ಕನ್ನಡಪುಣ್ಯಕ್ಷೇತ್ರ

ಅಪ್ಸರೆಯರನ್ನು ಆಕರ್ಷಿಸಿದ ಅಪ್ಸರಕೊಂಡ ದೇಗುಲ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿರುವ ಅಪ್ಸರಕೊಂಡದ ದೇವಾಲಯ ಸಮುದ್ರ, ಎತ್ತರದ ಗುಡ್ಡ, ಆಕರ್ಷಕ ಜಲಪಾತಗಳ ಸಂಗಮ ಸ್ಥಳದಲ್ಲಿದ್ದು ಅತ್ಯಂತ ಸುಂದರ ಪ್ರೇಕ್ಷಣೀಯ ಸ್ಥಳವಾಗಿದೆ. ಇಲ್ಲಿರುವ ಶ್ರೀಉಮಾಂಬಾ ಗಣಪತಿ ಮತ್ತು ಉಗ್ರ ನರಸಿಂಹ ದೇವರುಗಳು ಭಕ್ತರ ಹರಕೆಗೆ ಪ್ರತಿಯಾಗಿ ಫಲ ನೀಡುವ ಕಾರಣದಿಂದ ಬಹು ದೂರದ ಊರುಗಳಿಂದ ಭಕ್ತರನ್ನು ತನ್ನತ್ತ ಸೇಲೆಯುವಲ್ಲಿ ಸಫಲವಾಗುತ್ತಿವೆ.

ತಾಯಿ ಉಮೆ(ಪಾರ್ವತಿ)ಯ ತೊಡೆಯ ಮೇಲೆ ಕುಳಿತಿರುವ ಶ್ರೀಉಮಾಂಬಾ ಗಣಪತಿ  ನಂಬಿ ಆರಾಧಿಸುವ ಭಕ್ತರಿಗೆ ಸರ್ವಸಿದ್ಧಿ ನೀಡುತ್ತಾನೆಂಬ ಪ್ರತೀತಿ ಇದೆ. ಈ ದೇವಾಲಯದ ಹಿಂಭಾಗದ ಸ್ವಲ್ಪ ದೂರದಲ್ಲಿ ಆಕರ್ಷಕವಾದ ಅಪ್ಸರಕೊಂಡ ಜಲಪಾತ, ಮತ್ತೂ ಸ್ವಲ್ಪ ದೂರದಲ್ಲಿ ವಿಶಾಲವಾದ ಅರಬ್ಬೀಸಮುದ್ರ,ಬಲಭಾಗದಲ್ಲಿ ಎತ್ತರವಾದ ಗುಡ್ಡ,ಅಚ್ಚರಿ ಮೂಡಿಸುವ ಗುಹೆಗಳು ,ಋಷಿ ಮುನಿಗಳ ತಫೋಭೂಮಿ ಎಲ್ಲವೂ ಇದ್ದು ಸರ್ವ ಸಮನ್ವಯದ ಕ್ಷೇತ್ರ ಇದಾಗಿದೆ.

ವನವಾಸದ ಸಮಯದಲ್ಲಿ ಪಾಂಡವರು ಇಲ್ಲಿನ ಗುಹುಗೆಳಲ್ಲಿ ವಾಸಿಸುತ್ತಾ ಶಕ್ತಿ ವರ್ಧನೆಗಾಗಿ ಉಗ್ರನರಸಿಂಹ ದೇವರನ್ನು ನಿರಂತರ ಆರಾಧಿಸುತ್ತಿದ್ದರಂತೆ. ದ್ರೌಪದಿ ತನ್ನ ಸಂಕಷ್ಟದ ದಿನಗಳು ಆದಷ್ಟು ಬೇಗ ದೂರವಾಗಲೆಂದು ಉಮಾಂಬಾ ಗಣಪತಿಯನ್ನು  ನಿತ್ಯ ಪೂಜಿಸುತ್ತಿದ್ದಳಂತೆ.ಇದರಿಂದ ದ್ರೌಪದಿ ವಿಶೇಷ ಸಿದ್ಧಿಯನ್ನು ಸಹ ಪಡೆದಿದ್ದಳಂತೆ.ಈ ದೇವಾಲಯದ ಗರ್ಭಗುಡಿಗೆ ತಾಗಿಕೊಂಡಂತೆ ಸುಮಾರು 20 ಅಡಿ ಎತ್ತರದ ಮ್ಯಾಗ್ನೀಸ್ ಕಲ್ಲಿನ ಬಂಡೆಯಿದೆ. ಈ ಬಂಡೆಯ ಒಡಲಾಳ ಸಹ ಗುಹೆಯಂತೆ ಇದೆ.

ಉತ್ತರಾಭಿಮುಖವಾಗಿರುವ ಈ ದೇವಾಲಯದ ಎದುರಿಗೆ ತೀರ್ಥವೊಂದು ದೇಗುಲವನ್ನು ಪ್ರದಕ್ಷಿಣೆ ಹಾಕಿದಂತೆ ಹರಿದು ಮುಂದಕ್ಕೆ ಸಾಗಿ ಹಿಂಭಾಗದಲ್ಲಿ ಜಲಪಾತವಾಗಿ ಧುಕುಕಿ ಸಮುದ್ರ ಸೇರುತ್ತಿದೆ. ಪುರಾಣ ಕಾಲದಲ್ಲಿ ಅಪ್ಸರೆಯರು ಇಲ್ಲಿಗೆ ಆಗಮಿಸಿ ಜಲಪಾತದಲ್ಲಿ ಮಿಂದು  ಉಮಾಂಬಾ ಗಣಪತಿ ಮೂರ್ತಿಯನ್ನು ಪೂಜಿಸುತ್ತಿದ್ದರಂತೆ. ಇದರಿಂದಾಗಿ ಈ ಜಲಪಾತಕ್ಕೆ ಅಪ್ಸರಕೊಂಡ ಜಲಪಾತ ಎಂಬ ಹೆಸರು ಬಂದಿದೆ.   ದುಷ್ಟಶಕ್ತಿಯಿಂದ ಪೀಡಿತರಾದವರು, ಭಯಗ್ರಸ್ತರು ಇಲ್ಲಿನ ಉಗ್ರನರಸಿಂಹ ದೇವರನ್ನು  ಪೂಜಿಸಿದರೆ ನಿವಾರಣೆ ದೊರೆಯುತ್ತದೆ ಎಂಬ ಪ್ರತೀತಿಯಿದೆ. ಮನದ ಇಷ್ಟಾರ್ಥ ಸಿದ್ಧಿಯ ಪ್ರಾಪ್ತಿ ಮತ್ತು ವಿಶೇಷ ಶಕ್ತಿ ಸಂಪಾದನೆಗಾಗಿ ಉಮಾಂಬಾ ಗಣಪತಿಯನ್ನು ಆರಾಧಿಸಿದರೆ ಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಇಲ್ಲಿನ ದೇವಾಲಯಕ್ಕೆ ಬಗೆ ಬಗೆಯ ಭಕ್ತರು ಆಗಮಿಸುತ್ತಾರೆ.

ಪ್ರತಿವರ್ಷ ನಾಗಪಂಚಮಿ, ಗಣೇಶ ಚತುರ್ಥಿ ವಿಜೃಂಬಣೆಯಿಂದ ನಡೆಯುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಪಾಢ್ಯದಿಂದ ದಶಮಿಯವರೆಗೆ ನಿತ್ಯ ವೈಭವದ ಪೂಜೆ ನೆರವೇರುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ ಕ್ಷೀರಾಭಿಷೇಕ, ಸಹಸ್ರನಾಮ ಪೂಜೆ ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ನಿತ್ಯ ಸಂಜೆ ವಿಶೇಷ ಅಲಂಕಾರ ಮತ್ತು ದೀಪೋತ್ಸವ ನಡೆಯುತ್ತದೆ. ಯುಗಾದಿಯಂದು ಹೊಸ ಸಂವತ್ಸರದ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಫೋಟೋ ಮತ್ತು ಲೇಖನ-ಎನ್.ಡಿ.ಹೆಗಡೆ ಆನಂದಪುರಂ

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.