ಓಂಕಾರಸ್ವರೂಪ ಗಣಪ

ವಿನಾಯಕ ಚತುರ್ಥಿಯು ಭಾರತೀಯ ಹಬ್ಬಹರಿದಿನಳಲ್ಲಿ ಅತ್ಯಂತ ಪ್ರಮುಖವಾದ, ಪ್ರಸಿದ್ಧವಾದ ಹಾಗು ಪ್ರಾಚೀನವಾದ ಹಬ್ಬ. ಈ ಹಬ್ಬವನ್ನು ಭಾರತದಾದ್ಯಂತ ಹಾಗು ವಿದೇಶಗಳಲ್ಲಿಯೂ ಗಣಪನ ಭಕ್ತರು ವಿಜೃಂಬಣೆಯಿಂದ ಆಚರಿಸುತ್ತಾರೆ. ಗಣಪತಿಯು ವಿಘ್ನಗಳ ಅಧಿಪತಿ. ಆದ್ದರಿಂದಲೇ ಇವನನ್ನು ವಿಘ್ನನಾಯಕ, ವಿಘ್ನನಾಶಕ, ವಿಘ್ನರಾಜ, ವಿಘ್ನಹಾರಿ, ವಿನಾಯಕ, ವಿಘ್ನೇಶ್ವರ ಎಂದು ಬಗೆಬಗೆಯಾಗಿ ಬಣ್ಣಿಸಲಾಗಿದೆ.

ಭಾರತೀಯ ಹಿಂದು ಸಂಪ್ರದಾಯದಲ್ಲಿ ಸಗುಣ ದೇವದೇವತೆಗಳನ್ನು ರೂಪ (ಆಕಾರ), ನಾಮ(ಹೆಸರು) ಹಾಗು ಗುಣ (ಗುಣಲಕ್ಷಣ)ಗಳೆಂಬ ಮೂರು ರೀತಿಯಾಗಿ ಆರಾಧಿಸಲಾಗಿದೆ. ಗಣಪತಿಯು ಆನೆಯಮುಖ ಮನುಷ್ಯ ಶರೀರವನ್ನುಳ್ಳವನಾಗಿದ್ದರಿಂದ ವಿಶಿಷ್ಟನಾಗಿದ್ದಾನೆ. ಮೂಷಕ(ಇಲಿ) ಇವನ ವಾಹನ. ಗಣಪತಿಯನ್ನು ಪೂಜಿಸುವ ಪದ್ಧತಿ ಅತಿಸರಳ ಹಾಗು ವಿವಿಧ ಸಾಂಪ್ರದಾಯಿಕ ವಿಶೇಷಗಳನ್ನು ಒಳಗೊಂಡಿದೆ.

ಗಣೇಶ ಹಬ್ಬವನ್ನು ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ಆಚರಿಸುತ್ತಾರೆ. ಈ ದಿನದಂದು ಶಿವಪಾರ್ವತಿಯರ ಪುತ್ರನಾದ ವಿನಾಕನು ತನ್ನ ಭಕ್ತರ ಅಭೀಷ್ಟಗಳನ್ನು ಪೂರೈಸುತ್ತಾನೆಂಬ ನಂಬಿಕೆಯಿದೆ. ಈ ದಿನದಂದು ಬೆಳಗಿನ ಜಾವ ಸ್ನಾನ ಮಾಡಿ, ಪೂಜಾಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸುತ್ತಾರೆ. ಗಣಪತಿಗೆ ಕೆಂಪುಬಣ್ಣ ಅತ್ಯಂತ ಪ್ರಿಯವಾದದು ಹೀಗಾಗಿ ಕೆಂಪು ದಾಸವಾಳ, ಕೆಂಪು ಚಂದನ ಇತ್ಯಾದಿಗಳನ್ನು ಪೂಜೆಯಲ್ಲಿ ಹೆಚ್ಚು ಬಳಸುತ್ತಾರೆ. ದೂರ್ವೆಯೂ ಕೂಡ ಗಣಪನಿಗೆ ಪ್ರಿಯವಾದುದು. ಲಂಬೋದರನಿಗೆ ಮೋದಕ ಅತ್ಯಂತ ಪ್ರಿಯವಾದ ತಿನಿಸು. ಅವರವರ ಮನೆಯ ಪದ್ಧತಿಯ ಪ್ರಕಾರ ಮಣ್ಣಿನ ಗಣಪತಿ ಅಥವಾ ಬೆಳ್ಳಿ ಗಣಪತಿ ವಿಗ್ರಹ ಇಟ್ಟು ಅವನಿಗೆ ಪ್ರಿಯವಾದ ಪೂಜಾಸಾಮಗ್ರಿಗಳಿಂದ ಪೂಜೆ ಮಾಡುತ್ತಾರೆ. ಹಬ್ಬ ಆದ ಮೇಲೆ ಒಂದು ಒಳ್ಳೆಯ ದಿನ ನೋಡಿ ದೇವರನ್ನು ವಿಸರ್ಜನೆ ಮಾಡುತ್ತಾರೆ. ಕೆಲವೊಮ್ಮೆ ಹಬ್ಬದ ದಿನವೇ ಮಾಡಬಹುದು, ಕೆಲವೊಮ್ಮೆ ಹೆಚ್ಚು ದಿನಗಳು ದೇವರನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಚತುರ್ಥಿಯಂದು ಆರಂಭಿಸಿ ಅನಂತಚತುರ್ದಶಿಯ ದಿನದಂದು ಅಂದರೆ ೧೦ದಿನಗಳು ಉತ್ಸವವನ್ನಾಚರಿಸಿ ೧೧ನೇ ದಿನ ವಿಸರ್ಜನೆಮಾಡುವ ಸಂಪ್ರದಾಯವು ಹೆಚ್ಚು ಪ್ರಚಲಿತದಲ್ಲಿದೆ. ಮಣ್ಣಿನ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡುತ್ತಾರೆ. ಈ ದಿನ ಚಂದ್ರನನ್ನು ನೋಡಬಾರದೆಂಬ ಪ್ರತೀತಿಯಿದೆ. ನೋಡಿದರೆ ಮಿಥ್ಯಾಪವಾದ ಬರುತ್ತದೆಯೆಂದು ಹೇಳಲಾಗಿದೆ. ಈಶ್ವರನ ವಾಹನ ನಂದಿಯಿಂದ ಹೇಳಲ್ಪಟ್ಟ ಕತೆಯಂತೆ ಶ್ರೀಕೃಷ್ಣನು ಈ ದಿನದಂದು ಚಂದ್ರನನ್ನು ನೋಡಿದಕಾರಣ ಸ್ಯಮಂತಕಮಣಿಯನ್ನು ಕದ್ದ ಅಪವಾದವನ್ನು ಹೊರಬೇಕಾಗುತ್ತದೆ. ನಂತರ ಈ ದಿನದದಂದು ಉಪವಾಸಮಾಡಿ ಗಣಪತಿಯನ್ನು ಪೂಜಿಸಿದಮೇಲೆ ಶ್ರೀಕೃಷ್ಣನು ಅಪವಾದದಿಂದ ಬಿಡುಗಡೆಯನ್ನು ಹೊಂದುತ್ತಾನೆ. ನಾವೇನಾದರು ಈ ದಿನದಂದು ಅಕಸ್ಮಾತ್ ಚಂದ್ರನನ್ನು ನೋಡಿದರೆ ಸ್ಯಮಂತಕೊಪಾಖ್ಯಾನ ಕಥೆಯನ್ನು ಪಠಿಸಿದರೆ ಅಥವಾ ಕೇಳಿದರೆ ದೋಷ ಪರಿಹಾರವಾಗುತ್ತಯೆಂದು ಸುಂದರ ದೃಷ್ಟಾಂತದಿಂದ ಹೇಳಲಾಗಿದೆ.

ವೇದಗಳಲ್ಲಿ ಗಣೇಶನನ್ನು ವಿಶೇಷವಾಗಿ ಬಣ್ಣಿಸಲಾಗಿದೆ. ವೇದಗಳು ಗಣಪತಿಯನ್ನು ಒಂದು ತತ್ವ ಎಂದು ಗಣಪತಿತತ್ವವನ್ನು ವಿವರಿಸಿ ಹೇಳಿವೆ. ಋಗ್ವೇದದಲ್ಲಿ ಗಣಪತಿಯನ್ನು ’ಬ್ರಹ್ಮಣಸ್ಪತಿ’ ಎಂದು ಕರೆಯಲಾಗಿದೆ. ಅಥರ್ವ ವೇದದ ಗಣಪತಿ ಅಥರ್ವಶೀರಿಷಮಂತ್ರದಲ್ಲಿ ಗಣಪತಿಯು ಎಲ್ಲಾಜೀವಿಗಳ ಮೂಲಾಧಾರನಾಗಿದ್ದಾನೆ ಹಾಗು ಉಳಿದೆಲ್ಲಾದೇವತೆಗಳ ಸ್ವರೂಪವಾಗಿದ್ದಾನೆಂದು ಬಣ್ಣಿಸಲಾಗಿದೆ.ಈ ಮಂತ್ರದಲ್ಲಿ ” ಗಣಪತಿಯೇ,ನೀನು ಬ್ರಹ್ಮ ,ವಿಷ್ಣು ರುದ್ರ (ತ್ರಿಮೂರ್ತಿ)ಸ್ವರೂಪನಾಗಿದ್ದೀಯೆ,ನೀನು ಇಂದ್ರ, ನೀನು ಅಗ್ನಿ ವಾಯು ಹಾಗು ಸೂರ್ಯ ನೀನು ಚಂದ್ರಮ ನೀನು ಪೃಥ್ವಿ ಅಂತರಿಕ್ಷ ಹಾಗು ಸ್ವರ್ಗಲೋಕ ಹಾಗು ಓಂಕಾರಸ್ವರೂಪನಾಗಿದ್ದೀಯೆ” ಎಂದು ಗಣಪತಿಯ ವ್ಯಾಪಕತೆಯನ್ನೂ ನಿರ್ಗುಣಾಕಾರವನ್ನೂ ವೇದಾಂತವಾಕ್ಯಗಳಲ್ಲಿ ಈ ಉಪನಿಷತ್ತು ಸಾರಿದೆ.

ವಿನಾಯಕನೆಂದರೆ ವಿಘ್ನಗಳನ್ನು ನಿವಾರಿಸುವವನು ಎಂದು ಅರ್ಥ. ವಿನಾಯಕನು ನಮ್ಮ ಲೌಕಿಕ ಹಾಗು ಪಾರಮಾರ್ಥಿಕ ಧ್ಯೇಯದ ಹಾದಿಯಲ್ಲಿ ಬರುವಂತಹ ಅಡೆತಡೆಗಳನ್ನು ತೊಂದರೆಗಳನ್ನು ನಿವಾರಿಸಿ ನಮ್ಮ ಪ್ರಯತ್ನದಲ್ಲಿ ಯಶಸ್ಸನ್ನು ದಯಪಾಲಿಸುವ ಮಂಗಳಮೂರ್ತಿಯಾಗಿದ್ದಾನೆ. ಹೀಗಾಗಿ ಗಣಪತಿಯನ್ನು ವಿದ್ಯಾಧಿದೇವತೆಯೆಂದೂ ಬುದ್ಧಿವಂತಿಕೆ, ಅಭ್ಯುದಯ, ಸಂಪತ್ತು, ಶಾಂತಿ, ನೆಮ್ಮದಿ ಶ್ರೇಯಸ್ಸನ್ನು ದಯಪಾಲಿಸುವವನೆಂದು ಪೂಜಿಸಲಾಗುತ್ತದೆ. ಯಾವುದೇ ಕಾರ್ಯದ ಆರಂಭದಲ್ಲಿ ಸಾಂಪ್ರದಾಯಿಕವಾಗಿ ಗಣಪತಿಯನ್ನು ಆಹ್ವಾನಿಸಿ ಪೂಜಿಸಲಾಗುತ್ತದೆ.

ಭಾರತೀಯ ಸಂಸ್ಕೃತಿಯು ಅತ್ಯಂತ ಪ್ರಚೀನಕಾಲದಿಂದ ಶ್ರೇಷ್ಠವಾದ ಗಣಪತಿಯ ಸ್ವರೂಪವನ್ನು ಗಣಪತಿಯ ತತ್ವವನ್ನು ಉಳಿಸಿಕೊಂಡು ಬೆಳಸಿಕೊಂಡು ಬಂದಿದೆ. ಗಣಪತಿಯ ಸ್ವರೂಪವನ್ನು ತತ್ವವನ್ನು ನೆನೆಪಿಸಿಕೊಳ್ಳುವದಕ್ಕಾಗಿಯೇ ಈ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ತನ್ಮೂಲಕ ಭಗವಂತನಲ್ಲಿಯ ನಂಬಿಕೆ ನಿಷ್ಠೆ ಭಕ್ತಿ ವಿಶ್ವಾಸವನ್ನು ದೃಢಪಡಿಸಲಾಗುತ್ತದೆ. ನೋವು ದುಃಖ ಹಾಗು ಹುಟ್ಟುಸಾವಿನ ಬಂಧನದಿಂದ ಮುಕ್ತವಾಗಿ ಸತ್ಯ ಜ್ಞಾನದ ಹಾಗು ಆನಂದದ ಅನುಭವವನ್ನು ಗಣಪತಿಯ ಅನುಗ್ರಹದಿಂದ ಮಾತ್ರಾ ಪಡೆಯಲು ಸಾಧ್ಯ.
—————
ಜೀವೋತ್ತಮ ಎಚ್ ರಾವ್, ಮೈಸೂರು

Exit mobile version