ಹೊಲದ ಬದುವಿನಲ್ಲೋ, ಕಾಡಿನಲ್ಲೋ ಬೆಳೆಯುವ ನೆಲ್ಲಿ ಸಾಕಷ್ಟು ಆದಾಯ ಪಡೆಯುವ ಮುಖ್ಯ ಬೆಳೆಯಾಗಿ ಬೆಳೆಯುವವರು ವಿರಳ. ನೆಲ್ಲಿಕಾಯಿ ಮಾರಾಟಕ್ಕೆ ನಿರ್ಧಿಷ್ಟ ಮಾರುಕಟ್ಟೆ, ನಿಗದಿತ ಗಿರಾಕಿಗಳು ಇಲ್ಲವೆಂಬುದು ಮುಖ್ಯ ಕಾರಣವಿರಬಹುದು. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಕೇವಲ 10 ಕಿ.ಮೀ.ದೂರದಲ್ಲಿ ವೀರಣ್ಣನ ಬೆನವಳ್ಳಿಯಲ್ಲಿ ಬೇಗ್ರೆ ಸಹೋದದರು ಇದನ್ನು ಬೃಹತ್ ಪ್ರಮಾಣದಲ್ಲಿ ಬೆಳೆದು ಕೈ ತುಂಬಾ ಹಣ ಗಳಿಸಿ ಸುತ್ತ ಮುತ್ತಲ ರೈತರಿಗೆ ಹೊಸ ಸಂದೇಶ ನೀಡಿದ್ದಾರೆ.
ಸಾಮಾನ್ಯವಾಗಿ ಅಗಸ್ಟರಿಂದ ನವೆಂಬರ್ ವರೆಗೆ ನೆಲ್ಲಿ ಫಸಲು ಬರುವುದು ಮಾಮೂಲಾಗಿದ್ದರೆ ಇವರ ಹೊಲದಲ್ಲಿ ಏಪ್ರಿಲ್‍ನಲ್ಲಿ ಬಂಪರ್ ಫಸಲು ಬಂದಿದ್ದು ಎಲ್ಲೆಡೆಯಿಂದ ಖರೀದಿಗೆ ಬೇಡಿಕೆ ಹೆಚ್ಚಿದೆ.ಮೂಲತಃ ಜವಳಿ ವ್ಯಾಪಾರಿಗಳಾದ ಅಶೋಕ ಬೇದ್ರೆ ಮತು ವಿಜಯ ಬೇದ್ರೆ ಕೃಷಿ ಕಾರ್ಯದಲ್ಲಿ ಕಿಂಚಿತ್ತು ಅನುಭವವಿಲ್ಲದಿದ್ದರೂ ಸಹ ನೋಡೋಣ ಅಂತ ಆರಂಭಿಸಿದ ಈ ಕೃಷಿ ಕೈ ಹಿಡಿದಿದೆ.
ಜವಳಿ ಖರೀದಿಗೆ ಸೇಲಂಗೆ ಹೋಗಿದ್ದಾಗ ನೆಲ್ಲಿಕಾಯಿ ಕೃಷಿ ಕುರಿತಾದ ಸೆಮಿನಾರ್ ಅನ್ನು ದೂರದಿಂದ ಆಲಿಸಿ ತಾವೂ ಯಾಕೆ ಈ ಕೃಷಿ ನಡೆಸಬಾರದು ಎಂದು ತೀರ್ಮಾನಿಸಿದರು. ಇವರು ಖರೀದಿಸಿದ ಈ ಹೊಲ ನೀಲಗಿರಿ ಮರ, ಕೆಲ ಕಾಡಿನ ಪೊದೆಗಳಿಂದ ಆವೃತ್ತವಾಗಿ ಬೀಳು ಭೂಮಿಯಾಗಿತ್ತು. ನೆಲ್ಲಿ ಕೃಷಿ ನಡೆಸುವ ವಿಚಾರ ತಿಳಿದು ನೆರೆ ಹೊರೆಯ ರೈತರು ಯಶಸ್ವಿಯಾಗದು, ಮಾರುಕಟ್ಟೆ ದೊರೆಯದು ಇತ್ಯಾದಿ ಮಾತುಗಳನ್ನು ಹೇಳಿದ್ದರೂ. ಆದರೂ ಸಹ ಇವರು 50 ಎಕರೆ ವಿಸ್ತೀರ್ಣದಲ್ಲಿ ನೆಲ್ಲಿ ಸಸಿ ನೆಟ್ಟು ಬೆಳೆಸಿದರು. ಈಗ ಈ ಸಸಿಗಳು 5 ವರ್ಷ ಪ್ರಾಯದವಾಗಿದ್ದು ಮರ ತುಂಬಾ ಫಸಲು ಹೊತ್ತು ನಿಂತಿವೆ.
ಕೃಷಿ ಹೇಗೆ :
50 ಎಕರೆ ಹೊಲವನ್ನು ಡೋಜರ್‍ನಿಂದ ಸಮತಟ್ಟುಗೊಳಿಸಿ ಗಿಡದಿಂದ ಗಿಡಕ್ಕೆ 15 ಅಡಿ ಸಾಲಿನಿಂದ ಸಾಲಿಗೆ 20 ಅಡಿ ದೂರದಲ್ಲಿ 4 ಅಡಿ ಆಳದ ಗುಂಡಿ ತೋಡಿ ಗುಂಡಿಯಲ್ಲಿ ತರಗಲೆಲೆ, ಹುಲ್ಲು, ಕಸ ಕಡ್ಡಿ ಮತ್ತು ಸಗಣಿ ತುಂಬಿದರು. ನೆಲ್ಲಿ ಮರಗಳ ಬೇರು ಆಳವಾಗಿ ಹರಡಿಕೊಳ್ಳುವುದರಿಂದ ಈ ಕ್ರಮ ಅನುಸರಿಸಿ ನೆಲ್ಲಿ ಗಿಡ ಹಾಕಿದ್ದರು. ಸೇಲಂ ಮತ್ತು ತಿಪಟೂರು ಇನ್ನಿತರ ಸ್ಥಳಗಳ ನರ್ಸರಿಯಿಂದ 20 ರೂ.ಗೆ ಒಂದರಂತೆ ನೆಲ್ಲಿ ಗಿಡ ಖರೀದಿ ತಂದು ನೆಟ್ಟರು. ಒಂದೇ ತಳಿಯ ನೆಲ್ಲಿ ಸಸಿ ಹಾಕಿದರೆ ಪರಾಗ ಸ್ಪರ್ಶ ಇತ್ಯಾದಿಗಳಿಗೆ ತೊಂದರೆಯಾಗ ಬಹುದೆಂದು ಅಂದಾಜಿಸಿ ಕಾಂಚನಾ, ಕೃಷ್ಣ, ಚಕ್ಕಯ್ಯ, ಎನ್.ಎಸ್.-7, ಹಾಗೂ ಬೆಟ್ಟದ ನರಲ್ಲಿ ಸಸಿಗಳನ್ನು ಒಂದರ ಪಕ್ಕ ಒಂದು ಅನುಕ್ರಮವಾಗಿ ಬರುವಂತೆ ಮಿಶ್ರಣ ಮಾಡಿ ಕೃಷಿ ನಡೆಸಿದರು. ಹೊಲದಲ್ಲಿ ಕೊಳವೆ ಬಾವಿ ತೆಗೆದು ನೆಲ್ಲಿ ಸಸಿಗಳ ನಡುವೆ ಮೊದಲ ಎರಡು ವರ್ಷ ಕಲ್ಲಂಗಡಿ ಹಾಗೂ ನಂತರ ಶುಂಠಿ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆದು ಸ್ಪಿಂಕ್ಲರ್ ಅಳವಡಿಸಿ ನೀರು ಹಾಯಸಿದರು. ಮೂರೇ ವರ್ಷ ನೆಲ್ಲಿ ಫಸಲು ಆರಂಭವಾಗಿ 4 ನೇ ವರ್ಷ ಅಧಿಕಗೊಂಡು ಈ ವರ್ಷ 5 ನೇ ವರ್ಷದ ಪ್ರಾಯದಲ್ಲಿ ಮರತುಂಬಾ ಕಾಯಿಗಳಿಂದ ತೊನೆದಾಯುತ್ತಿದೆ. ಒಟ್ಟು ಸುಮಾರು 7800 ನೆಲ್ಲಿ ಗಿಡ ಬೆಳೆಸಿರುವ ಇವರು ಸಂಪೂರ್ಣ ಸಾವಯವ ಕೃಷಿ ಅನುಸರಿಸುತ್ತಿದ್ದಾರೆ. ಜೀವಾಮೃತ ನೀಡುತ್ತಾ ಪಾಳೇಕರ ಅವರ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಇವರ ಹೊಲದ ನೆಲ್ಲಿಕಾಯಿ ಗಾತ್ರ ದೊಡ್ಡದು ರಸ ಅಧಿಕ ಹಾಗೂ ಸ್ವಾದಿಷ್ಟ ರುಚಿ.
ಲಾಭದ ಲೆಕ್ಕಾಚಾರ:
ನೆಲ್ಲಿ ಸಸಿಗಳ ನಡುವೆ ಬೆಳೆದ ಕಲ್ಲಂಗಡಿ ಮತ್ತು ಶುಂಠಿ ಬೆಳೆಯಿಂದ ಇವರ ಭೂಮಿ ಖರೀದಿ ಮತ್ತು ಕೊಳವೆ ಬಾವಿ ಕೊರೆಸಿದ ಹಣ ದೊರೆತಿದೆ. ಈ ವರ್ಷ ಒಂದೊಂದು ಮರದಲ್ಲೂ ಸರಾಸರಿ 25 ರಿಂದ 30 ಕಿ.ಗ್ರಾಂ.ನಷ್ಟು ನೆಲ್ಲಿ ಫಸಲು ಬಂದಿದೆ. ಸ್ಥಳೀಯ ಮಾರುಕಟ್ಟೆಗೆ ರೂ.20 ರಂತೆ ಮತ್ತು ಮುಂಬೈ, ಹುಬ್ಬಳ್ಳಿ,ಬೆಂಗಳೂರುಗಳಿಗೆ ರೂ.26 ರಂತೆ ಮಾರಾಟ ಮಾಡುತ್ತಿದ್ದಾರೆ. ಒಂದೊಂದು ಗಿಡದಿಂದ ಸರಾಸರಿ ರೂ.500 ಆದಾಯ ಸಿಗುತ್ತಿದೆ. ಕೃಷಿ ವೆಚ್ಚ, ಕೂಲಿ, ಫಸಲು ಕೀಳುವ ವೆಚ್ಚ ಸೇರಿ ಒಂದೊಂದು ಮರಕ್ಕೆ ರೂ. 100 ಖರ್ಚು ಬಂದರೂ ಸಹ ನಿಹ್ವಳವಾಗಿ ಒಂದು ಮರದಿಂದ ಇವರಿಗೆ ರೂ. 400 ಲಾಭ ದೊರೆಯುತ್ತಿದೆ. ನೆಲ್ಲಿ ಬೆಳೆಯಿಂದ ಏನೂ ದೊರೆಯದು ಎಂದು ಆರಂಭದಲ್ಲಿ ತಣ್ಣೀರೆರೆಚಿದ್ದ ಸುತ್ತ ಮುತ್ತಲ ರೈತರು ಇವರ ಹೊಲದಲ್ಲಿ ಬೇಸಿಗೆಯ ಈ ದಿನದಲ್ಲಿ ನಡೆಯುತ್ತಿರುವ ಕೊಯ್ಲು , ವ್ಯಾಪಾರಸ್ಥರ ಆಗಮನ ಮತ್ತು ತೂಕದ ಸದ್ದು ಕೇಳಿ ಅಚ್ಚರಿ ಪಡುವಂತಾಗಿದೆ. ಇನ್ನೂ ವಿಶೇಷವೆಂದರೆ ಇವರ ಹೊಲದಲ್ಲಿ ವರ್ಷ ವಿಡೀ ಒಂದಲ್ಲ ಒಂದು ಮರಕ್ಕೆ ನೆಲ್ಲಿ ಕಾಯಿ ಫಸಲು ತೂಗಾಡುತ್ತಿರುತ್ತದೆ.
ಈ ಕೃಷಿಯ ಬಗ್ಗೆ ಆಸಕ್ತರು ಇವರ ಮೊಬೈಲ್ ಸಂಖ್ಯೆ 9448016310 ಮತ್ತು 9448943800 ಅನ್ನು ಸಂಪರ್ಕಿಸಬಹುದಾಗಿದೆ.
ಫೋಟೋ ಮತ್ತು ಲೇಖನ –ಎನ್.ಡಿ.ಹೆಗಡೆ ಆನಂದಪುರಂ