ಶುಂಠಿ ಸಂಸ್ಕರಣೆ ಕೌಶಲ್ಯದ ಕೆಲಸ : ಉತ್ಕøಷ್ಠ ಒಣ ಶುಂಠಿಗೆ ಸದಾ ಬೇಡಿಕೆ

ರೈತರು ಬೆಳೆದ ಶುಂಠಿ ಬೆಳೆ ಈಗ ಫಸಲು ಹಂತ ತಲುಪಿ ಎಲ್ಲೆಡೆ ಕಿತ್ತು ಮಾರುವ ಭರಾಟೆ ಸಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೋಬಳಿ ಕೇಂದ್ರವಾದ ಆನಂದಪುರಂ ಒಣ ಶುಂಠಿ ಮಾರುಕಟ್ಟೆಗೆ ಹೆಸರಾಗಿದ್ದು ಖರೀದಿದಾರರು ಹೊರ ರಾಜ್ಯಗಳಿಂದ ಆಗಮಿಸಿ ಬೀಡು ಬಿಟ್ಟಿದ್ದಾರೆ. ಡಿಸೆಂಬರ್ ನಿಂದ ಮೇ ತಿಂಗಳ ಅಂತ್ಯದ ವರೆಗೆ ಶುಂಠಿ ಖರೀದಿ ಕೇಂದ್ರ ತೆರೆದು ಇಲ್ಲಿಯೇ ಒಣ ಶುಂಠಿ ತಯಾರಿಸುತ್ತಾರೆ. ಪ್ರತಿ ದಿನ ನೂರಾರು ಕ್ವಿಂಟಾಲ್ ಹಸಿ ಶುಂಠಿ ಖರೀದಿಸಿ ಸಂಸ್ಕರಿಸುವ ಕಾರ್ಯ ನಡೆಸುತ್ತಿದ್ದಾರೆ.

ಹಸಿ ಶುಂಠಿಯನ್ನು ಸಂಸ್ಕರಿಸಿ ಒಣ ಶುಂಠಿಯನ್ನಾಗಿಸುವುದು ಸಹ ಕೌಶಲ್ಯದ ಕಾರ್ಯವಾಗಿದ್ದು ಪ್ರತಿ ಹಂತದಲ್ಲಿ ಎಚ್ಚರಿಕೆಯ ನಿರ್ವಹಣೆ ಮುಖ್ಯ. ಇಲ್ಲಿನ ಎಸ್.ಪಿ.ಮಂಜಪ್ಪ ನೇದರವಳ್ಳಿ ಮತ್ತು ದಿನೇಶ್ ಐಗಿನಬೈಲು, ನಾಗರಾಜ ಹೊನಗೋಡು, ನಾರಾಯಣ ಇನ್ನಿತರರು ಹಲವು ವರ್ಷಗಳಿಂದ ಸತತವಾಗಿ ಈ ದಂಧೆಯಲ್ಲಿ ತೊಡಗಿಕೊಂಡಿದ್ದು ಉತ್ಕøಷ್ಷ ಗುಣಮಟ್ಟದ ಒಣ ಶುಂಠಿ ತಯಾರಿ ಮತ್ತು ರೈತರಿಂದ ಹಸಿ ಶುಂಠಿ ಖರೀದಿಯಲ್ಲಿ ಸ್ಪರ್ಧಾತ್ಮಕ ಧಾರಣೆ ನೀಡುವ ಕಾರ್ಯಗಳಿಂದ ಮನೆ ಮಾತಾಗಿದ್ದಾರೆ. ಮಂಜಪ್ಪ ಕಳೆದ ಸುಮಾರು 31 ವರ್ಷಗಳಿಂದ ಹಸಿ ಶುಂಠಿ ಖರೀದಿಸಿ ಒಣ ತಯಾರಿ ಕಾರ್ಯದಲ್ಲಿ ನಿರತರಾಗಿದ್ದು ಸುತ್ತ ಹಲವು ಗ್ರಾಮಗಳ ನೂರಾರು ರೈತರೊಂದಿಗೆ ಸತತ ಸಂಪರ್ಕ ಇಟ್ಟುಕೊಂಡಿದ್ದಾರೆ.

ಒಣ ಶುಂಠಿ ತಯಾರಿಸುವುದು ಸಹ ಕ್ರಮ ಬದ್ಧ ಕಾರ್ಯವಾಗಿದ್ದು ಸ್ವಲ್ಪ ವ್ಯತ್ಯಾಸವಾದರೂ ಕಪ್ಪು ಬಣ್ಣಕ್ಕೆ ತಿರುಗಿ ಗುಣ ಮಟ್ಟ ಕಳೆದುಕೊಳ್ಳುತ್ತದೆ. ಇದಕ್ಕಾಗಿ ಶುಂಠಿ ಸಂಸ್ಕರಣಾ ಕೇಂದ್ರದಲ್ಲಿಯೇ ಬೀಡು ಬಿಟ್ಟು ಪ್ರತಿ ಹಂತವನ್ನೂ ಸೂಕ್ಷ್ಮವಾಗಿ ವೀಕ್ಷಿಸಿ ಮಾರ್ಗದರ್ಶನ ಮಾಡುತ್ತೇವೆ ಎನ್ನುತ್ತಾರೆ ಶುಂಠಿ ಮಂಜಪ್ಪ.

ಹಸಿ ಶುಂಠಿಯ ಹೊರ ಚರ್ಮವನ್ನು ಚಾಕುವಿನಿಂದ ಹೆರೆದು ತೆಗೆದು ,ಕಲ್ಲುಗಳಿಗೆ ತಿಕ್ಕಿ ರಾಶಿ ಹಾಕಲಾಗುತ್ತದೆ. ಈ ರಾಶಿಯ ಮಧ್ಯ ಕಬ್ಬಿಣದ ತಂತಿಯ ಜಾಲರಿ ಇಟ್ಟು ಗಂಧಕ ಸೇರಿಸಿ ಉಷ್ಣ ನೀಡುತ್ತಾರೆ. ಇದಕ್ಕೆ ದೂವಾ ಹಾಕುವುದು ಎನ್ನಲಾಗುತ್ತದೆ. 8 ರಿಂದ 10 ಗಂಟೆ ಕಾಲ ಈ ರೀತಿ ದೂವಾ ಹಾಕಿದ ನಂತರ 5 ರಿಂದ 6 ದಿನಗಳ ಕಾಲ ಬಿಸಿಲಿನಲ್ಲಿ ಒಣ ಹಾಕುತ್ತಾರೆ. ನಂತರ ಗೋಣಿ ಚೀಲದಲ್ಲಿ ಕುಲುಕಿ ಜರಡಿ ಹಾಕುತ್ತಾರೆ. ನಂತರ ನೀರಿನಲ್ಲಿ ತೊಳೆದು ಮತ್ತೆ ದೂವಾ ಹಾಕಿ ಮತ್ತೆ 7 ರಿಂದ 8 ದಿನಗಳ ಕಾಲ ಒಣಗಿಸಲಾಗುತ್ತದೆ. ಹೀಗೆ ಸುಮಾರು 15 ರಿಂದ 18 ದಿನಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಒಣ ಶುಂಠಿ ಸಿದ್ಧಪಡಿಸಲಾಗುತ್ತದೆ. ನವೆಂಬರ್ ನಿಂದ ಜನವರಿವರೆಗೆ ಒಂದು ಕ್ವಿಂಟಾಲ್ ಹಸಿ ಶುಂಠಿಯಿಂದ 25 ಕಿ.ಗ್ರಾಂ.ಒಣ ಶುಂಠಿ ತಯಾರಾಗುತ್ತದೆ. ಅಂದರೆ ಇಳುವರಿ ಪ್ರಮಾಣ ಶೇ,25 ಮಾತ್ರ. ಫೆಬ್ರವರಿಯಲ್ಲಿ ಶೇ.35 ರಷ್ಟು, ಏಪ್ರಿಲ್‍ನಲ್ಲಿ ಶೇ,40 ರಷ್ಟು ಇಳುವರಿ ಸಿಗುತ್ತದೆ ಎನ್ನುತ್ತಾರೆ ಅವರು. ಶುಂಠಿ ಫಸಲು ಕೀಳುವ ಕೃಷಿ ಭೂಮಿಯ ತೇವಾಂಶ ಆಧರಿಸಿ ಒಣ ಶುಂಠಿ ಇಳುವರಿ ಏರಿಳತವಾಗುತ್ತದೆ ಎಂಬುದು ಅವರ ಅನುಭವದ ಮಾತು. ಸಿದ್ಧಗೊಂಡ ಒಣ ಶುಂಠಿಯನ್ನು ಭದ್ರವಾಗಿರುವ ಗೋಣಿ ಚೀಲಗಳಲ್ಲಿ ಸಂಗ್ರಹಸಿ ಬೆಚ್ಚಗಿನ ಪ್ರದೇಶದಲ್ಲಿ ದಾಸ್ತಾನು ಮಾಡಲಾಗುತ್ತದೆ ಎಂದು ಅವರು ವಿವರಿಸುತ್ತಾರೆ.
ಡಿಸೆಂಬರ್ ನಿಂದ ಮೇ ತಿಂಗಳ ಅಂತ್ಯದ ವರೆಗೆ ಶುಂಠಿ ಖರೀದಿ ಕೇಂದ್ರ ತೆರೆದು ಇಲ್ಲಯೇ ಒಣ ಶುಂಠಿ ತಯಾರಿಸುತ್ತಾರೆ. ಪ್ರತಿ ದಿನ ನೂರಾರು ಕ್ವಿಂಟಾಲ್ ಹಸಿ ಶುಂಠಿ ಖರೀದಿಸಿ ಸಂಸ್ಕರಿಸುವ ಕಾರ್ಯ ನಡೆಸುತ್ತಿದ್ದಾರೆ.

ರಾಜಸ್ಥಾನ ದೇವೇಂದ್ರ ಇವರ ಒಣ ಶುಂಠಿ ಖರೀದಿಸಿ ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದು ಹಲವು ವರ್ಷಗಳಿಂದ ಗುಣಮಟ್ಟದ ಶುಂಠಿಗಾಗಿ ಇವರೊಂದಿಗೆ ಕೈಜೋಡಿಸಿದ್ದಾರೆ. ಬಿಹಾರ, ಉತ್ತರಪ್ರದೇಶ ಹಾಗೂ ಗುಜರಾತ್‍ಗಳಿಂದ ಒಣ ಶುಂಠಿ ವ್ಯಾಪಾರಸ್ಥರು ಮತ್ತು ದಲ್ಲಾಳಿಗಳು ಖರೀದಿಗಾಗಿ ಆಗಮಿಸಿ ಆನಂದಪುರಂನ ವಿವಿಧ ಶುಂಠಿ ವ್ಯಾಪಾರಿಗಳಿಂದ ಲಾರಿಗಟ್ಟಲೆ ಒಣ ಶುಂಠಿಯನ್ನು ಖರೀದಿಸುತ್ತಿದ್ದಾರೆ.
ಇಲ್ಲಿನ ಕೆಲ ನಿರ್ಧಿಷ್ಠ ವ್ಯಕ್ತಿಗಳು ಒಣ ಶುಂಠಿ ತಯಾರಿಯಲ್ಲಿ ನಿಪುಣರಾಗಿದ್ದು ಉತೃಷ್ಟ ಗುಣ ಮಟ್ಟದ ಶುಂಠಿ ಉತ್ಪಾದಿಸುತ್ತಾರೆ. ಮಂಜಪ್ಪ ಮತ್ತು ದಿನೇಶ ಸಹ ಉತ್ತಮ ಒಣ ಶುಂಠಿ ತಯಾರಿ ಮತ್ತು ನಿಯತ್ತಿನ ವ್ಯವಹಾರ ನಡೆಸಿ ಹಲವು ವರ್ಷಗಳಿಂದ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಬಂದಿದ್ದಾರೆ ಎನ್ನುತ್ತಾರೆ ರಾಜಸ್ಥಾನದ ದೇವೇಂದ್ರ ಸೇಠ್.

ಶುಂಠಿ ಖರೀದಿ ಮತ್ತು ಸಂಸ್ಕರಣೆಗೆ ಸಂಬಂಧಿಸಿದಂತೆ ಇವರ ಮೊಬೈಲ್ ಸಂಖ್ಯೆ 9448244139 ಮತ್ತು 9535769561 ನ್ನು ಸಂಪರ್ಕಿಸಬಹುದಾಗಿದೆ.

ಲೇಖನ ಮತ್ತು ಫೋಟೋ- ಕೌಸ್ತುಭಪಿತ ಆನಂದಪುರಂ.

Exit mobile version