ಕೂಲ್ ಗರ್ಲ್ ಆಫ್ ಕೂರ್ಗ್ ಹರ್ಷಿಕ…ಮನಮೋಹಕ…

ಸಾಮಾನ್ಯವಾಗಿ ಚಿತ್ರನಟಿಯರು ಮಾತಿಗೆ ಸಿಗುವುದೇ ಕಷ್ಟ. ಸಿಕ್ಕರೂ ಮಾತಾಡುವುದೇ ಕಷ್ಟ. ಒಂದೋ ಎರಡೋ ಚಿತ್ರಗಳಲ್ಲಿ ಒಂದೆರಡು ಸೀನ್‌ಗಳಲ್ಲಿ ಸೀನಿ ಹೋದರೂ ಸಾಕು…ಅಹಂಕಾರವನ್ನು ಸಾಕಲಾರಂಭಿಸಿಬಿಡುತ್ತಾರೆ. ಎದುರಿಗಿದ್ದವರು ಗೊತ್ತಿದ್ದರೂ ನಗೆಯನ್ನೂ ಬೀರದೆ ಗತ್ತಿನಿಂದ ಬಾಯಿಗೆ ಬೀಗ ಜಡಿದುಕೊಂಡು ಬೀಗುವ ಇಗೋ ತುಂಬಿದ ಸುಂದರಿಯರಿಗೇನು ನಮ್ಮಲ್ಲಿ ಕೊರತೆಲ್ಲ. ಆದರೆ ಕೊರತೆ ಇದೆ ಇಂತಹ ಸಾದಾ ಸೀದಾ ಸಿಂಪಲ್ ಚೆಲುವೆಯರಿಗೆ. ಹಂಬಲ್ ಆಗಿ ಹಂಬಲಿಸಿ ಅತ್ಮೀಯವಾಗಿ ಮಾತಾಡುವವರಿಗೆ. ಯಾರೀ ಕುವರಿ ಎನ್ನುವಿರಾ?…ಇವಳೇ ಕೊಡಗಿನ ಬೆಡಗಿ ರ್ಹಕಾ ಪೂಣಚ್ಚ. ಮಾತಿಗಿಳಿದರೆ ಪಕ್ಕದ ಮನೆಯ ಪುಟ್ಟಿಯಂತೆ ಮುದ್ದಾಗಿ ಮಾತಾಡುವ ಈಕೆ ಅಪ್ಪಅಮ್ಮನ ಒಬ್ಬಳೇ ಮುದ್ದಿನ ಮಗಳು.

ಹತ್ತನೇ ತರಗತಿ ಮುಗಿಸಿ ರಜಾಕ್ಕೆ ಮಜಾಮಾಡಲೆಂದು ತನ್ನೂರು ವಿರಾಜಪೇಟೆಯ ಬಸ್‌ಹತ್ತುವ ಬದಲು ಉದಯ ಟೀ.ವಿಯ ಆಫೀಸಿನ ಮೆಟ್ಟಿಲು ಹತ್ತಿದಳು. ಸುಮ್ಮನೆ ಟೈಂ ಪಾಸ್ ಮಾಡಿ ಹಾಲಿಡೆ ಹಾಳುಮಾಡುವುದರ ಬದಲು ಏನಾದರೂ ಹೊಸತನ್ನು ಮಾಡುತ್ತೇನೆಂದು ತನ್ನ ಅಂಕಲ್ ಉದಯ ಟಿ.ವಿಯ ಮ್ಯಾನೇಜರ್ ಪಕ್ಕದಲ್ಲಿ ಬಂದು ನಿಂತಳು. ಈ-ಮೇಲ್,ಲೆಟರ್ ಟೈಪಿಂಗ್ ಇತ್ಯಾದಿ ಆಫೀಸ್ ಕೆಲಸ ಮಾಡುತ್ತೇನೆಂದು ತನ್ನ ಅಂಕಲ್‌ಗೇನೋ ಹೇಳಿದಳು. ಆದರೆ ಅಲ್ಲಿರುವ ಕ್ಯಾಮೆರಾಗಳು ಈ ರೂಪಸಿಯ ಮಾತು ಕೇಳಬೇಕಲ್ಲ. ತೆರೆಯ ಹಿಂದಿರಬೇಡ ಚೆಲುವೆ ಮುಂದೆ ಬಾ ಎಂದು ಅದೃಷ್ಟದ ಬಾಗಿಲು ತೆರೆದುಕೊಂಡು ಬಿಟ್ಟಿತು. ಅಷ್ಟೇ…ಹರ್ಷಿಕ ಎಂಬ ಕೊಡಗಿನ ಕೊಡುಗೆ ಆಫ್ ದಿ ಸ್ಕ್ರೀನ್ ಕೆಲಸ ಮಾಡುವುದರ ಬದಲು ಆನ್ ದಿ ಸ್ಕ್ರೀನ್ ಆನ್ ಆದಳು. ರಾಶಿ ಪತ್ರಗಳನ್ನು ಓದಲಾರಂಭಿಸಿ ನಾನಿರುವುದೇ ನಿಮ್ಮಿಂದ ನಿಮಗಾಗಿಎಂದು ಕೋಟ್ಯಾಂತರ ಕನ್ನಡಿಗರ ಕಣ್ಣಲ್ಲಿ ತನ್ನದೇ ಪ್ರತಿಬಿಂಬ ಮೂಡಿಸಿ ಕಣ್ಮನ ಸೆಳೆದಳು. ತನ್ನ ಮೆಲುದನಿಯ ಇಂಪಾದ ಮಾತುಗಳನ್ನು ಪ್ರೇಕ್ಷಕರು ಮತ್ತೆ ಮತ್ತೆ ಕೇಳುವಂತೆ ಮಾಡಿದಳು. ರಜಾ ಮುಗಿಯುವುದರೊಳಗೆ ಉದಯವಾಹಿನಿಯಲ್ಲಿ ಉದಯಿಸಿದ್ದ ಈ ಹೊಸ ತಾರೆ ಪತ್ರಗಳನ್ನೆತ್ತಿಕೊಂಡು ಮಾತಾಡುತ್ತಾ ಮಾತಾಡುತ್ತಾ ಮನೆಮಾತಾದಳು! ನಂತರ ಕಾಲೇಜು ಮೆಟ್ಟಿಲೇರಿ ಓದಿನ ಹಾದಿ ಹಿಡಿದಳು.

 

ಪಿ.ಯೂ.ಸಿ ಪಾಸುಪಿ.ಯೂ.ಸಿ ರಿಲೀಸು

“ಪಿ.ಯೂ.ಸಿ ಹುಡುಗಿಯ ಪಾತ್ರ..ನೀವೇ ಮಾಡಿದರೆ ಚೆನ್ನಾಗಿ ಬರುತ್ತೆ ಚಿತ್ರ” ಎಂದು ಪಿ.ಯೂ.ಸಿ ಚಿತ್ರದ ನಿರ್ದೇಶಕರು ಕಥೆಯನ್ನು ಹರ್ಷಿಕ ಅವರಿಗೆ ವಿವರಿಸಿದರು. ಪಾತ್ರದ ಪ್ರಾಧಾನ್ಯತೆಯನ್ನರಿತ ಹರ್ಷಿಕ ತನಗಾಗಿಯೇ ಕಥೆ ಮಾಡಿದ್ದಾರೆಂದು ಧನ್ಯತಾಭಾವದಿಂದ ನಟಿಸಲು ಒಪ್ಪಿದಳು. ಮೊದಲ ಬಾರಿಗೆ ಬೆಳ್ಳಿತೆರೆಯನ್ನು ಅಪ್ಪಿದಳು. ಪಿ.ಯು.ಸಿ ಓದುತ್ತಿದ್ದ ಹುಡುಗಿಯ ಪಾತ್ರವನ್ನು ಪಿ.ಯು.ಸಿ ಓದುತ್ತಿದ್ದ ಹುಡುಗಿಯೇ ಮಾಡಿದಳು. ಪಿ.ಯು.ಸಿ ಮುಗಿಯುವಷ್ಟರಲ್ಲಿ ಪಿ.ಯು.ಸಿ ಚಿತ್ರೀಕರಣ ಮುಗಿಸಿ ತೆರೆಕಂಡಿತು. ಅದೇ ಚಿತ್ರದಿಂದ  ಹರ್ಷಿಕ ಚಿತ್ರರಂಗಕ್ಕೆ ಪ್ರವೇಶ. ಆನಂತರ ಈಕೆ ಅಭಿನಯಿಸಿದ ಚಿತ್ರಗಳು, ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನ,ವಿಶೇಷ.

ಶಿವಣ್ಣನೊಂದಿಗೆ ತಮಸ್ಸು,ಅಪ್ಪುವಿನೊಟ್ಟಿಗೆ ಜಾಕಿ, ರವಿಚಂದ್ರನ್, ನವೀನ್ ಕೃಷ್ಣ ಜೊತೆ ನಾರಿಯ ಸೀರೆ ಕದ್ದ ಹೀಗೆ ಸ್ಟಾರ್‌ಗಳ ಚಿತ್ರದಲ್ಲಿ ನಟಿಸಿ ಹರ್ಷಿಕ ಒಮ್ಮೆಲೇ ಮುಂದಿನ ಸಾಲಿಗೆ ಬಂದುನಿಂತಳು. ಅದ್ವೈತ, ಜುಗಾರಿ, ಪರಿಯಲ್ಲಿ ಹೊಸರೀತಿಯ ಪಾತ್ರಗಳನ್ನು ಮಾಡಿ ಭಾರೀ ಮೆಚ್ಚುಗೆಗೆ ಪಾತ್ರವಾದಳು. ನಿಂಗಳ್ ವಿಟ್ಟು ಪಿಳ್ಳೈ ಹಾಗು ಆನಂದತೊಳ್ಳೈ ಎಂಬ ಎರಡು ತಮಿಳು ಸಿನಿಮಾಗಳಲ್ಲೂ ಮಿಂಚಿದ ಹರ್ಷಿಕ ಪೂಣಚ್ಚ ಅಭಿನಯದ ಮುರಳಿ ಮೀಟ್ಸ್ ಮೀರಾ ಸದ್ಯ ತೆರೆಕಂಡಿರುವ ಕನ್ನಡದ ಸೂಪರ್ ಹಿಟ್ ಚಿತ್ರ.

ಇತ್ತೀಚೆಗೆ ಆದ್ದೂರಿಯಾಗಿ ನಡೆದ ಹಂಪಿ ಉತ್ಸವದಲ್ಲಿ ನಾಟಕವೊಂದರಲ್ಲಿ “ಜಯನಗರದ ಅರಸ ಶ್ರೀ ಕೃಷ್ಣದೇವರಾಯನ ಎರಡನೇ ರಾಣಿ ತಿರುಮಲದೇವಿಯಾಗಿ ಮನೋಜ್ನವಾಗಿ ನಟಿಸಿ ರಂಗಭೂಮಿಯಲ್ಲೂ ಸೈ ಎನಿಸಿಕೊಂಡ ಇದೇ ಹರ್ಷಿಕ ಅಂದು ಇಡೀ ಕನ್ನಡ ಚಿತ್ರರಂಗದ ಗಮನಸೆಳೆದಿದ್ದಳು.

ಆಶ್ಚರ್ಯವೆಂದರೆ ಈ ನಡುವೆಯೇ ಇಲೆಕ್ಟ್ರಿಕಲ್ ಇಂಜಿನಿಯರ್ ಪದವಿಯನ್ನೂ ಮುಗಿಸಿದ್ದಾಳೆ! ಏಕೆಂದರೆ ನಮ್ಮಲ್ಲಿ ಓದು ಮುಗಿಸಿಕೊಂಡು ಚಿತ್ರರಂಗಕ್ಕೆ ಬಂದವರಿದ್ದಾರೆ. ಚಿತ್ರರಂಗಕ್ಕೆ ಬಂದು ಓದನ್ನು ಅರ್ಧಕ್ಕೇ ಮುಗಿಸಿದವರಿದ್ದಾರೆ! ಆದರೆ  ಹರ್ಷಿಕ ಓದನ್ನೂ ಓದಿ ಮುಗಿಸಿ ಒಂದಷ್ಟು ಚಿತ್ರಗಳಲ್ಲಿ ನಟಿಸಿ ನಟನೆಯನ್ನೂ ಮಾಗಿಸಿಕೊಂಡಿದ್ದಾಳೆ. ಇದೇ ಹರ್ಷಿಕ ಸ್ಪೆಶಲ್. ವಿರಾಜಪೇಟೆಯ ಈ ಹರ್ಷಿಕ ಪೂಣಚ್ಚ ಕನ್ನಡಚಿತ್ರರಂಗದ ರಾಣಿಯಾಗಿ ಚಿರಕಾಲ ವಿರಾಜಮಾನವಾಗಲಿ ಎನ್ನೋಣ ಅಲ್ಲವೆ?

ಚಿನ್ಮಯ.ಎಮ್.ರಾವ್ ಹೊನಗೋಡು

Sunday, ‎June ‎12, ‎2011

***********************

Exit mobile version