ಕಲಾಪ್ರಪಂಚಸಂಗೀತ ಸಮಯ

ನಾ ಕಂಡಂತೆ ಗಾನ ಗಂಧರ್ವ ಪದ್ಮಭೂಷಣ ಡಾ.ಕೆ.ಜೆ.ಏಸುದಾಸ್-ಭಾಗ-3

ABOUT K J YESUDAS BY CHINMAYA M RAO.-3jpg-ಚಿನ್ಮಯ ಎಂ.ರಾವ್ ಹೊನಗೋಡು

ಭಾಗ-3-ಕೊಲ್ಲೂರಿನಲ್ಲಿ ದರ್ಶನವಾಯಿತು…!

ಏಸುದಾಸ್ ಅವರ ಪಾಂಡಿತ್ಯಪೂರ್ಣ ಹಾಡುಗಾರಿಕೆಯನ್ನು ಕೇಳಿ ಸಂಪೂರ್ಣವಾಗಿ ಶಾಸ್ತ್ರೀಯ ಸಂಗೀತದೆಡೆಗೆ ವಾಲಿದ್ದ ನಾನು ಚಿತ್ರಗೀತೆ ಹಾಗು ಶಾಸ್ತ್ರೀಯ ಸಂಗೀತ ಇವೆರಡರ ನಡುವೆ ಇದ್ದ ಗೊಂದಲದಿಂದ ಹೊರಬಂದೆ. ಇವೆರಡರ ನಡುವೆ ನನಗಿದ್ದ ದ್ವಂದ್ವವನ್ನು ಸುಲಭವಾಗಿ ಬೇಧಿಸಿಕೊಂಡು ಹಾಡುಗಾರಿಕೆಯಲ್ಲಿ ಎರಡೂ ಎಲ್ಲಿ ಹೇಗೆ ಬೇರೆ ಬೇರೆ ಆಗುತ್ತವೆ ಎಂಬ ಗಡಿರೇಖೆಯನ್ನು ಮನದೊಳಗೆ ಗುರುತಿಸಿಕೊಂಡೆ. ಇವೆರಡದ ನಡುವೆ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಯಾರು ಗುರುತಿಸಿಕೊಳ್ಳುವುದಿಲ್ಲವೊ…ಆ ಗುಟ್ಟನ್ನು ಕಂಡುಕೊಳ್ಳುವುದಿಲ್ಲವೊ…ಅವರು ಒಂದೋ ಶಾಸ್ತ್ರೀಯ ಸಂಗೀತ ಅಥವಾ ಚಿತ್ರಗೀತೆ ಇವೆರಡರಲ್ಲಿ ಒಂದನ್ನು ಮಾತ್ರ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಆದರೆ ಇವೆರಡನ್ನೂ ಗಟ್ಟಿಯಾಗಿ ಹಿಡಿದುಕೊಂಡು ಗುರಿಯನ್ನು ಮುಟ್ಟಿದ ಏಕೈಕ ಭಾರತೀಯ ಸಂಗೀತಗಾರ, ಮೊದಲಿಗ ಎಂದರೆ ಅದು ಕೆ.ಜೆ ಏಸುದಾಸ್ ಮಾತ್ರ ಎಂದು ಘಂಟಾಘೋಷವಾಗಿ ಹೇಳಬಹುದು. ಆನಂತರ ಪಿ.ಉನ್ನಿಕೃಷ್ಣನ್, ಬಾಂಬೆ ಜಯಶ್ರೀ ಹಾಗು ಅನುರಾಧ ಶ್ರೀ ರಾಮ್ ಇವರೆಲ್ಲಾ ಇದೇ ದಾರಿಯಲ್ಲಿ ಮುನ್ನಡೆದು ಎರಡರಲ್ಲೂ ಗಟ್ಟಿಗರಾದರು. ಅತ್ತ ಶಾಸ್ತ್ರೀಯ ಸಂಗೀತ ಹಾಡುತ್ತಾ ಇತ್ತ ಸ್ಟೂಡಿಯೋಕ್ಕೆ ಬಂದು ಚಿತ್ರಗೀತೆಗಳನ್ನೂ ಹಾಡಿದರು. ನಮ್ಮ ಶಾಸ್ತ್ರೀಯ ಸಂಗೀತದ ತಳಹದಿಯನ್ನು ಗಟ್ಟಿಯಾಗಿ ಸಾಧನೆ ಮಾಡಿಕೊಂಡರೆ ಜಗತ್ತಿನ ಯಾವುದೇ ಶೈಲಿಯ ಸಂಗೀತವನ್ನು ಲೀಲಾಜಾಲವಾಗಿ ಹಾಡಬಹುದೆಂಬ ಸತ್ಯ ನನಗೆ ಗೊತ್ತಾಗಿದ್ದು ಏಸುದಾಸ್ ಸಂಗೀತದಿಂದ. ಇದಕ್ಕೆ ಯಶಸ್ವಿ ಗಾಯಕರಾಗಿ ಅವರೇ ನನ್ನ ಕಣ್ ಮುಂದೆ ಸ್ಪಷ್ಟ ಉದಾಹರಣೆಯಾಗಿದ್ದರು. ಹಾಗಾಗಿ ಯಾವ ಅನುಮಾನವಿಲ್ಲದೆ ಯಾರ ಮಾತೂ ಕೇಳದೆ ಶಾಸ್ತ್ರೀಯ ಹಾಗು ಚಿತ್ರ ಸಂಗೀತ ಇವೆರಡರಲ್ಲೂ ನನ್ನ ಅಧ್ಯಯನವನ್ನು ಮುಂದುವರೆಸಿದೆ.

ಈ ದಿಶೆಯಲ್ಲಿ ನನ್ನ ಸಂಗೀತ ಸಾಧನೆ ಆರಂಭವಾದ ಸ್ವಲ್ಪದಿನದಲ್ಲೇ ಇನ್ನೊಂದು ಸಿಹಿಸುದ್ದಿ ನನ್ನ ಕಿವಿಗೆ ತಲುಪಿತು. ನನ್ನ ಅಮ್ಮನ ಚಿಕ್ಕಪ್ಪನ ಮಗಳನ್ನು ಕೊಲ್ಲೂರು ಮೂಕಾಂಬಿಕಾ ದೇವಿಯ ಪ್ರಧಾನ ಅರ್ಚಕರ ಮನೆಗೆ ಮದುವೆ ಮಾಡಿ ಕೊಟ್ಟಿದ್ದರು. ಪ್ರತೀ ವರ್ಷ ಜನವರಿ ಹತ್ತರಂದು ದೇವಿಯ ಸನ್ನಿಧಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳಲು ತಪ್ಪದೇ ಬರುವ ಏಸುದಾಸ್ ಅರ್ಚಕ ಸೀತಾರಾಮ ಅಡಿಗರ ಮನೆಯಲ್ಲೇ ಉಳಿಯುತ್ತಾರೆ. ಅಷ್ಟೇ ಅಲ್ಲ ಕಳೆದ ಐವತ್ತು ವರ್ಷಗಳಿಂದ ತನ್ನ ಎಲ್ಲಾ ಕಷ್ಟ ಸುಖಗಳ ಕಾಲದಲ್ಲೂ ಏಸುದಾಸ್ ಅಡಿಗರ ಮನೆಗೆ ಬರುತ್ತಿದ್ದಾರೆ. ಆ ಕುಟುಂಬದವರೊಡನೆ ಅವರಿಗೆ ಪರಮ ಆಪ್ತ ಸಂಬಂಧವಿದೆ ಎಂದು ನನಗೆ ಗೊತ್ತಾಯಿತು. ಸಂತಸಗೊಂಡೆ. ಮನದ ಕ್ಯಾಲೆಂಡರ್ ನಲ್ಲಿ ಆ ದಿನಾಂಕವನ್ನು ಗುರುತು ಮಾಡಿಕೊಂಡೆ. ಐ ಸ್ಟಾರ್ಟೆಡ್ ಕೌಂಟಿಂಗ್ ಫಾರ್ ದಟ್ ಡೆ. ಎಣಿಕೆ ಮುಗಿಯಿತು. ನನ್ನ ಎಣಿಕೆಯನ್ನೂ ಮೀರಿ ಸಿಕ್ಕ ಸದವಕಾಶ ಅದಾಗಿತ್ತು. ಆಕಾಶಕ್ಕೆ ಏಣಿ ಹಾಕಿಯಾಗಿತ್ತು.
K J YESUDAS IN KOLLURU TEMPLE-CLICKED BY CHINMAYA M.RAOಸಾಗರದಿಂದ ಕೊಲ್ಲೂರಿಗೆ ಒಳದಾರಿಯಲ್ಲಿ ಕೇವಲ ಎರಡುವರೆ ಗಂಟೆ ಪ್ರಯಾಣ. ಹಸಿರುಮಕ್ಕಿಯ ಶರಾವತಿ ಹಿನ್ನೀರಿನಲ್ಲಿ ಲಾಂಚ್ ತೇಲುವಾಗ ಏಸುದಾಸ್ ಎಂಬ ಜೀವಂತ ದಂತಕಥೆ ನನ್ನೊಡನೆ ಆತ್ಮೀಯರಾದಂತೆ ಕನಸುಕಾಣುತ್ತಾ ಸಂಭ್ರಮದಲ್ಲಿ ತೇಲಿದೆ. ಲಾಂಚ್ ಆಚೆ ದಡ ತಲುಪಿದಾಗ ದಡಕ್ಕನೆ ಯಾರೋ ಬೆನ್ನು ತಟ್ಟಿದಾಗಲೇ ಎಚ್ಚರವಾದದ್ದು…ನಾನು ಕನಸೆಂಬ ಲಾಂಚ್ ಇಳಿದು ಬಸ್ಸನ್ನೇರಬೇಕೆಂದು.

ಕೊಲ್ಲೂರಿನ ಚಿಕ್ಕಮ್ಮ ನನಗೆ ಚೆನ್ನಾಗಿಯೇ ಪರಿಚಯವಿದ್ದರೂ ಅವರು ಮದುವೆಯಾಗಿ ಆ ಮನೆ ಸೇರಿದ ಮೇಲೆ ಅಷ್ಟೊಂದು ಬಳಕೆಯಲ್ಲಿರಲಿಲ್ಲ. ಅವರು ನನಗೆ ಹತ್ತಿರದ ಸಂಬಂಧಿಯಾದರೂ ನನಗೆ ಸಂಬಂಧಿಸಿದ ಯಾವುದೋ ಒಂದು ಸಂಗತಿ ಅವರ ಮನೆಯಲ್ಲಿರದಿದ್ದರೆ ನಾನು ಅಲ್ಲಿಗೆ ಹೋಗುವ ಅಸಾಮಿಯೇ ಆಗಿರಲಿಲ್ಲ. ಇನ್ನು ಕೊಲ್ಲೂರು ಕ್ಷೇತ್ರಕ್ಕೆ ದರ್ಶನ ಮಾಡಿದಾಗ ತಾಯಿಯ ಒತ್ತಾಯಕ್ಕೆ ಮಣಿದು ಅವರ ಮನೆಯ ಪಾನೀಯ ಕುಡಿದು ದಣಿವಾರಿಸ್ಕೊಂಡು ಬರುತ್ತಿದ್ದೆ ಅಷ್ಟೇ. ಆದರೆ ಈಗ ಅಷ್ಟು ಮಾತ್ರಕ್ಕಲ್ಲದೆ ಇನ್ನಷ್ಟು…ಮತ್ತಷ್ಟು..ಕನಸುಗಳನ್ನು ಹೊತ್ತು ಮಹಾತ್ಮರೊಬ್ಬರನ್ನು ಸನಿಹದಿಂದ ನೋದಬೇಕು..ಸಾಧ್ಯವಾದರೆ ಕ್ಷಣಕಾಲ ಅವರ ಸೇವೆ ಮಾಡಬೇಕೆಂಬ ಬಾಯರಿಕೆಯಿಂದ ದಣಿವಾರಿಸಿಕೊಳ್ಳಲು ನನ್ನ ಧಣಿಯನ್ನು ಹುಡುಕಿಕೊಂಡು ಕೊಲ್ಲೂರಿಗೆ ಹೋಗಿದ್ದೆ.

ದೇವಾಲಯದ ಪ್ರಾಂಗಣದ ಎದುರು ಬಲ ಮೂಲೆಯಿಂದ ಅರ್ಚಕರ ಕೇರಿಗೆ ಸಾಗುವಾಗ ನನ್ನ ಹೆಜ್ಜೆಗಳು ಏಸುದಾಸ್ ಅವರ ಹೆಜ್ಜೆಗಳನ್ನು ಹುಡುಕುತ್ತಿತ್ತು. ಕೇರಿಯ ತುದಿಯ ಹಳೆಯ ಮನೆಯೊಂದರ ಎದುರು ಒಂದಷ್ಟು ಜನ ಮುಂಬಾಗಿಲಿನಲ್ಲೇ ಮುತ್ತಿಕೊಂಡಿದ್ದರು. ಕೆಲವರು ಕಾಲೊಂದನ್ನು ಬಿಟ್ಟು ಮೈತುಂಬಾ ಕ್ಯಾಮೆರಗಳನ್ನು ಸುತ್ತಿಕೊಂಡಿದ್ದರು. ಒಂದಾದ ನಂತರ ಮತ್ತೊಂದು 1-CHINMAYA M RAO WITH DR.K J YESUDAS-In 2002ಕ್ಯಾಮರಾವನ್ನು ಗಡಿಬಿಡಿಯಲ್ಲಿ ಒತ್ತಿಕೊಂಡು ಒಳ್ಳೆಯ ಫೋಸು ಸಿಕ್ಕಿತೆಂದು ಖುಷಿಪಡುತ್ತಿದ್ದರು. ಮಿಂಚಂತೆ ಬೆಳಕು ಚಿಮ್ಮುತ್ತಿದ್ದ ಅದೇ ಅಡಿಗರ ಮನೆಯ ಜಗುಲಿ ಎಂಬುದನ್ನು ನನಗೆ ಮತ್ತ್ಯಾರೂ ಬಿಡಿಸಿ ಹೇಳಬೇಕಾಗಿರಲಿಲ್ಲ. ಒಂದರೆಡು ನಿಮಿಷಗಳ ಕಾಲ ನಿಂತು ಹೊರಜಗುಲಿಯಿಂದ ಒಳಮನೆಗೆ ಏಸುದಾಸ್ ಹೋಗುತ್ತಿದ್ದಂತೆ ನಾನು ಜಾಗ ಮಾಡಿಕೊಂಡು ಹೊರ ಜಗುಲಿಗೆ ಬಂದೆ. ಒಳಗೆ ಯಾರಿಗೂ ಪ್ರವೇಶವಿರಲಿಲ್ಲ. ಆದರೂ ನಾನು ನಿರಾಳವಾಗಿ ಒಳಗೆ ಹೋಗುವುದನ್ನು ನೋಡಿ ಯಾರೋ ಹೊರಗಿದ್ದವರು ಮಲಯಾಳಮ್‌ನಲ್ಲಿ ಬಯ್ದರು. ಹಾಗಾಗಿ ನನಗೆ ಕಿವಿ ಕೇಳಲೇ ಇಲ್ಲ ! ತಲೆಕೆಡಿಸಿಕೊಳ್ಳಲಿಲ್ಲ.

ನಡುಮನೆಯಲ್ಲಿ ಏಸುದಾಸ್ ಏನನ್ನೋ ಆಲೋಚಿಸುತ್ತಾ ಒಬ್ಬರೇ ಕುಳಿತಿದ್ದರು. ರೋಮಾಂಚನಗೊಂಡ ನಾನು ಸೀದಾ ಅವರ ಕಾಲೆರಗಿ ಪರಿಚಯಿಸಿಕೊಂಡೆ. ಸಂಗೀತ ಕಲಿಯುತ್ತಿದ್ದೇನೆ ಎಂಬುದನ್ನು ಕೇಳಿದ ಅವರು ಹಾಡೊಂದನ್ನು ಹೇಳಿ ಎಂದರು. ಕುವೆಂಪು ಅವರ “ಅಂತರತಮ ನೀ ಗುರು ಆತ್ಮತಮೋಹಾರಿ” ಗೀತೆಯನ್ನು ಅಮೃತವರ್ಷಿಣಿಯಲ್ಲಿ ಹಾಡಿದೆ. ಹಾಡುವಾಗ ನಾನು ಸಂಗೀತದ ಮೇರು ಶಿಖರದ ಎದುರು ಹಾಡುತ್ತಿದ್ದೇನೆ ಎಂದು ನನಗನ್ನಿಸಲೇ ಇಲ್ಲ. ಅವರು ಅಹಂಕಾರವಿಲ್ಲದೆ..ಮಾತನಾಡುವಾಗಲೂ ಅಹಮ್ ಇಲ್ಲದೇ ತನ್ನವರೆಂದು ನನ್ನೊಡನೆ ಪ್ರೇಮದಿಂದ ವರ್ತಿಸಿದಾಗ ನಮ್ಮಿಬ್ಬರ ನಡುವೆ ಸಹಜ ಸುಂದರ ಸಂವಹನವೊಂದು ಏರ್ಪಟ್ಟಿತು. ಹಾಗಾಗಿ ನಾನು ನಿರಾಳವಾಗಿ ಹಾಡು ಮುಗಿಸಿದಾಗ ಅದರ ಅರ್ಥವನ್ನು ತಿಳಿದುಕೊಂಡ ಅವರು ಅಮೃತವರ್ಷಿಣಿ ರಾಗದ ಮಹತ್ವವನ್ನು ತಿಳಿಹೇಳಿದರು. ರಾಗದ ಆರೋಹಣ ಅವರೋಹಣವನ್ನು ಹಾಡಿ ಅಕಾರ ಸಾಧನೆಯನ್ನು ಹೇಗೆ ಮಾಡಬೇಕು?

KJ+Yesudas+Padmasri02ಅದು ಹೇಗೆ ನಮ್ಮ ಗಾಯನಕ್ಕೆ ಸಹಕಾರಿ? ಇತ್ಯಾದಿ ವಿಚಾರಗಳ ಬಗ್ಗೆ…ತಾನೊಬ್ಬ ದೊಡ್ಡ ಗಾಯಕ…ರಹಸ್ಯಗಳನ್ನು ಬಿಟ್ಟುಕೊಡಬಾರದು..ಎಂಬ ಸಂಕುಚಿತಮನೋಭಾವವನ್ನು ಬಿಟ್ಟು ಎಲ್ಲವನ್ನೂ ಮನದಟ್ಟು ಮಾಡಿಸಿದರು..ಅಮೃತವರ್ಷಿಣಿಯ ಅಲಾಪನೆಯನ್ನೂ ಹಾಡಿಸಿದರು. ಇಷ್ಟೇ ಸಂಗೀತ..ಇದಮಿತ್ಥಮ್..ಎಂದು ಸೂಚ್ಯವಾಗಿ ಅರ್ಥೈಸಿದರು. ಯಾರೋ ಗುರುತು ಪರಿಚಯ ಇರದವ ಎಲ್ಲಿಂದಲೋ ದಿಢೀರನೆ ಬಂದ ನನಗೆ ಇಷ್ಟೆಲ್ಲಾ ವಿಚಾರಗಳನ್ನು ಪ್ರೀತಿಯಿಂದ ಹೇಳುತ್ತಾರೆ ಎಂದರೆ ಅವರ ಹೃದಯವೈಶಾಲ್ಯತೆ…ಮಗುವಿನಂತಹ ಮನಸ್ಸು..ಕಾಟಾಚಾರಕ್ಕೆ ಮಾತನಾಡದೆ ಆತ್ಮೀಯವಾಗಿ ಮಾತನಾಡುವ ಪರಿ..ನನಗೆ ಮಾದರಿ ಎನಿಸಿತ್ತು. ದೊಡ್ಡವರು ಇಷ್ಟು ಸಣ್ಣ ಸಣ್ಣ ವಿಚಾರಗಳಿಂದಲೇ ಎಷ್ಟು ದೊಡ್ಡವರಾಗುತ್ತಾರೆ ಎಂದೆನಿಸಿತು. ನನ್ನ ಹಾಡು ಕೇಳಿ ಒಳಮನೆಯಿಂದ ಬಂದಿದ್ದ ಚಿಕ್ಕಮ್ಮ ಏಸುದಾಸ್ ಅವರ ಮಾತೆಲ್ಲಾ ಮುಗಿದ ನಂತರ ನನ್ನನ್ನು ತನ್ನ ಅಕ್ಕನ ಮಗನೆಂದು ಪರಿಚಯಿಸಿದರು. ನಂತರ ನನಗೆ ದೇವಾಲಯದಲ್ಲಿ ಸಿಕ್ಕ ಅಡಿಗರ ತಾಯಿ “ನಿಮಗೆ ದೇವರ ದರ್ಶನ ಆಯಿತಾ?”ಎಂದಾಗ ತಲೆತುಂಬ ಏಸುದಾಸ್ ಅವರನ್ನೇ ತುಂಬಿಕೊಂಡಿದ್ದ ನಾನು “ನಿಮ್ಮ ಮನೆಯಲ್ಲೇ ಆಯಿತಲ್ಲ..ಬೆಳಿಗ್ಗೆ ಬಂದ ತಕ್ಷಣ” ಎಂದು ಬಿಟ್ಟೆ. ಪಕ್ಕ ಸಂಪ್ರದಾಯಸ್ಥರಾಗಿದ್ದ ಅವರಿಗೆ ನನ್ನ ಮಿತಿಮೀರಿದ ಹುಚ್ಚು ಅರ್ಥವಾಗಿ ಸ್ವಲ್ಪ ಕೋಪಿಸಿಕೊಂಡರು. ಜೊತೆಗೆ ಕರೆದುಕೊಂಡು ಹೋಗಿ ಮೂಕಾಂಬಿಕೆಯ ದರ್ಶನವನ್ನು ಮಾಡಿಸಿದರು. ಅಡಿಗರ ಮನೆಯಲ್ಲಿ ನನ್ನನ್ನು ನೋಡಿ..ನನ್ನ ಹುಚ್ಚನ್ನು ನೋಡಿ ಎಲ್ಲರೂ “ದೇವರ ದರ್ಶನ ಆಯಿತಾ?” ಎಂದು ಛೇಡಿಸುತ್ತಾ ಮುಸಿಮುಸಿ ನಗುತ್ತಿದ್ದರು.

30VBG_YESUDAS_260678eಹೀಗೆ ಈಗ ಹತ್ತು ವರ್ಷಗಳಿಂದ ಅವರ ಜನ್ಮದಿನದಂದು ಅವರಿಗೊಂದು ಶುಭಾಶಯ..ಅವರೊಡನೆ ಸಂಗೀತದ ವಿಚಾರ ವಿನಿಮಯ ನಡೆಯುತ್ತಲೇ ಇದೆ. ಅವರೊಡನೆ ಒಡನಾಟ, ಆತ್ಮೀಯತೆ, ಅವರೊಡನೆ ನನ್ನ ಒಂದಷ್ಟು ಭಾವಚಿತ್ರ…ಇವೆಲ್ಲಾ ಇದಾಕ್ಷಣ ನಾನು ಅವರಾಗಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ನನಗಾಗಿದೆ. ಆದರೆ ಅವರಂತೆ ಆಗಲು..ಅವರಷ್ಟು ಸಾಧನೆ ಮಾಡಲು ವರುಷಕ್ಕೊಮ್ಮೆ ನನ್ನ ಮನಸ್ಸು ಕೊಲ್ಲೂರಿನಲ್ಲಿ ರೀಚಾರ್ಜ್ ಆಗಿ ಬರುತ್ತಿದೆ. ಅವರನ್ನು ನೋಡಲು ಮುನ್ನುಗ್ಗಿದಂತೆ ಜೀವನದಲ್ಲಿ ಅವರಷ್ಟು ಸಾಧನೆ ಮಾಡಲೂ ಮುನ್ನುಗ್ಗು ಎಂದು ಮನಸ್ಸು ಹೇಳುತ್ತಿದೆ. ಪ್ರತೀ ವರ್ಷ ಅವರನ್ನು ಕಾಣಲು ಹೋಗುವಾಗ ಆ ವರ್ಷದ ನನ್ನ ಸಂಗೀತ ಸಾಧನೆಯ ಆತ್ಮಾವಲೋಕನ.. ಮನದೊಳಗೆ ಚಿಂತನ ಮಂಥನ ಆರಂಭವಾಗುತ್ತದೆ. ಈಗ ಹೇಳಿ..ಈ ಹುಚ್ಚಿಗೊಂದು ಅರ್ಥ ಇಲ್ಲವೆ? ಇಂಥಹ ಅಭಿಮಾನ ಸಾರ್ಥಕವಲ್ಲವೆ?
 (ಮುಗಿಯಿತು)

2-1-2013

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.