ಅಸಾಮಾನ್ಯರು

ಶ್ರೀ ರಾಮಾನುಜರ ತತ್ವ ಸಿದ್ಧಾಂತಗಳನ್ನು ಇಂದಿಗೂ ಪಾಲಿಸೋಣ

ಶ್ರೀ ರಾಮಾನುಜರ

ಶಾರದಾ ಕಾರಂತ್

ಶ್ರೀ ರಾಮಾನುಜರ ಹೇಳುತ್ತಾರೆ ನಿತ್ಯವಾದ ಆನಂದಮಯವಾದ ಭಗವದ್ ಅನುಭವ ಪಡೆಯುವುದು ಜೀವನದ ಕರ್ತವ್ಯ. ಆದರೆ ಅನಾದಿಯಾಗಿ ಬೆಳೆದುಕೊಂಡು ಬಂದಿರುವ ಪಾಪ ಪುಣ್ಯಕರ್ಮಗಳು, ಅಹಂಕಾರ, ಐಹಿಕ ಸುಖ ದುಃಖದ ಅನುಭವ ಇವುಗಳಿಂದ ಕರ್ತವ್ಯ ಲೋಪವಾಗಿ ಭಕ್ತಿಗೆ ದೋಷವಾಗಿ ಪರಿಣಮಿಸುತ್ತದೆ. ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಭಕ್ತಿ ಪಂಥವು ಅತಿಮುಖ್ಯ . ಭಕ್ತಿಪಂಥವನ್ನು ಪ್ರಚಾರ ಮಾಡಿದವರಲ್ಲಿ ಶ್ರೀರಾಮಾನುಜಾಚಾರ್ಯರು ಒಬ್ಬರು. ಇವರ ಸಿದ್ಧಾಂತದಂತೆ ನಿರಾಶಾವಾದವಾಗಲಿ ಪಲಾಯನ ಮನೋಭಾವ ವಾಗಲಿ ಭಕ್ತಿ ಪಂಥದ ಬೋಧನೆಯಲ್ಲ. ಚೆನ್ನಾಗಿ ಬಾಳಬೇಕು ಸಂತೋಷದಿಂದ ಬಾಳಬೇಕು ಸಾಮರಸ್ಯದಿಂದ ಬಾಳಬೇಕು ಇದು ರಾಮಾನುಜರು ಬೋಧಿಸಿದ ಶ್ರೀವೈಷ್ಣವ ಸಂಸ್ಕೃತಿಯ ತಿರುಳು.

ಸಕಲ ಜೀವಿಗಳಲ್ಲೂ ರಾಮಾನುಜರಿಗೆ ಅನುಕಂಪವಿತ್ತು.ಹಣ್ಣನ್ನು ಹಂಚಿ ತಿನ್ನು ಎಂಬ ಹಾಗೆ ಜ್ಞಾನವನ್ನು ಇತರರೊಂದಿಗೆ ಹಂಚಿಕೊಂಡು ಅನುಭವಿಸಬೇಕೆಂದು ರಾಮಾನುಜರ ಭಾವನೆ.

ಅವರು ಶ್ರೀರಂಗದ ಬಳಿ ಗುರುಗಳಲ್ಲಿ ಉಪದೇಶ ಪಡೆಯುತ್ತಿದ್ದಾಗ ನಡೆದ ಒಂದು ಸಂಗತಿ ಅವರ ಅನುಗ್ರಹ ಗುಣವನ್ನು ಚೆನ್ನಾಗಿ ಸಾರುತ್ತದೆ. ಶ್ರೀವೈಷ್ಣವ ಮಂತ್ರದ ಉಪದೇಶ ಪಡೆಯಲು ತಮ್ಮಲ್ಲಿಗೆ ರಾಮಾನುಜರು ಒಬ್ಬರೇ ಬರಬೇಕು ಬೇರೆ ಯಾರನ್ನೂ ಕರೆತರ ಬಾರದು  ಎಂದು ಗುರುಗಳ ಆದೇಶ ಆಗಿತ್ತು. ರಾಮಾನುಜರು ಉಪದೇಶಕ್ಕೆ ಬಂದು ಕುಳಿತಾಗ ಅವರ ಜೊತೆ ಇಬ್ಬರು ಶಿಷ್ಯರನ್ನು ಕರೆತಂದಿದ್ದರು.

ಇದನ್ನು ಗುರುಗಳು ಪ್ರಶ್ನಿಸಲು ತಮಗೆ ಲಭಿಸಿದ್ದು ತಮ್ಮ ಶಿಷ್ಯರಿಗೆ ಲಭಿಸಬೇಕು ಎಂಬ ಮನೋಭಾವದಿಂದ ಹೀಗೆ ಮಾಡಿದೆ ಎಂದರು. ಗುರುಗಳು ಮುಂದೆ ಮೂವರನ್ನು ಕುಳ್ಳಿರಿಸಿಕೊಂಡು ಅಷ್ಟಾಕ್ಷರ ಮಂತ್ರವನ್ನು ಉಪದೇಶಿಸಿದರು. ಯೋಗ್ಯತೆ ಇಲ್ಲದ ಯಾರಿಗೂ ಇದನ್ನು ಹೇಳಬೇಡಿ ಎಂದು ಎಚ್ಚರಿಕೆ ನೀಡಿದರು. ಎಂಟು ಅಕ್ಷರಗಳ ಮಂತ್ರೋಚ್ಚಾರಣೆ ಮಾಡುವುದರಿಂದಲೇ ಮೋಕ್ಷ ದೊರಕುವುದಾದರೆ ಇದನ್ನು ಇತರರು ಏಕೆ ಕೇಳಬಾರದು ? ರಹಸ್ಯವಾಗಿ ಇಡುವುದರಲ್ಲಿ ಏನು ಪ್ರಯೋಜನ? ಎಂದು ರಾಮಾನುಜರು ಮನಗಂಡರು.ಮರುದಿನ ಆ ಊರಿನ ದೇವಾಲಯದ ಬಳಿ ಜನಜಾತ್ರೆಯ ಮುಂದೆ ರಾಮಾನುಜರು ಹೀಗೆಂದು ಘೋಷಿಸಿದರು.ನಿಮ್ಮೆಲ್ಲರ ಉದ್ಧಾರಕ್ಕಾಗಿ ನಾನು ಒಂದು ಮಂತ್ರ ಕಲಿತಿದ್ದೇನೆ. ಇದು ಬಹಳ ಪವಿತ್ರವಾದದ್ದು. ಮುಕ್ತಮನಸ್ಸಿನಿಂದ ಉಚ್ಚರಿಸಿದರೆ ಅಷ್ಟೇ ಸುಲಭಸಾಧ್ಯ . ಕೇಳಿ ‘ನಾರಾಯಣ ನಮಸ್ಕಾರ’ ಎಂಟಕ್ಷರದ  ಮಂತ್ರವೇ ಲೋಕ ಕಲ್ಯಾಣ ಮಂತ್ರಎಂದು ಹೇಳಿದರು. ನೆರೆದಿದ್ದ ಜನಸಮೂಹ ಏಕಕಂಠದಿಂದ ಅದನ್ನು ಉಚ್ಚರಿಸಿತು. ರಾಮಾನುಜರ  ಕಣ್ಣಲ್ಲಿ ಆನಂದಬಾಷ್ಪ ಹರಿಯುತ್ತಿತ್ತು. ಗುರುಗಳು ಏನಿದು ಅವಿವೇಕ ಎಂದು ರಾಮಾನುಜರನನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ನೀನು ಮಾಡಿದ ಅಪರಾಧದಿಂದ ನಿನಗೆ ನರಕ ಪ್ರಾಪ್ತಿ ಎಂದರು. ಅದಕ್ಕೆ ರಾಮಾನುಜರು ಇಷ್ಟೊಂದು ಜನಕ್ಕೆ ಮೋಕ್ಷ ಸಿಗುವುದಾದರೆ ನನಗೆ ನರಕ ವಾದರೂ ಚಿಂತೆಯಿಲ್ಲ. ಎಂದುಕೊಂಡು ಅದನ್ನು ಲೋಕಕ್ಕೆ ಸಾರಿದೆ.ಇಡೀ ಮಾನವಕುಲದ ಕಲ್ಯಾಣ ವಾಗುವುದಾದರೆ ನನಗೆ ಅದರಿಂದಲೇ ಸಂತೋಷ ಎಂದರು. ರಾಮಾನುಜರ ಮಾತುಗಳು ಗುರುಗಳ ಮನಸ್ಸನ್ನು  ಸೂರೆಗೊಂಡಿತು. ಪರಮ ವೇದಾಂತ ಸತ್ಯವಾದ ರಹಸ್ಯವನ್ನು ಎಲ್ಲೆಲ್ಲೂ ಸಾರು ಇದು ಲೋಕದಲ್ಲೆಲ್ಲಾ ಕೇಳಿ ಬರಲಿ ಎಂದು ಆಶೀರ್ವದಿಸಿದರು.

ತಿಳಿವಿಗೆ ಜಾತಿಯಿಲ್ಲ ಒಲವಿಗೆ ಮೈಲಿಗೆಯಿಲ್ಲ ಎಂಬುದಾಗಿ ರಾಮಾನುಜರು ನಂಬಿದ್ದರು ತಮ್ಮ ಉಪದೇಶ ಎಲ್ಲರಿಗಾಗಿ ಯಾವ ಒಂದು ಕುಲಕ್ಕೂ ಮೀಸಲಲ್ಲ ಎಂಬುದು ಅವರ ಭಾವನೆ. ಶ್ರೀ ರಾಮಾನುಜರ ತತ್ವ ಸಿದ್ಧಾಂತಗಳನ್ನು ಇಂದಿಗೂ ಪಾಲಿಸೋಣ ಲೋಕಕಲ್ಯಾಣಕ್ಕಾಗಿ ಕೈ ಜೋಡಿಸೋಣ.

Kannada Times

Articles from top-notch authors are available at KannadaTimes. We try to seek quality in spite of scores. For becoming full-time author please contact at [email protected] For publishing your article please email at [email protected]
Back to top button

Adblock Detected

Please consider supporting us by disabling your ad blocker