ಕನ್ನಡಕನ್ನಡ ಟೈಮ್ಸ್-ವಿಕಿಪೀಡಿಯ

ತಂತ್ರಜ್ಞಾನ ಭಾಷೆ ಮತ್ತು ಬಾಂದವ್ಯ ಗಟ್ಟಿಗೊಳಿಸುವ ಸಾಧನ

ಡಾ.ಸರ್ಫ್‍ರಾಜ್ ಚಂದ್ರಗುತ್ತಿ

ಸಾಗರದಲ್ಲಿ ಮಾರ್ಚಿ 1, 2ರಂದು ಅಪರೂಪದ ಕಾರ್ಯಾಗಾರವೊಂದು ನಡೆಯಿತು. ಕನ್ನಡದ ಅಂತರ್ಜಾಲ-ವಿಶ್ವಕೋಶವಾದ ವಿಕಿಪೀಡಿಯಾ ಕುರಿತು ಈ ಕಾರ್ಯಾಗಾರವಿದ್ದಿತ್ತು. ವಿಕಿಪೀಡಿಯಾಕ್ಕೆ ಲೇಖನ ಬರೆಯುವುದು ಹೇಗೆ, ಬರೆದ ಲೇಖನಗಳನ್ನು ಅಪ್‍ಲೋಡ್ ಮಾಡುವ ಬಗೆ ಇತ್ಯಾದಿಗಳ ತರಬೇತಿ ಅಲ್ಲಿ ನಡೆಯಿತು. ರಾಜ್ಯ ಸರ್ಕಾರದ ತಂತ್ರಾಂಶ ಸಮಿತಿ ಸದಸ್ಯ ಹಾಗೂ ಹೆಸರಾಂತ ತಂತ್ರಾಂಶ ತಜ್ಞ ಡಾ.ಯು.ಬಿ.ಪವನಜ ಇದನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಕನ್ನಡ ಟೈಮ್ಸ್ ಎಂಬ ಇ-ಪತ್ರಿಕೆ ಹೊರತರುತ್ತಿರುವ ಚಿನ್ಮಯ ಮತ್ತವರ ಬಳಗ ಹಮ್ಮಿಕೊಂಡಿತ್ತು. ಈ ಕಾರ್ಯಾಗಾರದ ಉದ್ಘಾಟನೆ ಮಾಡಿದ ಲೇಖಕ, ಕನ್ನಡ ಉಪನ್ಯಾಸಕ ಸಫ್ರಾಜ್ ಚಂದ್ರಗುತ್ತಿ ಕನ್ನಡ ಭಾಷೆ ಮತ್ತದರ ಸಂವಹನ ಸಮಸ್ಯೆ ಕುರಿತಂತೆ ಮೌಲಿಕ ಮಾತುಗಳನ್ನಾಡಿದರು. ಆ ಮಾತುಗಳ ಸಂಗ್ರಹ ರೂಪವನ್ನಿಲ್ಲಿ ಕೊಡಲಾಗಿದೆ.

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ‘ಹಣತೆ’ ಕವಿತೆಯ ಕೆಲವು ಸಾಲುಗಳಿವು ;
ಹಣತೆ ಹಚ್ಚುತ್ತೇನೆ ನಾನು
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ.
ಆದರೂ ಹಣತೆ ಹಚ್ಚುತ್ತೇನೆ
ಎಷ್ಟೋ ಹಣತೆಗಳು, ಈ ಬದುಕಿನ ಕಡಲಲ್ಲಿ
ಮುಳುಗಿಹೋಗಿವೆ,
ತಮಸೋಮಾ ಜ್ಯೋತಿರ್ಗಮಯವೆಂಬಂತೆ
……………………………….
ಹಣತೆ ಹಚ್ಚುತ್ತೇನೆ ನಾನು
ನಾ ಹಚ್ಚುವ ಹಣತೆ ಶಾಶ್ವತವೆಂಬ ಭ್ರಮೆ ನನಗಿಲ್ಲ.
ಆದರೂ ಹಚ್ಚುತ್ತೇನೆ ನಾನು ಹಣತೆ ಇರುವಷ್ಟು ಕಾಲ
ನಿನ್ನ ಮುಖ ನಾನು ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಆರಿದ ಮೇಲೆ ನಾನು ಯಾರೋ
ಮತ್ತೆ, ನೀನು ಯಾರೋ………………..
ಯಾವುದೇ ಉದ್ಘಾಟನಾ ಸಮಾರಂಭದಲ್ಲಿ ಉಲ್ಲೇಖಿಸಬಹುದಾದ ಸಾಲುಗಳಿವು. ‘ಭಾಷೆ’ ಯಾವುದೇ ಇರಲಿ ಅದು ಅದ್ಭುತವಾದ ಬೆಳಕು. ಅದರ ಬೆಳಕಿನಲ್ಲಿ ಕೇವಲ ಬಾಹ್ಯರೂಪವನ್ನಷ್ಟೆ ಅಲ್ಲ ಅಂತರಂಗವನ್ನೂ ಕಾಣಬಹುದು. ಮನುಷ್ಯ ಸೃಷ್ಟಿಸಿದ ಅತ್ಯದ್ಭುತ ವಸ್ತು-ಸಂಗತಿಯೊಂದಿದ್ದರೆ ಅದು ಭಾಷೆಯೆಂಬುದು ನನ್ನ ಅಭಿಪ್ರಾಯ. ಭಾಷೆಯಿಂದಾಗಿಯೇ ನಾವು ನಾಗರಿಕರು, ಸಂಸ್ಕøತಿವಂತರೂ ಆಗಲು ಸಾಧ್ಯವಾಗಿದೆ. ನಾಲ್ಕೇ ಮಂದಿ ಮಾತಾಡುತ್ತಿರಲಿ, ನಾಲ್ಕು ಕೋಟಿ ಜನ ಮಾತಾಡುತ್ತಿರಲಿ ಅದು ಭಾಷೆಯೆ. ಯಾವುದೇ ಭಾಷೆಯೂ ಮೇಲಲ್ಲ, ಕೀಳಲ್ಲ. ‘ಭಾರತೀಯ ಭಾಷೆಗಳು ಅತ್ಯಂತ ಸಂಪದ್ಭರಿತ, ಸತ್ವಪೂರ್ಣ ಭಾಷೆಗಳು’ – ಎಂಬ ಮಾತನ್ನು ಸಮಾಜವಾದಿ ಚಿಂತಕ ಲೋಹಿಯಾ ಹೇಳಿದ್ದರು.

ಭಾರತದಲ್ಲಿರುವ ಒಟ್ಟು ಭಾಷೆಗಳ ಸಂಖ್ಯೆ 723. ಇವುಗಳಲ್ಲಿ 179 ಭಾಷೆಗಳು, 544 ಉಪಭಾಷೆಗಳು. ಈ 179ರಲ್ಲಿ ಕನ್ನಡವೂ ಒಂದು. ಈ ಬಗೆಯ ಭಾಷಾ ವೈವಿಧ್ಯತೆ ಭಾರತದ ಪ್ರಮುಖ ಮತ್ತು ಬಹಳ ದೊಡ್ಡ ಸಂಪತ್ತು. ಒಂದು ಜನಾಂಗ, ಒಂದು ಭಾಷೆಯೆಂಬ ವೈವಿಧ್ಯತೆಯೇ ಇಲ್ಲದ ಏಕಾಕೃತಿಯ ದೇಶ ಇದಲ್ಲ. ಜೀವವೈವಿಧ್ಯ ಎಷ್ಟು ಮುಖ್ಯವೊ, ಭಾಷಾವೈವಿಧ್ಯತೆಯೂ ಅಷ್ಟೇ ಮುಖ್ಯವಾದದ್ದು.

ಕನ್ನಡವೂ ಸೇರಿದ ಹಾಗೆ ಭಾರತದ ಪ್ರಾದೇಶಿಕ ಭಾಷೆಗಳು ಹಿಂದೆಂದಿಗಿಂತಲೂ ಇಂದು ವಿಭಿನ್ನವಾದ ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿವೆ. ಮನುಷ್ಯ ಆಗಾಗ ಕಷ್ಟ-ಸುಖ ಅನುಭವಿಸುವ ಹಾಗೆಯೆ ಭಾಷೆಗೂ ಒಂದು ವ್ಯಕ್ತಿತ್ವವಿರುವುದರಿಂದ ಅದೂ ಕೂಡ ಆಗಾಗ ಇಂಥ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ. ಶತಮಾನಗಳಿಂದ ಕಾಲ ಕಾಲಕ್ಕೆ ಕನ್ನಡ ನುಡಿ-ಸಂಸ್ಕøತಿಯು ಇಂತಹ ಹಲವಾರು ಆಕ್ರಮಣಗಳನ್ನು, ಸಾಂಸ್ಕøತಿಕ ಆಘಾತಗಳನ್ನು ಎದುರಿಸಿ ಅದನ್ನೆಲ್ಲ ಅರಗಿಸಿಕೊಂಡು ಶ್ರೀಮಂತವಾಗಿ ಬೆಳೆದಿದೆ. ಈಗಲೂ ಅಷ್ಟೆ – ಆಧುನಿಕತೆ, ಜಾಗತೀಕರಣ ಒಡ್ಡಿರುವ ಸವಾಲುಗಳನ್ನು ಎದುರಿಸಿ ಬೆಳೆದು ನಿಲ್ಲಬೇಕಾಗಿದೆ. ಈ ಸವಾಲು ಭಿನ್ನವಾದದ್ದು, ಮಂತ್ರ ಜಗತ್ತಿನಿಂದ, ಯಂತ್ರ ಜಗತ್ತಿಗೆ ಮನುಕುಲ ಬಂದು ನಿಂತಿರುವಾಗ ಅದು ಇಂತಹ ಸವಾಲುಗಳನ್ನು ಸಹಜವಾಗಿಯೆ ಎದುರಿಸಬೇಕಾಗುತ್ತದೆ. ಜನಭಾಷೆ ಸಾಹಿತ್ಯದ ಭಾಷೆಯಾಗಿ, ವ್ಯಾವಹಾರಿಕ ಭಾಷೆಯಾಗಿ ಕನ್ನಡ ಸಮೃದ್ಧವಾಗಿ ಬೆಳೆದದ್ದು ನಿಜ; ಆದರೆ ಈ ಕಾಲಕ್ಕೆ ಅದು ಶಿಕ್ಷಣ ಮಾಧ್ಯಮದ ಭಾಷೆಯಾಗಿ, ಆಡಳಿತದ ಭಾಷೆಯಾಗಿ ಹಾಗೂ ತಂತ್ರಜ್ಞಾನದ ಭಾಷೆಯಾಗಿ ಸಮಕಾಲೀನವಾಗಬೇಕಾಗುತ್ತದೆ. ಆಯಾ ಕಾಲಘಟ್ಟ ಒಡ್ಡುವ ಪರೀಕ್ಷೆಗಳಿಗೆ ಮುಖಾ ಮುಖಿಯಾಗುತ್ತಾ, ಕಾಲದ ಅಗತ್ಯಗಳಿಗೆ ಸ್ಪಂದಿಸಬೇಕಾಗುತ್ತದೆ. ಕನ್ನಡ ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆಯಿದು. ಕನ್ನಡ – ಪಂಪನ ಕನ್ನಡವಾಗಿ, ಕುಮಾರವ್ಯಾಸನ ಕನ್ನಡವಾಗಿ, ವಚನಕಾರರ-ಕೀರ್ತನಕಾರರ, ಬೇಂದ್ರೆ-ಕುವೆಂಪು ಕಾಲದ ಕನ್ನಡವಾಗಿ ಗೆದ್ದಿದೆ. ಇಂದು ಜಾಗತೀಕರಣ ತಂದಿರುವ ಅವಶ್ಯಕತೆಗಳನ್ನು ಪೂರೈಸುವ ಕನ್ನಡವಾಗಿ ಬೆಳೆಯಬೇಕು. ಭಾಷೆಯೆಂಬುದು ‘ಪರಂಪರೆ’ಯಷ್ಟೇ ಮಹತ್ವವಾದದ್ದು. ಪರಂಪರೆಯ ‘ಧಾರೆ’ ಅಂತರ್‍ನಿಹೀತವಾಗಿ ತನ್ನನ್ನು ಮುರಿದುಕಟ್ಟುತ್ತಾ, ಪುರ್ನರಚಿಸಿಕೊಳ್ಳುತ್ತಾ ಮುಂದುವರೆಯುತ್ತಿರುತ್ತದೆ. ಹಾಗಾಗಿ ಪರಂಪರೆಯೆಂಬುದು ಏಕಕಾಲಕ್ಕೆ ಹಳತೂ ಹೌದು, ಹೊಸತೂ ಹೌದು. ಕುವೆಂಪು ಪರಂಪರೆಯನ್ನು ‘ಅಜ್ಜಿಯ ಒಡವೆ’ಗೆ ಹೋಲಿಸುತ್ತಿದ್ದರು. ಅಜ್ಜಿಯ ನಂತರ ಅವಳು ಉಪಯೋಗಿಸುತ್ತಿದ್ದ ಆಭರಣವನ್ನು ಯಾರೂ ತೆಗೆದೆಸೆಯುವುದಿಲ್ಲ. ತನ್ನ ಕಾಲಕ್ಕೆ ಹೇಗೆ ಬೇಕೊ ಹಾಗೆ ‘ಮೊಮ್ಮಗಳು’ ಅದನ್ನು ಮುರಿದು ಹೊಸ ವಿನ್ಯಾಸಗೊಳಿಸಿ ಧರಿಸುತ್ತಾಳೆ. ಬಂಗಾರ ಎಂಬುದು ಯಾವ ಆಕೃತಿಯಲ್ಲಿದ್ದರೂ ಅದು ಬಂಗಾರವೆ. ‘ಭಾಷೆ’ ಬಂಗಾರದಷ್ಟೆ ಅಥವಾ ಅದಕ್ಕಿಂತ ಅಮೂಲ್ಯವಾದದ್ದು. ಕಾಲಧರ್ಮಕ್ಕೆ ಅನುಗುಣವಾಗಿ ಅದನ್ನು ಕಟ್ಟಿಕೊಳ್ಳುತ್ತಾ ಬೆಳೆಸಬೇಕಾಗುತ್ತದೆ. ಆಧುನಿಕತೆಯ ಹೊಸ ಪರಿಭಾಷೆಗೆ ಅದನ್ನು ಒಗ್ಗಿಸಬೇಕಾಗುತ್ತದೆ. ಆಧುನಿತೆಯೆಂಬುದು ಯಂತ್ರ ಜಗತ್ತಿನ ಜತೆ ಬೆಳೆದುಬಂದ ಪರಿಕಲ್ಪನೆಯಾಗಿರುವುದರಿಂದ, ಇಂದು ಭಾಷೆ ‘ತಂತ್ರಜ್ಞಾನ’ದ ಭಾಷೆಯಾಗಿಯೂ ಬೆಳೆಯಬೇಕಾಗಿದೆ. ಯುವಪೀಳಿಗೆ ಯಂತ್ರಜಗತ್ತಿನೊಂದಿಗೆ ಸಂವಾದಿಸುತ್ತಿರುವುದರಿಂದ ಅವರು ಸಹಜವಾಗಿಯೆ ಇಂಗ್ಲೀಷಿನತ್ತ ಹೊರಳುತ್ತಿದ್ದಾರೆ. ನೆಲದ ಭಾಷೆಗೆ ಪರಕೀಯರಾಗುತ್ತಿದ್ದಾರೆ. ಈ ತೊಡಕನ್ನು ನಿವಾರಿಸಲು ಪ್ರಾದೇಶಿಕ ಭಾಷೆಗಳು ‘ತಂತ್ರಜ್ಞಾನ’ದ ಭಾಷೆಗಳಾಗಿಯೂ ಸಲ್ಲಬೇಕಾಗುತ್ತದೆ. ಆದ್ದರಿಂದ ಮಿಚಿಗನ್ ವಿ.ವಿ.ಯ ಭಾಷಾಶಾಸ್ತ್ರಜ್ಞೆ ಮಾರ್ಗರೇಟ್ ನೂರಿ ‘ತಂತ್ರಜ್ಞಾನ ಎಂದರೆ ಭಾಷೆ ಮತ್ತು ಬಾಂಧವ್ಯ ಬೆಸೆಯುವ ಕೊಂಡಿ’ ಎಂದಿದ್ದಾಳೆ.

ತಮಿಳುನಾಡಿನಲ್ಲಿ 2011ರಲ್ಲಿ ನಡೆದ ವಿಶ್ವ ತಮಿಳು ಸಮ್ಮೇಳನದ ಮೊದಲ ದಿನವೇ 40 ಪ್ರಬಂಧಗಳನ್ನು ‘ತಂತ್ರಾಂಶ ಅಭಿವೃದ್ಧಿ’ಪಡಿಸುವ ಸಂಬಂಧ ಮಂಡಿಸಲಾಯಿತು. ಸಮಾವೇಶದ ಮೂರನೆ ದಿನವೇ ಅವುಗಳ ಅನುಷ್ಠಾನಕ್ಕಾಗಿ ಅಲ್ಲಿನ ಸರ್ಕಾರ ಕ್ರಮವಿಟ್ಟಿತು. ಇಂಥ ‘ಪವಾಡ’ ನಮ್ಮಲ್ಲಿ ಸಂಭವಿಸಲು ಸಾಧ್ಯವೆ? ಅದೇ ವರ್ಷ ತಮಿಳಿನ ಪ್ರೇರಣೆಯೋ ಎಂಬಂತೆ ನಮ್ಮ ಸರ್ಕಾರವು ತನ್ನ ಎಲ್ಲಾ ಇಲಾಖೆಗಳ ಜಾಲತಾಣಗಳು ಎರಡು ತಿಂಗಳಲ್ಲಿ ಸಂಪೂರ್ಣ ಕನ್ನಡೀಕರಣಗೊಳ್ಳಬೇಕು ಎಂಬ ಆದೇಶ ಹೊರಡಿಸಿತು. ಪರಿಣಾಮ ಕಣ್ಣ ಮುಂದಿದೆ. ನಮ್ಮ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಅನುಷ್ಠಾನ ಶೇಕಡಾ 7ರಷ್ಟು ಮಾತ್ರವಿದೆ. ಕನ್ನಡ ಯೂನಿಕೋಡ್ ಸಹಾ ತೀವ್ರ ಟೀಕೆಗೊಳಗಾಗುವಷ್ಟು ಅಪ್ರಮುದ್ಧ ಸ್ಥಿತಿಯಲ್ಲಿದೆ.

‘ಕನ್ನಡ ವೈಜ್ಞಾನಿಕ ಭಾಷೆ, ಇಂಗ್ಲೀಷ್ ಅವೈಜ್ಞಾನಿಕ ಭಾಷೆ’ ಎಂದು ಬರ್ನಾಡ್‍ಶಾ ಹೇಳಿದ್ದರು. ಹಾಗಿದ್ದರೆ ಅವೈಜ್ಞಾನಿಕ ಭಾಷೆಯೊಂದು ಯಂತ್ರಭಾಷೆಯಾಗಿ ತಂತ್ರಜ್ಞಾನದ ಭಾಷೆಯಾಗಿ ಬೆಳೆದು ನಿಲ್ಲಲು ಸಾಧ್ಯವಾಗುವುದಾದರೆ ಅದು ಕನ್ನಡದ ಸಂದರ್ಭದಲ್ಲಿ ಏಕಾಗುತ್ತಿಲ್ಲ? ಆಗದಿದ್ದರೆ ಇದಕ್ಕಿರುವ ತೊಡಕುಗಳಾವುವು? ಯಾವತ್ತೂ ಭಾಷೆಯೆಂಬುದು ಸರ್ಕಾರ ಅಥವಾ ಸರ್ಕಾರಿ ಅಧಿಕಾರಿಗಳಿಂದ ಬೆಳೆಯುವುದಿಲ್ಲ. ಅದು ಕವಿ-ಕಲಾವಿದರಿಂದ ಇನ್ನಷ್ಟು ಅಂತಃಶಕ್ತಿ ಪಡೆದುಕೊಳ್ಳಬಹುದು. ಆದರೆ ಅಂತಿಮವಾಗಿ ಭಾಷೆ ಬೆಳೆಯುವುದು, ಉಳಿಯುವುದು ಜನಸಮುದಾಯದ ನಡುವೆ. ವಿಕಿಪೀಡಿಯಾ ಕೂಡ ಜನರ ಸ್ವತ್ತು. ಇದೊಂದು ಸಮುದಾಯದ ಆಸ್ತಿ. ಅದಕ್ಕಾಗಿ ವ್ಯವಸ್ಥೆ ಇಷ್ಟು ಮುಕ್ತವಾಗಿದೆ.

ಅಂತಿಮವಾಗಿ ನನ್ನ ಮಾತುಗಳನ್ನು ಒಂದು ರೂಪಕವನ್ನು ವಿವರಿಸುವ ಮೂಲಕ ಮುಕ್ತಾಯ ಗೊಳಿಸುತ್ತೇನೆ. ನಮ್ಮ ಭಾರತೀಯ ಕಾವ್ಯಪರಂಪರೆಯಲ್ಲಿ ವಾತಾಪಿ – ಇಲ್ವಲ ಎಂಬ ರಾಕ್ಷಸ ಸಹೋದರರ ಉಲ್ಲೇಖವಿದೆ. ಈ ಇಬ್ಬರು ದಾರಿಯಲ್ಲಿ ಬರುವ ಬ್ರಾಹ್ಮಣಾದಿ ಯತಿಪುರುಷರನ್ನು ತಮ್ಮ ಮನೆಯ ಆತಿಥ್ಯ ಸ್ವೀಕರಿಸುವಂತೆ ಪುಸಲಾಯಿಸಿ ಕರೆದೊಯ್ಯುತ್ತಿದ್ದರು. ವಾತಾಪಿ ಆಡಿನ ರೂಪದಲ್ಲಿರುತ್ತಿದ್ದ. ಇಲ್ವಲ ಅದನ್ನು ಕಡಿದು ಬಾಡಿನೂಟ ಬಡಿಸುತ್ತಿದ್ದ. ಆಹಾರವಾಗಿ ವಾತಾಪಿ ಅತಿಥಿಯ ಹೊಟ್ಟೆ ಸೇರುತ್ತಿದ್ದ. ಇಲ್ವಲ ‘ಹೊರಗೆ ಬಾ ವಾತಾಪಿ’ ಎಂದ ಕೂಡಲೆ ವಾತಾಪಿ, ಅತಿಥಿಯ ಹೊಟ್ಟೆ ಸೀಳಿಕೊಂಡು ಹೊರಬರುತ್ತಿದ್ದ. ಸತ್ತು ಬಿದ್ದ ಅತಿಥಿಯನ್ನು ಇಬ್ಬರೂ ಸೇರಿ ಭಕ್ಷಿಸುತ್ತಿದ್ದರು. ಒಮ್ಮೆ ಅಗಸ್ತ್ಯ ಮುನಿ, ಇವರ ಅತಿಥಿಯಾದ. ಆಹಾರ ಸ್ವೀಕರಿಸಿ ಇಲ್ವಲ ತನ್ನ ಸಹೋದರನನ್ನು ಹೊರಕರೆಯುವ ಮೊದಲೇ ಅಗಸ್ತ್ಯರು ತಮ್ಮ ಉದರದ ಮೇಲೆ ಕೈಯಿಟ್ಟು ‘ವಾತಾಪಿ ಜೀರ್ಣೋಭವ’ ಎಂದರು. ವಾತಾಪಿ ಜೀರ್ಣವಾಗಿ ಹೋದ. ಅವನನ್ನು ಜೀರ್ಣಿಸಿಕೊಂಡ ಅಗಸ್ತ್ಯರು ಹೊಸ ಚೈತನ್ಯ ಪಡೆದರು. ಇದು ಕತೆ. ಭಾಷೆ ಕೂಡಾ ಹೀಗೆಯೆ ಜೀರ್ಣಿಸಿಕೊಳ್ಳಬೇಕು, ಇಲ್ಲವೆ ಸಂಸ್ಕøತ, ಪ್ರಾಕೃತ, ಹೀಬ್ರೂ ಭಾಷೆಗಳಂತೆ ಮರೆಯಾಗಬೇಕು.
ಕನ್ನಡ ಆಧುನಿಕತೆಯನ್ನು ಜೀರ್ಣಿಸಿಕೊಂಡೆ ಮುನ್ನೆಡೆಯಬೇಕಾಗಿದೆ, ಬೆಳೆಯಬೇಕಾಗಿದೆ, ಬೇರೆ ದಾರಿಯಿಲ್ಲ.
– ಡಾ.ಸಫ್ರಾಜ್ ಚಂದ್ರಗುತ್ತಿ

Saturday, ‎March ‎1, ‎2014,

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.