವರ ಗ್ರಾಮದಲ್ಲಿ ಹುಟ್ಟಿ ಬೆಳೆದ ಅಂಕಿತ ಓದಿದ್ದೆಲ್ಲಾ ಬೆಂಗಳೂರಿನಲ್ಲೇ. ಉದ್ಯೋಗ ನಿಮಿತ್ತ ಬೆಂಗಳೂರು ಸೇರಿದ ಕುಟುಂಬದಲ್ಲಿ ವಿಶೇಶವಾಗಿ ಹೊಂಗನಸುಗಳನ್ನಿಟ್ಟುಕೊಂಡೇ ಬಾಲ್ಯಾವಸ್ತೆಯನ್ನು ಕಳೆದ ಅಂಕಿತ ತಾನು ಎಲ್ಲರಿಗಿಂತ ಕೊಂಚ ಭಿನ್ನ..ವಿಭಿನ್ನ..ವಿಶೇಷ..ಎಂಬುದನ್ನು ಬಾಲ್ಯದಿಂದಲೂ ನಿರೂಪಿಸುತ್ತಾ ಬಂದಿದ್ದಾರೆ.
ಶಾಲಾ ಕಾಲೇಜು ದಿನಗಳಲ್ಲಿ ನಿರೂಪಣೆ ಹಾಗು ಚರ್ಚಾ ಸ್ಪರ್ಧೆಗಳಲ್ಲಿ ಪ್ರತೀ ವರ್ಷ ಪ್ರಥಮ ಬಹುಮಾನವನ್ನೇ ಪಡೆಯುತ್ತಿದ್ದ ಅಂಕಿತ ಒಮ್ಮೆ ಬೆಸ್ಟ್ ಸ್ಟೂಡೆಂಟ್ ಅವರ್ಡ್ ಅನ್ನೂ ಗಳಿಸಿದರು.
ಈಕೆಯ ನಿರೂಪಣೆಯನ್ನು ನೋಡಿ ಮೋಡಿ ಹೋದ ಈಕೆಯ ಶಿಕ್ಷಕಿಯೊಬ್ಬರು ಆಗಲೇ ಹೇಳಿದ್ದರಂತೆ…ಮುಂದೊಮ್ಮೆ ನೀನು ಸುಪ್ರಸಿದ್ಧ ನಿರೂಪಕಿಯಾಗಿ ಹೆಸರು ಮಾಡುವೆ..ಆಗ ನಾನೇ ನಿನ್ನ ಬಳಿ ಆಟೋಗ್ರಾಫ್ ತೆಗೆದುಕೊಳ್ಳಲು ಬರುತ್ತೇನೆ ಎಂದು. ಅದು ದಿಟವಾಗುತ್ತಿರುವುದು ಅಂಕಿತಾಳ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
ನಿರೂಪಣೆ…ಪಾದಾರ್ಪಣೆ…
ಸುಪ್ರಸಿದ್ಧ ನಿರೂಪಕಿಯಾಗಬೇಕೆಂಬ ಏಕಮೇವಾದ್ವಿತೀಯ ಕನಸನ್ನು ಹೊತ್ತಿದ್ದ ಅಂಕಿತ ಮೊದಲು ಪಾದಾರ್ಪಣೆ ಮಾಡಿದ್ದು “ಅಮೋಘ್” ಎಂಬ ಖಾಸಗಿ ವಾಹಿನಿಯಿಂದ. ಅಲ್ಲಿಂದ ಮುಂದಿನದೆಲ್ಲ ಅಮೋಘವೇ…! ಅಂಕಿತಾ ಅವರಿಗೆ ಆಡಿಶನ್ ಮಾಡಿದವರು ನಿಮಗೆ ಆಡಿಶನ್ ಬೇಡವೇ ಬೇಡಾಗಿತ್ತು. ಅಷ್ಟು ಸ್ಪಷ್ಟವಾಗಿದೆ ನಿಮ್ಮ ನಿರೂಪಣೆ. ನಾಳೆ ಬೆಳಿಗ್ಗೆಯ ಕಾರ್ಯಕ್ರಮಕ್ಕೇ ನಿರೂಪಕಿಯಾಗಿ ಬಂದುಬಿಡಿ ಎಂದರು. ಅಲ್ಲಿಂದ ಹಿಂದಿರುಗಿ ನೋಡದ ಅಂಕಿತ ನೂರಾರು ಟೀವಿ ಕಾರ್ಯಕ್ರಮಗಳು ಹಾಗು ರಾಜ್ಯದಾದ್ಯಂತ ಇನ್ನಿತರ ಹಲವು ಕಾರ್ಯಕ್ರಮಗಳಿಗೆ ಯಶಸ್ವಿಯಾಗಿ ನಿರೂಪಣೆ ಮಾಡುತ್ತಾ ಬಂದಿದ್ದಾರೆ.
ನಾಯಕಿಯಾಗಿಯೂ…ನರ್ತಕಿಯಾಗಿಯೂ..
ನಿರೂಪಣೆಯೇ ತನ್ನ ಮೊದಲ ಪ್ರಾಶಸ್ತ್ಯವೆನ್ನುವ ಅಂಕಿತ…ತಾನು ನಾಯಕಿಯಾಗಿಯೂ ನಟಿಸಬೇಕೆಂಬುದಕ್ಕೆ ಎರಡನೆಯ ಪ್ರಾಶಸ್ತ್ಯ ನೀಡಿದ್ದಾರೆ. “ಒಂಡೇ ಲವ್ ಸ್ಟೋರಿ” ಎಂಬ ಹೊಸ ಶಾರ್ಟ್ ಮೂವಿಯಲ್ಲಿ ಮೂಡಿ ಬರುವ ಎರಡು ಕಥೆಗಳಲ್ಲಿ ಎರಡರಲ್ಲೂ ನಾಯಕಿಯಾಗಿ ಈಗಾಗಲೇ ನಾಯಕಿಯಗಿ ನಟಿಸಿ ಅಂಕಿತ ಯಶಸ್ವಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಸಹ ಕಲಾವಿದೆಯಾಗಿ ನಟಿಸಿರುವ ಅಮ್ಮನೇ ಅಂಕಿತಾಳಿಗೆ ಸ್ಪೂರ್ತಿ. ಭರತನಾಟ್ಯ ಹಾಗು ಕಾಂಟೆಂಪರರಿ ನರ್ತನದಲ್ಲಿ ಸಾಕಷ್ಟು ಪಳಗಿರುವ ಅಂಕಿತ ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯಸ್ಪರ್ಧೆಯಲ್ಲಿಯೂ ಬಹುಮಾನ ಗಳಿಸಿದ್ದಾರೆ.
ಹೀಗೆ ನಿರೂಪಣೆ…ನರ್ತನ…ನಟನೆ..ಇಂತಹ ಕಲಾಪ್ರಾಕಾರಗಳಲ್ಲಿ ಪರಿಣಿತಿ ಪಡೆದು ಮುಂದೆ ಮುಂದೆ ಸಾಗುತ್ತಿರುವ ಅಂಕಿತ ಕೀರ್ತಿಶಿಖರದಲ್ಲಿ ರಾರಾಜಿಸಲಿ ಎಂದು ನಾವು ನೀವೆಲ್ಲಾ ಆಶಿಸೋಣ ಅಲ್ಲವೇ?
-ಚಿನ್ಮಯ ಎಂ.ರಾವ್ ಹೊನಗೋಡು
19-7-2015