ಪಾಕಶಾಲೆ

ಜಿಲೇಬಿ ಮಾಡಿ.. ಹೆಮ್ಮೆಪಟ್ಟುಕೊಂಡು ಜಗತ್ತಿಗೆಲ್ಲ ಸಾರಿ..!

ಜಿಲೇಬಿ ಎನ್ನುವ ರಮಣೀಯ ಖಾದ್ಯವನ್ನು ಮಾಡಲು ಪ್ರತಿ ಹೆಜ್ಜೆಯೂ ಸರಿ ಇರಲೇ ಬೇಕು

ವಿಜಯಶ್ರೀ ನಟರಾಜ್

ಮೊದಲ ಸಲ ಸುಮಾರು ನಾಲ್ಕು ವರ್ಷಗಳ ಹಿಂದೆ ಜಿಲೇಬಿ ಮಾಡಿದ್ದನ್ನು ಹೆಮ್ಮೆಪಟ್ಟುಕೊಂಡು ಜಗತ್ತಿಗೆಲ್ಲ ಸಾರಿದ್ದು ನಿಮಗೂ ನೆನಪಿಗೆ ಬಂದಿರಬಹುದು. ಅದು ಜಿಲೇಬಿ… ಜಿಲೇಬಿ ಹೌದೋ ಅಲ್ಲವೋ ಎಂಬುದನ್ನು ನಮ್ಮನೆಯಲ್ಲಿರುವ ಮೂವರು ತಜ್ಞರು ಅಳೆದು ಸುರಿದು ( ಸುರಿದಿದ್ದು ಎಲ್ಲಿಗೆ ಅಂತ ಯಾರೂ ತನಿಖೆ ಮಾಡಬೇಡಿ ದಯವಿಟ್ಟು..!) ನೋಡಿ, ಇವಳಿಂದ ಮಾತ್ರ ಜಿಲೇಬಿ ಎಂದು ಕರೆಸಿಕೊಳ್ಳಲ್ಪಡುವ ಬೇರೆ ಯಾವುದೋ ಒಂದು ವಸ್ತು ಎಂದು ಒಮ್ಮತದಿಂದ ತೀರ್ಮಾನಕ್ಕೆ ಬಂದಿದ್ದರೂ ನಾನು ಮಾತ್ರಾ ಅದನ್ನುಸಾರಾಸಗಟಾಗಿ ತಿರಸ್ಕರಿಸಿ ಜಗತ್ತಿನ ಯಾವುದೋ ಒಂದು ಅದ್ಭುತವೇ ಸರಿ ಎಂಬಂತೆ ಬ್ಲಾಗು, ಫೇಸ್ಬುಕ್ಕು ಜೊತೆಗೆ ನಾಡಿನ ಎಲ್ಲ ಸ್ತರದವರಿಗೂ ತಿಳಿಯಲೆಂಬಂತೆ ಪತ್ರಿಕೆಗೂ ಕಳಿಸಿ ನನಗೆ ನಾನೇ ಹೆಮ್ಮೆ ಪಟ್ಟುಕೊಂಡಿದ್ದು ನಿನ್ನೆ ಮೊನ್ನೆ ನಡೆದಂತಿದೆ..! ಅಂತೂ ಮೊದಲ ಪ್ರಯತ್ನ ಯಶಸ್ವಿಯಾಗಿ ಡಿಸ್ ಕ್ವಾಲಿಫೈ ಆಯ್ತು… !

ಹೆತ್ತವಳಿಗೆ ಹೆಗ್ಗಣ ಮುದ್ದು .. ಕಟ್ಟಿಕೊಂಡವನಿಗೆ ಕೋಡಂಗಿ ಮುದ್ದು ಎನ್ನುವಂತೆ ನಾ ಮಾಡಿದ ಜಿಲೇಬಿ ನನಗೆ ಮುದ್ದು .. :) ಯಾರೇನೇ ಅಂದರೂ ನಾನು ಮಾತ್ರ ಮತ್ತೊಮ್ಮೆ ಮಗದೊಮ್ಮೆ ನನ್ನ ಜಿಲೇಬಿ ಪ್ರಯೋಗಗಳನ್ನು ಮಾಡುತ್ತಲೇ ಹೋದೆ. ಪ್ರತಿ ಸಾರಿಯೂ ಒಂದೊಂದು ಹೊಸ ವಿಷಯವನ್ನು ಕಲಿಯುತ್ತಲೇ ಹೋದೆ.

ಜಿಲೇಬಿ ಎನ್ನುವ ರಮಣೀಯ ಖಾದ್ಯವನ್ನು ಮಾಡಲು ಪ್ರತಿ ಹೆಜ್ಜೆಯೂ ಸರಿ ಇರಲೇ ಬೇಕು. ಹಿಟ್ಟಿನ ಹದ, ಜಿಲೇಬಿ ಬೇಯಿಸುವ ಹದ , ಸಕ್ಕರೆ ಪಾಕ, ಉರಿ, ಜಿಲೇಬಿ ಹಿಟ್ಟನ್ನು ಎಣ್ಣೆಗೆ ಬಿಡುವ ಕಲೆ ಎಲ್ಲವೂ ಲೆಕ್ಕಾಚಾರ ಸರಿ ಇದ್ದರೆ ಮಾತ್ರ ನಿಮಗೆ ಉತ್ತಮ ಜಿಲೇಬಿ ಭಾಗ್ಯ ಸಿಗುತ್ತದೆ. ನಾನು ಸುಮಾರು ಏಳೆಂಟು ಸಲ ಜಿಲೇಬಿ ಮಾಡಿ ಮಾಡಿ ಈ ನಡುವೆ ತಿನ್ನಲು ಯೋಗ್ಯವಾದ ಜಿಲೇಬಿಗಳನ್ನು ಮಾಡುತ್ತಿದ್ದೇನೆ. ಯೂ ಟ್ಯೂಬ್ ನೋಡಿ, ಅವರಿವರು ಮಾಡಿದ್ದನ್ನು ನೋಡಿ ಮನದಲ್ಲೇ ಲೆಕ್ಕಾಚಾರ ಹಾಕಿ, ಯಾರ್ಯಾರನ್ನೋ ಕೇಳಿ ಈ ಮಟ್ಟಕ್ಕೆ ಬಂದಿದ್ದೇನೆ. ರಾಜಕುಮಾರನೊಬ್ಬ ಸಾವಿರಾರು ಮೈಲಿ ಪ್ರಯಾಣ ಮಾಡಿ ಏಳು ಸಮುದ್ರದ ಆಚೆ, ಏಳು ಕೋಟೆಯ ನಡುವೆ ಬಂಧಿತಳಾದ ರಾಜಕುಮಾರಿಯನ್ನು ಕರೆತರಲು ಹರ ಸಾಹಸ ಮಾಡಿದಂತೆ ನಾನೂ ಈ ಸ್ವೀಟಿನ ತಯಾರಿಯಲ್ಲಿ ಎಲ್ಲ ತಪ್ಪುಗಳನ್ನೂ ಹಾದು ಬಂದು ಸಾಹಸ ಗೈದಿದ್ದೇನೆ ಎನ್ನಲು ಸಂತೋಷಿಸುತ್ತೇನೆ . :)

ಮೊದಲು ವಿಧಾನ ವಿವರಿಸುತ್ತೇನೆ ನಿಧಾನ ಕೇಳಿ.

ಒಂದು ಲೋಟ ಮೈದಾ ಹಿಟ್ಟಿಗೆ ಎರಡು ಚಮಚ ಮೊಸರು+ ಒಂದು ಚಮಚ ಕಡಲೆ ಹಿಟ್ಟು + ಚಿಟಿಕೆ ಅರಿಶಿನ + ನೀರು ಹಾಕಿ ದೋಸೆಯ ಹಿಟ್ಟಿನ ಹದಕ್ಕಿಂತಲೂ ಸ್ವಲ್ಪ ದಪ್ಪ ಹದಕ್ಕೆ ಗಂಟುಗಳಿಲ್ಲದಂತೆ ಕದಡಿ. ಸುಮಾರು ೧೦ ಘಂಟೆ ಹಿಟ್ಟು ಹುಳಿ ಬರಲು ಬಿಡಿ. ಮಾಡುವ ಹೊತ್ತಿಗೆ ಚಿಟಿಕೆ ಸೋಡಾ ಬೆರೆಸಿ.
ಸಕ್ಕರೆ ಪಾಕಕ್ಕೆ- ಎರಡು ಲೋಟ ಸಕ್ಕರೆಗೆ ಒಂದು ಲೋಟ ನೀರು ಹಾಕಿ ಎಳೆ ಪಾಕ ಮಾಡಿಟ್ಟುಕೊಳ್ಳಬೇಕು. ಪಾಕ ತುಂಬಾ ಬಿಸಿಯೂ ಇರದೇ ತಣ್ಣಗೂ ಇರದೇ ಮಧ್ಯಮ ತಾಪದಲ್ಲಿ ಇರಲಿ. ಒಂದು ಚಮಚ ಲಿಂಬೆ ಹುಳಿ + ಒಂದು ಚಮಚ ಜೇನುತುಪ್ಪ ವನ್ನು ಕುದಿಯುವಾಗಲೇ ಸೇರಿಸಿ. ಕೇಸರಿ ಎಸಳುಗಳನ್ನು ಸೇರಿಸಬಹುದು.

ಅಗಲ ತಳದ ಪ್ಯಾನನ್ನು ಓಲೆ ಮೇಲಿಟ್ಟು ಎಣ್ಣೆ ಹಾಕಿ. ಸುಮಾರು ಒಂದೂವರೆ ಇಂಚು ಮುಳುಗುವಷ್ಟು ಇರಲಿ. ಉರಿ ಸಿಮ್ ನಲ್ಲಿರಲಿ. ಮಧ್ಯದಲ್ಲಿ ತೂತಿರುವ ದಪ್ಪ ಬಟ್ಟೆ ಅಥವಾ ಸ್ಕ್ವೀಝರ್ ಗೆ ಹಿಟ್ಟನ್ನು ತುಂಬಿಕೊಳ್ಳಿ. ಎಣ್ಣೆ ಕಾದಿದೆಯಾ ನೋಡಲು ಒಂದು ಹನಿ ಹಿಟ್ಟು ಎಣ್ಣೆಗೆ ಹಾಕಿದರೆ ಅದು ತಕ್ಷಣ ತಳ ಬಿಟ್ಟು ಏಳುತ್ತದೆ .. ಅಂದರೆ ಕಾದಿದೆ ಅಂತ ಅರ್ಥ. ಈಗ ನಿಧಾನಕ್ಕೆ ಹಿಟ್ಟನ್ನು ಜಿಲೇಬಿ ಆಕಾರಕ್ಕೆ (?) ಎಣ್ಣೆಗೆ ಬಿಡಿ. ಕರಿಯುವವರೆಗೆ ಸಹನೆಯಿಂದ ಕಾಯುವುದೂ ಇಲ್ಲಿ ಮುಖ್ಯ. ಜಿಲೇಬಿ ಸ್ವಲ್ಪ ಹೊಂಬಣ್ಣಕ್ಕೆ ತಿರುಗಿ ಗರಿ ಗರಿಯಾದ ಲಕ್ಷಣ ಕಂಡುಬಂದಾಗ ತೆಗೆದು ಪಾಕಕ್ಕೆ ಹಾಕಿ ಅರ್ಧ ನಿಮಿಷದಿಂದ ಒಂದು ನಿಮಿಷದ ವರೆಗೆ ಪಾಕದಲ್ಲಿ ಅದ್ದಿ ನಂತರ ಬೇರೆ ಪ್ಲೇಟಿಗೆ ವರ್ಗಾಯಿಸಿ.

ಮಾಡಿದ ಮತ್ತು ಮಾಡುವ ತಪ್ಪುಗಳು :

೧. ಹಿಟ್ಟು ತೆಳ್ಳಗೆ ಆದರೆ ಜಿಲೇಬಿ ದುಂಡನೆಯ ಜಿಲೇಬಿಯಾಗದೆ ಚಪ್ಪಟೆಯಾಗುತ್ತದೆ. ಜಿಲೇಬಿ ಗರಿಗರಿಯಾಗದೆ ಮೆತ್ತಗಾಗುತ್ತದೆ. ಹಿಟ್ಟಿನಲ್ಲಿ ಗಂಟುಗಳಿಲ್ಲದಂತೆ ನೋಡಿಕೊಳ್ಳಿ.

೨. ಸಕ್ಕರೆ ಪಾಕ ತೆಳ್ಳಗಾದರೆ ಸ್ವಲ್ಪ ಹೊತ್ತಿನ ನಂತರ ಜಿಲೇಬಿಯಿಂದ ಪಾಕ ಸೋರಿ ಹೋಗುತ್ತದೆ. ತೀರಾ ದಪ್ಪ ಇದ್ದಲ್ಲಿ ಪಾಕ ಹೀರಿಕೊಳ್ಳುವುದಿಲ್ಲ. ಮೊದ ಮೊದಲು ಪಾಕ ಸರಿ ಹದದಲ್ಲಿ ಇದ್ದು ತಣ್ಣಗಾದಂತೆ ದಪ್ಪವಾಗುತ್ತದೆ.. ತುಸುವೇ ನೀರು ಬೆರೆಸಿ ಮತ್ತೆ ಒಂದು ಕುದಿ ಬರಿಸಿಕೊಳ್ಳಬೇಕು

೩, ಎಣ್ಣೆ ಸಣ್ಣ ಉರಿಯಲ್ಲಿಯೇ ಕಾಯಬೇಕು ಮತ್ತು ಕೊನೆಯವರೆಗೂ ಉರಿ ಸಿಮ್ ನಲ್ಲಿಯೇ ಇರಬೇಕು. ಕರಿಯಲು ಎಣ್ಣೆ ಕಡಿಮೆಯಾದರೆ ಸರಿಯಾಗಿ ಬೇಯುವುದಿಲ್ಲ. ಹಿಟ್ಟು ತಳ ಬಿಟ್ಟು ಮೇಲೆ ಬರುವಷ್ಟಾದರೂ ಎಣ್ಣೆ ಬಾಣಲೆಯಲ್ಲಿ ಇರಲೇ ಬೇಕು. ಕೌಚಿ ಮಗುಚಿ ಬೇಯಿಸಬೇಕು. ಉರಿ ಜಾಸ್ತಿಯಾದರೆ ಜಿಲೇಬಿ ಗರಿಗರಿಯಾಗುವುದಿಲ್ಲ.

೪. ಇನ್ನು ಜಿಲೇಬಿ ಬಿಡುವ ಕಲೆ… ನಿಮ್ಮ ಹಣೆಬರಹದಲ್ಲಿ ಹೇಗಿದೆಯೋ ಯಾರಿಗ್ಗೊತ್ತು..:) ಮೊದಮೊದಲು ಸಕಲೆಂಟು ಜಾತಿಯ ಜೀವರಾಶಿಗಳ ಉಗಮವಾಗಿ ಸಮುದ್ರ ಮಥನದಲ್ಲಿ ಕೊನೆಯಲ್ಲಿ ಅಮೃತ ದೊರಕಿದಂತೆ ನಾಲ್ಕಾರು ಪ್ರಯೋಗಗಳ ಬಳಿಕ ಒಂದು ಶೈಲಿ ನಿಮಗೆ ಒಲಿಯಬಹುದು… :) ನಾನೂ ಇನ್ನೂ ಪ್ರಾಕ್ಟೀಸ್ ಹಂತದಲ್ಲಿಯೇ ಇದ್ದೇನೆ. ಕಾಲಾಂತರದಲ್ಲಿ ಸುಧಾರಣೆ ಆಗಬಹುದೆಂಬ ಬಹುದೊಡ್ಡ ನಂಬಿಕೆಯೊಂದಿಗೆ ..:)

ನನ್ನದು ಟ್ರಯಲ್ ಅಂಡ್ ಎರರ್ ಪದ್ಧತಿ … ಹಾಗಾಗಿ ನನ್ನ ಜಿಲೇಬಿಗೆ ಇನ್ನೂ ಉತ್ತಮ ತರಗತಿಯ ರಿಸರ್ಚ್ ಅಂಡ್ ಡೆವಲಪ್ಮೆಂಟ್ ನ ಅಗತ್ಯ ಇರಬಹುದು… ಇಲ್ಲಿರುವ ಜಿಲೇಬಿ ಪಂಡಿತರುಗಳು ಹೆಚ್ಚಿನ ಮಾಹಿತಿ ಕೊಡುತ್ತಾರೆಂದು ಭಾವಿಸುತ್ತಾ ಈ ರಗಳೆಯನ್ನು ಮುಗಿಸುತ್ತಿದ್ದೇನೆ.

ಧನ್ಯವಾದಗಳು .

ವಿಜಯಶ್ರೀ ನಟರಾಜ್

Vijayashree Nataraj – A self-taught artist, born in a village ‘Kanuthota’ near Sagar, Shivamogga dist. Graduated in B.Sc and M.A.[Psychology]. She was very much interested in drawing and painting from childhood. She is a blogger and a writer too.

She did her solo exhibition in October at Karnataka Chitrakala Parishat

Participated in group exhibition in Havyaka Mahasabha. Bangalore.
the group exhibition ‘ artisan’, the vision splashers! in Fairfield by Marriot. The group exhibition in Reves gallery ‘Exprima Frais’ participating in the group shows ‘Akanksha’

She is an illustrator for Utthana monthly magazine and some Kannada daily Newspapers like Hosadigantha, Vishwavani.

She is expert in rare and unique art- thread painting live with music.

Her blog link is

https://chukkichittaara.blogspot.com/

 

Mail ID – [email protected]

ಕಲಾವಿದೆ – ವಿಜಯಶ್ರೀ ನಟರಾಜ್ ಹುಟ್ಟಿದ್ದು ಬೆಳೆದಿದ್ದು – ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾನುತೋಟ ಎಂಬಲ್ಲಿ . ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ. ವಿದ್ಯಾಬ್ಯಾಸ – ಸಾಗರದ ಲಾಲಬಹಾದ್ದೂರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಮತ್ತು ಮಾನವಿಕಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.

ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿಯಿರುವ ಇವರು ಚಿತ್ರಕಲೆಯಲ್ಲಿ ಯಾವುದೇ ಶಾಸ್ತ್ರೀಯ ಶಿಕ್ಷಣವಿಲ್ಲದಿದ್ದಾಗ್ಯೂ ಸ್ವಂತ ಆಸಕ್ತಿಯಿಂದ ಕಲಿತದ್ದೇ ಹೆಚ್ಚು. ಹವ್ಯಾಸೀ ಕಲಾವಿದರಿಗಾಗಿ ಚಿತ್ರಕಲಾ ಪರಿಷತ್ತಿನವರು ನಡೆಸುವ ಆರು ತಿಂಗಳ ಚಿತ್ರಕಲಾ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಅನೇಕ ಕಲಾ ಶಿಬಿರಗಳಲ್ಲೂ ಭಾಗವಹಿಸಿದ್ದಾರೆ. ಪೆನ್ಸಿಲ್, ಚಾರ್ಕೋಲ್ , ಜಲವರ್ಣ , ತೈಲವರ್ಣ , ಅಕ್ರಿಲಿಕ್ ಮಾಧ್ಯಮಗಳಲ್ಲಿ ಚಿತ್ರಗಳನ್ನು ರಚಿಸುವ ಇವರು ಚುಕ್ಕಿ ಚಿತ್ರಗಳನ್ನೂ ಕೂಡಾ ರಚಿಸುತ್ತಾರೆ. ಹೆಚ್ಚಾಗಿ ನೈಜ ಚಿತ್ರಗಳನ್ನೇ ರಚಿಸುವ ಇವರು ಭಾವಚಿತ್ರ ರಚನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಸಮಕಾಲೀನ ಚಿತ್ರ ರಚನೆ ಮತ್ತು ವರ್ಣ ವಿನ್ಯಾಸಗಳಲ್ಲೂ ಅಪಾರ ಆಸಕ್ತಿಯಿದೆ. ಅನೇಕ ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಚಿತ್ರ ಸಂತೆಯಲ್ಲೂ ಕೂಡ ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಮನೆಯಲ್ಲಿಯೇ ಆಸಕ್ತ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಚಿತ್ರಕಲೆಯನ್ನು ಕಲಿಸುತ್ತಾರೆ. ಇವರು ಸಂಗೀತದೊಂದಿಗೆ ವೇದಿಕೆಯ ಮೇಲೆ ದಾರದಲ್ಲಿ ಚಿತ್ರ ರಚನೆ ಮಾಡುವಲ್ಲಿ ಸಿದ್ಧ ಹಸ್ತರಾಗಿದ್ದಾರೆ.

ಇವರೊಬ್ಬ ಬ್ಲಾಗರ್ ಕೂಡ ಆಗಿದ್ದು ‘ಚುಕ್ಕಿಚಿತ್ತಾರ ‘ಎನ್ನುವ ಬ್ಲಾಗ್ ನಲ್ಲಿ ಇವರ ಹಲವು ಬಗೆಯ ಲೇಖನಗಳನ್ನು ನೋಡಬಹುದು.

 

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.