ಕವಿಸಮಯ

ನವಿರಾದ ಭಾವನೆಯೊಂದು ಮೂಡಿದ್ದು ಆಗಲೇ

  1. ನಾನು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರದ ಹೆಜ್ಜಾಜಿ ಎಂಬ ಸುಗ್ರಾಮದಲ್ಲಿ ೧೫ ಆಗಸ್ಟ್ ೧೯೯೪ರಂದು (23 ವರ್ಷಗಳು)

ಒಂದು ಬೇಸಾಯದ ಕುಟುಂಬದಲ್ಲಿ ಜನಿಸಿದ ನನಗೆ ಸಂಗೀತದಲ್ಲಿ ಸಾಹಿತ್ಯದಲ್ಲಿ ಚಿಕ್ಕಂದಿನಿಂದಲೂ ಆಸಕ್ತಿಯಿತ್ತು. ನಾನು ಚಿಕ್ಕವಳಿರುವಾಗ ಮನೆಯಲ್ಲಿ ಅಮ್ಮ ಹೇಳಿಕೊಡುತ್ತಿದ್ದ ದೇವರ ನಾಮಗಳು, ಪದ್ಯದ ಸಾಲುಗಳು ಮನಸ್ಸಿಗೆ ನಾಟುತ್ತಿದ್ದವು. ನಾನು ಹಾಡು ಬರೆಯಬೇಕು, ಕವನಗಳನ್ನು ಬರೆಯಬೇಕೆಂಬ ನವಿರಾದ ಭಾವನೆಯೊಂದು ಮೂಡಿದ್ದು ಆಗಲೇ.

ಪ್ರಾಥಮಿಕ ವ್ಯಾಸಂಗದಲ್ಲಿ ನನ್ನ ನೆಚ್ಚಿನ ಗುರುಗಳಾದ ಶಿವರುದ್ರಪ್ಪನವರು ಮಕ್ಕಳಿಗೆ ರಾಗಬದ್ಧವಾಗಿ ಮಕ್ಕಳ ಹಾಡುಗಳು, ಭಾವಗೀತೆಗಳು, ಜನಪದ ಗೀತೆಗಳನ್ನು ಹೇಳಿಕೊಡುತ್ತಿದ್ದರೆ ನನ್ನ ಮನದಲ್ಲಿ ನಾನು ಸಹ ಈ ರೀತಿಯ ಸಾಲುಗಳನ್ನು ಕಟ್ಟಿ ಹಾಡು ಬರೆಯಬೇಕೆಂದು ಆಸೆಯಾಗುತ್ತಿತ್ತು. “ಮೂರು ದಿನದ ಸಂತೆಯ ಮುಗಿಸಿ ಸೇರುವರೆಲ್ಲಾ ಈ ಮಣ್ಣ” ಎಂಬ ಸಾಲುಗಳು ಮನಸ್ಸಿಗೆ ಆತ್ಮೀಯ ಎನಿಸುತ್ತಿದ್ದವು.

ಪ್ರೌಢಶಾಲಾ ವ್ಯಾಸಂಗಕ್ಕೆ ಬಂದ ನಂತರ “ಎಷ್ಟು ಚೆಂದ ಅಡಿಕೆ ಮರ” ಎಂದು ಬರೆದದ್ದು ನನ್ನ ಮೊದಲ ಕವನ., ನಂತರ ಶುರುವಾಯಿತು ಕವನದೊಡಗಿನ ಪಯಣ. ಆಗಿನ ಎಳೆ ಮನಸ್ಸಿನ ಭಾವನೆಗಳಿಗೆ, ಅನಿಸಿಕೆಗಳಿಗೆ, ಕನಸುಗಳಿಗೆ ಅಕ್ಷರ ರೂಪ ಕೊಡುತ್ತಾ ಹೋದಂತೆಲ್ಲಾ ಒಂದೊಂದು ಕವನ ಸೃಷ್ಟಿಯಾಗುತ್ತಿತ್ತು.

ಆದರೆ ಪ್ರೌಢಶಾಲೆಯಲ್ಲಿ ಬರೆದ ಕವನಗಳು ಪುಸ್ತಕವಾಗುವ ಹೊತ್ತಿಗೆ ನಾನು ಹಳ್ಳಿ ಬಿಟ್ಟು ಬೆಂಗಳೂರು ಸೇರಿ ಪಿಯು ಮುಗಿಸಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವಾಣಿಜ್ಯೇತರ ವಿದ್ಯಾರ್ಥಿಯಾಗಿದ್ದೆ. “ನೆನಪಿನಂಗಳದಲ್ಲಿ ಸ್ನೇಹದಪ್ಪುಗೆ” ಎಂಬುದು ೨೦೧೩ರಲ್ಲಿ ಪ್ರಕಟಗೊಂಡ ನನ್ನ ಮೊದಲ ಕವನ ಸಂಕಲನ.

ಕಾಮರ್ಸ್ ಓದುತ್ತಿದ್ದ ನಾನು ಕನ್ನಡ ಸಾಹಿತ್ಯದ ಆಸಕ್ತಿಯಿಂದಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದೇನೆ.

ನಂತರದ ದಿನಗಳಲ್ಲಿ ಬರೆದ ಕವನಗಳನ್ನು ಪ್ರಕಟಿಸುವ ಗೋಜಿಗೆ ಹೋಗಲಿಲ್ಲ “ಶ್ರೀ ಲಲಿತ” ಎಂಬುದು ನನ್ನ ಕಾವ್ಯನಾಮ. ಬರೆದು ಎತ್ತಿಟ್ಟ ಸರಿ ಸುಮಾರು ನೂರಕ್ಕೂ ಹೆಚ್ಚು ಕವನಗಳುಂಟು ಕೆಲವೊಂದು ಕಥೆಗಳನ್ನು ಬರೆದಿದ್ದೇನೆ. ಕಥೆ,ಕವನ, ಸಂಗೀತ, ಸಾಹಿತ್ಯ ಇವಿಷ್ಟೂ ನನಗೆ ತೀರ ಹುಚ್ಚಿಡಿಸುವಷ್ಟು ಅಚ್ಚುಮೆಚ್ಚು.

ಪ್ರಸ್ತುತ ಚಿನ್ಮಯ ಎಂ ರಾವ್ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದೇನೆ.

-ರಶ್ಮಿ ಹೆಜ್ಜಾಜಿ

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.