ಮುಖ್ಯ ಕೃಷಿ ಜೊತೆ ವರ್ಷವಿಡೀ ತರಕಾರಿ ಕೃಷಿ : ಸಾಲದ ಕಂತು ಪಾವತಿಗೆ ನೆರವಾಗುವ ಉಪ ಬೆಳೆಯ ಆದಾಯ

ಅಭಿವೃದ್ಧಿ ಹೊಂದುವ ಹಾದಿಯಲ್ಲಿರುವ ಕುಟುಂಬಕ್ಕೆ ಆರ್ಥಿಕವಾಗಿ ಎಷ್ಟು ಆದಾಯಗಳಿಸಿದರೂ ಸಾಲದು. ಅಡಕೆ , ತೆಂಗು ಇತ್ಯಾದಿ ಕೃಷಿ ಆರಂಭಿಸಿ ಫಸಲು ಆರಂಭವಾಗುವ ವರ್ಷಗಳಲ್ಲಿ ಇಳುವರಿ ಕಡಿಮೆ. ಹಾಗಂತ ಮುಂದಾಲೋಚನೆಯುಳ್ಳ ರೈತರು ಕೈಕಟ್ಟಿ ಕುಳಿತುಕೊಳ್ಳದೆ ಸಾಲ ಸೋಲ ಮಾಡಿಯಾದರೂ ಮನೆಯ ಪ್ರತಿಗೆ ತೊಡಗುತ್ತಾರೆ. ಇಂತಹ ಸಂದರ್ಭದಲ್ಲಿ ಹಲವು ವಿಧದ ಕೃಷಿ ಬೆಳೆ ಅನಿವಾರ್ಯ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಿಪ್ಳಿ ಗ್ರಾಮದ ರೈತ ಶಶಿಭೂಷಣ ಗೌಡ ಕಳೆದ 2 ವರ್ಷಗಳಿಂದ ವರ್ಷವಿಡೀ ಒಂದಲ್ಲ ಒಂದು ತರಕಾರಿ ಕೃಷಿ ನಡಸಿ ಸಾಕಷ್ಟು ಆದಾಯಗಳಿಸಿ ಸಾಲದ ಕಂತು ತೀರುವಳಿಯಲ್ಲಿ ದೃಢ ಹೆಜ್ಜೆಯನ್ನಿಟ್ಟಿದ್ದಾರೆ.

ಕಳೆದ ವರ್ಷ ಮೇ ತಿಂಗಳ ಅಂತ್ಯದಲ್ಲಿ ಸುಮಾರು 400 ತೊಂಡೆ ಗಿಡಗಳನ್ನು ಹಾಕಿ ತೆಂಗಿನ ಗರಿಗಳಿಂದ ಚಪ್ಪರ ಮಾಡಿ ಹಬ್ಬಿಸಿದ್ದರು. ಜೆ.ಸಿ.ಬಿ.ಯಿಂದ 3 ಅಡಿ ಆಳದ ಪಟ್ಟೆ ಸಾಲು ನಿರ್ಮಿಸಿ ತೊಂಡೆ ಬಳ್ಳಿ ಬೆಳೆಸಿದ್ದರು. ಸಗಣಿ ಗೊಬ್ಬರ, ಬೂದಿ ಹಾಗೂ ಅಡಕೆ ಮರದ ಗರಿಗಳನ್ನು ಕೊಚ್ಚಿ ಗೊಬ್ಬರವನ್ನಾಗಿ ನೀಡಿ ಕೃಷಿ ನಡೆಸಿ ಮೂರು ತಿಂಗಳಲ್ಲಿ ಅಂದರೆ ಸಪ್ಟೆಂಬರ್ ಆರಂಭದಿಂದ ಮಾರ್ಚ ತಿಂಗಳವರೆಗೆ ಸುಮಾರು 8 ಕ್ವಿಂಟಾಲ್ ತೊಂಡೆಕಾಯಿ ಫಸಲು ಪಡೆದಿದ್ದಾರೆ. ಕಿ.ಗ್ರಾಂ.ಗೆ ಸರಾಸರಿ 8 ರೂ.ನಲ್ಲಿ ಮಾರಿ ರೂ.6 ಸಾವಿರಕ್ಕೂ ಅಧಿಕ ಆದಾಯ ಗಳಿಸಿದ್ದಾರೆ. ಇದರ ಜೊತೆ ನಡು ನಡುವೆ ಮೂಲಂಗಿ ಬೀಜ ಹಾಕಿ ಸುಮಾರು 5 ಕ್ವಿಂಟಾಲ್ ಮೂಲಂಗಿ ಫಸಲು ಮರಾಟ ಮಾಡಿದ್ದಾರೆ. ಕಿ.ಗ್ರಾಂ.ಗೆ ರೂ 7 ರಂತೆ ಮೂಲಂಗಿಯಿಂದ ರೂ.3500 ಆದಾಯ ಗಳಿಸಿದ್ದಾರೆ. ಡಿಸೆಂಬರ್‍ನಲ್ಲಿ ಭತ್ತ ಕಟಾವು ಮಾಡಿದ ನಂತರ ಜನವರಿ ತಿಂಗಳ ಆರಂಭದಲ್ಲಿ ತಮ್ಮ ಗದ್ದೆಯಲ್ಲಿ ಇವರು ಬಣ್ಣದ ಸೌತೆ(ಮೊಗೆ ಸೌತೆ) ಮತ್ತು ಸಿಹಿ ಸೌತೆ ಬೀಜ ಹಾಕಿ ಬಳ್ಳಿ ಬೆಳೆಸಿದ್ದಾರೆ.

3 ಗುಂಟೆ ವಿಸ್ತೀರ್ಣದಲ್ಲಿ ಬಣ್ಣದ ಸೌತೆ ಮತ್ತು 4 ಗುಂಟೆ ವಿಸ್ತೀರ್ಣದ ಪ್ರದೇಶದಲ್ಲಿ ಸಿಹಿ ಸೌತೆ ಬೆಳೆದಿದ್ದಾರೆ. ಗಿಡದಿಂದ ಗಿಡಕ್ಕೆ 2 ಅಡಿ ಮತ್ತು ಸಾಲಿನಿಂದ ಸಾಲಿಗೆ 4 ಅಡಿ ಅಂತರದಲ್ಲಿ ಕೃಷಿ ನಡೆಸಿದ್ದಾರೆ. ಈ ಕೃಷಿಗೆ ಸಗಣಿ ಗೊಬ್ಬರ ಮತ್ತು ಕಾಡಿನ ಒಣ ತರಗಲೆಲೆ ಹಾಕಿರುವ ಇವರು ಅದಷ್ಟು ಕಡಿಮೆ ವೆಚ್ಚದ ಸಹಜ ಕೃಷಿ ನಡೆಸಿದ್ದಾರೆ. ಗಿಡ ಬೆಳೆದ 15 ದಿನಕ್ಕೆ ಮತ್ತು 40 ದಿನದ ಸುಮಾರಿಗೆ ಪ್ರತಿ ಗಿಡಕ್ಕೆ ಸರಾಸರಿ 20 ಗ್ರಾಮ ನಷ್ಟು ಸುಫಲಾ ಗೊಬ್ಬರ ಹಾಕಿರುವ ಇವರು ಏಪ್ರಿಲ್ ತಿಂಗಳ 2 ನೇ ವಾರದ ಸುಮಾರಿಗೆ ಕಿ.ಗ್ರಾಂ. ಒಂದಕ್ಕೆ 8 ರೂ.ನಂತೆ 13 ಕ್ವಿಂಟಾಲ್ ಮೊಗೆ ಸೌತೆ ಮತ್ತು ಕಿ.ಗ್ರಾಂ ಒಂದಕ್ಕೆ 10 ರೂ.ನಂತೆ 12 ಕ್ವಿಂಟಾಲ್ ಸಿಹಿ ಸೌತೆ ಮಾರಿ ಸುಮಾರು ರೂ.21 ಸಾವಿರ ಆದಾಯ ಗಳಿಸಿದ್ದಾರೆ. ಕೃಷಿ ಕೂಲಿ, ನೀರಾವರಿ ವ್ಯವಸ್ಥೆ ಗೊಬ್ಬರ ಇತ್ಯಾದಿಗಳಿಗೆ ಸುಮಾರು ರೂ.5 ಸಾವಿರ ವೆಚ್ಚ ಮಾಡಿರುವ ಇವರು ಬಂದ ಆದಾಯವನ್ನು ಸಾಲದ ಬಾಬ್ತಿಗೆ ಪಾವತಿಸಿದ್ದಾರೆ.

ಮನೆಯ ಪಕ್ಕದ ಅಂಗಳದಲ್ಲಿ ಅಗಸ್ಟ್ ಸುಮಾರು 2 ಗುಂಟೆ ವಿಸ್ತೀರ್ಣದಲ್ಲಿ 200 ಬದನೆ ಗಿಡ ಬೆಳೆಸಿ ಸುಮಾರು 12 ಕ್ವಿಂಟಾಲ್ ಬದನೆಕಾಯಿ ಪಡೆದಿದ್ದಾರೆ. ಕಿ.ಗ್ರಾಂ.ಒಂದಕ್ಕೆ ರೂ.8 ರಂತೆ ಮಾರಾಟ ಮಾಡಿರುವ ಇವರು ರೂ.8000 ಆದಾಯ ಗಳಿಸಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಕೃಷಿ, ಪ್ರಗತಿ ನಿಧಿ, ಬಾವಿ ಮತ್ತು ಪಂಪ್‍ಸೆಟ್ ಇತ್ಯಾದಿ ಅಭಿವೃದ್ಧಿ ಕಾರ್ಯಕ್ಕೆ ರೂ.50 ಸಾವಿರ ಸಾಲ ಸೌಲಭ್ಯ ಪಡೆದಿರುವ ಇವರು ವಾರದ ಕಂತುಗಳ ಮೂಲಕ ನಿರಂತರವಾಗಿ ತೀರುವಳಿ ಮಾಡಿ ನಿರಾಳತೆ ಅನುಭವಿಸುತ್ತಿದ್ದಾರೆ.

ಮಾಹಿತಿ ಪಡೆಯಲಿಚ್ಚಿಸುವವರು ಶಶಿಭೂಷಣ ಗೌಡ ಅವರ ಮೊಬೈಲ್ ಸಂಖ್ಯೆ 9731197582 ನ್ನು ಸಂಪರ್ಕಿಸಬಹುದಾಗಿದೆ.

ಫೋಟೋ ಮತ್ತು ಲೇಖನ- ಎನ್.ಡಿ.ಹೆಗಡೆ ಆನಂದಪುರಂ

Exit mobile version