ಕಲಾಪ್ರಪಂಚನೃತ್ಯ

ಮಾಧುರಿ ಉಪಾದ್ಯ- ಸಮಾಕಾಲೀನ ನೃತ್ಯದ ಅಪ್ರತಿಮ ಸಾಧಕಿ

14-MADHURI UPADYA-ಸಂದರ್ಶನ-ಚಿನ್ಮಯ ಎಮ್.ರಾವ್ ಹೊನಗೋಡು 

೧-ನೀವು ಈ ಕ್ಷೇತ್ರಕ್ಕೆ ಬಂದದ್ದು ಹೇಗೆ?

ನಾನು ಬಾಲ್ಯದಿಂದಲೂ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದೆ. ಜಾನಪದ ಲೋಕದಿಂದ ಜಾನಪದ ನೃತ್ಯಗಳನ್ನೂ ಕಲಿತೆ. ಆನಂತರ ಚಿತ್ರಕಲಾ ಪರಿಷತ್‌ಗೆ ಸೇರಿದೆ. ವಿಶೇಷವಾಗಿ ಪೆಯಿಂಟಿಂಗ್ ಕಲಿತೆ. ಇವುಗಳ ಜೊತೆಜೊತೆಯೇ ಕಥಕ್ ನೃತ್ಯವನ್ನು ಕಲಿಯುತ್ತಿದ್ದೆ. ಹಾಗೆಯೇ ನೃತರುತ್ಯ ಎಂಬ ಸಮಕಾಲೀನ ನೃತ್ಯದ ಸಂಸ್ಥೆಯಯೊಂದನ್ನು ಪ್ರಾರಂಭಿಸಿದೆವು.
ಈಗ ಇದೇ ನನ್ನ ವೃತ್ತಿ-ಪ್ರವೃತ್ತಿ ಎಲ್ಲವೂ. ನೃತರುತ್ಯ ಇಂದು ಬೃಹದಾಕಾರವಾಗಿ ಬೆಳೆದ ಒಂದು ನೃತ್ಯ ಸಂಸ್ಥೆ. ನಾನು ಇಲ್ಲಿ ಅಸೋಸಿಯೇಟ್ ಡೈರೆಕ್ಟರ್. ನಮ್ಮಲ್ಲಿ ೬೦ ನೃತ್ಯ ಕಲಾವಿದರಿದ್ದಾರೆ. ಪ್ರೊಫ಼ೇಶನಲ್ ವಿಂಗ್, ಯುತ್ ವಿಂಗ್ ಹಾಗು ನಿಯೊ ವಿಂಗ್ ಎಂಬ ಮೂರು ವಿಭಾಗಗಳು ನಮ್ಮಲ್ಲಿದೆ.

೨-ಫ಼್ರೀಲ್ಯಾನ್ಸ್ ಕಲಾವಿದರನ್ನು ಆಹ್ವಾನಿಸುತ್ತಿರೊ ಅಥವ ನಿಮ್ಮ ಶಿಷ್ಯಂದಿರೇ ನೃತ್ಯ ಮಾಡುತ್ತಾರೋ?

ಎರಡೂ ರೀತಿಯವರೂ ಇದ್ದಾರೆ. ಬೆಂಗಳೂರಿನಲ್ಲಿ ನಮ್ಮದೇ ಸಂಸ್ಥೆಯ ನೃತ್ಯ ತರಗತಿಗಳು ಇವೆ. ಯುವ ವಿಭಾಗದಲ್ಲಿರುವ ನೃತ್ಯ ಪಟುಗಳನ್ನು ನಾವೇ ಈಗ ನಾಲ್ಕು ವರ್ಷಗಳಿಂದ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿಗೊಳಿಸಿದ್ದೇವೆ. ದೊಡ್ಡ ಪ್ರದರ್ಶನಗಳಿದ್ದಾಗ ಹೊರಗಿನ ನೃತ್ಯ ಕಲಾವಿದರನ್ನೂ ಕರೆಸಿಕೊಳ್ಳುತ್ತೇವೆ.

೩-ಒಂದು ನೃತ್ಯ ಕಾರ್ಯಕ್ರಮದಲ್ಲಿ ಎಷ್ಟು ಕಲಾವಿದರು ಪ್ರದರ್ಶನ ನೀಡುತ್ತಾರೆ?

ಉತ್ಸವಗಳಲ್ಲಿ ಸಾಮಾನ್ಯವಾಗಿ ೮ ರಿಂದ ಹತ್ತು ಜನ ಇರುತ್ತಾರೆ. ಆದರೆ ದೊಡ್ಡ ಕಾರ್ಯಕ್ರಮಗಳಲ್ಲಿ ೬೦-೭೦ ಕಲಾವಿದರು ಇರುತ್ತಾರೆ. ಚಿಕ್ಕ ವೇದಿಕೆಗಳಾದರೆ ಒಂದಿಬ್ಬರು ಮಾತ್ರ ಇರುತ್ತಾರೆ. ಆದರೆ ಸಮೂಹ ನೃತ್ಯಗಳನ್ನೇ ಹೆಚ್ಚು ನಾವು ಪ್ರದರ್ಶಿಸುತ್ತೇವೆ.

10-MADHURI UPADYA೪-ಕಾರ್ಯಕ್ರಮದ ಅವಧಿ ಎಷ್ಟು?

ಹತ್ತು ನಿಮಿಷದಿಂದ ಒಂದುವರೆ ಗಂಟೆಯವರೆಗೆ. ಇದು ಕಾರ್ಯಕ್ರಮದಿಂದ ಕಾರ್ಯಕ್ರಮಕ್ಕೆ ಬದಲಾಗುತ್ತದೆ.
೫-ಆರಂಭಿಕವಾಗಿ ನಿಮಗೆ ಭರತನಾಟ್ಯದ ಗುರುಗಳು ಯಾರು? ಎಷ್ಟು ವರ್ಷಗಳಿಂದ ನೃತ್ಯ ಸಾಧನೆ ಮಾಡುತ್ತಿದ್ದೀರಿ? ವಿದ್ವತ್ ಪರೀಕ್ಷೆ/ ರಂಗಪ್ರವೇಶ ಆಗಿದೆಯ?

ಇಂದಿರ ಕಡಂಬಿ ಅವರ ಬಳಿ ಕಲಿಯುತ್ತಿದ್ದೆ. ಈಗ ವೀನಲ್ ಪ್ರಭು.
ಈಗ ೨೫ ವರ್ಷದಿಂದ ಸಾಧನೆ ಮಾಡುತ್ತಿದ್ದೇನೆ. ಕಲೆಯನ್ನು ತಪಸ್ಸಾಗಿ ಸಾಧನೆ ಮಾಡಬೇಕೆನ್ನುವ ಉದ್ದೇಶ ಮಾತ್ರ ನನ್ನದು. ಹಾಗಾಗಿ ಪರೀಕ್ಷೆ, ರಂಗ ಪ್ರವೇಶ ಇತ್ಯಾದಿಗಳ ಬಗ್ಗೆ ಗಮನಹರಿಸಿಲ್ಲ.
೬-ನೃತರುತ್ಯ ಆರಂಭವಾಗಿ ಎಷ್ಟು ವರ್ಷಗಳಾದವು? ಸಂಸ್ಥೆಯಿಂದ ಒಟ್ಟು ಪ್ರದರ್ಶನಗಳಾಗಿರಬಹುದು?

ನೃತರುತ್ಯ ಆರಂಭಿಸಿ ೧೧ ವರ್ಷಗಳಾಯಿತು.
ಸುಮಾರು ೭೦೦ ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೇವೆ.
ಯು.ಕೆ, ಯು.ಎಸ್, ದುಬೈ, ಮಸ್ಕತ್, ಸಿಂಗಾಪುರ, ಪಾಕಿಸ್ತಾನ ಇನ್ನೂ ಹಲವು ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿದ್ದೇವೆ.

೭-” ನೃತರುತ್ಯ” ಎಂಬ ನಿಮ್ಮ ಸಂಸ್ಥೆಯ ಹೆಸರಿನ ಭಾವಾರ್ಥವೇನು?

ಮೊದಲ ಹಾಗು ಕಡೆಯ ಅಕ್ಷರ ಸೇರಿದರೆ ನೃತ್ಯ ಎಂದಾಗುತ್ತದೆ. ಮಧ್ಯ ಇರುವ “ತರು” ಎಂದರೆ ಮರ. ಅಂದರೆ ನರ್ತಿಸುವ ಮರದ ರೆಂಬೆ-ಕೊಂಬೆಗಳಿಗೆ ಮೂರು ಉದ್ದೇಶಗಳನ್ನಿಟ್ಟುಕೊಂಡಿದೆ. ರಂಗಭೂಮಿಯಲ್ಲಿ ನೃತ್ಯ, ವ್ಯಾಪಾರಕ್ಕಾಗಿ ನೃತ್ಯ (ಚಲನಚಿತ್ರ, ಜಾಹಿರಾತು, ಕಂಪನಿ ಪ್ರಾಯೋಜಿತ ಕಾರ್ಯಕ್ರಮಗಳು) ಹಾಗು ಆರ್ಥಿಕ ಆದಾಯದಿಂದ ಶಿಕ್ಷಣ-ಸಮಾಜ ಸೇವೆ.

11-MADHURI UPAADYA೮-ಮರೆಯಲಾಗಂತಹ ಪ್ರದರ್ಶನಗಳು?

ನಮ್ಮ ಹೋಮ್ ಪ್ರೊಡಕ್ಷನ್ “ಪ್ರಯೋಗ್” ಅಂತ ಇದೆ. “ನೃತರುತ್ಯ” ಸಂಸ್ಥೆ ಕೇವಲ ಪ್ರಾಯೋಜಿತ ಕಾರ್ಯಕ್ರಮಗಳ ಪ್ರದರ್ಶನಕ್ಕಾಗಿ. ಅಂದರೆ ಅಲ್ಲಿ ಪೂರ್ಣ ನಮ್ಮ ಪರಿಕಲ್ಪನೆಗೆ ಅವಕಾಶವಿರುವುದಿಲ್ಲ. ಆಯೋಜಕರ ಅಗತ್ಯಕ್ಕೆ ತಕ್ಕಂತೆ ಅವರ ಪರಿಕಲ್ಪನೆಗನುಗುಣವಾಗಿವಾಗಿ ನಾವು ನೃತ್ಯವನ್ನು ಸಂಯೋಜಿಸಬೇಕಾಗುತ್ತದೆ.
ಅದೇ ನಮ್ಮದೇ “ಪ್ರಯೋಗ್” ಸಂಸ್ಥೆಯಡಿ ನಾವು ಕಾರ್ಯಕ್ರಮ ಮಾಡುವಾಗ ಆ ಕಟ್ಟುಪಾಡುಗಳಿರುವುದಿಲ್ಲ. ನಮಗೆ ಇಷ್ಟವಾದದ್ದನ್ನು ನಾವು ಪ್ರೇಕ್ಷಕರಿಗೆ ಅರ್ಪಿಸುತ್ತೇವೆ. ಹಾಗಾಗಿ “ಪ್ರಯೋಗ್”ಅಲ್ಲಿ ನಾವು ಕಲಾವಿದರಾಗಿ ಸ್ವತಂತ್ರರಾಗಿರುತ್ತೇವೆ. ಆಗ ಅನುಭವ ತುಂಬಾ ಚೆನ್ನಾಗಿರುತ್ತದೆ. ಲಂಡನ್‌ನ ಟಫ಼ಾಲ್ಗಸ್ ಸ್ಕ್ವೇರ್ ಅಲ್ಲಿ ನೀಡಿದ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿ ಬಂದಿತ್ತು. ವಿಶ್ವದ ಎಲ್ಲ ಭಾಗದ ಜನರೂ ಅಲ್ಲಿ ನೆರೆದಿದ್ದರು. ಸುತ್ತಲೂ ನೆರೆದಿದ್ದ ಜನಸ್ತೋಮದ (೩೬೦ ಡಿಗ್ರೀ) ನಡುವೆ ನಮ್ಮ ನೃತ್ಯ ಪ್ರದರ್ಶನ. ಹಾಗಾಗಿ ಎಲ್ಲಾ ದಿಕ್ಕುಗಳಿಂದಲೂ ಸಭಿಕರು ವೀಕ್ಷಿಸುತ್ತಿದ್ದ ಕಾರಣ ನಮ್ಮ ನೃತ್ಯ ಸಂಯೋಜನೆಯನ್ನೂ ಅದಕ್ಕಾಗಿಯೇ ವಿಭಿನ್ನವಾಗಿ ರೂಪಿಸಿಕೊಂಡಿದ್ದೆವು. ಯಶಸ್ವಿಯಾಯಿತು. ಭಾರತದ ಸಮಕಾಲೀನ ನೃತ್ಯವನ್ನು ಅಲ್ಲಿನ ಜನಕ್ಕೆ ಪರಿಚಯಿಸಬೇಕೆಂದು ಲಂಡನ್‌ನ ಮೇಯರ್ ನಮ್ಮ ತಂಡವನ್ನು ಅಲ್ಲಿಗೆ ಕರೆಸಿ ಕಾರ್ಯಕ್ರಮ ಆಯೋಜಿಸಿದ್ದರು.

ಪಾಕಿಸ್ತಾನಿನ ಲಾಹೋರ್‌ನಲ್ಲಿ ಕೂಡ ಒಳ್ಳೆಯ ಅನುಭವವಾಯಿತು. ಗಡಾಫಿ ಬಯಲು ರಂಗ ಮಂದಿರಲ್ಲಿ ಪ್ರದರ್ಶನ ಮಾಡಿದಾಗ ಅಲ್ಲಿಯ ರಂಗಭೂಮಿಯ ಕಲಾವಿದರು ಮೆಚ್ಚಿದರು. ನಾವು ಇಲ್ಲಿಂದ ಹೋಗುವಾಗ ಪಾಕಿಸ್ತಾನದಲ್ಲಿ ಸುರಕ್ಷಿತ ತಾಣವಲ್ಲ…ಎಂದು ಎಚ್ಚರಿಸಿದ್ದರು. ಆದರೆ ಅಲ್ಲಿನ ಜನ ತುಂಬಾ ಪ್ರೀತಿಯಿಂದ ನಮ್ಮನ್ನು ನೋಡಿಕೊಂಡರು. ನಮ್ಮ ನೃತ್ಯವನ್ನು ಸ್ವಾಗತಿಸಿ ಸನ್ಮಾನಿಸಿ ಬೀಳ್ಕೊಟ್ಟರು. ನಿಜಕ್ಕೂ ಹೃದಯ ಶ್ರೀಮಂತಿಕೆಯಿಂದ ಅವರು ನಮ್ಮ ಕಣ್ ತೆರೆಸಿದರು.

೯-ಚಲನಚಿತ್ರಗಳಲ್ಲಿ ನಿಮ್ಮ ಸಂಸ್ಥೆಯ ನೃತ್ಯ ಸಂಯೋಜನೆ?

“ಪಂಚರಂಗಿ” ಚಿತ್ರದಲ್ಲಿ “ಉಡಿಸುವೆ ಬೆಳಕಿನ ಸೀರೆಯ…” ಹಾಡಿಗೆ ನನ್ನ ತಂಗಿ ಮಯೂರಿ ನಮ್ಮದೇ ಸಂಸ್ಥೆಯ ವತಿಯಿಂದ ನೃತ್ಯ ಸಂಯೋಜಿಸಿದ್ದರು. ಎಮ್.ಎಸ್ ಸತ್ಯು ಅವರ ಇಜ್ಜೋಡು ಚಿತ್ರದಲ್ಲಿ ಸ್ವತಹ ನಾನು ನರ್ತಿಸಿದ್ದೇನೆ.

12-MADHURI UPADYA೧೦-ಭಾರತೀಯ ಸಮಕಾಲೀನ ನೃತ್ಯಕ್ಕೂ ಪಾಶ್ಚಾತ್ಯ ಸಮಕಾಲೀನ ನೃತ್ಯ ಪ್ರಾಕಾರಕ್ಕೂ ಏನು ವ್ಯತ್ಯಾಸ?

ಭಾರತೀಯ ಸಮಕಾಲೀನ ನೃತ್ಯದಲ್ಲಿ ನಾವು ಭಾರತೀಯ ಶಾಸ್ತ್ರೀಯ ನೃತ್ಯವನ್ನು, ಭಾರತೀಯ ಶೈಲಿಯನ್ನು ಅಳವಡಿಸಿಕೊಂಡಿರುತ್ತೇವೆ. ಆದರೆ ಶುದ್ಧ ಸಮಾಕಲೀನ ಅಥವ ಅಧುನಿಕ ನೃತ್ಯದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯದ ತಳಹದಿ ಇರುವುದಿಲ್ಲ. ಆಧುನಿಕ ನೃತ್ಯ ಮಾಡುವವರು ಹೆಜ್ಜೆ ಹಾಕುವಾಗ ಸಂಪೂರ್ಣ ಪಾಶ್ಚಾತ್ಯ ತಂತ್ರವನ್ನು ಬಳಸುತ್ತಾರೆ.

೧೧-ಭಾರತದಲ್ಲಿ ಸಮಕಾಲೀನ ನೃತ್ಯದ ಉಗಮ ಎಂದು? ಅದಕ್ಕೆ ಇಲ್ಲಿ ಎಷ್ಟು ವರ್ಷಗಳ ಇತಿಹಾಸವಿದೆ?

ಇದು ಭಾರತದಲ್ಲಿ ಪ್ರಚಲಿತಕ್ಕೆ ಬಂದು ಸುಮಾರು ೫೦ ವರ್ಷಗಳಾಗಿವೆ. ನೃತ್ಯ ರಂಗಭೂಮಿ ಇದರ ಜನನಕ್ಕೆ ಮೂಲವೆನ್ನಬಹುದು. ಭಾರತೀಯ ಶಾಸ್ತ್ರೀಯ ನೃತ್ಯದ ಮಟ್ಟನ್ನೂ ಮಿಶ್ರಣಗೊಳಿಸಿಕೊಂಡು ಬೆಳೆಯುತ್ತ ಬಂದ ಇದು ಕುಮುದಿನಿ ಲಾಖ್ಯ, ಬಿಜು ಮಹರಾಜ್ ಇತ್ಯಾದಿ ಕಲಾವಿದರಿಂದ ಮುಖ್ಯಭೂಮಿಕೆಗೆ ಬಂತು. ಅವರೆಲ್ಲ ಶಾಸ್ತ್ರೀಯ ಚೌಕಟ್ಟಿನಲ್ಲೇ ಮಾಡುತ್ತಾ ಬಂದಿದ್ದಾರೆ. ಆನಂತರ ಅವರ ಶಿಷ್ಯರಾದ ಅದಿತಿ ಮಂಗಳದಾಸ್,ಅಸ್ತರ್ ದೇದು ಮುಂಬೈ,ದಕ್ಷ ಶೇಟ್ ತ್ರಿವೇಂದ್ರಮ್ ಕೂಡ ಆ ಪರಂಪರೆಯನ್ನು ಮುಂದುವರೆಸಿದರು. ಚಂದ್ರಲೇಖ ಭರತನಾಟ್ಯಮ್ ಮತ್ತು ಮಾರ್ಶಲ್ ಆರ್ಟ್ ಫ಼ಾರ್ಮ್ಯಾಟ್ ಇಟ್ಟುಕೊಂಡು ಪ್ರಯೋಗಿಸಿದರು.
೧೨-ಈಗ ಭಾರತದಲ್ಲಿ ಸಮಕಾಲೀನ ನೃತ್ಯ ಯಾವ ಹಂತದವರೆಗೆ ಬಂದಿದೆ?

ಇಂದು ಇದು ತುಂಬಾ ಪ್ರಸಿದ್ಧವಾಗಿದೆ. ನಮ್ಮ ಬೆಂಗಳೂರನ್ನೇ ಸಮಕಾಲೀನ ನೃತ್ಯದ ಕೇಂದ್ರ ಎನ್ನಬಹುದು. ಯು.ಕೆ ಹಾಗು ಯು.ಎಸ್.ಎ ಇಂದ ಪರಿಣಿತರು ಇಂದು ಬೆಂಗಳೂರಿಗೆ ಬಂದು ತರಗತಿಗಳನ್ನೂ ತೆರೆದು ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳೂ ಇದನ್ನು ಇಷ್ಟಪಟ್ಟು ಸಾಧನೆ ಮಾಡುತ್ತಿದ್ದಾರೆ. ಹಾಗಾಗಿ ಮುಂದೆ ಇದಕ್ಕೆ ಇನ್ನೂ ಉಜ್ವಲ ಭವಿಷ್ಯವಿದೆ ಎನ್ನಬಹುದು.

15-MADHURI UPADYA೧೩-ಇದರಿಂದ ನಮ್ಮ ಶಾಸ್ತ್ರೀಯ ನೃತ್ಯ ಸಂಕರವಾಗುತ್ತಿದೆಯೆ? ನಮ್ಮ ನೃತ್ಯ ಪದ್ಧತಿಗೆ ಹಿನ್ನೆಡೆಯಾದೆಯೆ? ಸಂಪ್ರದಾಯವಾದಿಗಳು ಇದನ್ನು ಹೇಗೆ ಸ್ವೀಕರಿಸುತ್ತಿದ್ದಾರೆ?

ಸಂಕರವಾಗುತ್ತಿದೆ ಅಥವ ಹಿನ್ನೆಡೆಯಾಗಿದೆ ಎನ್ನಲಾಗುವುದಿಲ್ಲ. ಏಕೆಂದರೆ ನಮ್ಮ ಶಾಸ್ತ್ರೀಯ ನೃತ್ಯಕ್ಕೆ ಅದರದ್ದೆ ಆದ ಸ್ಥಾನಮಾನವಿದೆ. ಇದು ಅವರವ ಆಸಕ್ತಿ, ಅಭಿರುಚಿಗೆ ಬಿಟ್ಟ ವಿಚಾರ. ನಿಜ..ಕೆಲವು ಸಂಪ್ರದಾಯವಾದಿಗಳು ಇದನ್ನು ಒಪ್ಪುತ್ತಿಲ್ಲ. ಹಾಗಂತ ಎಲ್ಲರೂ ಅದನ್ನು ವಿರೋಧಿಸುತ್ತಿಲ್ಲ. ಎರಡೂ ರೀತಿಯ ಜನ ಇದ್ದಾರೆ. ಆದರೆ ಎರಡೂ ನೃತ್ಯ ಪ್ರಾಕಾರಗಳಲ್ಲಿ ಒಳ್ಳೆಯ ಅಂಶಗಳಿವೆ. ಒಂದಕ್ಕೊಂದು ಪೂರಕ,ಪ್ರೇರಕ. ಸಮಾಕಲೀನ ನೃತ್ಯಾಭ್ಯಾಸದಿಂದ ದೈಹಿಕವಾಗಿ ನಾವು ಚುರುಕಾಗುತ್ತೇವೆ. ಇಲ್ಲಿ ದೇಹದ ವ್ಯಾಯಮವಿದೆ. ಅದೇ ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ ಆಂಗಿಕ ಅಭಿನಯಕ್ಕೆ ಪ್ರಾಧಾನ್ಯ. ನಾವು ಭಾರತೀಯ ಸಮಕಾಲೀನ ನೃತ್ಯಸಂಯೋಜನೆಯಲ್ಲಿ ಆಂಗಿಕ ಅಭಿನಯವನ್ನೂ ಅಳವಡಿಸಿಕೊಂಡಿದ್ದೇವೆ. ಮೂಲ ಪಾಶ್ಚಾತ್ಯದಲ್ಲಿ ಆಂಗಿಕ ಅಭಿನಯವೇ ಇಲ್ಲ. ಸಮಕಾಲೀನ ನೃತ್ಯವನ್ನು ಮಾಡುವ ಬಹಳಷ್ಟು ಮಂದಿ ಭರತನಾಟ್ಯವನ್ನೇ ಆಧಾರವಾಗಿಟ್ಟುಕೊಂಡು ಮುಂದಾಗುತ್ತಾರೆ. ಒಳ್ಳೆಅದದನ್ನು ಎಲ್ಲೆಡೆಯಿಂದ ಸ್ವೀಕರಿಸುವ ವಿಶಾಲ ಮನೋಭಾವ ನಮಗಿರಬೇಕಷ್ಟೆ.

23-11-2011

 

Related Articles

Back to top button

Looks like your ad blocker is on.

We rely on ads to bring you our intuitive articles & journalism. Please allow ads & support KannadaTimes.com.