ಅಂತರ್ ಬೆಳೆಯಾಗಿ ಅನಾನಸ್ ಬೆಳಸುವ ಬಸಪ್ಪ

ಕೆಲವರಿಗೆ ಕೃಷಿಯಲ್ಲಿ ಅಪಾರ ಆಸಕ್ತಿ ಮತ್ತು ತಾಂತ್ರಿಕ ಜ್ಞಾನ ಅಪಾರವಾಗಿರುತ್ತದೆ. ಆದರೆ ಕಾರ್ಯೋನ್ಮುಖಬಾಗಲು ಸ್ವಂತ ಹೊಲ ಇರುವುದಿಲ್ಲ. ಬಾಡಿಗೆ ಆಧಾರದಲ್ಲಿ ಜಮೀನು ನಡೆಸಲು ಸಹ ಬಂಡುವಾಳ ಇರುವುದಿಲ್ಲ. ಆದರೂ ಸಹ ತಮ್ಮ ಜ್ಞಾನ ಮತ್ತು ಅನುಭವವನ್ನು ಬೇರೆಯವರಿಗೆ ಉಣಬಡಿಸಿ ಅತ್ಯಧಿಕ ಸಂಪಾದನೆಗೆ ದಾರಿ ತೋರಿ ಜೀವನ ನಿರ್ವಹಿಸುವವವರು ಹಲವರು.

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬಸಪ್ಪ ಅನಾನಸ್ ಕೃಷಿಯಲ್ಲಿ ಎತ್ತಿದ ಕೈ. ಬನವಾಸಿಯಿಂದ ಮಂಡ್ಯದ ವರೆಗೆ ಹಲವು ಜಮೀನು ಮಾಲಿಕರಿಗೆ ಅನಾನಸ್ ಕೃಷಿ ನಡೆಸಿಕೊಟ್ಟು ಜೇಬು ತುಂಬಿಸಿದ್ದಾರೆ. ತಾವು ಮಾತ್ರ ಹೊಟ್ಟೆ ಪಾಡಿಗೆ ಕೂಲಿ ಮಾಡಿ ಲಾರಿ ಗಟ್ಟಲೆ ಅನಾನಸ್ ತೂಕ ಮಾಡಿ ಕಳುಹಿಸಿದ್ದಾರೆ. ಕೇವಲ ಅನಾನಸ್ ಗಿಡವನ್ನು ಬೆಳೆಯುವ ಬದಲು ಅಡಕೆ, ತೆಂಗು, ರಬ್ಬರ್, ಪೊಪ್ಪಾಯಿ, ನೆಲ್ಲಿ, ಕೋ ಕೋ ಇತ್ಯಾದಿ ಮರಗಳ ನಡುವೆ ಅಂತರ್ ಬೆಳೆಯಾಗಿ ಬೆಳೆದರೆ ಹಣ್ಣಿನ ಗುಣ ಮಟ್ಟ ಮತ್ತು ಫಸಲು ಅತ್ಯಧಿಕ ಎಂಬುದು ಇವರ ಅನುಭವದ ಮಾತು. ಸೊರಬ, ಶಿರಸಿ, ಸಿದ್ದಾಪುರ, ಸಾಗರ, ಹೊಸನಗರ, ತೀರ್ಥಹಳ್ಳಿ, ಪುತ್ತೂರು, ಮೂಡಿಗೆರೆ, ಬೀರೂರು ಹೀಗೆ ಹಲವೆಡೆ ಸಂಚರಿಸಿ ಅನಾನಸ್ ಕೃಷಿ ನಡೆಸಿಕೊಟ್ಟಿದ್ದಾರೆ. ಯಾರಾದರೂ ಕರೆದರೆ ಅಲ್ಲೇ ಕೆಲ ಕಾಲ ಉಳಿದು ಗಿಡ ಹಾಕಿಸಿ ಬೆಳೆಸಿ ಮುಂದಿನ ನಿರ್ವಹಣೆ ಬಗ್ಗೆ ತಿಳಿಸಿ ಬೇಕಾದಾಗಲೆಲ್ಲ ಹಾಜರಾಗಿ ಫಸಲು ಕೈ ಹತ್ತುವಂತೆ ಮಾಡುತ್ತಾರೆ. ಆನಂದಪುರಂನ ಯೂಸೋಪ್ ಸಾಬ್‍ರ ರಬ್ಬರ ತೋಟದ ನಡುವೆ ಕಳೆದ ನಾಲ್ಕು ವರ್ಷದಿಂದ ಅನಾನಸ್ ಫಸಲು ದೊರಕಿಸುತ್ತಿದ್ದಾರೆ.

ತಂತ್ರಗಾರಿಕೆ ಕೃಷಿ:ಮಾರುಕಟ್ಟೆ ಬೇಡಿಕೆ ಅಂದಾಜಿಸಿ ಫಸಲು ತೆಗೆಯುವುದು:

ರಬ್ಬರ್ ನಡುವೆ ಅನಾನಸ್ ಕೃಷಿ ಬಗ್ಗೆ ಇವರ ತಂತ್ರ ಸರಳ. ಈ ಬಗ್ಗೆ ಅವರು ಹೀಗೆ ವಿವರಿಸುತ್ತಾರೆ. ರಬ್ಬರ್ ಗಿಡ ನೆಟ್ಟು ಒಂದು ವರ್ಷ ಆಗುತ್ತಿದ್ದಂತೆ ಮಧ್ಯ ಸಾಲು ನಿರ್ಮಿಸಿ ಅನಾನಸ್ ಗಿಡ ಹಾಕಬೇಕು. 16 ಅಡಿ ಅಂತರದಲ್ಲಿ ರಬ್ಬರ್ ಗಿಡ ಹಾಕಬೇಕು. ರಬ್ಬರ್ ಗಿಡದ ಮಧ್ಯದ ಖಾಲಿ ಜಾಗದಲ್ಲಿ 2 ಅಡಿ ಅಗಲದ 14 ಅಡಿ ಉದ್ದ ಪಟ್ಟೆ ನಿರ್ಮಿಸಬೇಕು. ಆ ಪಟ್ಟೆಯಲ್ಲಿ ಅರ್ಧ ಅಡಿ ಆಳದ ಕುಣಿ ತೆಗೆದು ಗಿಡದಿಂದ ಗಿಡಕ್ಕೆ 1 ಅಡಿ ಅಂತರ ಬರುವಂತೆ ಅನಾನಸ್ ಗಿಡ ಹಾಕಬೇಕು. ಗಿಡ ನೆಟ್ಟು 90 ದಿನದವರೆಗೆ ನೀರು ವ್ಯವಸ್ಥೆ ಮಾಡಬೇಕು. 90 ದಿನ ಕಾಲ ಯಾವುದೇ ಗೊಬ್ಬರ ಅಗತ್ಯವಿಲ್ಲ. ಆ ನಂತರ ಡಿ.ಎ.ಪಿ., ಪೊಟ್ಯಾಶ್ ಮತ್ತು ಯೂರಿಯಾವನ್ನು ಸಮ ಪ್ರಮಾಣದ ಮಿಶ್ರಣಮಾಡಿ ಪ್ರತಿ ಗಿಡಕ್ಕೆ ಸರಾಸರಿ 50 ರಿಂದ 60 ಗ್ರಾಂ.ನಷ್ಟು ಗೊಬ್ಬರ ಹಾಕಬೇಕು. ನಂತರ ಪ್ರತಿ ಒಂದುವರೆ ತಿಂಗಳಿಗೆ ಇದೇ ಪ್ರಮಾಣದ ಗೊಬ್ಬರ ನೀಡಬೇಕು. ಶ್ರಾವಣ ಮಾಸ, ಗಣೇಶ ಹಬ್ಬ, ರಂಜಾನ್ ತಿಂಗಳು, ದೀಪಾವಳಿ , ಜಾತ್ರಾ ವಿಶೇಷ ಬೇಡಿಕೆ ಹೀಗೆ ಮಾರುಕಟ್ಟೆ ಬೇಡಿಕೆ ಅಂದಾಜು ಮಾಡಿ ಪ್ರತಿ ಗಿಡದ ಕುಡಿಗೆ ಸುಮಾರು 100 ಎಂ.ಎಲ್.ನಷ್ಟು ಟಾನಿಕ್ ಹನಿಸಿದರೆ ಹೂವಾಗಲು ಪ್ರಾರಂಭವಾಗುತ್ತದೆ. ಮಾರುಕಟ್ಟೆಯಲ್ಲಿ ಅನಾನಸ್ ಧಾರಣೆಯನ್ನು ನಿರೀಕ್ಷಿಸಿ ಈ ಟಾನಿಕ್ ನೀಡಿದರೆ ನಮಗೆ ಬೇಕಾದ ತಿಂಗಳಲ್ಲಿ ಫಸಲು ಬರುವಂತೆ ಮಾಡಬಹುದು ಎನ್ನುತ್ತಾರೆ ಬಸಪ್ಪ.

ಲಾಭ ಎಷ್ಟು?

ಒಂದು ಎಕರೆ ರಬ್ಬರ್ ತೋಟದಲ್ಲಿ 12000 ದಿಂದ 12500 ಅನಾನಸ್ ಗಿಡ ನೆಡಬಹುದಾಗಿದೆ. ನಾಟಿ ಮಾಡುವ ಒಂದು ಅನಾನಸ್ ಗಿಡದ ಬೆಲೆ ರೂ.2 . ಗಿಡ ನೆಟ್ಟ ನಂತರ ಒಂದು ವರೆ ವರ್ಷಕ್ಕೆ ಮೊದಲ ಬೆಳೆ ಸಿಗುತ್ತದೆ. ನಂತರ ವರ್ಷಕ್ಕೆ ಒಂದು ಬೆಳೆ ತೆಗಬಹುದು.. ಒಂದೊಂದು ಗಿಡದಿಂದ ಒಂದೊಂದು ಹಣ್ಣು ದೊರೆತರೂ 12000 ಅನಾನಸ್ ದೊರೆಯುತ್ತದೆ. ಪ್ರತಿ ಹಣ್ಣು ಸರಾಸರಿ 2.5 ರಿಂದ 3 ಕಿ.ಗ್ರಾಂ.ತೂಕ ಇರುತ್ತದೆ. ಒಂದು ಎಕರೆ ವಿಸ್ತೀರ್ಣದಲ್ಲಿ 25 ರಿಂದ 30 ಟನ್ ಅನಾನಸ್ ಫಸಲು ದೊರೆಯುತ್ತದೆ. ಒಂದು ಟನ್‍ಗೆ 13000 ದಿಂದ 15000 ರೂ. ವರೆಗೂ ಮಾರುಕಟ್ಟೆ ಧಾರಣೆ ದೊರೆಯುತ್ತದೆ. ಹೀಗೆ ಸರಾರಿ ಲೆಕ್ಕ ಹಾಕಿದರೆ ಒಂದು ಎಕರೆ ರಬ್ಬರ್ ತೋಟದ ಮಧ್ಯೆ ಬೆಳೆದ ಅನಾನಸ್ ನಿಂದ ಕನಿಷ್ಟ 20 ಟನ್ ಹಣ್ಣು ದೊರೆತರೂ ಆದಾಯ ರೂ. 2.60 ಲಕ್ಷ ಆದಾಯ ಗಳಿಸಬಹುದು ಎನ್ನುತ್ತಾರೆ ಬಸಪ್ಪ. ಅನಾನಸ್ ಗಿಡ ಖರೀದಿ, ಬೇಸಾಯದ ಕೂಲಿ, ಗೊಬ್ಬರ , ಟಾನಿಕ್, ನೀರಾವರಿ ಅಳವಡಿಕೆ, ಫಸಲು ಕಟಾವು, ಹಣ್ಣುಗಳ ಕಾವಲು ಮತ್ತು ನಿರ್ವಹಣೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಒಂದು ಎಕರೆಗೆ 50 ಸಾವಿರ ರೂ. ಖರ್ಚು ತಗುಲುತ್ತದೆ. . ಮೊದಲ ಫಸಲಿಗೆ ಒಂದು ಎಕರೆಗೆ ರೂ. 50 ಸಾವಿರ ಖರ್ಚು ತಗುಲುತ್ತದೆ. ಎರಡು ಮತ್ತು ಮೂರನೇ ವರ್ಷದ ಬೆಳೆಗೆ ಗಿಡ ಖರೀದಿ, ನೆಡುವ ಕೂಲಿ ಇಲ್ಲದ ಪ್ರಯುಕ್ತ ಖರ್ಚು ಕಡಿಮೆ, ಸುಮಾರು 20 ರಿಂದ 25 ಸಾವಿರ ಖರ್ಚು ತಗುಲುತ್ತದೆ. ಅಂತೂ ಕನಿಷ್ಠವೆಂದರೂ ಒಂದು ಎಕರೆಯ ಅನಾನಸ್ ಫಸಲಿನಿಂದ ಕನಿಷ್ಟ 2 ಲಕ್ಷ ರೂ. ಆದಾಯ ಗಳಿಸಬಹುದು ಎನ್ನುತ್ತಾರೆ ಅವರು.
ಅನಾನಸ್‍ಗೆ ಕೊಳೆ ಇತ್ಯಾದಿ ರೋಗ ಬಾಧೆ ಇಲ್ಲದ ಪ್ರಯುಕ್ತ ರಬ್ಬರ್ ಗಿಡಕ್ಕೆ ಏನೂ ತೊಂದರೆ ಇಲ್ಲ. ಮಾಮೂಲು ರಬ್ಬರ್ ತೋಟÀಕ್ಕಿಂತ ರಬ್ಬರ್ ಗಿಡಗಳು ಇನ್ನೂ ದಷ್ಟ ಪುಷ್ಟವಾಗಿ ಬೆಳೆದು ನಿಲ್ಲುತ್ತವೆ ಎಂದು ವಿವರಿಸುತ್ತಾರೆ. ಯಾವುದೇ ಸಮಯದಲ್ಲಿ ಅನಾನಸ್ ಕೃಷಿ ಬಗ್ಗೆ ಕರಾರುವಕ್ಕಾಗಿ ಹೇಳುವ ಕಾರಣ ಅನಾನಸ್ ಬಸಪ್ಪ ಎಂದೇ ಹೆಸರಾಗಿದ್ದಾರೆ .ಹೆಚ್ಚಿನ ಮಾಹಿತಿಗೆ ಇವರ ಮೊಬೈಲ್ ಸಂಖ್ಯೆ 8861930677 ನ್ನು ಸಂಪರ್ಕಿಸಬಹುದಾಗಿದೆ.

ಲೇಖನ ಮತ್ತು ಫೋಟೋ- ಎನ್.ಡಿ.ಹೆಗಡೆ ಆನಂದಪುರಂ

Exit mobile version