ಅಸಾಮಾನ್ಯರು

ಮಾತೃಹೃದಯದ ಐಪಿಎಸ್ ಅಧಿಕಾರಿ ಕೆ. ರಾಮರಾಜನ್

-ಸೋಮು ರೆಡ್ಡಿ
ಹುಬ್ಬಳ್ಳಿ: ರಾಜ್ಯದಲ್ಲಿ ಕೊರೋನಾದ ಎರಡನೇ ಅಲೆಯ ಹಾವಳಿ ಪೊಲೀಸ್ ಇಲಾಖೆಗೂ ಬಿಸಿ ಮುಟ್ಟಿಸಿದಂತಿದೆ.  ಸ್ವತಃ ಪೊಲೀಸ್ ಇಲಾಖೆಯೇ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗಾಗಿ ರಾಜ್ಯದ ಹಲವು ಕಡೆ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯುವ ಮೂಲಕ ಪೊಲೀಸರಲ್ಲಿ ಆತ್ಮಸ್ಥೈರ್ಯ ಮೂಡವಂತಹ ಮಹತ್ತರ ಕಾರ್ಯಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ಘಟಕದಲ್ಲಿಯೂ ನಗರದ ಗೋಕುಲ ರಸ್ತೆಯ ದೇಶಪಾಂಡೆ ಫೌಂಡೇಷನ್‌ನ ಕಟ್ಟಡದಲ್ಲಿ ಮೂವತ್ತು ಹಾಸಿಗೆವುಳ್ಳ ಕೋವಿಡ್ ಕೇರ್ ಕೇಂದ್ರವನ್ನು ಸ್ಥಾಪಿಸಲಾಗಿ ಕೊರೋನಾ ಸೋಂಕಿತ ಪೊಲೀಸರು ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ. ರಾಮರಾಜನ್ ಅವರು ಹಗಲಿರಳನ್ನು ಲೆಕ್ಕಿಸಿದೇ ತಮ್ಮ ಕರ್ತವ್ಯದ ಒತ್ತಡದ ಮಧ್ಯೆಯೂ ಇಲಾಖೆಯ ಕೆಳ ಹಂತದ ಸಿಬ್ಬಂದಿವರ್ಗದ ಮೇಲೆ ವಿಶೇಷ ನಿಗಾವಹಿಸಿ ಅವರಿಗೆ ಕೋವಿಡ್ ಸೋಂಕು ಹರಡದಂತೆ ಹಲವಾರು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಪ್ರಶಂಸನೀಯ ಕಾರ್ಯ ಸಾಧಿಸಿದ್ದಾರೆ.
ಠಾಣೆಗಳಲ್ಲಿ ಸ್ಯಾನಿಟೈಸ್, ಟೆಂಪ್ರೇಚರ್ ಟೆಸ್ಟ್, ಥರ್ಮಲ್ ಸ್ಕ್ಯಾನಿಂಗ್ ಇನ್ನಿತರ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮಾಸ್ಕ್, ಹ್ಯಾಂಡ್‌ಗ್ಲೋಸ್, ಪಾಕೇಟ್ ಸ್ಯಾನಿಟೈಸರ್, ಹ್ಯಾಂಡ್ ವಾಶ್‌ಗಳನ್ನು ವಿತರಿಸುವದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಂಡಿರುತ್ತಾರೆ. ರೋಗದ ಲಕ್ಷಣಗಳು, ಅದಕ್ಕಿರುವ ಪರಿಹಾರೋಪಾಯಗಳು, ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ ಪ್ರತಿ ಠಾಣೆಗೂ ತಿಳಿಸಿ ಜಾಗೃತಿ ಮೂಡಿಸಿರುತ್ತಾರೆ. ಕೊರೋನಾ ಲಸಿಕೆ ಹಾಕಿಸುವುದು, ಸೋಂಕಿನ ಪರೀಕ್ಷೆಗೆ ಒಳಪಡಿಸುವುದು, ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸುವುದು ಹೀಗೆ ಹಲವಾರು ವಿಧಗಳಲ್ಲಿ ಸಿಬ್ಬಂದಿಯ ಆರೋಗ್ಯ ಸುರಕ್ಷಿತೆಯ ಬಗ್ಗೆ ಕಾಳಜಿ ವಹಿಸಿದ್ದು ಪೊಲೀಸರ ನೆಮ್ಮದಿಗೆ ಕಾರಣವಾಗಿದೆ. ಮೇಲಾಗಿ ಪೊಲೀಸ್ ಕುಟುಂಬಗಳ ಸದಸ್ಯರಗಳಿಗೂ ಕೋವಿಡ್‌ಗೆ ಸಂಬಂಧಿಸಿದಂತೆ ಎಲ್ಲ ರೀತಿಯ ನೆರವು ನೀಡಿದ್ದು ಗಮನಾರ್ಹ ಸಂಗತಿ.
ಒಬ್ಬ ಐಪಿಎಸ್ ಅಧಿಕಾರಿ ಮತ್ತು ಪೊಲೀಸ್ ಕಾನ್ಸ್‌ಟೇಬಲ್‌ಗಳ ಮಧ್ಯೆ ಹತ್ತಾರು ಶ್ರೇಣಿಗಳ ವ್ಯತ್ಯಾಸವಿರುತ್ತದೆ. ಯಾರೊಬ್ಬರೂ ನೇರಾನೇರವಾಗಿ ಮಾತನಾಡುವುದಿಲ್ಲ. ಆದರೆ ಕೆ. ರಾಮರಾಜನ್ ಅವರು ತಾವೇ ಖುದ್ದಾಗಿ ಸೋಂಕಿತ ಪೊಲೀಸರ ಮೂಬೈಲ್‌ಗೆ ಕರೆ ಮಾಡಿ ಕ್ಷೇಮ ವಿಚಾರಿಸಿ ಅಭಯ ನೀಡಿರುತ್ತಾರೆ. ಕುಂದು ಕೊರತೆಗಳಿಗಾಗಿ ಯಾವ ನಿರ್ಭಂದವೂ ಇಲ್ಲದಂತೆ ತಮ್ಮ ಮೂಬೈಲ್‌ಗೆ ಕರೆ ಮಾಡಲು ಪೊಲೀಸರಿಗೆ ವೈರ್‌ಲೆಸ್ ಮೂಲಕ ವಿನಂತಿಸಿರುತ್ತಾರೆ. ಇದಷ್ಟೇ ಅಲ್ಲದೇ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡುವ, ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಹೀಗೆ ವಿವಿಧ ಪ್ರತಿಭೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅವರು ಪೊಲೀಸರೊಂದಿಗೆ ಮಾನಸಿಕ ಸಾಮಿಪ್ಯ ಸಾಧಿಸಿಕೊಂಡಿದ್ದಾರೆ. ಹೀಗಾಗಿ ಸಿಬ್ಬಂದಿಗಳಿಗೆ ಇವರೆಂದರೆ ಅಚ್ಚುಮೆಚ್ಚು. ತಮ್ಮ ಸಾವು-ನೋವು, ಹೆಂಡತಿ-ಮಕ್ಕಳು ಲೆಕ್ಕಿಸಿದೇ ಜನಸೇವೆಗೆ ಕಾರ್ಯಮಗ್ನರಾಗುವ ಪೊಲೀಸರಿಗೆ ಮೇಲಾಧಿಕಾರಿಯಾಗಿ ಇಂತಹ ಮಾತೃಹೃದಯದ ಡಿ.ಸಿ.ಪಿ ಕೆ. ರಾಮರಾಜನ್ ಇರುವದರಿಂದ ಅವರಲ್ಲಿ ಮನೋಬಲ, ಆತ್ಮವಿಶ್ವಾಸ ಕಾರ್ಯಕ್ಷಮತೆ ಇಮ್ಮಡಿಗೊಂಡು ಧೈರ್ಯದಿಂದ ಕರ್ತವ್ಯ ನಿರ್ವಹಿಸುವಲ್ಲಿ ಸಂಶಯವಿಲ್ಲ.

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker