ಆತ್ಮ.ಜಿ.ಎಸ್
ಶಾಲಾ ದಿನಗಳಲ್ಲಿ ಶನಿವಾರ ಬಂತೆಂದೆರೆ ಒಂದು ರೀತಿ ಪ್ರೀತಿ. ಚಳಿಗಾಲದಲ್ಲಿ ಬೇಗ ಏಳಲು ಮನಸ್ಸು ಹಿಂಜರಿದರೂ ಮದ್ಯಾನ್ಹದ ವೇಳೆಗೆ ಮನೆಯಲ್ಲಿ ಎಲ್ಲರೊಂದಿಗೆ ಇರಬಹುದು ಎಂಬ ಖುಷಿ.ಹೈಸ್ಕೂಲ್ಗೆ ಬೇರೆ ಊರಿಗೆ ಹೋಗುತ್ತಿದ್ದರಿಂದ ಮನೆಯಿಂದ 7.15 ಕ್ಕೇ ಹೊರಡುತ್ತಿದ್ದ ನನಗೆ ನಾನು ಹೊರಡುವ ವೇಳೆಗೆ ದಾಸಯ್ಯ ಬರುವುದು ಸಾಮಾನ್ಯವಾಗಿತ್ತು.ತಲೆಗೆ ಹಳದಿ ರುಮಾಲು ಧರಿಸಿ,ಶುಭ್ರ ಬಿಳಿ ಪಂಚೆ,ಒಂದು ಕೈಯಲ್ಲಿ ಜಾಗಟೆ ಮತ್ತೊಂದು ಕೈಯಲ್ಲಿಗರುಡ ಗಂಭ( ದೀಪ,) ಶಂಖನಾದ ಕೇಳಿದರೆ ಅಮ್ಮಾ, ಬಸ್ ಬರುವ ಸಮಯವಾಯಿತು,ಶಂಖನಾದ ಕೇಳುತ್ತಿದೆ,ದಾಸಯ್ಯ ಮನೆ ಬಾಗಿಲಿಗೆ ಬಂದಿದ್ದಾರೆ .ಅಕ್ಕಿ ಎಣ್ಣೆ ಕೊಡು ಹಾಕಿ ಹೋಗುವೆ ಕೊಡು ಎಂದು ಅಮ್ಮನ ಹತ್ತಿರ ಗಡಿಬಿಡಿ ಮಾಡುತ್ತಿದ್ದೆ.
ದಾಸಯ್ಯ ನಮ್ಮ ಹಳ್ಳಿಗಳಲ್ಲಿ ಕಾಣುವ ವಿಶೇಷ ವ್ಯಕ್ತಿ.ಹೆಚ್ಚಾಗಿ ವೈಷ್ಣವ ಸಂಪ್ರದಾಯ ಪಾಲಿಸುವ ಇವರು ತಿರುಪತಿ ವೆಂಕಟರಮಣನ ಒಕ್ಕಲು.ದಾಸ ಒಕ್ಕಲಿಗ ಸಂಪ್ರದಾಯದಲ್ಲಿ ಮನೆಯಲ್ಲಿ ಒಬ್ಬರನ್ನು ದಾಸಯ್ಯನಾಗಿ ಬಿಡುವುದು ಪರಿಪಾಠವಿದೆ.ದಾಸಯ್ಯ ಆಗಬೇಕಾದರೆ ಗುರುವಿನಿಂದ ದೀಕ್ಷೆ ಪಡೆದಿರಬೇಕು.ಕೆಲವು ಮೂಲ ಮಂತ್ರಗಳನ್ನು ಗುರುವಿನಿಂದ ಸ್ವೀಕರಿಸಿ ಪಾಲನೆ ಮಾಡುತ್ತಾರೆ.ಹಾಗೆಂದು ಸನ್ಯಾಸಿ ಆಗಬೇಕೆಂದಿಲ್ಲ,ಸಂಸಾರಿ ಆಗಿದ್ದು ಹರಿಸೇವೆ ಮಾಡಬಹುದು.ಸಾಮಾನ್ಯವಾಗಿ ಶನಿವಾರ ಬಿಕ್ಷಾಟಣೆಗೆ ಬರುತ್ತಿದ್ದರು.ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ಪ್ರತೀ ಶನಿವಾರ ಇಂತಹ ಹರಿಸೇವೆ ಮಾಡುವ ದಾಸಯ್ಯ ಮನೆ ಬಾಗಿಲಿಗೆ ಬರುತ್ತಿದ್ದರು.ಆರಂಭದಲ್ಲಿ ಇವರನ್ನು,ಇವರ ವೇಷ ಭೂಷಣ ನೋಡಿದರೆ ಭಯವಾಗಿ ಅಮ್ಮನ ಹಿಂದೆ ನಿಲ್ಲುತ್ತಿದ್ದೆ.ಅಮ್ಮ ಕೊಡುವ ಅಕ್ಕಿ,ಎಣ್ಣೆಯನ್ನು ಬೇಕೋ ಬೇಡವೋ ಎಂಬ ಭಾವನೆಯಲ್ಲಿ ಮುಟ್ಟಿ ಹಾಕುತ್ತಿದ್ದೆ.ನಂತರದ ದಿನಗಳಲ್ಲಿ ಮಾತನಾಡುವುದು ರೂಡಿ ಆದಂತೆಲ್ಲಾ ಶಂಖನಾದ ಕೇಳಿದಂತೆ ಅವರಿಗೆ ಕೊಡಲು ಅಕ್ಕಿ ಎಣ್ಣೆ ಹಿಡಿದು ನಿಲ್ಲುತ್ತಿದ್ದೆ.ಪ್ರತೀ ಶನಿವಾರದಂದು ಮನೆಮನೆಗೆ ತೆರಳುವ ದಾಸಯ್ಯ ನಮ್ಮ ಮನೆ ಹತ್ತಿರದಲ್ಲಿ ಇರುವ ನೀರಿನ ಟ್ಯಾಂಕ್ ಬಳಿ ವಿಶ್ರಮಿಸಿ ಬೇರೆ ಮನೆಗೆ ತೆರಳುತ್ತಿದ್ದರು.ಆರಂಭದಲ್ಲಿ ಹತ್ತಿರಕ್ಕೆ ಹೋಗಲು ಭಯವಾಗುತ್ತಿತ್ತು.ನನ್ನ ಜೊತೆಗಾರರೆಲ್ಲರೂ ಸೇರಿ ಅವರ ಬಳಿ ತೆರಳಿ ವಿವರ ಕೇಳಲು ಆರಂಭಿಸಿದೆವು.ಅವರ ಬಳಿ ಇರುವ ದೀಪಕ್ಕೆ ಎಣ್ಣೆ ಹಾಕಿ ಜೋಳಿಗೆಯಲ್ಲಿ ಅಕ್ಕಿ ಹಾಕುವುದು ಎಂದರೆ ಖುಷಿಯ ಸಂಗತಿಯಾಗಿತ್ತು.
ಹಿಂದೆ ಹಳ್ಳಿಗಳಲ್ಲಿ ಹಾಗೂ ಸಣ್ಣ ಪುಟ್ಟ ನಗರಗಳಲ್ಲಿ ಮನೆ ಬಾಗಿಲಿಗೆ ಬರುವ ಜುಂಜಪ್ಪನ ಒಕ್ಕಲಿನವರು,ಜೋಗತಿ ಎಲ್ಲಮ್ಮ ಮೊದಲಾದವರು ಬಯಲು ಸೀಮೆಯಲ್ಲಿ ಕಂಡುಬಂದರೆ ಮಲೆನಾಡಿನಲ್ಲಿ ಮನೆ ಬಾಗಿಲಿಗೆ ಅಡಿಕೆ ಪಡೆಯಲು ಸಂಭಾವನೆ ಭಟ್ಟರು,ಜನಿವಾರ ಮಾರುವ ಭಟ್ಟರು ದೃಷ್ಟಿದಾರ ಮಾರಾಟ ಮಾಡುವ ಪಟಗಾರರು ಮನೆ ಬಾಗಿಲಿಗೆ ಬರುವುದುಂಟು.ರಜೆಯಲ್ಲಿ ಅಜ್ಜನ ಮನೆಗೆ ಹೋಗುವ ನಮಗೆ ತರಾವರಿ ಜನಜೀವನ,ವಿವಿಧ ವೇಷ ಭೂಷಣ ಧರಿಸಿದ ಜನರನ್ನು ನೋಡಲು ಸಿಗುತ್ತಿದ್ದರು.ಮಲೆನಾಡಿನ ಮನೆಗಳೆಂದರೆ ದೊಡ್ಡ ಅಂಗಳ ಇರುವ ವಿಶಾಲವಾದ ದೊಡ್ಡ ಬಾಗಿಲಿನ ಮನೆಗಳು.ಮೊದಲೆಲ್ಲಾ ಮನೆಯ ಯಜಮಾನ ಬೆಳಿಗ್ಗೆ ಎದ್ದವರು ಮುಂಬಾಗಿಲು ತೆರೆದರೆ ಮದ್ಯಾನ್ಹ ಊಟದ ವೇಳೆಗೆ ಹಾಕುತ್ತಿದ್ದರು.ನಾವೆಲ್ಲಾ ಮೊಮ್ಮಕ್ಕಳು ಮದ್ಯಾನ್ಹ ಊಟ ಮಾಡುವ ಮೊದಲು ಮುಂಬಾಗಿಲು ಹಾಕಲು ಹೋದರೆ ಆಚೇ ಈಚೇ ನೋಡಿ ಬಾಗಿಲು ಹಾಕಲು ಹೇಳುತ್ತಿದ್ದರು.ನಮಗೋ ಕುತೂಹಲ ಅಜ್ಜ ಇದೇನು ಹೀಗೆ ಹೇಳುತ್ತಾರೆ ಎಂದು.ಈಗಲೂ ಅಜ್ಜ ಹೇಳಿದ್ದು ಕಿವಿಯಲ್ಲಿ ಇದ್ದ ಹಾಗೆ ಇದೆ.ನಾವು ಊಟ ಮಾಡುವಾಗ ಹಸಿದವ ಹಾಗೇ ಇರಬಾರದು.ನೋಡದೇ ಬಾಗಿಲು ಹಾಕಿ ಬಂದರೆ ಮನೆ ಬಾಗಿಲಿಗೆ ಹಸಿದು ಬಂದವ ಹಾಗೇ ಹೊಗಬಹುದು.ನನ್ನಜ್ಜನ ಊರಿನಲ್ಲಿ ಮಂಗಳವಾರ ಬಿಕ್ಷುಕರ ದಿನವಾಗಿತ್ತು.ಮೊದಲು ಬಂದ ಬಿಕ್ಷುಕರಿಗೆ ಮದ್ಯಾನ್ಹದ ಊಟ ಹೇಳಿಕೆಯಾಗುತ್ತಿತ್ತು.ಧಾನ್ಯ ಒಕ್ಕಣೆ ಮಾಡುವಾಗ ಬಡವರಿಗೆ ಮೊರ ಧಾನ್ಯ ಹಂಚುತ್ತಿದ್ದರು.ಹಸಿದು ಬಂದವರನ್ನು ಅಜ್ಜನ ಮನೆಯಲ್ಲಿ ಹಾಗೇ ಕಳಿಸಿದ್ದನ್ನು ನೋಡೇ ಇಲ್ಲ. ಅಜ್ಜನ ಮನೆ ಎಂದಲ್ಲ ಮಲೆನಾಡಿಗರು ಆತಿಥ್ಯ ಪ್ರಿಯರು.ಮನೆಗೆ ಯಾರೇ ಬಂದರೂ ತಮ್ಮಲ್ಲಿ ಇರುವುದನ್ನು ಕೊಟ್ಟು ಸಂತೋಷ ಪಡುವರು.ಇದು ಅಡಿಕೆ ಕೊಯ್ಲಿನಲ್ಲಿ ಬರುವ ಸಂಭಾವನೆ ಭಟ್ಟರು ಇರಬಹುದು ಅಥವಾ ಸಂಗೀತ ಹಾಡುತ್ತಾ ಮನೆಬಾಗಿಲಿಗೆ ಬರುವ ಸಣ್ಣ ಕಲಾವಿದರು ಇರಬಹುದು.
ಮೊದಲೆಲ್ಲಾ ಈಗಿನ ಹಾಗೆ ವಾಹನದ ಸೌಕರ್ಯವಿರುತ್ತಿರಲಿಲ್ಲ.ಹೆಚ್ಚಾಗಿ ಜನಿವಾರ ಮಾರಾಟ ಮಾಡಲು ಘಟ್ಟದ ಕೆಳಗೆ (ವಾಡಿಕೆ ಮಾತು) ಅಂದರೆ ಉತ್ತರ ಯಾ ದಕ್ಷಿಣ ಕನ್ನಡ ಜಿಲ್ಲೆಯ ಕೆಲವರು ಹೆಗಲ ಮೇಲೆ ಜನಿವಾರ ಹೊತ್ತು ಊರೂರು ತಿರುಗಿ ಮಾರಾಟ ಮಾಡಲು ಬರುತ್ತಿದ್ದರು.ಆಗ ಈಗಿನಂತೆ ಎಲ್ಲೆಡೆ ಜನಿವಾರ ಸಿಗುತ್ತಿರಲಿಲ್ಲ.ನಿಗದಿತ ಜನಾಂಗದವರು ನೇಯ್ದ ಜನಿವಾರವನ್ನು ತಂದು ಮಾರಾಟ ಮಾಡುತ್ತಿದ್ದರು.ಹೀಗೆ ಜನಿವಾರ ಕೊಟ್ಟವರಿಗೆ ತಮ್ಮಲ್ಲಿ ಬೆಳೆದ ಅಡಿಕೆ,ಕಾಳುಮೆಣಸು ಮೊದಲಾದ ವಸ್ತುಗಳನ್ನು ಕೊಡುತ್ತಿದ್ದರು.ಅನತಿ ದೂರದಿಂದ ಬಿಸಿಲಿನಲ್ಲಿ ನಡೆದು ಬಂದವರು ಮನೆಯ ಜಗುಲಿಯಲ್ಲಿ ಮಲುಗುತಿದ್ದರು.ಆದ್ದರಿಂದಲೇ ತಲೆತಲಾಂತರದಿಂದ ಯಾರಾದರೂ ಅತಿಥಿಗಳು ಊಟದ ಹೊತ್ತಿಗೆ ಬಂದರೆ ಎಂದು ಹೆಚ್ಚು ಅಡುಗೆ ಮಾಡುವ ಪದ್ದತಿ ಇತ್ತು.ಇಂದು ಕಾಲಿಗೊಂದು ಕೈಗೊಂದು ಹೋಟೇಲ್ಗಳು ಇರುವುದು ಹಸಿದವರ ಹೊಟ್ಟೆ ತಣಿಸಲು.
ವಾರಕ್ಕೊಮ್ಮೆ ಮನೆ ಬಾಗಿಲಿಗೆ ಬರುತ್ತಿದ್ದ ದಾಸಯ್ಯ .ಕರಡಿ ಕುಣಿತದ ವ್ಯಕ್ತಿ,ಜೋಗಮ್ಮ ಮೊದಲಾದವರಿಗೆ ಹಣ ದವಸ ಧಾನ್ಯ ಕೊಡುವುದರ ಹಿಂದಿನ ಕಲ್ಪನೆ ದಾನ ಧರ್ಮದ್ದಾಗಿತ್ತು.ಸಮಾಜದಲ್ಲಿ ವಿವಿಧ ಸ್ತರದ ಜನರು ವಾಸಿಸುತ್ತಿದ್ದು ಉಳ್ಳವರು ಇಲ್ಲದೆ ಇರುವ ವ್ಯಕ್ತಿಗೆ ಕೊಡುವುದನ್ನು ನೋಡುತ್ತಿದ್ದೆವು.ಧಾನ ಧರ್ಮ ಎನ್ನುವುದು ಜನರ ಜೀವನದ ನಿತ್ಯ ಘಟನೆ ಎಂಬಂತಿದ್ದು ಯಾರಿಗೂ ಹೊರೆ ಎಂಬ ಭಾವನೆ ಬರುತ್ತಿರಲಿಲ್ಲ.ದಾನಗಳಲ್ಲಿ ಅನ್ನದಾನ,ವಿದ್ಯಾದಾನ,ನೇತ್ರದಾನ,ರಕ್ತದಾನ ಮೊದಲಾದ ಹಲವಾರು ದಾನಗಳಿವೆ.ಒಂದೊಂದು ಜನಾಂಗದವರು ಒಂದೊಂದು ರೀತಿಯ ದಾನ ಮಾಡುತ್ತಾರೆ.ಹಬ್ಬ ಹರಿದಿನಗಳಲ್ಲಿ ಹಿಂದೂ ಧರ್ಮದವರು ದಾನ ಮಾಡಿದರೆ ಮುಸಲ್ಮಾನರಲ್ಲಿ ರಂಜಾನ್ ಸಂದರ್ಭದಲ್ಲಿ ಮಾಡುವ ದಾನ ಶ್ರೇಷ್ಟ ಎಂಬ ಭಾವನೆ ಇದೆ.ದಾನ ಎಂದರೆ ಸಾಮಾನ್ಯವಾಗಿ ಕರ್ಣ ಹಾಗೂ ಶಿಭಿ ಮಹಾರಾಜರ ಹೆಸರು ನೆನಪಿಗೆ ಬರುತ್ತದೆ.ಋಗ್ವೇದದಲ್ಲಿ ಅನೇಕ ದಾನಗಳ ಬಗ್ಗೆ ಮಾಹಿತಿ ಇದೆ.ದಾನ ಮಾಡಿದರೆ ಇಹಪರಗಳೆರಡರಲ್ಲು ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಎಲ್ಲರದ್ದೂ.ಮನೆಯ ಬಾಗಿಲಿಗೆ ದೇಹಿ ಎಂದು ಬರುವವರಿಗೆ ತಮ್ಮಲ್ಲಿರುವುದನ್ನು ಕೊಟ್ಟು ಸಹಾಯ ಮಾಡುವುದು ಹಿಂದಿನಿಂದಲೂ ಬಂದ ಪದ್ದತಿ.ಆದರ್ಶ ಭಾವನೆ ಬಿತ್ತುವಲ್ಲಿ ಹಾಗೂ ಉತ್ತಮ ಸಂಸ್ಕಾರ ಮಕ್ಕಳಲ್ಲಿ ಮೈಗೂಡಿಸುವುದು ಇಂತಹ ಘಟನೆಗಳಿಂದ ಸಾಧ್ಯ.ಮಕ್ಕಳು ನೋಡನೋಡುತ್ತಿದ್ದಂತೆಯೇ ಮನೆಯ ರೂಢಿಗತ ನಡವಳಿಕೆಗಳು ಅವರಲ್ಲಿಯೂ ಬೇರೂರುತ್ತಿತ್ತು.ಇದು ದಾನ ದರ್ಮದ ವಿಚಾರವೇ ಆಗಿರಬಹುದು ಅಥವಾ ಮನೆಯ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರವೇ ಆಗಿರಬಹುದು.ಹಾಡುತ್ತಾ ಹಾಡುತ್ತಾ ರಾಗ ಎಂಬಂತೆ ಮಕ್ಕಳ ಮನದಲ್ಲಿ ವಿವಿಧ ಭಾವನೆಗಳು ಮಿಳಿತವಾಗುತ್ತಿತ್ತು.ತಂದೆ ತಾಯಿ ಮಕ್ಕಳಿಗೆ ಕೊಡುವ ಮನೋಭಾವವನ್ನು ಕಲಿಸಬೇಕು.ಇಂದು ಕುಟುಂಬದ ಪರಿಕಲ್ಪನೆಯೇ ಬದಲಾಗಿದೆ.ಸಣ್ಣ ಕುಟುಂಬದಲ್ಲಿ ಬೆಳೆಯುವ ಮಕ್ಕಳು ಮನಸ್ಸು ಯಾವುದೇ ರೀತಿಯ ಹೊರಗಿನ ಪರಿಸರಕ್ಕೆ ಹೆಚ್ಚು ತೆರೆಯುವುದಿಲ್ಲ.ಭಾವನೆಗಳ ವಿಷಯಕ್ಕೆ ಬಂದರೆ ಬಾವಿಯೊಳಗಿನ ಕಪ್ಪೆಯಂತೆಯೇ ಸರಿ.ಸದಾ ಟಿ.ವಿ,ಮೊಬೈಲ್ಗಳೆಂಬ ಆಧುನಿಕ ಪರಿಕರಗಳ ಮುಂದೆ ಭಾವನೆ,ಬಾಂದವ್ಯಗಳು ಮರೀಚಿಕೆಯೇ ಸರಿ.
ಹಾಗೆಂದು ಈಗಿನವರು ದಾನ ಧರ್ಮ ಮಾಡುವುದು ಇಲ್ಲ ಎಂದು ಅರ್ಥವಲ್ಲ.ದಾನದ ಪರಿಕಲ್ಪನೆ ಬದಲಾಗಿದೆ.ಹಿಂದಿನ ಹಾಗೆ ಮನೆ ಬಾಗಿಲಿಗೆ ಬರುವ ದಾಸಯ್ಯ,ಜೋಗತಿ ಎಲ್ಲಮ್ಮ,ಬುರುಡೆ ದಾಸಯ್ಯ ಮೊದಲಾದವರು ಕಣ್ಣಿಗೆ ಬೀಳುವುದು ವಿರಳ.ಸಮಾಜದ ವಿವಿಧ ಜನರಿಗೆ ಸಹಾಯ ಮಾಡಲೆಂದೇ ಸಂಘ ಸಂಸ್ಥೆಗಳಿವೆ.ಬಡಮಕ್ಕಳಿಗೆ ವಿದ್ಯಾರ್ಥಿ ವೇತನ,ಪುಸ್ತಕ ಹಂಚಿಕೆ, ಶಾಲಾ ಶುಲ್ಕ ತುಂಬುವುದು ಹೀಗೆ ಮೊದಲಾದ ಸಹಾಯ ಮಾಡುವ ವ್ಯವಸ್ಥೆ ಇದೆ.ಕೆಲವರು ತಮ್ಮ ಮಕ್ಕಳ ಹುಟ್ಟು ಹಬ್ಬ,ವಿವಾಹ ವಾರ್ಷಿಕೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ಅನಾಥಾಶ್ರಮ,ವೃದ್ದಾಶ್ರಮ ಇಂತಹ ಕಡೆಗಳಲ್ಲಿ ಆಚರಿಸುತ್ತಾರೆ.ಇನ್ನು ಕೆಲವರು ವರ್ಷಕ್ಕೊಮ್ಮೆ ತೆರಿಗೆ ಉಳಿತಾಯಕ್ಕೆ ಅನುಕೂಲ ಆಗುವ ಹಾಗೆ ಕೆಲವು ಸಂಸ್ಥೆಗಳಿಗೆ ಧನ ಸಹಾಯ ಮಾಡುವುದೂ ಇದೆ.ಈಗೀಗ ಎಲ್ಲವೂ ಡಿಜಿಟಲ್ ವ್ಯವಸ್ಥೆ ಆಗಿರುವುದರಿಂದ ಕೈಗೆಟಕುವ ಹಾಗೆ ಸುಲಭವಾಗಿ ಹಣ ಸಂದಾಯ ಮಾಡಬಹುದು.ಒಂದರ್ಥದಲ್ಲಿ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎಂಬ ಹಿರಿಯರ ವಾಡಿಕೆ ಮಾತು ಅಕ್ಷರಷಃ ಪಾಲನೆ ಆಗುತ್ತಿದೆ ಎಂದರೂ ತಪ್ಪಲ್ಲ.
ಮೊನ್ನೆ ತರಕಾರಿ ಖಾಲಿ ಆಗಿದೆ ಎಂದು ತರಕಾರಿ ಕೊಳ್ಳಲು ಅಂಗಡಿಗೆ ಹೋಗಿದ್ದೆ.ಸದಾ ಕಾಲ ಮನೆಯಲ್ಲಿಯೇ ಬಂಧಿಯಾಗಿದ್ದ ಮಕ್ಕಳೂ ನನ್ನ ಜೊತೆಯಲ್ಲಿ ಇದ್ದರು.ತರಕಾರಿ ಕೊಳ್ಳುವ ಸಮಯಕ್ಕೆ ದಾಸಯ್ಯ ಅವರನ್ನು ನೋಡಿ ಒಮ್ಮೆಲೇ ಅಚ್ಚರಿ ಆಯಿತು.ಅರೇ ,ಇದೇನಿದು ಬೆಂಗಳೂರಿನಲ್ಲಿಯೂ ಅವರನ್ನುನೋಡುವ ಭಾಗ್ಯ ದೊರೆಯಿತು ಎಂದು.ಮಗಳ ಹತ್ತಿರ ಹಣ ಕೊಡಲು ಕೊಟ್ಟಾಗ ಮಗ ತಾನೂ ಕೊಡುವುದಾಗಿ ಹೇಳಿದ.ವಯೋವೃದ್ದ ದಾಸಯ್ಯ ಮಕ್ಕಳಿಂದ ಹಣ ಪಡೆದು ಒಳ್ಳೆಯದಾಗಲಿ ಎಂದು ಹರಸಿದಾಗ ಮನ ತುಂಬಿ ಬಂತು.ಅಕ್ಕಾ,ಅಪರೂಪಕ್ಕೆ ದಾಸಯ್ಯ ಬರುತ್ತಾರೆ,ಕೊಡುವ ಹಣ ಪಡೆದು ಹಸನ್ಮುಖವಾಗಿ ತೆರೆಳುತ್ತಾರೆ ಎಂದರು ಅಂಗಡಿಯ ಪರಿಚಿತ ಹುಡುಗ.ಅವರನ್ನು ಕಂಡದ್ದೇ ಮಕ್ಕಳ ಪ್ರಶ್ನೆಗೆ ಉತ್ತರಿಸುವಲ್ಲಿ ಕೆಲವು ತರಕಾರಿ ತರುವುದನ್ನು ಮರೆತೆ.ಮರೆತ ತರಕಾರಿಯ ನಡುವೆ ನನ್ನ ಬಾಲ್ಯ ನೆನಪಿಸಿ ಮಕ್ಕಳಿಗೆ ಹಿಂದಿನ ಜನ ಜೀವನ ಪರಿಚಯಿಸುವ ಹಾಗೆ ಮಾಡಿದ ಅಜ್ಜನಿಗೆ ನನ್ನ ನಮನಗಳು.
ಬರಹ
ಆತ್ಮ.ಜಿ.ಎಸ್
ಮೊ;9742208079