ರೈತರಿಗೆ ತಾವು ಬೆಳೆದ ಉತ್ಪನ್ನಗಳನ್ನು ಒಣಗಿಸಿ ಸಂಸ್ಕರಿಸಿ ಶೇಖರಿಸಿರುವುದು ಸದಾ ಸವಾಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಅಕಾಲದಲ್ಲಿ ಸುರಿಯವ ಮಳೆ, ಬೆಳಗಿನ ಜಾವ ವಿಪರೀತ ಇಬ್ಬನಿ ಇತ್ಯಾದಿಗಳಿಂದ ಫಸಲನ್ನು ಸಂಸ್ಕರಿಸಲು ಹೆಣಗುತ್ತಿರುತ್ತಾರೆ. ಕೆಲವೊಮ್ಮೆ ಮಾರುಕಟ್ಟೆ ಧಾರಣೆ ಏರಿದಾಗ ಬೆಳೆಗಳು ಒಣಗಿಸಿ ಮಾರಲು ಸಿದ್ಧವಾಗಿರುವುದಿಲ್ಲ. ಇದಕ್ಕಾಗಿ ಒಣಗಿಸಬೇಕಾದ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಲು ಬಗೆ ಬಗೆಯ ಡ್ರೈಯರ್‍ಗಳು ಬಂದರೂ ಅವು ಇಂಧನ ಮೂಲದ್ದಾಗಿ ದುಬಾರಿ ವೆಚ್ಚದವಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂನ ಪ್ರಗತಿಪರ ರೈತ ಎಸ್.ಸುಬ್ಬಣ್ಣ ನಾಯಕ್ ಪಾಲಿಥಿನ್ ಕವರ್ (ಪ್ಲಾಸ್ಟಿಕ್ ಟಾರ್ಪಲ್) ಬಳಸಿ ಸೂರ್ಯನ ಬಿಸಿಲಿನಿಂದ ಒಣಗಿಸುವ ಘಟಕ ಸ್ಥಾಪಿಸಿದ್ದಾರೆ.ಕೃಷಿ ಕಾರ್ಯದಲ್ಲಿ ಅನೇಕ ವರ್ಷಗಳಿಂದ ಸತತವಾಗು ಹಲವು ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿರುವ ಅವರು 83 ರ ಇಳಿವಯದಲ್ಲೂ ಸೂರ್ಯನ ಬಿಸಿಲಿನ ಡ್ರೈಯರ್ ಘಟಕ ಸ್ಥಾಪಿಸಿ ಈಗ ಸುತ್ತಮುತ್ತಲ ರೈತರಿಗೆ ಹೊಸದೊಂದು ವ್ಯವಸ್ಥೆ ಪರಿಚಯಿಸಿದ್ದಾರೆ.
ಕಬ್ಬಿಣದ ರಾಡ್ ಮತ್ತು ಪಟ್ಟಿಗಳನ್ನು ವೆಲ್ಡ್ ಮಾಡಿಸಿ ಕಮಾನಾಕೃತಿಯ ಶೆಡ್ ನಿರ್ಮಿಸಿ ಶಿಲ್ಪಾಲಿನ್ ಶೀಟ್ ಹಾಕಿಸಿದ್ದಾರೆ. ಬೆಳಿಗ್ಗೆಯಿಂದ ಸೂರ್ಯನ ಬಿಸಿಲು ಹೆಚ್ಚಿದಂತೆ ಒಳ ಆವರಣದ ಉಷ್ಣಾಂಶ ಏರುತ್ತಾ ಸಾಗುತ್ತದೆ. ಮಧ್ಯಾಹ್ನದ ಸುಮಾರಿಗೆ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ನಿರ್ಮಾಣವಾಗುತ್ತದೆ. ಇವರು ಕಮಾನಾಕೃತಿಯ ಶೆಡ್ ನಿರ್ಮಾಣಕ್ಕೆ ಕಬ್ಬಿಣದ ರಾಡ್‍ಗಳನ್ನು ಬಳಸಿದ್ದು ಗ್ರಾಮೀಣ ರೈತರು ಇದೇ ಮಾದರಿಯಲ್ಲಿ ತಮ್ಮ ಹೊಲದಲ್ಲಿ ಸಿಗುವ ಬಿದಿರು, ಅಡಕೆ ದಬ್ಬೆ ಇತ್ಯಾದಿಗಳನ್ನು ಬಳಸಿ ಈ ಡ್ರೈಯರ್ ನಿರ್ಮಿಸಿಕೊಳ್ಳಬಹುದಾಗಿದೆ. ಈ ಶೆಡ್ ಒಳಗೆ ಬೇಯಿಸಿದ ಅಡಿಕೆ 4 ದಿನಕ್ಕೆ, ಹಸಿ ಶುಂಠಿ ಸಂಸ್ಕರಿಸಿ ಒಣ ಶುಂಠಿ ತಯಾರಿ 5 ದಿನಕ್ಕೆ, ಚಾಲಿ ಅಡಿಕೆ 20 ದಿನಕ್ಕೆ, ಗೋಡಂಬಿ ಮತ್ತು ಕಾಳು ಮೆಣಸು 3 ದಿನಕ್ಕೆ, ಏಲಕ್ಕಿ 2 ದಿನಕ್ಕೆ , ಕೊಬ್ಬರಿ 3 ದಿನಕ್ಕೆ ಒಣಗಿ ಮಾರಲು ಸಿದ್ಧವಾಗುತ್ತದೆ.ಮಾಮೂಲು ಬಿಸಿಲಿನಲ್ಲಿ ಒಣಗಿಸುವುದಕ್ಕಿಂತ ಶೇ.50 ರಷ್ಟು ಕಡಿಮೆ ಅವಧಿಯಲ್ಲಿ ಈ ಡ್ರೈಯರ್ ಕೃಷಿ ಉತ್ಪನ್ನಗಳನ್ನು ಒಣಗಿಸುತ್ತದೆ ಎನ್ನುತ್ತಾರೆ ಸುಬ್ಬಣ್ಣ ನಾಯಕ್.
ಶಿವಮೊಗ್ಗ- ಸಾಗರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 206 ರ ಯಡೇಹಳ್ಳಿ ಗೌರಿ ಕೆರೆಯ ಕೆಳ ಭಾಗದಲ್ಲಿ ಇವರು 10 ಎಕರೆ ಅಡಿಕೆ ತೋಟ ಹೊಂದಿದ್ದು 100 ಕ್ವಿಂಟಾಲ್‍ಗೂ ಅಧಿಕ ಅಡಿಕೆ ಬೆಳೆಯುತ್ತಾರೆ. ಬೃಹತ್ ಪ್ರಮಾಣದ ಈ ಉತ್ಪನ್ನವನ್ನು ಒಣಗಿಸುವುದು, ಅಕಾಲದಲ್ಲಿ ಮಳೆ ಬಿದ್ದರೆ ತಕ್ಷಣ ಮುಚ್ಚಿ ಸಂರಕ್ಷಿಸುವುದು , ಇಲಿ- ಹೆಗ್ಗಣ , ಕಾಗೆ, ಹದ್ದು, ಗಿಡುವ, ಹಾವು ಇತ್ಯಾದಿ ಜೀವಿಗಳಿಂದ ಅಡಕೆ, ಕೊಬ್ಬರಿ, ಕಾಳು ಮೆಣಸು ,ಗೋಡಂಬಿಗಳನ್ನು ಕಾಪಾಡುವುದು ಇವರಿಗೆ ಪ್ರತಿ ವರ್ಷ ತಲೆ ನೋವಿನ ವಿಷಯವಾಗಿತ್ತು. ಇವರು ತಮ್ಮ ಮನೆಯ ಅಂಗಳದ ಬಯಲಿನಲ್ಲಿ 56ಘಿ42 ಅಡಿ ಅಳತೆಯ ಈ ಶೆಡ್ ನಿರ್ಮಿಸಿದ್ದು ಸುತ್ತಮುತ್ತಲ ಗ್ರಾಮೀಣ ರೈತರಿಗೆ ಮಾದರಿಯಾಗಿಸಿದ್ದಾರೆ. ಗ್ರಾಮೀಣ ಸಣ್ಣ ರೈತರು ಚಿಕ್ಕ ಅಳತೆಯಲ್ಲಿ ಕಡಿಮೆ ವೆಚ್ಚದಲ್ಲಿ ಇಂತಹ ಡ್ರೈಯರ್ ನಿರ್ಮಿಸಿಕೊಂಡರೆ ಬಹು ಪ್ರಯೋಜನವಾಗುತ್ತದೆ ಎಂಬುದು ಅವರ ಅಭಿಪ್ರಾಯ. ಮಳೆಗಾಲದಲ್ಲಿ ಹಪ್ಪಳ ಸಂಡಿಗೆ ಮಾಡಲು, ಕೊಳೆ ಅಡಿಕೆ, ಕೋಕಾ, ಜಾಯಿಕಾಯಿ, ರಾಮಪತ್ರೆಗಳನ್ನು ಒಣಗಿಸಲು ಇದು ಉತ್ತಮ ವಿಧಾನ ಎನ್ನುತ್ತಾರೆ ಅವರು.
30 ವರ್ಷಗಳಿಂದ ಆನಂದಪುರದಂತಹ ಗ್ರಾಮೀಣ ಪ್ರದೇಶದಲ್ಲಿ ರೈತ ಬಂಧು ಗ್ರಾಮೋದ್ಯೋಗ ಘಟಕ ಸ್ಥಾಪಿಸಿ ಸ್ಪರ್ಧಾತ್ಮಕ ಬೆಲೆಯಲ್ಲಿ ಭತ್ತ ಖರೀದಿಸಿ ಕುಚ್ಚಿಗೆ ಅಕ್ಕಿ ಮತ್ತು ಅವಲಕ್ಕಿ ಉತ್ಪಾದಿಸಿ ನೂರಾರು ಹೆಣ್ಣು ಮಕ್ಕಳಿಗೆ ಉದ್ಯೋಗ ಕಲ್ಪಸಿ ಇವರು ಮನೆ ಮಾತಾಗಿದ್ದರು. ಈಗ ರೈತ ಬಂಧು ತೋಟ ಸ್ಥಾಪಿಸಿ ಸುತ್ತಮುತ್ತಲ ರೈತರಿಗೆ ಪ್ರಗತಿಪರ ಕೃಷಿ ಬಗ್ಗೆ ಮಾರ್ಗದರ್ಶನ ನೀಡುತ್ತಿರುವ ಇವರು ಸದಾ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದಾರೆ. ಇವರ ಪ್ರತಿ ಹೆಜ್ಜೆಗೂ ಇವರ ಪತ್ನಿ ಇಂದಿರಮ್ಮ ಹಾಗೂ ಸಹಾಯಕ ಅರುಣ್ ಭಟ್ ಸಹಕಾರ ನೀಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸುಬ್ಬಣ್ಣ ನಾಯಕ್ ಅವರ ಮೊಬೈಲ್ ಸಂಖ್ಯೆ 9731777750 ನ್ನು ಸಂಪರ್ಕಿಸಬಹುದಾಗಿದೆ.
ಲೇಖನ ಮತ್ತು ಫೋಟೋ- ಎನ್.ಡಿ. ಹೆಗಡೆ ಆನಂದಪುರಂ